ಪ್ರೇಮ ಇನ್ಸ್ಟಂಟ್ ಕಾಫೀ ಅಲ್ಲ : ಓಶೋ 365 #Day 76

ಪ್ರೇಮ ನೀವು ಮಾಡುವ ಸಂಗತಿ ಅಲ್ಲ.
ಆದರೆ ಯಾವಾಗ ನೀವು ಬೇರೆ ಸಂಗತಿಗಳನ್ನು ಮಾಡುತ್ತಿರುತ್ತೀರೋ ಆಗ  ಪ್ರೇಮ, ಆಗುವುದು. ಪ್ರೇಮ ಮಾಡುವ ಸಂಗತಿ ಅಲ್ಲ, ಆಗುವ ಸಂಗತಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಪ್ರೇಮ,
ಹುಲಿಯ ಅವತಾರ.
ಅಪರೂಪದ ಬೆಕ್ಕು , ಚೆಲುವಿನ ಬನಿ,
ಚರ್ಮದ ಕೆಳಗೆ ಹುರಿಗಟ್ಟಿರುವ
ಸ್ನಾಯುಗಳ ಮಾಯಗಾರ.
ಬದುಕು-ಸಾವಿನ ತಕ್ಕಡಿಯ
ತನ್ನ ನಿಷ್ಠುರ ದವಡೆಯಲ್ಲಿ ಸರಿದೂಗಿಸುವ
ಗಂಭೀರ ವ್ಯಾಪಾರಿ.

ಪ್ರೇಮ ಊಹಾತೀತ,
ಇನ್ನೇನು ಜಾಡು ಸಿಕ್ಕಿತು ಎನ್ನುವಾಗಲೇ
ಹೆಜ್ಜೆ ಅಳಿಸಿ ಹಾಕಿಬಿಡುವ ಚತುರ ಚೋರ
ಕಾಯುವ ನಾಟಕವಾಡುವ ವೇಷಧಾರಿ,
ಕೊಲ್ಲಲು ಹಾರುವ ತನಕ
ಸದ್ದು ಮಾಡದೇ ಸುಮ್ಮನಿದ್ದುಬಿಡುವ ತಂತ್ರಗಾರ,
ಎಂಥ ಕಾಡಿನ ಗರ್ಭದಲ್ಲೂ
ಬೇಟೆಯ ವಾಸನೆ
ಕ್ಷಣಮಾತ್ರದಲ್ಲಿ ಪತ್ತೆಹಚ್ಚಿಬಿಡುವ ಚಾಣಾಕ್ಷ ಗೂಢಚಾರ.

ಸ್ವರ್ಗ, ನರಕ ಎರಡರಲ್ಲೂ
ಪ್ರೇಮದ್ದೇ ಸರ್ಕಾರ.
ಬಿಸಿ ಉಸಿರಿನಿಂದ ಜೀವ ತುಂಬುತ್ತದೆಯಾದರೂ
ಗರ್ಜಿಸಿಯೇ ಅಸ್ತಿತ್ವ ಘೋಷಣೆ
ಹರಿತ ಉಗುರುಗಳ ನಡುವೆಯೇ ಲಲ್ಲೆವಾತು.

ಪ್ರೇಮ, ಭಯಂಕರ.
ಎಂಥ ಧೈರ್ಯಶಾಲಿಗಳೂ
ಒಂದರೆಘಳಿಗೆ ಬೆಚ್ಚಿ ಬೀಳುತ್ತಾರೆ.

ನನ್ನ ಮಾತು ಕೇಳಿ, ಈಗಲೇ ಮನೆಗೆ ಹೋಗಿ
ಆಯುಧಗಳನ್ನು ಹರಿತ ಮಾಡಿಟ್ಟುಕೊಳ್ಳಿ
ಇದು ಬೇಟೆಯಾಡಲೇ ಬೇಕಾದಂಥ ವ್ಯಾಘ್ರ.

