ಇನ್ನೊಬರು ಯಾವತ್ತೂ ಜವಾಬ್ದಾರರಲ್ಲ. ಸುಮ್ಮನೇ ಗಮನಿಸಿ. ಆ ಕ್ಷಣದಲ್ಲಿ ನೀವು ತಿಳುವಳಿಕೆ ಹೊಂದಿರುವುರಾದರೆ, ಯಾವ ಸಮಸ್ಯೆಯೂ ಉದ್ಭವವಾಗುವುದಿಲ್ಲ. ಆದರೆ ಎಲ್ಲರೂ ಆ ಕ್ಷಣ ಕಳೆದ ನಂತರ ತಿಳುವಳಿಕೆಯನ್ನು ಹೊಂದುತ್ತಾರೆ. ನಂತರದ ತಿಳುವಳಿಕೆಗೆ ಯಾವ ಬೆಲೆಯೂ ಇಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನೀವು ಯಾರೊಂದಿಗೋ ಜಗಳ ಆಡುತ್ತೀರಿ, ಅವರನ್ನು ಎಳೆದಾಡುತ್ತೀರಿ, ಬಯ್ಯುತ್ತೀರಿ. ನಿಮಗೆ ಆಮೇಲೆ ಗೊತ್ತಾಗುತ್ತದೆ ಇದೆಲ್ಲ ಬೇಕಾಗಿರಲಿಲ್ಲ ಎನ್ನುವುದು, ಆದರೆ ಅಷ್ಟೊತ್ತಿಗಾಗಲೇ ಸಮಯ ಮೀರಿ ಹೋಗಿರುತ್ತದೆ. ಈ ತಿಳುವಳಿಕೆಗೆ ಯಾವ ಅರ್ಥವೂ ಇಲ್ಲ, ನೀವು ಈಗಾಗಲೇ ಅವರಿಗೆ ಹಾನಿ ಮಾಡಿಬಿಟ್ಟಿದ್ದೀರ. ಈ ಜ್ಞಾನ ಈಗ ಕೇವಲ ಹುಸಿ ಜ್ಞಾನ. ಇದು ನಿಮಗೆ ತಿಳುವಳಿಕೆಯ ಭಾವವನ್ನು ಕೊಡುತ್ತದೆ ನಿಜ ಆದರೆ ಇದು ನಿಮ್ಮ ಅಹಂ ಮಾಡಿದ ಟ್ರಿಕ್. ಈ ತಿಳುವಳಿಕೆ ನಿಮಗೆ ಯಾವ ಸಹಾಯವನ್ನೂ ಮಾಡುವುದಿಲ್ಲ. ಯಾವಾಗ ನೀವು ಈ ಕ್ರಿಯೆಯಲ್ಲಿ ನಿರತರಾಗಿದ್ದಿರೋ ಆ ಕ್ಷಣದಲ್ಲಿ ಈ ತಿಳುವಳಿಕೆ ನಿಮ್ಮೊಳಗೆ ಹುಟ್ಟಬೇಕಾಗಿತ್ತು. ಮತ್ತು ನಿಮ್ಮ ಕ್ರಿಯೆ ವ್ಯರ್ಥ ಪ್ರಯಾಸ ಎನ್ನುವುದು ನಿಮಗೆ ಆಗಲೇ ಅನಿಸಬೇಕಾಗಿತ್ತು. ಸುಳ್ಳು ಹೇಳಬಾರದು ಎನ್ನುವುದು ನಿಮಗೆ ಗೊತ್ತಿದೆ ಆದರೆ ಸುಳ್ಳು ಹೇಳುವಾಗ ಇದು ನಿಮಗೆ ನೆನಪಾಗುವುದಿಲ್ಲ. ಆಗ ಬೇಕಾದ ಹಾನಿ ಆದಮೇಲೆ ನಿಮಗೆ ಪಶ್ಚಾತಾಪವಾಗುತ್ತದೆ, ನಾನು ಸುಳ್ಳು ಹೇಳಬಾರದಿತ್ತು ಅನಿಸುತ್ತದೆ. ಈ ಅನಿಸುವಿಕೆಗೆ ಯಾವ ಬೆಲೆ ಇಲ್ಲ
