ನಿಜದ ದರೋಡೆಕೋರರು ( The Real Robbers) ಓಶೋ 365 Day#9

ಹೆದರಿಕೆಗೆ ಯಾವ ಕಾರಣವೂ ಇಲ್ಲ ಏಕೆಂದರೆ, ನಾವು ಕಳೆದುಕೊಳ್ಳುವುದು ಏನೂ ಇಲ್ಲ. ನಿಮ್ಮ ಬಳಿ ದರೋಡೆ ಮಾಡಬಹುದಾದದ್ದು ಏನಾದರೂ ಇದ್ದರೆ ಅದಕ್ಕೆ ಬದುಕಿನಲ್ಲಿ ಯಾವ ಬೆಲೆಯೂ ಇಲ್ಲ, ಆದ್ದರಿಂದ ಭಯ ಯಾಕೆ? ಯಾಕೆ ಸಂಶಯ? ಯಾಕೆ ಅನುಮಾನ? ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಅನುಮಾನ, ಸಂಶಯ, ಭಯ ಇವು ನಿಜವಾದ ದರೋಡೆಕೋರರು. ಇವು ನಿಮ್ಮ ಸಂಭ್ರಮದ ಸಾಧ್ಯತೆಯನ್ನು ನಾಶ ಮಾಡುತ್ತವೆ. ಆದ್ದರಿಂದ ಬದುಕುತ್ತಿರುವಾಗ, ಬದುಕನ್ನ ಸಂಭ್ರಮಿಸಿ. ಈ ಕ್ಷಣ ಇನ್ನೂ ಇರುವಾಗಲೇ, ಅದನ್ನು ಸಂಪೂರ್ಣವಾಗಿ ಅನುಭವಿಸಿ. ಹೆದರಿಕೆಯ ಕಾರಣದಿಂದಾಗಿ ನಾವು ಎಷ್ಟೊಂದನ್ನ ಮಿಸ್ ಮಾಡಿಕೊಳ್ಳುತ್ತೇವೆ. ಭಯದ ಕಾರಣವಾಗಿ ನಾವು ಪ್ರೀತಿಸಲು ಹಿಂದೆ ಮುಂದೆ ನೋಡುತ್ತೇವೆ, ಅಥವಾ ನಾವು ಪ್ರೀತಿಗೆ  ಮುಂದಾದರೂ, ನಾವು ಸಂಪೂರ್ಣ ತೆರೆದ ಹೃದಯದಿಂದ ಪ್ರೀತಿಸುವುದಿಲ್ಲ, ನಮ್ಮ ಪ್ರಯತ್ನವೆಲ್ಲ ಅರೆ ಮನಸ್ಸಿನಿಂದ ಕೂಡಿರುತ್ತದೆ. ಯಾವುದೇ ಕೆಲಸ ಮಾಡಲಿ ಹೆದರಿಕೆಯ ಕಾರಣವಾಗಿ, ನಾವು ಒಂದು ಮಿತಿಯಾಚೆಗೆ ಹೋಗುವುದೇ ಇಲ್ಲ. ಹಾಗಾಗಿ ನಾವು ಅಲ್ಲಿಯೇ ಸಿಕ್ಕಿಹಾಕಿಕೊಂಡು ಬಿಡುತ್ತೇವೆ. ಭಯದ ಕಾರಣವಾಗಿಯೇ ನಾವು ಆಳ ಗೆಳೆತನಕ್ಕೆ ಮುಂದಾಗುವುದಿಲ್ಲ. ಭಯದ ಕಾರಣವಾಗಿಯೇ ನಾವು ಆಳವಾದ ಪ್ರಾರ್ಥನೆಗೆ ಮುಂದಾಗುವುದಿಲ್ಲ.

