ಯಾವಾಗ ನೀವು ಏನನ್ನಾದರೂ ಪ್ರೀತಿಸುತ್ತೀರೋ ಆಗ ಅದನ್ನು ದ್ವೇಷಿಸುವ ಅವಕಾಶವನ್ನು ನೀವು ಪಡೆದುಕೊಳ್ಳುತ್ತೀರಿ.
ದ್ವೇಷಕ್ಕೆ ಹಲವಾರು ನೆಪಗಳನ್ನು ನೀವು ಹೇಳುತ್ತೀರಾದರೂ ಅವು ಯಾವವೂ ರೆಲೆವೆಂಟ್ ಆಗಿರುವುದಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಮ್ಮ ದ್ವೇಷಕ್ಕೆ ಯಾವುದರ ಬಗ್ಗೆಯೂ ತೀರ್ಮಾನ ಮಾಡುವ ಅಧಿಕಾರವನ್ನು ಕೊಡಬೇಡಿ. ದ್ವೇಷ ಇದೆ ಎನ್ನುವುದು ಗೊತ್ತಿದ್ದರೂ ತೀರ್ಮಾನದ ಹಕ್ಕು ಮಾತ್ರ ಯಾವಾಗಲೂ ಪ್ರೀತಿಗೇ ಇರಲಿ. ದ್ವೇಷವನ್ನು ಹತ್ತಿಕ್ಕಿ ಎಂದು ನಾನು ಹೇಳುತ್ತಿಲ್ಲ, ಆದರೆ ಅದನ್ನು ಡಿಸೈಡ್ ಮಾಡುವ ಜಾಗದಲ್ಲಿ ಕೂರಿಸಬೇಡಿ ಎಂದು ಮಾತ್ರ ನಾನು ಹೇಳುತ್ತಿರುವುದು. ದ್ವೇಷ ಬೇಕಾದರೆ ಇರಲಿ, ಸೆಕೆಂಡರಿಯಾಗಿ. ಬೇಕಾದರೆ ಇದನ್ನು ಒಪ್ಪಿ, ಆದರೆ ಯಾವ ನಿರ್ಧರಿಸುವ ಅಧಿಕಾರವನ್ನೂ ದ್ವೇಷದ ಕೈಗೆ ಕೊಡಬೇಡಿ.
ದ್ವೇಷವನ್ನು ನಿರ್ಲಕ್ಷ್ಯ ಮಾಡಿ. ಆಗ ಅದು ತನ್ನ ಸಾವನ್ನು ತಾನೇ ತಂದುಕೊಳ್ಳುತ್ತದೆ; ಪ್ರೀತಿಯ ಬಗ್ಗೆ ಮಾತ್ರ ಸದಾ ನಿಮ್ಮ ಗಮನವಿರಲಿ ; ನಿಮ್ಮ ಬಳಿ ಇರುವ ಎಲ್ಲ ಹಕ್ಕುಗಳನ್ನು ಪ್ರೀತಿಯ ಕೈ ಗೆ ಕೊಟ್ಟುಬಿಡಿ. ಇಂದು ಅಥವಾ ನಾಳೆ ಪ್ರೀತಿ ನಿಧಾನವಾಗಿ ನಿಮ್ಮ ಅಸ್ತಿತ್ವದ ಎಲ್ಲ ಜವಾಬ್ದಾರಿಯನ್ನು ತಾನೇ ಹೊತ್ತುಕೊಳ್ಳುತ್ತದೆ. ಆಗ ನಿಮ್ಮೊಳಗೆ ದ್ವೇಷಕ್ಕೆ ಯಾವ ಜಾಗವೂ ಉಳಿದುಕೊಳ್ಳುವುದಿಲ್ಲ.
ಆಯ್ಕೆ ಮಾಡುವುದರಿಂದ ದೂರ ಉಳಿಯುವುದು ಕಷ್ಚ ನಿಜ, ಆದರೆ ಪ್ರಯತ್ನ ಮಾಡಿ ಪ್ರತಿಯೊಂದರಲ್ಲೂ ……..ನಿಮ್ಮೊಳಗೆ ದ್ವೇಷದ ಭಾವನೆ ಹುಟ್ಟಿದಾಗ ದೂರ ಸರಿದು ಮಧ್ಯಕ್ಕೆ ಬನ್ನಿ, ನಿಮ್ಮಲ್ಲಿ ಪ್ರೀತಿ ಹುಟ್ಟಿದಾಗ ಮತ್ತೆ ದೂರ ಸರಿದು ಮಧ್ಯಕ್ಕೆ ಬನ್ನಿ. ನಮ್ಮೊಳಗೆ ಯಾವ ಭಾವನೆ ಇದ್ದರೂ ಮಧ್ಯ ಬಿಟ್ಟು ಕದಲ ಬೇಡಿ. ಆಗ ನಿಮಗೇ ಆಶ್ಚರ್ಯವಾಗುವಂತೆ ಎರಡು ವಿಪರೀತಗಳ ನಡುವಿನ ಒಂದು ಬಿಂದುವಿನಲ್ಲಿ ಎರಡೂ ಭಾವಗಳು ನಾಶವಾದಂತೆ ಒಂದಾಗುತ್ತವೆ ಆಗ ನೀವು ದ್ವೇಷಿಸುವುದೂ ಇಲ್ಲ ಪ್ರೀತಿಸುವುದೂ ಇಲ್ಲ. ಇದನ್ನೇ ಬುದ್ಧ ‘ಉಪೇಕ್ಷಾ’ ಎಂದು ಗುರುತಿಸುತ್ತಾನೆ. ಇದೇ ಬೌದ್ಧರ ಅನಾಸಕ್ತಿ.
ಉಪೇಕ್ಷಾ ಎಂದರೆ ಮಧ್ಯಮ ಮಾರ್ಗ, ಅಲ್ಲಿ ನೀವು ಎರಡೂ ‘ಅತೀ’ ಗಳಿಂದ ಸಮಾನ ದೂರದಲ್ಲಿರುವವರು. ಆಗ ನೀವು “ ನಾನು ಪ್ರೀತಿಸುತ್ತೇನೆ “ ಅಥವಾ “ ನಾನು ದ್ವೇಷಿಸುತ್ತೇನೆ “ ಎಂದು ಹೇಳುವುದಿಲ್ಲ. ಸುಮ್ಮನೇ ನೀವು ಮಧ್ಯಮ ಬಿಂದುವಿನಲ್ಲಿ ಸ್ಥಿರವಾಗಿರುವಿರಿ. ಯಾವುದರ ಜೊತೆಗೂ ನೀವು ಗುರುತಿಸಿಕೊಳ್ಳುವುದಿಲ್ಲ. ಆಗ ಒಂದು “ ಮೀರುವಿಕೆ “ ನಿಮಗೆ ಸಾಧ್ಯವಾಗುವುದು, ಈ ಮೀರುವಿಕೆ ಒಂದು ಅರಳುವಿಕೆ. ಈ ಪ್ರಬದ್ಧತೆಯನ್ನೇ ನಾವು ಸಾಧಿಸಬೇಕಾಗಿರುವುದು.