ಈ ಅರಿವು ನಿಮ್ಮೊಳಗಿದ್ದಾಗಲೇ ಅದು ನಿಮಗೆ ಗೊತ್ತಾಗಿದ್ದರೆ, ನೀವು ಆ ಕ್ರಿಯೆಗೆ ಮುಂದಾಗುತ್ತಿರಲಿಲ್ಲ. ಅರಿವಿನ ವಿರುದ್ಧ ಕೆಲಸ ಮಾಡುವುದು ಯಾರಿಗೂ ಸಾಧ್ಯವಾಗುವುದಿಲ್ಲ. ಯಾರಾದರೂ ಹಾಗೆ ಮಾಡುತ್ತಾರಾದರೆ ಅದು ನಿಜ ಅರಿವು ಅಲ್ಲ. ಬೇರೆ ಯಾವುದನ್ನೋ ನೀವು ಅರಿವು ಎಂದು ತಪ್ಪು ತಿಳಿದುಕೊಂಡು ಬಿಟ್ಟಿದ್ದೀರ. ಆದ್ದರಿಂದ ನೆನಪಿರಲಿ, ಯಾರೋ ಇನ್ನೊಬ್ಬರು ಯಾವುದಕ್ಕೂ ಜವಾಬ್ದಾರರಲ್ಲ. ಸಮಸ್ಯೆ ನಿಮ್ಮೊಳಗೇ ಎಲ್ಲೋ ಕುದಿಯುತ್ತಿದೆ. ಹೌದು ನೀವು ಪ್ರೀತಿಸುತ್ತಿರುವವರು ನಿಮಗೆ ಬಹಳ ಹತ್ತಿರ. ನಿಮ್ಮ ಸಮಸ್ಯೆಗಳನ್ನು ಯಾರೋ ದಾರಿಯಲ್ಲಿ ಹೋಗುವವರ ಮೇಲೆ ಹೊರಿಸಲಿಕ್ಕಾಗುವುದಿಲ್ಲ. ಆದ್ದರಿಂದ ನಿಮ್ಮ ಪ್ರೀತಿ ಪಾತ್ರರ ಮೇಲೆ, ನಿಮಗೆ ಹತ್ತಿರವಾದವರ ಮೇಲೆ ನೀವು ನಿಮ್ಮ ಸಮಸ್ಯೆಗಳ ಭಾರವನ್ನು ಹೊರೆಸುತ್ತೀರಿ. ಆದರೆ ಇದನ್ನು ನೀವು ಅವಾಯ್ಡ್ ಮಾಡಬೇಕು. ಏಕೆಂದರೆ ಪ್ರೀತಿ ಎನ್ನುವುದು ಬಹಳ ನಾಜೂಕು, ಚೂರು ಗಾಯಗೊಂಡರೂ ಒಡೆದು ಚೂರು ಚೂರಾಗಿಬಿಡುತ್ತದೆ. ನೀವು ಹೀಗೆ ಮಾಡುವುದನ್ನು ಮುಂದುವರೆಸಿದರೆ ಪ್ರೀತಿ ಮಾಯವಾಗಿಬಿಡುತ್ತದೆ.
ಹಾಗಾಗಿ ಇನ್ನೊಬ್ಬರು ಯಾವತ್ತೂ ಜವಾಬ್ದಾರರಲ್ಲ. ಈ ತಿಳುವಳಿಕೆಯನ್ನು ನೀವು ನಿಮ್ಮ ಅರಿವಿನ ಭಾಗ ಮಾಡಿಕೊಂಡುಬಿಡಿ. ಯಾವಾಗಲಾದರೂ ನಿಮಗೆ ನಿಮ್ಮ ಸಮಸ್ಯೆಗೆ ಇನ್ನೊಬ್ಬರು ಜವಾಬ್ದಾರರು ಎಂದು ಅನಿಸಲು ಶುರುವಾದಾಗಲೆಲ್ಲ, ಈ ಅರಿವು ನಿಮ್ಮ ನೆನಪಿಗೆ ಬರಲಿ. ಆಗ ನೀವು ನಿಮಗೆ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬೀಳುತ್ತೀರ, ಕೂಡಲೇ ನೀವು ನಿಮ್ಮ ಅನಿಸಿಕೆಯನ್ನು ಡ್ರಾಪ್ ಮಾಡಿಬಿಡಿ. ಮತ್ತು ನಿಮ್ಮ ಕ್ಷಮೆ ಕೇಳಿಕೊಳ್ಳಿ.
ನೆನ್ನೆಯ ಕಂತು ಇಲ್ಲಿ ಓದಿ : https://aralimara.com/2025/01/22/osho-446/


[…] ನೆನ್ನೆಯ ಕಂತು ಇಲ್ಲಿ ಓದಿ : https://aralimara.com/2025/01/23/osho-447/ […]
LikeLike