ವಚನ ಸಂವಾದದ ನೆನ್ನೆಯ ಕಂತಿಗೆ ( https://aralimara.com/2025/04/03/vsamvada-3/ ) ಎರಡು ಮುಖ್ಯ ಪ್ರತಿಕ್ರಿಯೆಗಳು ಬಂದಿದ್ದು, ಅವನ್ನು ಹೆಚ್ಚಿನ ಚರ್ಚೆಗಾಗಿ ಇಲ್ಲಿ ನೀಡಲಾಗಿದೆ….
ನನ್ನನ್ನು ನಾನು ಸರಿಯಾಗಿ ತಿಳಿದುಕೊಳ್ಳದೆ ಅಜ್ಞಾನದ ಸ್ಥಿತಿಯಲ್ಲಿಯೂ ನೀನು ನನ್ನ ಒಳಗಡೆ ಇದ್ದೇ ಇರುತ್ತೀಯ. ಅದು ಚಿನ್ನದೊಳಗಿನ ಬಣ್ಣದ ಹಾಗೆ ಸರ್ವವ್ಯಾಪಿ. ಇದು ನಿಜವಾಗಲು ಚೆನ್ನಮಲ್ಲಿಕಾರ್ಜುನ ಪ್ರಿಯಕರನಿಗಾಗಿ ಬೇಕಿಲ್ಲ. ಇದು ಎಲ್ಲ ಮನುಷ್ಯರಿಗೂ ದಿಟ.
~ ಎಚ್.ಎಸ್.ರಾಘವೇಂದ್ರ ರಾವ್
ಇದನ್ನು ಹೀಗೂ ನೋಡಬಹುದೆನ್ನಿಸುತ್ತದೆ. ಚಿನ್ನದ ಬಣ್ಣ ಯಾವುದು? ಹಳದಿ ಎಂದರೆ ಅದು ಕೇವಲ ಹೆಸರಾಯಿತಷ್ಟೇ – ಚಿನ್ನದ ಬಣ್ಣ ಚಿನ್ನಕ್ಕೇ ವಿಶಿಷ್ಟವಾದುದು (ಅದಕ್ಕೆ ಬೇರೆಬೇರೆ ಲೋಹ ಬೆರೆತಾಗ ಬಣ್ಣ ಬದಲಾಗುವ ವಿಷಯ ಸದ್ಯಕ್ಕೆ ಪಕ್ಕಕ್ಕಿರಲಿ). ಈ ಚಿನ್ನದ ಬಣ್ಣಕ್ಕೆ ಚಿನ್ನವನ್ನು ಬಿಟ್ಟು ಬೇರೆ ಅಸ್ತಿತ್ವವಿಲ್ಲ, ಚಿನ್ನದಿಂದ ಅದನ್ನು ಬೇರ್ಪಡಿಸಿ ತೋರಲಾಗದು. ಚಿನ್ನವೇ ಆ ಬಣ್ಣದ ರೂಹು – ಅಷ್ಟರ ಮಟ್ಟಿಗೆ ಚಿನ್ನಕ್ಕೂ ಅದರ ಬಣ್ಣಕ್ಕೂ ಅಭೇದ. ಆದರೆ ಆ ಬಣ್ಣವೇ ಚಿನ್ನವೇ? ಅಲ್ಲ, ಅದು ಚಿನ್ನದ ಒಂದು ಗುಣವಷ್ಟೇ. ಲೋಹಸಂಯೋಜನೆ, ಮೃದುತ್ವ, ತುಕ್ಕು ಹಿಡಿಯದಿರುವುದು ಹೀಗೆ ಹಲವು ಗುಣಗಳು ಚಿನ್ನಕ್ಕಿವೆ – ಅವೆಲ್ಲವೂ ಸೇರಿ (ಯಾವುದೋ ನಿರ್ದಿಷ್ಟ ಹದದಲ್ಲಿ) ಚಿನ್ನ. ಹೀಗಾಗಿ ಚಿನ್ನಕ್ಕೂ ಅದರ ಗುಣಗಳಿಗೂ ಭೇದ. ಕಣ್ಣಿಗೆ ಕಾಣುವ (“ಮೈದೋರುವ”) ಸಕಲವಸ್ತುಗಳಿಗೂ ಬಣ್ಣವೇ ಪ್ರಧಾನಗುಣವಾದುದರಿಂದ ಇಲ್ಲಿ ಬಣ್ಣದ ಪ್ರಸ್ತಾವ.
ಬಣ್ಣವೋ, ಮೇಲೆ ಹೇಳಿದಂತೆ, ಮೈದೋರುವ ಎಲ್ಲ ವಸ್ತುಗಳಲ್ಲೂ ಸಾಮಾನ್ಯಗುಣ – ಆದರೆ ಆಯಾ ವಸ್ತುಗಳಲ್ಲಿ ಸೇರಿ ಆಯಾವಸ್ತುವಿಗೇ ವಿಶಿಷ್ಟವಾದ ಗುಣವಾಗಿ ಕಾಣುತ್ತದೆ – ಚಿನ್ನಕ್ಕೆ ಚಿನ್ನದ ಬಣ್ಣ, ಕಾಗೆಗೆ ಕಾಗೆಯ ಬಣ್ಣ.
ಹೀಗೆ ಪರವಸ್ತು ತನ್ನ (ಅಕ್ಕನ) ಸಂಯೋಗದಿಂದ ಚನ್ನಮಲ್ಲಿಕಾರ್ಜುನನಾಗಿ ಮೈದೋರಿದ್ದಾನೆ – ತೋರಿದ್ದು ಯಾರ ಮೈ? ತನ್ನದಲ್ಲ, ಅಕ್ಕನದೇ, ಆದರೆ ಅಲ್ಲಿ ತೋರುವ ಗುಣ ಚೆನ್ನಮಲ್ಲಿಕಾರ್ಜುನನದು. ಅಷ್ಟರಮಟ್ಟಿಗೆ ಚನ್ನಮಲ್ಲಿಕಾರ್ಜುನನೊಡನೆ ತನ್ನದು ಅವಿನಾಭಾವ – ಏಕೆಂದರೆ ಬಣ್ಣವಿಲ್ಲದೇ ಹೇಗೆ ಚಿನ್ನದ ಅಸ್ತಿತ್ವವಿಲ್ಲವೋ ಚೆನ್ನಮಲ್ಲಿಕಾರ್ಜುನನಿಲ್ಲದೇ ತನ್ನ ಅಸ್ತಿತ್ವವಿಲ್ಲ – ಹೀಗೆ, ತುಂಬಿದ್ದೂ ತೋರದ, ತೋರಿಯೂ ತೋರದ, ತೋರದೆಯೂ ತುಂಬಿರುವ ಚನ್ನಮಲ್ಲಿಕಾರ್ಜುನನ ಪರಿ ಅಕ್ಕನಿಗೆ ಬೆರಗು. ಈ ಬೆರಗಾದರೂ ಬಂದದ್ದೆಲ್ಲಿಂದ? “ಎನ್ನ ನಾನರಿತುದರಿಂದ” – ಆದ್ದರಿಂದ, ಅರಿವಿನ ಪರಿಣಾಮ ಬೆರಗಷ್ಟೇ, ಅರಿತರೂ ಅರಿಯದಿದ್ದರೂ ಚೆನ್ನಮಲ್ಲಿಕಾರ್ಜುನನ ಇರವು ಅಬಾಧಿತ – ಇದು ನನಗೆ ಅರಿವಾದ ವಚನದ ಭಾವ.
~ ಮಂಜುನಾಥ ಕೊಳ್ಳೇಗಾಲ

