ಸ್ನೇಹ-ಬಯಕೆ-ಸಾವು । ಅಕ್ಕ ಮಹಾದೇವಿ #7

ರೇಶಿಮೆಯ ಹುಳುವಿನ ಚಿತ್ರ, ಸ್ನೇಹ ಎಂಬ ಮಾತಿಗೆ ಇರುವ ಎರಡು ಅರ್ಥ, ಮನಸು ಅತಿಯಾಗಿ ಆಸೆಪಡುವುದು, ಹುಳುವಿನ ಸ್ನೇಹದ ಮನೆಯೇ ಅದರ ಸಾವಿಗೆ ಕಾರಣವಾಗುವುದು, ಮನಸಿನ ಆಸೆಯೇ ಬೇಗೆಗೆ ಕಾರಣವಾಗುವುದು ಈ ವಿವರಗಳು ಯಾವುದು ಹೋಲಿಕೆ, ಯಾವುದು ವಿವರಣೆ ಎಂದು ಗೊತ್ತಾಗದಷ್ಟು ನಿಕಟವಾಗಿ ಬೆರೆತಿವೆ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ ೧ ಸಂದೇಹ, ಪ್ರಶ್ನೆ

ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ
ತನ್ನ ನೂಲು ತನ್ನನೆ ಸುತ್ತಿ ಸಾವಂತೆ
ಮನಬಂದುದನು ಬಯಸಿ ಬೇವುತ್ತಿದ್ದೇನಯ್ಯಾ
ಎನ್ನ ಮನದ ದುರಾಶೆಯ ಮಾಣಿಸಿ
ನಿಮ್ಮತ್ತ ತೋರಾ ಚೆನ್ನಮಲ್ಲಿಕಾರ್ಜುನಾ [೨೩೮]

[ತೆರಣಿ=ರೇಶಿಮೆಯ ಹುಳು; ಸ್ನೇಹ=ಜಿಡ್ಡು; ಆಪ್ತತೆ; ಸಾವಂತೆ=ಸಾಯುವ ಹಾಗೆ,ಮಾಣಿಸಿ=ಬಿಡಿಸಿ]

ರೇಶಿಮೆಯ ಹುಳು  ತನ್ನ ಮೈಯ ಜಿಡ್ಡಿನಿಂದಲೇ, ತನಗಾಗಿ ಆಪ್ತವಾದ ಪ್ರೀತಿಯ ಮನೆಯನ್ನು ಮಾಡಿಕೊಳ್ಳುತ್ತದೆ. ಆ ನೂಲು ಹುಳುವನ್ನು ಸುತ್ತಿ ಹುಳುವಿನ ಸಾವಿಗೆ ಕಾರಣವಾಗುತ್ತದೆ. ಹಾಗೆ ನನ್ನ ಮನಸ್ಸು ಆಸೆ ಪಟ್ಟುದನ್ನೆಲ್ಲ ಬಯಸಿ ಬೇಯುತ್ತಿದ್ದೇನೆ. ನನ್ನ ಮನಸಿನ ದುರಾಸೆಯನ್ನು  ಬಿಡಿಸಿ ನಿಮ್ಮತ್ತ ಬರುವ ದಾರಿಯನ್ನು ತೋರು.

