ಮತ್ತೆ ಹೊಸ ಪ್ರೀತಿ ಸಂಭವಿಸಲಿ. ಗಟ್ಟಿಯಾಗಿ ಒಬ್ಬರನ್ನೊಬ್ಬರು ಹಿಡಿದುಕೊಳ್ಳಿ, ಪರಸ್ಪರರ ನಡುವೆ ಹಬ್ಬಲಿ ಪ್ರೀತಿ, ಕಾಳಜಿ. ಕೇವಲ ಪ್ರೀತಿಯ ಕಾವಿಗಾಗಿ ( heat) ಹಂಬಲಿಸಬೇಡಿ, ಏಕೆಂದರೆ ಅದು ಒಂದು ಬಗೆಯ ಹುಚ್ಚು, ಒಂದು ಬಗೆಯ ಉನ್ಮಾದ ; ಅದು ಕಡಿಮೆಯಾಗುತ್ತ ಹೋಗಿ ಮಾಯವಾಗಿದ್ದು ಒಳ್ಳೆಯದೇ ಆಯಿತು. ಆದ್ದರಿಂದ ನಿಮ್ಮನ್ನು ನೀವು ಅದೃಷ್ಟವಂತರು ಎಂದುಕೊಳ್ಳಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರೀತಿ ಆಳವಾಗುತ್ತ ಹೋದಂತೆ ಸಂಗಾತಿಗಳ ನಡುವೆ ಒಂದು ಬಗೆಯ ಸಹೋದರ – ಸಹೋದರಿಯ ಬಾಂಧವ್ಯ ಬೆಳೆದುಕೊಂಡು ಬಿಡುತ್ತದೆ. ಪ್ರೀತಿ ಆಳವಾಗುತ್ತ ಹೋದಂತೆ, sun energy ಕಡಿಮೆಯಾಗುತ್ತ ಹೋಗಿ moon energy ವೃದ್ಧಿಸುತ್ತ ಹೋಗುತ್ತದೆ. ಈಗ ನಿಮ್ಮಿಬ್ಬರ ನಡುವೆ ಕಾವು (heat) ಮಾಯವಾಗಿದೆ, ತಂಪು ನೆಲೆಸಿದೆ. ಪ್ರೀತಿ ಆಳವಾಗುತ್ತ ಹೋದಂತೆ ನಿಮ್ಮ ನಡುವೆ ಒಂದು ತಪ್ಪು ತಿಳುವಳಿಕೆ ಹುಟ್ಟಿಕೊಳ್ಳಬಹುದು, ಏಕೆಂದರೆ ನಾವು ಪ್ರೀತಿಯ ಜ್ವರ, ಉತ್ಸಾಹ, ಉತ್ಕಟತೆಗೆ ಒಗ್ಗಿಕೊಂಡು ಬಿಟ್ಟಿದ್ದೇವೆ, ಆದರೆ ಈಗ ಅದೆಲ್ಲ ಮೂರ್ಖತನ ಅನಿಸತೊಡಗಿದೆ. ಅದು ಮೂರ್ಖತನವೇ. ಈಗ ದೈಹಿಕ ಪ್ರೇಮ ಸಿಲ್ಲಿ ಅನಿಸತೊಡಗಿದೆ, ದೈಹಿಕವಾಗಿ ಪ್ರೇಮಿಸದಿದ್ದರೆ ಹಳೆಯ ಚಾಳಿಯ ಕಾರಣವಾಗಿ ನಿಮ್ಮ ಪ್ರೀತಿಯಲ್ಲಿ ಏನೋ ಮಿಸ್ ಆದಂತೆ ನಿಮಗೆ ಅನಿಸುತ್ತಿದೆ.