ಪ್ರಜ್ಞೆ ಇರಲಿ ಆದರೆ ಎಚ್ಚರಿಕೆ ಬೇಡ. ಈ ಎರಡರ ನಡುವೆ ಸೂಕ್ಷ್ಮವಾದ ವ್ಯತ್ಯಾಸ ಇದೆ. ಎಚ್ಚರಿಕೆಯ ಬೇರು ಭಯದಲ್ಲಿದೆ ಆದರೆ ಪ್ರಜ್ಞೆಯ ವಿಷಯದಲ್ಲಿ ಹಾಗಲ್ಲ. ಜನ ಎಚ್ಚರಿಕೆಯಿಂದಿರುವುದು ತಾವು ತಪ್ಪು ಮಾಡಬಹುದು ಎನ್ನುವ ಭಯದಿಂದ, ಹಾಗಾಗಿ ಅವರು ಬಹಳ ತೀವ್ರವಾಗಿ ಬದುಕುವುದು ಸಾಧ್ಯವಾಗುವುದಿಲ್ಲ. ಈ ಹೆದರಿಕೆಯೇ ನಿಮಗೆ ಹೊಸ ಜೀವನ ವಿಧಾನ, ನಿಮ್ಮ ಸಾಮರ್ಥ್ಯಕ್ಕೆ ಹೊಸ ದಾರಿ, ಹೊಸ ದಿಕ್ಕು, ಹೊಸ ಜಾಗ ಗಳನ್ನು ಕಂಡುಕೊಳ್ಳಲು ಅವಕಾಶ ಮಾಡಿಕೊಡುವುದಿಲ್ಲ. ನೀವು ಮತ್ತೆ ಮತ್ತೆ ಅದೇ ಹಳೆಯ ಹಾದಿ ತುಳಿಯುತ್ತೀರಿ, ಅದೇ ದಾರಿಯಲ್ಲಿ ಹಿಂದೆ ಮುಂದೆ ಓಡಾಡುತ್ತೀರಿ, ಗೂಡ್ಸ್ ರೈಲುಗಾಡಿಯಂತೆ.

ಒಬ್ಬ ಮನುಷ್ಯ ಕಾಡಿನ ಮೂಲಕ ಹಾಯ್ದು ಬೇರೆ ಊರಿಗೆ ಹೋಗುತ್ತಿದ್ದ. ತುಂಬ ಹೊತ್ತು ಪ್ರವಾಸ ಮಾಡಿದ್ದರಿಂದ ಬಹಳ ದಣಿದಿದ್ದ. ಅವನ ಹೊಟ್ಟೆ ಚುರುಗುಡುತ್ತಿತ್ತು. ದಣಿವಾರಿಸಿಕೊಳ್ಳಲು ಅವ ಒಂದು ದೊಡ್ಡ ಮರದ ಕೆಳಗೆ ಹೋಗಿ ಕುಳಿತುಕೊಂಡ. ಆ ಮರ ಜನರಿಗೆ ಕೇಳಿಕೊಂಡಿದ್ದನ್ನು ಕೊಡುವ ಅಪರೂಪದ ಮರ. ಅವನಿಗೆ ಮರದ ಈ ಅದ್ಭುತ ಶಕ್ತಿಯ ಬಗ್ಗೆ ತಿಳಿದಿರಲಿಲ್ಲ.  ಆ ಮನುಷ್ಯ ಸ್ವಲ್ಪ ಹೊತ್ತು ಅಲ್ಲಿ ಕುಳಿತು ದಣಿವಾರಿಸಿಕೊಂಡ. “ ಇಲ್ಲೇ ಎಲ್ಲಾದರೂ ಒಂದಿಷ್ಟು ಊಟ ಸಿಕ್ಕಿದ್ದರೆ ಚೆನ್ನಾಗಿತ್ತು” ಎಂದು ಮನಸ್ಸಿನಲ್ಲೇ ಅಂದುಕೊಂಡ. ಅವನು ಹಾಗೆ ಅಂದು ಕೊಳ್ಳುವುದೇ ತಡ ಒಬ್ಬ ಸುಂದರ ಸ್ತ್ರೀ ಊಟದೊಂದಿಗೆ ಅವನ ಮುಂದೆ ಪ್ರತ್ಯಕ್ಷಳಾದಳು.  ಆ ಮನುಷ್ಯನಿಗೆ ಎಷ್ಟು ಹಸಿವಾಗಿತ್ತೆಂದರೆ ಆ ಊಟ ಎಲ್ಲಿಂದ ಬಂತು ಎನ್ನುವುದನ್ನ ವಿಚಾರ ಮಾಡದೇ ಹೊಟ್ಟೆ ತುಂಬ ಊಟ ಮಾಡಿದ.

