ಈ ವಚನವನ್ನು ನುಡಿಯುತ್ತಿರುವ ಮನಸ್ಸು ಶಿವನೇ ಗಂಡನಾಗಬೇಕೆಂದು ತಪಿಸಿದ, ತಪಸ್ಸಿದ್ದ ಮನಸ್ಸು. ತನ್ನವರೇ ಶಿವನ ಬಳಿಗೆ ಕಳುಹಿಸಿದ್ದು ಅನ್ನುವ ಎರಡು ಮಾತು ಅಕ್ಕ ಮಹದೇವಿ ಮದುವೆಯಾಗಿರಲಿಲ್ಲ ಅನ್ನುವ ಕಥೆಗೆ ಬೆಂಬಲ ಕೊಡುವಂತೆ ತೋರುತ್ತದೆ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ ೧ ಸಂದೇಹ, ಪ್ರಶ್ನೆ
ಹರನೆ ನೀನೆನಗೆ ಗಂಡನಾಗಬೇಕೆಂದು
ಅನಂತಕಾಲ ತಪಸ್ಸಿದ್ದೆ ನೋಡಾ
ಹಸೆಯಮೇಲಣ ಮಾತ ಬೆಸಗೊಳಲಟ್ಟಿದಡೆ
ಶಶಿಧರನ ಹತ್ತಿರಕೆ ಕಳುಹಿದರೆಮ್ಮವರು
ಭಸ್ಮವನೆ ಹೂಸಿ ಕಂಕಣವನೆ ಕಟ್ಟಿದರು
ಚೆನ್ನಾಮಲ್ಲಿಕಾರ್ಜುನ ನನಗೆ ತಾನಾಗಬೇಕೆಂದ
[೪೧೧]
[ಬೆಸಗೊಳ್ಳಲಟ್ಟಿದಡೆ=ಕೇಳಲು ಕಳುಹಿಸಿದರೆ]
ಹರನೇ ನನ್ನ ಗಂಡನಾಗಬೇಕೆಂದು ಅನಂತ ಕಾಲ ತಪಸ್ಸು ಮಾಡಿದ್ದೆ. ಮುಂದಿನ ವಾಕ್ಯ ಯಾಕೋ ಅಸ್ಪಷ್ಟ ಅನಿಸುತ್ತದೆ. ಹಸೆಯ ಮಾತು ಕೇಳಲು ಕಳುಹಿಸಿದರೆ ಅನ್ನುವುದು ವಾಕ್ಯ ಖಂಡವಾಗಿ ಉಳಿದಿದೆ, ಕಳುಹಿಸಿದವರು ಯಾರು ಅನ್ನುವುದು ಊಹೆಗೆ ಬಿಟ್ಟ ವಿಚಾರವಾಗಿದೆ. ಬೇರೆಯವರು ನನ್ನನ್ನು ಮದುವೆಯಾಗುವ ಪ್ರಸ್ತಾಪ ಮಾಡಿದಾಗ [ಹಸೆಯ ಮಾತುಬಂದಾಗ] ನಮ್ಮವರು ನನ್ನನ್ನೇ ಚಂದ್ರನನ್ನು ಧರಿಸಿದವನ ಹತ್ತಿರಕ್ಕೆ ಕಳುಹಿಸಿದರು ಅನ್ನುವ ಅರ್ಥವೂ ಸಾಧ್ಯ. ಅಥವಾ ಈ ಹೆಣ್ಣು ಜೀವ ತನ್ನ ಮನಸಿನಲ್ಲಿದ್ದ ಮದುವೆಯ ಮಾತನ್ನು ಹೇಳಿಕೊಂಡದ್ದಕ್ಕೆ ಅವಳವರು ಆಕೆಯನ್ನೇ ಶಿವನಿಗೆ ಒಪ್ಪಿಸಿದರು ಅಂತಲೂ ಆಗಬಹುದು.