ಯಾವಾಗ ಸಂಗಾತಿಗಳ ನಡುವೆ, ಗಂಡ – ಹೆಂಡಿರ ನಡುವೆ ಇಂಥದೊಂದು ಭಾವ ಹೆಚ್ಚಾಗಲು ಶುರುವಾಗುತ್ತದೆಯೋ ಆಗ ನಿಮ್ಮಲ್ಲಿ, ಎಲ್ಲಿ ನೀವು ಒಬ್ಬರನ್ನೊಬ್ಬರು granted ಆಗಿ ತೆಗೆದುಕೊಳ್ಳಲು ಶುರು ಮಾಡಿದ್ದೀರೋ ಎನ್ನುವ ಭಯ ಹುಟ್ಟಿಕೊಳ್ಳುತ್ತದೆ. ಪ್ರೀತಿ ಆಳವಾಗುತ್ತ ಹೋದಂತೆ ದೈಹಿಕ ಪ್ರೀತಿಯ ಕಾವು ಕಡಿಮೆಯಾಗಿ ಭ್ರಾತೃತ್ವ ಹೆಚ್ಚಾಗುತ್ತ ಹೋಗುತ್ತದೆ, ಇಲ್ಲಿ ನಿಮಗೆ ಆಯ್ಕೆಯೇ ಇಲ್ಲ. ನಿಮ್ಮ ನಡುವಿನ ಅಹಂ ಮಾಯವಾಗುತ್ತದೆ. ಏನೋ ಕಳೆದುಕೊಂಡ ಭಯ, ಯಾವುದೋ ಒಂದು ಖಾಲೀತನದ ಭಯ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಆದರೆ ಇದನ್ನು ನೀವು ಭೂತದ ಕನ್ನಡಿಯಲ್ಲಿ ನೋಡಬೇಡಿ, ಭವಿಷ್ಯದ ಕನ್ನಡಿಯಲ್ಲಿ ನೋಡಿ. ಈ ಖಾಲೀತನದಲ್ಲಿಯೇ ಏನೋ ಒಂದು ಮಹತ್ವದ್ದು ಸಂಭವಿಸಲಿದೆ. ಈ ಸಲಿಗೆಯಲ್ಲಿ ನೀವಿಬ್ಬರೂ ಕಳೆದುಹೋಗಲಿದ್ದೀರ. ನಿಮ್ಮ ಪ್ರೇಮ ಈಗ ಶುದ್ದ ಅಲೈಂಗಿಕವಾಗಿದೆ ( non sexual). ಈಗ ಲೈಂಗಿಕತೆಯ ಕಾವು ಇಲ್ಲ, ಇಂಥ ಸ್ಥಿತಿಯಲ್ಲಿ ನೀವು ಪ್ರೇಮದ ಅದ್ಭುತ ಕ್ವಾಲಿಟಿಯನ್ನ ಅನುಭವಿಸಲಿದ್ದೀರಿ.
ಪ್ರೇಮದಲ್ಲಿ
ಇದು ಹೀಗೇ ಎಂದು ಹೇಳುವ ನಿಯಮಗಳಿಲ್ಲ,
ಯಾರು ಹೆಚ್ಚು ಪ್ರೇಮಿಸುತ್ತಾರೆ
ಯಾರು ಕಡಿಮೆ ಎನ್ನುವ ಸಂಶಯಗಳಿಲ್ಲ,
ಯಾರು ಉನ್ಮತ್ತರು, ಯಾರು ಸ್ಥಿತಪ್ರಜ್ಞರು
ಎನ್ನುವ ತಮಾಷೆಗಳಿಲ್ಲ.
ಪ್ರೇಮದಲ್ಲಿ,
ಶಾಸ್ತ್ರಗಳನ್ನು ಬಾಯಿಪಾಠ ಮಾಡಿ ಒಪ್ಪಿಸುವ
ಜಾಣತನವಿಲ್ಲ,
ಗುರುಗಳಿಲ್ಲ, ಶಿಷ್ಯರಿಲ್ಲ,
ಇರುವುದೆಲ್ಲ, ಕೇವಲ
ತುಂಟ ಕಾಲೆಳೆದಾಟ,
ಅರ್ಥಗಳಿಲ್ಲದ ಹರಟೆ, ಸಲ್ಲಾಪ
ಹೊಟ್ಟೆ ತುಂಬ ನಗು ಮತ್ತು
ಮೈದುಂಬಿ ಕುಣಿತ.
ಒಡೆದು ಚೂರು ಚೂರಾದಾಗ ಕುಣಿಯಿರಿ,
ಸರಪಳಿಗಳನ್ನು ಕತ್ತರಿಸಿ ಮುಕ್ತರಾದಾಗ ಕುಣಿಯಿರಿ,
ಜಗಳ, ಹೋರಾಟಗಳ ನಡುವೆ ಕುಣಿಯಿರಿ,
ನಿಮ್ಮ ರಕ್ತದ ಕಣ ಕಣದಲ್ಲಿ ಕುಣಿಯಿರಿ
ಎಲ್ಲದರಿಂದ ಪಾರಾದಾಗ ಕುಣಿಯಿರಿ,
ಕುಣಿಯಿರಿ, ಕುಣಿಯಿರಿ, ಕುಣಿಯಿರಿ
~ ರೂಮಿ
ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/13/osho-470/


[…] ನೆನ್ನೆಯ ಕಂತು ಇಲ್ಲಿದೆ: https://aralimara.com/2025/02/14/osho-469/ […]
LikeLike