ಕಲ್ಲು, ಶಿಲ್ಪವಾದ ಕೂಡಲೇ ಅದಕ್ಕೊಂದು ಮಿತಿ. ನಿರಾಕಾರಕ್ಕೆ ಆಕಾರ ಒದಗಿದ ಕೂಡಲೇ ಅದರ ಎಲ್ಲ ಸಾಧ್ಯತೆಗೆ ಒಂದು ಚೌಕಟ್ಟು ಬಿದ್ದುಬಿಡುತ್ತೆ. ನಿರಾಕಾರ, ಸಾಕಾರದ ಅನಂತ ಸಾಧ್ಯತೆ. ಕಲ್ಲು, ಕಲ್ಲಾಗೇ ಇದ್ದರೆ ನೋಡುಗರ ಕಣ್ಣಲ್ಲಿ ಎಷ್ಟೆಲ್ಲ ರೂಪ! ~ ಚೇತನಾ ತೀರ್ಥಹಳ್ಳಿ
ಉಳಿ ಪೆಟ್ಟು ಬಿದ್ದಷ್ಟೂ ಕಲ್ಲು ಚೆಂದದ ಶಿಲ್ಪವಾಗುತ್ತೆ ಅಂತಾರೆ.
ಶಿಲ್ಪವಾಗೋ ಆಸಕ್ತಿ ಅಥವಾ ಬಯಕೆ ಆ ಕಲ್ಲಿಗೆ ಇದೆಯಾ ಅಂತ ಒಂದು ಮಾತು ವಿಚಾರಿಸಿದವರು ಇದ್ದಾರಾ?
ಇಷ್ಟಕ್ಕೂ ಅಷ್ಟೆಲ್ಲ ಪೆಟ್ಟು ತಿಂದು ಶಿಲ್ಪವಾಗುವುದರಿಂದ ಬರೋ ಭಾಗ್ಯವಾದ್ರೂ ಏನು!?
ಕಲ್ಲಾಗಿದ್ದಷ್ಟು ಕಾಲ ಸಿಕ್ಕಲ್ಲಿ ಉರುಳಿಕೊಂಡಿರುವ ಸ್ವಾತಂತ್ರ್ಯ ಸುಖವಾದರೂ ಇರುತ್ತೆ.
ಶಿಲ್ಪವಾದ ಮೇಲೆ ಅದಕ್ಕೊಂದು ಸ್ಥಾನ, ಸಮ್ಮಾನಗಳ ಪಂಜರ ಹಬ್ಬಿಕೊಳ್ಳುತ್ತೆ.
ಹೇಗೆ ಕೆತ್ತಲ್ಪಟ್ಟಿದೆಯೋ ಆ ಆಕಾರ, ಆ ಕುಸುರಿ ಎಲ್ಲಾ ಉಳಿಸಿಕೊಳ್ಳುವ ಅನಿವಾರ್ಯತೆ ಜೊತೆಗೆ.
ಕಲ್ಲು, ಶಿಲ್ಪವಾದ ಕೂಡಲೇ ಅದಕ್ಕೊಂದು ಮಿತಿ.
ನಿರಾಕಾರಕ್ಕೆ ಆಕಾರ ಒದಗಿದ ಕೂಡಲೇ ಅದರ ಎಲ್ಲ ಸಾಧ್ಯತೆಗೆ ಒಂದು ಚೌಕಟ್ಟು ಬಿದ್ದುಬಿಡುತ್ತೆ.
ನಿರಾಕಾರ, ಸಾಕಾರದ ಅನಂತ ಸಾಧ್ಯತೆ.
ಕಲ್ಲು, ಕಲ್ಲಾಗೇ ಇದ್ದರೆ ನೋಡುಗರ ಕಣ್ಣಲ್ಲಿ ಎಷ್ಟೆಲ್ಲ ರೂಪ!
ಕಲ್ಲು ಮುಕ್ಕಾದರೂ ಅಂದಗೆಡುವ ಆತಂಕವಿಲ್ಲ.
ಆದರೆ ಶಿಲ್ಪ?
ಚಿಕ್ಕದೊಂದು ಧಕ್ಕೆಯಾದರೂ ಶಿಲ್ಪ ವಿರೂಪ.
ಇರುವುದರಲ್ಲಿ ಸೌಂದರ್ಯ ಕಾಣಲಾಗದ ಕೊರತೆಗೆ ಕಲ್ಲು ಕೆತ್ತಿ ಶಿಲ್ಪ ಮಾಡುವವರೇ, ನೀವು ಕಲ್ಲಿಗೆ ಉಪಕಾರ ಮಾಡುತ್ತಿಲ್ಲ;
ಸಹಜ ಸೃಷ್ಟಿ ನಿಮ್ಮ ಕುರುಡಿಗೆ ಹೊಣೆಯಲ್ಲ.