ಊಟ ಮುಗಿದ ಮೇಲೆ ಅವನಿಗೆ,  ಒಂದು ಗಂಟೆ ನಿದ್ದೆ ಮಾಡಿದರೆ ಚೆನ್ನ ಅನಿಸಿತು. ಆದರೆ ಅಲ್ಲಿ ತುಂಬ ಕಲ್ಲು ಮುಳ್ಳುಗಳಿದ್ದವು. ಮಲಗಿಕೊಳ್ಳಲು ಒಂದು ಹಾಸಿಗೆ ಇರಬೇಕಾಗಿತ್ತು ಎಂದುಕೊಂಡ. ಕೂಡಲೇ ಒಬ್ಬ ಸ್ತ್ರೀ ಒಂದು ಭವ್ಯ ಹಾಸಿಗೆಯೊಂದಿಗೆ ಪ್ರತ್ಯಕ್ಷವಾದಳು. ಅವನಿಗೆ ನಿದ್ದೆ ಎಷ್ಟು ತೀವ್ರವಾಗಿತ್ತೆಂದರೆ ಯಾವ ಆಲೋಚನೆಯನ್ನೂ ಮಾಡದೆ ಆ ಹಾಸಿಗೆಯ ಮೇಲೆ ಮಲಗಿಕೊಂಡು ಬಿಟ್ಟ.

ನಿದ್ದೆ ಮಾಡಿ ಎದ್ದ ಮೇಲೆ ಅವನು ಯೋಚನೆ ಮಾಡಲು ಶುರು ಮಾಡಿದ. ಈ ಕಾಡಿನಲ್ಲಿ ನನ್ನ ಬಿಟ್ಟು ಬೇರೆ ಯಾರೂ ಕಾಣುತ್ತಿಲ್ಲ ಹಾಗೆಂದ ಮೇಲೆ ಈ ಊಟ ಮತ್ತು ಹಾಸಿಗೆ ತಂದು ಕೊಟ್ಟವರು ಯಾರು? ಇದು ಯಾವುದೂ ದೆವ್ವಗಳ ಕೆಲಸವೇ ಎಂದು ಎಂದುಕೊಂಡ. ಅವನು ಹಾಗೆ ಎಂದುಕೊಳ್ಳುವುದೇ ತಡ ದೆವ್ವಗಳು ಅವನ ಮುಂದೆ ಹಾಜರಾದವು.

ದೆವ್ವಗಳನ್ನು ನೋಡುತ್ತಿದ್ದಂತೆಯೇ ಆ ಮನುಷ್ಯ ಗಾಬರಿಯಾದ. ಅಯ್ಯೋ  ದೇವರೇ ಈ ದೆವ್ವಗಳು ನನ್ನ ಬಿಡುವುದಿಲ್ಲ ಕೊಂದು ಬಿಡುತ್ತವೆ ಎಂದುಕೊಂಡ. ಅವನು ಹಾಗೆ ಅಂದು ಕೊಳ್ಳುವುದೇ ತಡ ದೆವ್ವಗಳು ಅವನನ್ನು ಕೊಂದು ಹಾಕಿಬಿಟ್ಟವು.


ನೆನ್ನೆಯದು ಇಲ್ಲಿ ಓದಿ… : https://aralimara.com/2025/01/26/osho-450/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