ಪ್ರಾಚೀನ ಸಮಾಜಗಳಲ್ಲಿ ದೇಹವನ್ನು ಇಡಿಯಾಗಿ ಒಪ್ಪಿಕೊಳ್ಳಲಾಗುತ್ತಿತ್ತು. ಅಲ್ಲಿ ಯಾವ ನಿರಾಕರಣೆ ಯಾವ ಖಂಡನೆಯೂ ಇರಲಿಲ್ಲ, ಯಾವ ಮೇಲು ಯಾವ ಕೀಳೂ ಇರಲಿಲ್ಲ. ಎಲ್ಲವೂ ಸರಳವಾಗಿ ಸಹಜವಾಗಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ದೇಹವನ್ನು ಅದು ಇದ್ದ ಹಾಗೆ ಒಪ್ಪಿಕೊಳ್ಳುವಲ್ಲಿ ಯೋಗಾಭ್ಯಾಸ ( Yoga ) ಬಹಳ ಉತ್ಸಾಹ ತೋರಿಸುವುದಿಲ್ಲ. ಅದು ನಿಮ್ಮನ್ನು ನಿಯಂತ್ರಣದಲ್ಲಿ ಇಡುತ್ತದೆ, ಹಾಗು ನಿಯಂತ್ರಣ, ಅದು ಯಾವುದೇ ರೀತಿಯದು ಇರಲಿ, ಅದು ಶೋಷಣೆಯೇ, ದಬ್ಬಾಳಿಕೆಯೇ. ಆದ್ದರಿಂದ ಈ ನಿಗ್ರಹದ ವಿಷಯವನ್ನು ನೀವು ಹತ್ತಿಕ್ಕುತ್ತೀರಿ ಮತ್ತು ಮರೆತುಬಿಡುತ್ತೀರಿ. ಹೀಗೆ ನಿಗ್ರಹಿಸಲ್ಪಟ್ಚಿದ್ದೆಲ್ಲ ನಿಮ್ಮ ಹೊಟ್ಟೆಯನ್ನು ಸೇರಿ ಅಲ್ಲಿ ಸಂಗ್ರಹಿತವಾಗುತ್ತದೆ. ಹೊಟ್ಟೆಯನ್ನು ಹೊರತುಪಡಿಸಿದರೆ ಈ ತ್ಯಾಜ್ಯಕ್ಕೆ ನಿಮಗೆ ಬೇರೆ ಯಾವ ಜಾಗವೂ ಇಲ್ಲ.
ನಿಮ್ಮ ಮೇಲಿನ ನಿಯಂತ್ರಣ ಸ್ಫೋಟವಾದ ದಿನ, ನೀವು ಹಗುರಾಗುತ್ತೀರಿ, ನಿಮಗೆ ಬಿಡುಗಡೆಯ ಅನುಭವವಾಗುತ್ತದೆ, ನೀವು ಜೀವಂತಿಕೆಯನ್ನು ಕೂಡಿಕೊಳ್ಳುತ್ತೀರಿ. ನಿಮಗೆ ಮತ್ತೆ ಹೊಸದಾಗಿ ಹುಟ್ಟಿದ ಅನುಭವವಾಗುತ್ತದೆ ಏಕೆಂದರೆ ಇದು ನಿಮ್ಮ ವಿಭಜಿತ ದೇಹವನ್ನು ಮತ್ತೆ ಒಂದು ಮಾಡುತ್ತದೆ. ಹೊಟ್ಟೆಯ diaphragm ದೇಹವನ್ನು ಮೇಲಿನ ಭಾಗ ಮತ್ತು ಕೆಳಗಿನ ಭಾಗ ಎಂದು ವಿಭಜನೆ ಮಾಡುತ್ತದೆ. ಎಲ್ಲ ಹಳೆಯ ಧಾರ್ಮಿಕತೆಯಲ್ಲಿ ಕೆಳಗಿನ ಭಾಗವನ್ನು ನೀಚ ಎಂದು ಖಂಡಿಸುತ್ತ, ಮೇಲಿನ ಭಾಗವನ್ನು ಉಚ್ಚ, ಪವಿತ್ರ ಎಂದು ಗೌರವಿಸಲಾಗುತ್ತದೆ. ಆದರೆ ಇದು ಹಾಗಲ್ಲ. ಇಡೀ ದೇಹ ಒಂದು ಮತ್ತು ಇಂಥ ವಿಭಜನೆ ಅಪಾಯಕಾರಿಯಾದದ್ದು ; ಇದು ನಿಮ್ಮನ್ನು ಒಡೆಯುತ್ತದೆ. ಮತ್ತು ನೀವು ಬದುಕಿನ ಸಂಗತಿಗಳನ್ನು ಒಂದಾದಮೇಲೊಂದರಂತೆ ಖಂಡಿಸುತ್ತ ಹೋಗುತ್ತೀರಿ, ನಿರಾಕರಿಸುತ್ತ ಮುಂದುವರೆಯುತ್ತೀರಿ. ನೀವು ಯಾವೆಲ್ಲವನ್ನು ನಿರಾಕರಿಸಿ ದೂರ ಮಾಡಿದ್ದಿರೋ, ಅವೆಲ್ಲವೂ ಕಾಯಿಲೆಯ ರೂಪದಲ್ಲಿ ನಿಮ್ಮ ವಿರುದ್ದ ಪ್ರತೀಕಾರಕ್ಕಾಗಿ ಕಾಯುತ್ತಿರುತ್ತವೆ.
