ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಅವತ್ತೊಂದು ಸಲ ರಸ್ತೆಯ ಮೇಲೊಬ್ಬ ಕಂಡ
ಸ್ವಲ್ಪ ಮರುಳ
ನನ್ನ ಹತ್ತಿರ ಹೀಗಂದ
ನಾನು ಅಲೆಮಾರಿ
ಈ ನೆಲದ ಮೇಲೆ
ಗಿಡ್ಡ ಪಿಗ್ಮಿಗಳ ಮಧ್ಯೆ ನಡೆದಾಡುತಿದೇನೆ
ನನ್ನ ತಲೆ ಅವರ ತಲೆಗಿಂತ ನೂರಡಿ ಮೇಲಿದೆ ಅನಿಸತ್ತೆ ನನಗೆ
ನನ್ನ ತಲೆ ಅಷ್ಟೆತ್ತರ
ಅದಕೇ ನನ್ನ ಆಲೋಚನೆಗಳೂ ಮಿಕ್ಕವರ ಯೋಚನೆಗಳಿಗಿಂತ ಉನ್ನತ
ಮಿಕ್ಕವರ ಆಲೋಚನೆಗಳಿಗಿಂತ ಸ್ವತಂತ್ರ
ನಿಜ ಹೇಳಬೇಕು ಅಂದರೆ
ನಾನು ಈ ಜನದ ನಡುವೆ ಇಲ್ಲ
ಅವರಿಗಿಂತ ಬಹಳ ಮೇಲೆ ಇದೇನೆ
ನಾನು ಸಾಗಿ ಹೋದ ದಾರಿಯಲ್ಲಿ ನನ್ನ ಹೆಜ್ಜೆ ಗುರುತಷ್ಟೇ ಅವರಿಗೆ ಕಾಣುವುದು
ನನ್ನ ಹೆಜ್ಜೆ ಗುರುತಿನ ಆಕಾರ ಅಳತೆ ಎಷ್ಟೆಂದು ಅವರವರೇ ವಾದ ಮಾಡುವುದು ಕೇಳಿದೇನೆ
ಈ ಭೂಮಿಯ ಮೇಲೆ ಸಾವಿರ ವರ್ಷದ ಹಿಂದೆ ಇದ್ದ ಮಹಾಮೃಗದ ಹೆಜ್ಜೆ ಗುರುತು ಅನ್ನುತಾರೆ
ಆಕಾಶದಲಿರುವ ದೂರ ನಕ್ಷತ್ರದಿಂದ ಉದುರಿದ ಉಲ್ಕೆಯ ಗುರುತು ಇದು ಅನ್ನುತಾರೆ
ಅಂದ
‘ಗೆಳೆಯಾ
ಅವು ಬರಿಯ ಒಬ್ಬ ಅಲೆಮಾರಿಯ ಹೆಜ್ಜೆ ಗುರುತು
ಅಂತ ನಿನಗೇ ಚೆನ್ನಾಗಿ ಗೊತ್ತಲ್ಲವಾ…’
ಇದರೊಂದಿಗೆ ಖಲೀಲ್ ಗಿಬ್ರಾನನ ‘ಅಲೆಮಾರಿ’ ಕೃತಿಯಿಂದ ಕಡ ತಂದ ಕಥಾಸರಣಿ ಕೊನೆಗೊಳ್ಳುತ್ತದೆ. ಈ ಸರಣಿಯನ್ನು ‘ಅರಳಿಮರ’ಕ್ಕಾಗಿ ಅನುವಾದ ಮಾಡಿಕೊಟ್ಟ ಓ.ಎಲ್.ನಾಗಭೂಷಣ ಸ್ವಾಮಿಯವರಿಗೆಧನ್ಯವಾದಗಳು. ಈ ಕಥಾ ಸರಣಿಯನ್ನು ಓದಿದ, ಮೆಚ್ಚಿದ, ಪ್ರತಿಕ್ರಿಯೆ ನೀಡಿದ, ವಾರಕ್ಕೆ ಒಂದು ಸಾಲದು ಎರಡು ಹಾಕಿ ಅಂತ ಡಿಮಾಂಡ್ ಮಾಡಿದ ಎಲ್ಲ ಓದುಗರಿಗೂ ಧನ್ಯವಾದಗಳು.