ಈ ವಚನವನ್ನು ನುಡಿಯುತ್ತಿರುವ ಮನಸ್ಸು ಶಿವನೇ ಗಂಡನಾಗಬೇಕೆಂದು ತಪಿಸಿದ, ʻತಪಸ್ಸಿದ್ದ ಮನಸ್ಸುʼ ಮತ್ತು ʻತನ್ನವರೇ ಶಿವನ ಬಳಿಗೆ ಕಳುಹಿಸಿದ್ದುʼ ಅನ್ನುವ ಎರಡು ಮಾತು ಅಕ್ಕ ಮಹದೇವಿ ಮದುವೆಯಾಗಿರಲಿಲ್ಲ ಅನ್ನುವ ಕಥೆಗೆ ಬೆಂಬಲ ಕೊಡುವಂತೆ ತೋರುತ್ತದೆ. ಗಮನಿಸಬೇಕಾದ ಮಾತೆಂದರೆ, ವಚನಗಳ ಮೂಲಕ ವಚನಕಾರರ ಜೀವನ ಚರಿತ್ರೆಯನ್ನು ಕಟ್ಟಿಕೊಳ್ಳುವುದು ಅಸಾಧ್ಯವೆಂಬಷ್ಟು ಕಷ್ಟ. ಸಮುದಾಯದ ಮನಸಿನಲ್ಲಿ ರೂಪ ಪಡೆದು ಬಾಯಿ ಮಾತಿನಲ್ಲಿ ವ್ಯಕ್ತವಾಗುತಿದ್ದ ಕಥೆಗಳು ಕವಿಗಳ ಮುಖಾಂತರ ಕಾವ್ಯವಾಗಿಯೋ ಮತಧರ್ಮದ ಪುರಾಣವಾಗಿಯೋ ಇಲ್ಲವೇ ತತ್ವದ ನಿದರ್ಶನವಾಗಿಯೋ ಬಳಕೆಯಾಗಿವೆ ಅನಿಸುತ್ತದೆ. ಹಾಗೆ ಕಲ್ಪಿತ ಕಥನಗಳನ್ನು ಆಧಾರವಾಗಿಟ್ಟುಕೊಂಡು ವಚನಗಳನ್ನು ಜೀವನಚರಿತ್ರೆಯ ದಾಖಲೆಯೆಂದು ಪರಿಗಣಿಸುವುದು ಸರಿಯಾಗದೇನೋ. ಈ ವಚನದಂಥ ರಚನೆಗಳು ವಚನಕಾರರನ್ನು ಕನ್ನಡ ಮನಸ್ಸು ಯಾವ ರೀತಿ ಕಲ್ಪಿಸಿಕೊಳ್ಳಲು ಯತ್ನಿಸಿತು ಅನ್ನುವುದರ ಉದಾಹರಣೆಯಾಗಿಯೂ ಕಾಣಬಹುದು.
ಇದರ ನಂತರ ನೀವು ಓದಲಿರುವ ವಚನದಲ್ಲೂ ಇದೇ ವಿಷಯ ಮುಂದುವರೆಯುತ್ತದೆ. ಅಕ್ಕಮಹದೇವಿಯವರ ಜೀವನ ಚರಿತ್ರೆಯನ್ನು ಮರೆತು ವಚನವೊಂದನ್ನೇ ಗಮನಿಸಿದರೆ ಯಾವುದೇ ಮನಸ್ಸಿನ ಇಂಥ ಸ್ಥಿತಿಯ ಸೂಕ್ಷ್ಮವನ್ನು ವಚನಗಳು ನುಡಿರೂಪದಲ್ಲಿ ಹೇಳಿವೆ, ಅಥವಾ ಸಮರ್ಥಿಸಿವೆ ಅನ್ನಬಹುದು.
ಕೊನೆಯ ಸಾಲುಗಳಲ್ಲಿ ನಾನು ಚೆನ್ನಾಮಲ್ಲಿಕಾರ್ಜುನನೇ ಆದುಕೊಂಡ ಜೀವ ಎಂಬ ದನಿ ಕೇಳುತ್ತದೆ. ನಾನು ನಿಷ್ಪತ್ತೀ ಎಂಬ ಹಣ್ಣದಾಗ ಕೂಡಲಸಂಗಮದೇವ ಎತ್ತಿಕೊಂಡ ಎಂಬ ವಚನ ಭಾಗ ನೆನಪಾಗುತ್ತದೆ. ಹೆಮ್ಮೆಯನ್ನು ಒಳಗೊಂಡಂತೆ ಕಾಣುವ ಇಂಥ ರಚನೆಗಳು ಆನಂತರದ ಕಾಲದವು ಇರಬಹುದೊ ಅನ್ನುವ ಅನುಮಾನ ಹುಟ್ಟುತ್ತದೆ.