ಈಗಿನ ಕೆಲವು ವೈದ್ಯಕೀಯ ಸಂಶೋಧಕರ ಪ್ರಕಾರ, ಈ ಕ್ಯಾನ್ಸರ್ ಗೆ ಕಾರಣ ಬೇರೇನಲ್ಲ ನಮ್ಮ ಒಳಗಿನ ಅತಿಯಾದ ಒತ್ತಡವೇ. ಕ್ಯಾನ್ಸರ್ ಹೆಚ್ಚು ಕಾಣಿಸಿಕೊಳ್ಳುವುದು ಈ ಹತ್ತಿಕ್ಕಲ್ಪಟ್ಟ ಸಂಗತಿಗಳ ಜನರಲ್ಲಿಯೇ. so called ಹೆಚ್ಚು ನಾಗರೀಕ, ಹೆಚ್ಚು ಸುಸಂಸ್ಕೃತ ಸಮಾಜಗಳಲ್ಲಿನ ಜನರಲ್ಲಿಯೇ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ನಮ್ಮ ಪ್ರಾಚೀನ ಸಮಾಜಗಳಲ್ಲಿ ಈ ಕ್ಯಾನ್ಸರ್ ನ ಸಮಸ್ಯೆ ಅಷ್ಟಿರಲಿಲ್ಲ ಏಕೆಂದರೆ ಅಲ್ಲಿ ದೇಹವನ್ನು ಇಡಿಯಾಗಿ, ಒಂದು ಎಂದು ಸ್ವೀಕಾರ ಮಾಡಲಾಗುತ್ತಿತ್ತು, ಅಲ್ಲಿ ಯಾವ ವಿಭಜನೆ ಇರಲಿಲ್ಲ, ಯಾವ ಖಂಡನೆ, ಯಾವ ನಿರಾಕರಣೆ ಇರಲಿಲ್ಲ, ಯಾವ ಮೇಲು – ಕೀಳುಗಳಿರಲಿಲ್ಲ. ಎಲ್ಲವೂ ಸರಳವಾಗಿತ್ತು, ಸಹಜವಾಗಿತ್ತು.
ಒಮ್ಮೆ, ಕುಷ್ಟ ರೋಗದಿಂದ ಬಳಲುತ್ತಿದ್ದ ಭಿಕ್ಷುಕರ ಗುಂಪೊಂದು ಝೆನ್ ಮಾಸ್ಟರ್ ಬಾಂಕಿಯ ಆಶ್ರಮಕ್ಕೆ ಬಂದು ಅವನ ಆಶ್ರಯ ಕೋರಿತು. ಅಪಾರ ಅಂತಃಕರಣದ ಮನುಷ್ಯನಾದ ಬಾಂಕಿ ಅವರಿಗೆಲ್ಲ ತನ್ನ ಆಶ್ರಮದಲ್ಲಿ ಇರಲು ಅವಕಾಶ ಮಾಡಿಕೊಟ್ಟ.
ಬಾಂಕಿ ಸ್ವತಃ ತಾನೇ ಕುಷ್ಟ ರೋಗಿಗಳನ್ನು ಸ್ವಚ್ಛ ಮಾಡಿ, ಸ್ನಾನ ಮಾಡಿಸಿ, ಔಷಧಿ ಹಚ್ಚಿ ಅವರ ಆರೈಕೆ ಮಾಡುತ್ತಿದ್ದ.
ಬಾಂಕಿಯ ಪ್ರವಚನಕ್ಕೆ ಮತ್ತು ಅವನ ಶಿಷ್ಯರ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ದೇವಸ್ಥಾನ ಕಟ್ಟಿಸಿಕೊಟ್ಟ ರಾಜನ ಪ್ರತಿನಿಧಿಗೆ ಇದೆಲ್ಲ ಹಿಡಿಸುತ್ತಿರಲಿಲ್ಲ.
“ ಮಾಸ್ಟರ್ ಎಂಥ ಕೊಳಕು ಇದು. ದಯವಿಟ್ಟು ಕೈ ಸ್ವಚ್ಛ ತೊಳೆದುಕೊಳ್ಳಿ “ ರಾಜ ಪ್ರತಿನಿಧಿ ಮುಖ ಸಿಂಡರಿಸುತ್ತ ಕೇಳಿಕೊಂಡ.
“ ಈ ರೋಗಿಗಳ ದೇಹದ ಗಾಯ, ಕೀವುಗಳಿಗಿಂತ ನಿನ್ನ ಮಾತು ನನಗೆ ಪರಮ ಅಸಹ್ಯ, ಕಿವಿ ತೊಳೆದುಕೊಳ್ಳ ಬೇಕು ನಾನೀಗ “ ಮಾಸ್ಟರ್ ಬಾಂಕಿ ಮುಖ ಎತ್ತದೇ ಉತ್ತರ ಕೊಟ್ಟ.
ನೆನ್ನೆಯ ಸಂಚಿಕೆ ಇಲ್ಲಿದೆ: https://aralimara.com/2025/02/02/osho-458/


[…] ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/03/osho-459/ […]
LikeLike