ರೇಶಿಮೆಯ ಹುಳುವಿನ ಚಿತ್ರ, ಸ್ನೇಹ ಎಂಬ ಮಾತಿಗೆ ಇರುವ ಎರಡು ಅರ್ಥ, ಮನಸು ಅತಿಯಾಗಿ ಆಸೆಪಡುವುದು, ಹುಳುವಿನ ಸ್ನೇಹದ ಮನೆಯೇ ಅದರ ಸಾವಿಗೆ ಕಾರಣವಾಗುವುದು, ಮನಸಿನ ಆಸೆಯೇ ಬೇಗೆಗೆ ಕಾರಣವಾಗುವುದು ಈ ವಿವರಗಳು ಯಾವುದು ಹೋಲಿಕೆ, ಯಾವುದು ವಿವರಣೆ ಎಂದು ಗೊತ್ತಾಗದಷ್ಟು ನಿಕಟವಾಗಿ ಬೆರೆತಿವೆ. ಹುಳುವಿನ ರೇಶಿಮೆ ನೂಲನ್ನು ಬಿಡಿಸುವ ಹಾಗೆ ಮನಸಿನ ದುರಾಸೆಯನ್ನು ಬಿಡಿಸಿ, ಅಂದರೆ ಮನಸು ದುರಾಸೆಯನ್ನು ಬಿಡುವಂತೆ ಮಾಡಿ ನಿನ್ನತ್ತ ಬರುವ ದಾರಿ ತೋರು. ಈ ವಚನ ತನ್ನ ರಚನೆಯ ಬಿಗಿ, ಅಚ್ಚುಕಟ್ಟು, ಗೂಡು  ಆಸೆಯ ಮನೆಯೂ ಸಾವು ಆಗುವ ಹೋಲಿಕೆಯ ಹೊಂದಾಣಿಕೆ, ಸ್ನೇಹ ಮತ್ತು ಬಿಡಿಸು ಅನ್ನುವ ಪದಗಳ ಎರಡೆರಡು ಅರ್ಥ, ರೇಶಿಮೆಯ ನುಣುಪು, ಬಯಕೆಯ ಆಕರ್ಷಣೆ, ಚೆಲುವು-ಸಾವುಗಳ ಹೆಣಿಗೆಯನ್ನು ಸಾಧಿಸಿ ಇದು ಕನ್ನಡದ ಅಪೂರ್ವ ರಚನೆಗಳಲ್ಲಿ ಒಂದು ಅನಿಸುವಂತೆ ಮಾಡಿದೆ.

ವಚನ ವಾಕ್ಯದ ಮೊದಲಲ್ಲಿ ಬರುವ ʻಮನೆಯ ಮಾಡಿʼ ಮತ್ತು ಕೊನೆಯ ಭಾಗದಲ್ಲಿ ʻನಿಮ್ಮತ್ತ ತೋರಾʼ ಎಂಬ           ಪದಗುಚ್ಛಗಳಲ್ಲಿ ಬಳಕೆಯಾಗಿರುವ ಕ್ರಿಯಾಪದಗಳು ಇನ್ನೊಂದು ಸೂಕ್ಷ್ಮವನ್ನೂ ಸೂಚಿಸುವಂತಿವೆ. ಈ ಲೋಕದಲ್ಲಿ ಮನೆಯನ್ನು ʻಮಾಡಿಕೊಂಡದ್ದುʼ ನಾನು, ದುರಾಸೆ ನನ್ನನ್ನು ಸುತ್ತಿ ಸುತ್ತಿ ಬಯಸಿ, ಬೇಯುತ್ತಿರುವದೂ ನಾನು, ಇದನ್ನು ತೊರೆದು ʻನಿಮ್ಮತ್ತ ತೋರುʼ ಅಂದರೆ ಬದುಕಿಗೆ ಬೇರೊಂದು ದಿಕ್ಕನ್ನು ತೋರು ಅನ್ನುವ ಕೋರಿಕೆ ಇವೆ. ಬಯಕೆಗೆ ಇರುವ ಕೊಲುವ ಗುಣ, ಲೋಕದ ಬದುಕನ್ನು ತೊರೆಯುವ ಅಪೇಕ್ಷೆಯ ತೀವ್ರತೆ ಕಂಡೂ ಕಾಣದಂತೆ ಈ ವಚನದಲ್ಲಿ ಅಡಗಿದೆ. ಇಲ್ಲಿನ ಬೇಗೆ, ಸಂಕಟ ಮುಂದಿನ ವಚನದಲ್ಲೂ ಮತ್ತೆ ಬೇರೆಯ ರೀತಿಯಲ್ಲಿ ಕಾಣುತ್ತದೆ. ಅಕ್ಕಮಹದೇವಿಯವರ ವಚನಗಳಿಗೆ ಇರುವ ನಯ, ನುಣುಪು, ನುಡಿ ಚೆಲುವಿನ ಗುಣ ಇವು ಆಕೆಯ ಮನಸಿನ ಬಯಕೆ, ಹತಾಶೆ, ಬೇಗೆ, ಭಯ, ಸಂಶಯ, ಸಂಕಟಗಳನ್ನು ಮರೆಮಾಡಿಬಿಡುತ್ತದೋ ಅಂತಲೂ ಅನಿಸುತ್ತದೆ.

ಆಸಕ್ತ ಓದುಗರು ಮಾಸ್ತಿಯವರ  ʻಜೀವ ರೇಶಿಮೆಯ ಹುಳುʼ ಅನ್ನುವ ಕವಿತೆಯನ್ನು ಈ ವಚನದೊಂದಿಗೆ ಹೋಲಿಸಿ ನೋಡಬಹುದು. 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.