ತಾವು ಇತರರಿಗೆ ಉಪಯುಕ್ತರಾಗಿರುವವರೆಗೆ ಮಾತ್ರ ಬದುಕಬೇಕು. ಯಾವಾಗ ತಮ್ಮಿಂದ ಇತರರಿಗೆ ಯಾವ ಸಹಾಯವೂ ಸಾಧ್ಯವಿಲ್ಲವೋ ಅದು ತಮ್ಮ ಮರಣಕ್ಕೆ ಸಕಾಲ. ಎಂಥ ಅಂತಃಕರಣದ ತಿಳುವಳಿಕೆ ಇದು! ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಯಮಾಮೋಟೋ ಎನ್ನುವ ಹೆಸರಿನ ಒಬ್ಬ ಮಹಾ ಝೆನ್ ಮಾಸ್ಟರ್ ಇದ್ದ. 96 ವರ್ಷ ವಯಸ್ಸಾಗಿದ್ದ ಅವನಿಗೆ ಪೂರ್ತಿ ಕಣ್ಣು ಕಾಣಿಸುತ್ತಿರಲಿಲ್ಲ, ದೈಹಿಕವಾಗಿಯೂ ಬಹಳ ದುರ್ಬಲನಾಗಿದ್ದ ಅವನಿಗೆ ಈಗ ಪಾಠ ಮಾಡುವುದು ಮತ್ತು ಆಶ್ರಮದ ಕೆಲಸಗಳನ್ನು ನೋಡಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ.
ತನ್ನಿಂದ ಈಗ ಯಾರಿಗೂ ಉಪಯೋಗ ಆಗುತ್ತಿಲ್ಲ, ಯಾರಿಗೂ ಸಹಾಯ ಆಗುತ್ತಿಲ್ಲ ಎನ್ನುವುದನ್ನ ತಿಳಿದುಕೊಂಡಿದ್ದ ಅವನು ಸಾಯಬೇಕು ಎನ್ನುವ ನಿರ್ಧಾರ ಮಾಡಿ ಊಟ ಮಾಡುವುದನ್ನ ನಿಲ್ಲಿಸಿಬಿಟ್ಟ.
ಯಾಕೆ ಊಟ ಮಾಡುವುದಿಲ್ಲ ಎಂದು ಸಹ ಸನ್ಯಾಸಿಗಳು ಪ್ರಶ್ನೆ ಮಾಡಿದಾಗ, ನಾನು ಈಗ ಎಲ್ಲರಿಗೂ ಭಾರವಾಗಿದ್ದೇನೆ ಮತ್ತು ನನ್ನ ಉಪಯೋಗಿ ಆಯಸ್ಸನ್ನು ಮೀರಿ ನಾನು ಬದುಕಿಬಿಟ್ಟಿದ್ದೇನೆ. ಇನ್ನು ನನಗೆ ಬದುಕುವ ಆಸೆ ಇಲ್ಲ ಎಂದು ಮಾಸ್ಟರ್ ಉತ್ತರ ಕೊಡುತ್ತಿದ್ದ.
ಇದು ಜನೆವರಿ, ಚಳಿಗಾಲದ ದಟ್ಟ ಥಂಡಿಯ ಸಮಯ. ಈಗೇನಾದರೂ ನೀನು ಸತ್ತರೆ, ನಮಗೆ ನಿನ್ನ ಶವಸಂಸ್ಕಾರ ಮಾಡೋದು ಕಷ್ಟ ಆಗುತ್ತದೆ. ಎಲ್ಲ ಜನರಿಗೆ ನೀನು ಉಪದ್ರವಕಾರಿ ಆಗಿಬಿಡುತ್ತೀಯ, ಸುಮ್ಮನೇ ಊಟ ಮಾಡು ಎಂದು ಸಹ ಸನ್ಯಾಸಿಗಳು ಒತ್ತಾಯ ಮಾಡುತ್ತಿದ್ದರು.
