ಇರ್ಫಾನ್ ಅದ್ಭುತ ನಟ, ಗಂಭೀರ ಚಿಂತಕ ಎನ್ನುವುದು ಎಲ್ಲರಿಗೂ ಗೊತ್ತಿದ್ದರೂ ಅವನ ವ್ಯಕ್ತಿತ್ವದ ಈ ಮುಖದ ಪರಿಚಯ ಬಹಳ ಜನರಿಗೆ ಇರಲಿಲ್ಲ. ಮಹಾರಾಷ್ಟ್ರದ ಇಗಟಪುರಿಯ ಜನರಿಂದಾಗಿ ಇರ್ಫಾನ್ ನ ಬಹುಮುಖಿ ವ್ಯಕ್ತಿತ್ವ ಈಗ ಎಲ್ಲರಿಗೂ ಪರಿಚಿತ… । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
‘ಇಗಟ ಪುರಿ” ಮಹಾರಾಷ್ಟ್ರದ ಒಂದು ಪುಟ್ಟ ಹಳ್ಳಿ. ಬಹುತೇಕ ವ್ಯವಸಾಯ, ಕೂಲಿ ಕೆಲಸ ಮಾಡಿಕೊಂಡಿದ್ದ ಜನರ ಊರಿಗೆ ಒಬ್ಬ ವ್ಯಕ್ತಿಯ ಆಗಮನವಾಗುತ್ತದೆ. ಆ ವ್ಯಕ್ತಿ ಹಳ್ಳಿಯಲ್ಲಿ ಒಂದಿಷ್ಟು ಜಾಗ ಖರೀದಿಸಿ ಅಲ್ಲೊಂದು ಮನೆ ಕಟ್ಟಿಕೊಳ್ಳುತ್ತಾನೆ. ಆಗಾಗ ಆ ಮನೆಗೆ ಇರಲು ಬರುವ ವ್ಯಕ್ತಿ, ಹಳ್ಳಿಗರೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಳ್ಳುತ್ತಾನೆ, ಅವರ ಸುಖ ದುಃಖಗಳಲ್ಲಿ ಒಂದಾಗುತ್ತಾನೆ. ತನ್ನ ಕೈಲಾದಷ್ಟು ಹಳ್ಳಿಯ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಾನೆ. ತನ್ನ ಎಲ್ಲ ಹಬ್ಬಗಳನ್ನ ಹಳ್ಳಿಯ ಜನರೊಂದಿಗೆ ಆಚರಿಸಿಕೊಳ್ಳುತ್ತಾನೆ. ಹಳ್ಳಿಯ ಜನ ಅವನನ್ನು ತಮ್ಮ ಹೀರೋ ಎಂದೇ ಗುರುತಿಸಿ ಆದರಿಸುತ್ತಿರುತ್ತಾರೆ.
2020 ರಲ್ಲಿ ಅಚಾನಕ್ ಆಗಿ ಆ ವ್ಯಕ್ತಿ ಮಾರಣಾಂತಿಕ ಕಾಯಿಲೆಗೆ ಬಲಿಯಾಗಿ ತೀರಿಕೊಂಡಾಗ, ಹಳ್ಳಿಗರಿಗೆ ಇದನ್ನು ನಂಬುವುದು ಅಸಾಧ್ಯವಾಗಿ ಬಿಡುತ್ತದೆ. ಅವನಿಗೆ ಗೌರವ ಸೂಚಿಸುವುದಕ್ಕಾಗಿ ಹಳ್ಳಿಯ ಜನ ಅವನು ಮನೆ ಮಾಡಿಕೊಂಡಿಕೊಂಡಿದ್ದ ಲೋಕ್ಯಾಲಿಟಿಗೆ “ ಹೀರೋ ಚಿ ವಾಡಿ “ ( place of hero) ಎಂದು ನಾಮಕರಣ ಮಾಡುತ್ತಾರೆ. ಹಳ್ಳಿಗರಿಗೆ ಬಹು ಪ್ರಿಯನಾಗಿದ್ದ ಆ ವ್ಯಕ್ತಿ ಬೇರಾರೂ ಅಲ್ಲ, ಭಾರತೀಯ ಚಲನಚಿತ್ರ ರಂಗ ಕಂಡ ಅತ್ಯದ್ಭುತ ನಟ ‘ಇರ್ಫಾನ್ ಖಾನ್’

