ಬುದ್ಧ, “ನಿನ್ನ 84 ನೇಯ ಸಮಸ್ಯೆಯನ್ನ ಪರಿಹರಿಸಬಲ್ಲೆ” ಅಂದಿದ್ದೇಕೆ? ಈ ಕತೆ ಓದಿ… ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
ಒಮ್ಮೆ ಬುದ್ಧನ ಜ್ಞಾನ, ಅರಿವು ಎಲ್ಲದರ ಬಗ್ಗೆ ಕೇಳಿ ತಿಳಿದಿದ್ದ ಒಬ್ಬ ವ್ಯಕ್ತಿ, ಬುದ್ಧ ತನ್ನ ಸಮಸ್ಯೆಗಳಿಗೆ ಪರಿಹಾರ ಹೇಳಬಹುದೆಂಬ ಆಸೆಯಿಂದ ಅವನ ಬಳಿ ಬಂದ. ಬಂದವನೇ ಬುದ್ಧನ ಬಳಿ ತನ್ನ ಸಮಸ್ಯೆಗಳೆಲ್ಲವನ್ನೂ ಹೇಳಿಕೊಂಡ ಬುದ್ಧನಿಂದ ಪರಿಹಾರದ ನಿರೀಕ್ಷೆಯಲ್ಲಿ.
ಎಲ್ಲವನ್ನೂ ಸಮಾಧಾನ ಚಿತ್ತದಿಂದ ಕೇಳಿಸಿಕೊಂಡ ಬುದ್ಧ, ನಿನಗೆ ಸಹಾಯ ಮಾಡುವುದು ಸಾಧ್ಯವಿಲ್ಲವೆಂದು ಖಡಾಖಂಡಿತವಾಗಿ ನಿರಾಕರಿಸಿಬಿಟ್ಟ.
ಬುದ್ಧನ ಉತ್ತರ ಕೇಳಿ ಆ ವ್ಯಕ್ತಿಗೆ ಗೊಂದಲವಾಯಿತು, “ ನಿನ್ನ ಮಾತಿನ ಅರ್ಥ ಏನು?” ಅವನು ಮತ್ತೆ ಪ್ರಶ್ನೆ ಮಾಡಿದ.
ಬುದ್ಧ ಉತ್ತರಿಸಿದ. “ಪ್ರತಿಯೊಬ್ಬರಿಗೂ ಸಮಸ್ಯೆಗಳಿರುತ್ತವೆ. ಇವುಗಳನ್ನು ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಹಾಗೆ ನೋಡಿದರೆ ಪ್ರತೀ ವ್ಯಕ್ತಿಗೆ 83 ಸಮಸ್ಯೆಗಳಿರುತ್ತವೆ. ಒಂದು ಸಮಸ್ಯೆಯಿಂದ ತಪ್ಪಿಸಿಕೊಂಡರೆ ಆ ಜಾಗದಲ್ಲಿ ಬೇರೊಂದು ಸಮಸ್ಯೆ ಬಂದು ಕುಳಿತುಕೊಳ್ಳುತ್ತದೆ”.
ಬುದ್ಧನ ಮಾತು ಕೇಳಿ ಆ ವ್ಯಕ್ತಿ ರೊಚ್ಚಿಗೆದ್ದ, “ನೀನು ದೊಡ್ಡ ಗುರು ಎಂದು ಕಿಳಿದುಕೊಂಡಿದ್ದೆ, ನಿನ್ನ ಬಗ್ಗೆ ಜನ ನನಗೆ ಹೇಳಿದ್ದೆಲ್ಲ ಸುಳ್ಳು ಹಾಗಾದರೆ”.
“ಬಹುಶಃ ನಾನು ನಿನ್ನ 84 ನೇಯ ಸಮಸ್ಯೆಯನ್ನ ಪರಿಹರಿಸಬಹುದು” ಬುದ್ಧ ಮತ್ತೆ ಮಾತನಾಡಿದ.
“ 84 ನೇಯ ಸಮಸ್ಯೆ? ಏನು ಹಾಗೆಂದರೆ? “ ಆ ವ್ಯಕ್ತಿ ಆಶ್ಚರ್ಯದಿಂದ ಪ್ರಶ್ನೆ ಮಾಡಿದ.
“84 ನೇಯ ಸಮಸ್ಯೆ ಯಾವುದೆಂದರೆ, ನಿನಗೆ ಯಾವುದೂ ಸಮಸ್ಯೆ ಇರಬಾರದು ಎನ್ನುವುದು”
ಬುದ್ಧ ಮುಗುಳ್ನಗುತ್ತ ಉತ್ತರಿಸಿದ.