ಇಂಥ ಪ್ರಸಂಗ ಕೇವಲ ಝೆನ್ ಆಶ್ರಮದಲ್ಲಿ ಸಂಭವಿಸುವಂಥದು. ಶಿಷ್ಯರು ತಮ್ಮ ಮಾಸ್ಟರ್ ನ ಎಷ್ಟು ಪ್ರೀತಿಸುತ್ತಾರೆಂದರೆ, ಎಷ್ಟು ಗೌರವಿಸುತ್ತಾರೆಂದರೆ ಅವರ ನಡುವೆ ಯಾವ ಔಪಚಾರಿಕತೆಯೂ ಉಳಿದಿರುವುದಿಲ್ಲ.
ಅವರ ನಡುವಿನ ಸಂಭಾಷಣೆ ಗಮನಿಸಿ. “ಇದು ದಟ್ಟ ಚಳಿಯ ಜನೆವರಿ. ಈಗೇನಾದರೂ ನೀನು ಸತ್ತರೆ ಎಲ್ಲರಿಗೂ ಬಹಳ ಉಪದ್ರವ ಆಗುತ್ತದೆ. ಆಮೇಲೆ ಬೇಕಾದರೆ ಸಾಯುವೆಯಂತೆ. ಈಗ ಊಟ ಮಾಡು”.
ಎಲ್ಲರ ಮಾತಿಗೆ ಒಪ್ಪಿ ಮಾಸ್ಟರ್ ಯಮಾಮೋಟೋ ಮತ್ತೆ ಊಟ ಮಾಡಲು ಶುರು ಮಾಡಿದ. ಆದರೆ ಚಳಿಗಾಲ ಕಳೆದುಹೋಗಿ ಮತ್ತೆ ಬಿಸಿಲು ಬೀಳಲು ಶುರುವಾಗುತ್ತಿದ್ದಂತೆಯೇ ಆತ ಊಟ ಮಾಡುವುದನ್ನ ನಿಲ್ಲಿಸಿದ. ಊಟ ನಿಲ್ಲಿಸಿದ ಕೆಲ ದಿನಗಳ ನಂತರ ಹಾಸಿಗೆಯಲ್ಲಿ ನಿದ್ರೆಯಲ್ಲಿರುವಾಗಲೇ ಪ್ರಾಣ ಬಿಟ್ಚುಬಿಟ್ಟ.
ಎಂಥ ಅಂತಃಕರಣ ! ಮಾಸ್ಟರ್ ಅಂತಃಕರಣಕ್ಕಾಗಿ ಬದುಕಿದ, ಅಂತಃಕರಣಕ್ಕಾಗಿ ಜೀವ ಕಳೆದುಕೊಂಡ. ತನ್ನಿಂದ ಯಾರಿಗೂ ತೊಂದರೆ ಆಗಬಾರದು, ತಾನು ಯಾರಿಗೂ ಉಪದ್ರವ ಆಗಬಾರದು ಎಂದು ಮಾಸ್ಟರ್ ಸಂಕಟವನ್ನು ಸಹಿಸುತ್ತ ತನ್ನ ಸಾವನ್ನು ತಾನೇ ಮುಂದೂಡಿದ.
ಇನ್ನೊಬ್ಬ ಝೆನ್ ಮಾಸ್ಟರ್ ಇದ್ದ. ತನ್ನ ಸಾಯುವ ದಿನ ಹತ್ತಿರವಾದಾಗ ಅವನು ತನ್ನ ಶಿಷ್ಯರನ್ನು ಕೂಗಿದ , “ಎಲ್ಲಿ ನನ್ನ ಚಪ್ಪಲಿಗಳು? ಬೇಗ ತೆಗೆದುಕೊಂಡು ಬನ್ನಿ”
“ಯಾಕೆ ಮಾಸ್ಟರ್, ಈಗ ಯಾಕೆ ನಿಮಗೆ ಚಪ್ಪಲಿಗಳು ಬೇಕು?” ಶಿಷ್ಯರು ಆಶ್ಚರ್ಯದಿಂದ ಪ್ರಶ್ನೆ ಮಾಡಿದರು.