~ ನಜತ್

ಜೊತೆ ಕುಳಿತುಕೊಂಡು ಮಾಡಬಹುದಾದಂಥ ಎಷ್ಟೋ ಸಂಗತಿಗಳಿವೆ, ಚಂದ್ರನನ್ನು ನೋಡುವುದು, ಸಂಗೀತ ಕೇಳುವುದು, ಹೀಗೆ ಪ್ರೇಮಕ್ಕೆ ಸಂಬಂಧಿಸದಂತೆ ಕಾಣುವ ಎಷ್ಟೋ ಸಂಗತಿಗಳು. ಪ್ರೇಮ ಬಹಳ ಸೂಕ್ಷ್ಮ, ಬಹಳ ನಾಜೂಕು. ನೀವು ಅದನ್ನ ನೋಡಿದರೆ, ದಿಟ್ಟಿಸಿದರೆ ಅದು ಮಾಯವಾಗಿಬಿಡುತ್ತದೆ. ನೀವು ಬೇರೆ ಏನೋ ಮಾಡುತ್ತಿದ್ದಾಗ, ನೀವು ಅದರ ಬಗ್ಗೆ ಯೋಚಿಸದೇ ಇದ್ದಾಗ ಅದು, ಆವರಿಸಿಕೊಳ್ಳುತ್ತದೆ. ಅದು ಬಾಣದಂತೆ ನೇರವಾಗಿ ನಾಟುವುದಿಲ್ಲ. ಪ್ರೇಮ ಗುರಿ ಅಲ್ಲ, ಅದು ಸೂಕ್ಷ್ಮ ವಿದ್ಯಮಾನ ; ಅದಕ್ಕೆ ಬಹಳ ನಾಚಿಕೆ, ಸಂಕೋಚದ ಸ್ವಭಾವ. ನೇರವಾಗಿ ನೀವು ಎದುರುಗೊಂಡಾಗ ಅದು ಅಡಗಿಕೊಳ್ಳುತ್ತದೆ. ನೀವು ನೇರವಾಗಿ ಪ್ರಯತ್ನ ಮಾಡುವಿರಾದರೆ, ಮಿಸ್ ಮಾಡಿಕೊಳ್ಳುತ್ತೀರಿ.

ಪ್ರೇಮದ ಬಗ್ಗೆ ಜಗತ್ತು ಬಹಳ ಮೂರ್ಖತನದಿಂದ ವರ್ತಿಸುತ್ತದೆ. ಅವರಿಗೆ ಪ್ರೇಮ ತಕ್ಷಣ ಬೇಕು. ತಮಗೆ ಬೇಕಾದಾಗ ಸಿಗುವ ಇನ್ಸ್ಟಂಟ್ ಕಾಫೀ ಯಂತೆ ಅದು ಸಿಗಬೇಕು, ಆರ್ಡರ್ ಮಾಡಿದ ತಕ್ಷಣ ಎದುರಿಗಿರುವಂತೆ.

ಪ್ರೇಮ ಸೂಕ್ಷ್ಮ ಕಲೆ ; ಈ ಬಗ್ಗೆ ನೀವು ಮಾಡುವಂಥದು ಏನೂ ಇಲ್ಲ. ಕೆಲವೊಮ್ಮೆ ಆ ಅಪರೂಪದ ಆನಂದದಾಯಕ ಕ್ಷಣಗಳು ತಾನಾಗಿ ಸಂಭವಿಸುತ್ತವೆ. ಆಗ ನೀವು ಭೂಮಿಯ ಮೇಲೆ ಇಲ್ಲ, ಸ್ವರ್ಗದಲ್ಲಿದ್ದೀರಿ. ನೀವು ನಿಮ್ಮ ಪ್ರೇಮಿಯೊಂದಿಗೆ ಗಾಢವಾಗಿ ಪುಸ್ತಕವೊಂದರ ಓದಿನಲ್ಲಿ ಮುಳುಗಿದ್ದಾಗ, ಥಟ್ಟನೇ ನಿಮ್ಮ ಸುತ್ತ ವಿಭಿನ್ನ ಕ್ವಾಲಿಟಿಯ ಇರುವಿಕೆಯೊಂದು ಸ್ಥಾಪಿತಗೊಳ್ಳುತ್ತದೆ. ಕೆಲವೊಮ್ಮೆ ಅದು ದಿವ್ಯಪ್ರಭೆಯಂತೆ ನಿಮ್ಮಿಬ್ಬರನ್ನೂ ಆವರಿಸಿಕೊಳ್ಳುತ್ತದೆ, ಆಗ ಅಲ್ಲಿ ಸಮಾಧಾನ ನೆಲೆಗೊಳ್ಳುತ್ತದೆ. ಆದರೆ ನೀವು ನೇರವಾಗಿ ಏನನ್ನೂ ಮಾಡುತ್ತಿಲ್ಲ. ನೀವಿಬ್ಬರೂ ಸುಮ್ಮನೇ ಪುಸ್ತಕ ಓದುತ್ತಿದ್ದೀರಿ ಅಷ್ಟೇ, ಅಥವಾ ಕೈ ಕೈ ಹಿಡಿದುಕೊಂಡು ಸುಮ್ಮನೇ ವಾಕ್ ಮಾಡುತ್ತಿದ್ದೀರಿ. ಆಗ ನಿಮಗೆ ಅರಿವಿಲ್ಲದಂತೆ ಪ್ರೇಮ ನಿಮ್ಮನ್ನು ಆವರಿಸಿಕೊಳ್ಳುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.