“ನಾನು ಈಗಲೇ ಸ್ಮಶಾನಕ್ಕೆ ಹೋಗಬೇಕು”. ಮಾಸ್ಟರ್ ಉತ್ತರಿಸಿದ. “ಸ್ಮಶಾನಕ್ಕೆ ಯಾಕೆ ಮಾಸ್ಟರ್?” ಶಿಷ್ಯರು ಮತ್ತೆ ಬೆರಗಿನಿಂದ ಕೇಳಿದರು.
“ನಾನು ಇಲ್ಲೇ ಸತ್ತುಬಿಟ್ಚರೆ ನಿಮಗೆಲ್ಲ ತೊಂದರೆಯಾಗುತ್ತದೆ. ಆಗ ನೀವು ನನ್ನನ್ನು ನಿಮ್ಮ ಹೆಗಲ ಮೇಲೆ ಹೊತ್ತುಕೊಂಡು ಸ್ಮಶಾನಕ್ಕೆ ಹೋಗಬೇಕಾಗುತ್ತದೆ” ಎಂದು ಉತ್ತರಿಸುತ್ತ ಮಾಸ್ಟರ್ ಲಗುಬಗೆಯಿಂದ ಸ್ಮಶಾನಕ್ಕೆ ಹೋಗಿ ಅಲ್ಲಿ ಪ್ರಾಣ ಬಿಟ್ಟ.
ಇದು ಅದ್ಭುತ ಅಂತಃಕರಣ. ಮಾಸ್ಟರ್ ತನ್ನ ಶಿಷ್ಯರಿಗೆ ಅಷ್ಟು ಸಣ್ಣ ತೊಂದರೆ ನೀಡಲೂ ಬಯಸಲಿಲ್ಲ. ಎಂಥ ಮನುಷ್ಯ ಇವನು? ತನ್ನ ಶಿಷ್ಯರ ಮೇಲೆ ಎಂಥ ಅಕ್ಕರೆ ಇವನಿಗೆ !
ಇಂಥ ಮಾಸ್ಟರ್ ಗಳೇ ಸಾವಿರಾರು ಜನರಿಗೆ ಬೆಳಕು ತೋರಿದವರು. ಸಹಸ್ರಾರು ಜನ ಅವರಿಗೆ ಕೃತಜ್ಞರಾಗಿದ್ದಾರೆ. ಇವರ ಅಂತಃಕರಣ ಕಾರಣವಾಗಿಯೇ ಎಷ್ಟೋ ಜನರಿಗೆ ತಮ್ಮೊಳಗೆ ಪೂರ್ಣ ಬೆಳಕನ್ನು, ಪೂರ್ಣ ಪ್ರೇಮವನ್ನು ತುಂಬಿಕೊಳ್ಳುವುದು ಸಾಧ್ಯವಾಯಿತು.
ತಾವು ಇತರರಿಗೆ ಉಪಯುಕ್ತರಾಗಿರುವವರೆಗೆ ಮಾತ್ರ ಬದುಕಬೇಕು. ಯಾವಾಗ ತಮ್ಮಿಂದ ಇತರರಿಗೆ ಯಾವ ಸಹಾಯವೂ ಸಾಧ್ಯವಿಲ್ಲವೋ ಅದು ತಮ್ಮ ಮರಣಕ್ಕೆ ಸಕಾಲ. ಎಂಥ ಅಂತಃಕರಣದ ತಿಳುವಳಿಕೆ ಇದು !
Source —O’sho— Dang Dang Doko Dang | Ch #5: Two ladies and a monk in Buddha Hall

