ಅಧ್ಯಾತ್ಮದ ಆಸೆ ಇರುವ ಅಕ್ಕನಿಗೆ ತನ್ನಂಥ ಮನೊಧರ್ಮದ ವ್ಯಕ್ತಿಗಳ ಒಡನಾಟ ಬೇಕು ಅನ್ನಿಸಿ, ಒಡನಾಟ ದೊರೆಯುವುದು ಎಲ್ಲಿ, ಗಳಿಸುವ ದಾರಿ ಯಾವುದು ಅನ್ನುವ ಯೋಚನೆ ಇಲ್ಲಿರುವಂತಿದೆ... ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ ೧ ಸಂದೇಹ, ಪ್ರಶ್ನೆ
ಹಿಂಡನಗಲಿ ಹಿಡಿವಡೆದ ಕುಂಜರ
ತನ್ನ ವಿಂಧ್ಯವ ನೆನೆವಂತೆ ನೆನೆವೆನಯ್ಯಾ
ಬಂಧನಕ್ಕೆ ಬಂದ ಗಿಳಿ
ತನ್ನ ಬಂಧುವ ನೆನೆವಂತೆ ನೆನೆವೆನಯ್ಯಾ
ಕಂದಾ
ನೀನಿತ್ತ ಬಾ ಎಂದು ನೀವು ನಿಮ್ಮಂದವ ತೋರಯ್ಯಾ
ಚೆನ್ನಮಲ್ಲಿಕಾರ್ಜುನಾ [೪೨೦]
[ಕುಂಜರ=ಆನೆ, ವಿಂಧ್ಯ=ದಟ್ಟವಾದ ಕಾಡು; ಹಿಡಿವಡೆ=ಬಂಧನಕ್ಕೆ ಗುರಿಯಾಗಿ; ಅಂದ=ದಾರಿ]
ಹಿಂಡನ್ನು ಅಗಲಿ, ಒಂಟಿಯಾಗಿ ಬಂಧನಕ್ಕೆ ಗುರಿಯಾದ ಆನೆ ತಾನಿದ್ದ ಕಾಡನ್ನು ನೆನೆಯುವ ಹಾಗೆ, ಬಂಧನಕ್ಕೆ ಗುರಿಯಾದ ಗಿಳಿ ತನ್ನ ಬಂಧುಗಳನ್ನು ನೆನೆಯುವ ಹಾಗೆ ನಾನು ನಿನ್ನನ್ನು ನೆನೆಯುತ್ತಿದ್ದೇನೆ. ಮಗೂ, ಇತ್ತ ಬಾ ಎಂದು ನೀವಿರುವಲ್ಲಿಗೆ ಬರುವ ದಾರಿಯನ್ನು ತೋರಿ.
ಸಮಾನ ಮನೋಧರ್ಮಿಗಳ ಒಡನಾಟವಿರದೆ ವ್ಯಕ್ತಿತ್ವ ಪೂರ್ತಿಯಾಗಿ ಅರಳದು. ಆನೆ, ಗಿಳಿಗಳು ತಮ್ಮವರಿಂದ ದೂರವಾಗಿ, ಒಂಟಿಯಾಗಿ ಬಂಧನದಲ್ಲಿರುವುದು ಅವುಗಳ ಸ್ವಭಾವಕ್ಕೆ ವಿರುದ್ಧ. ಹಾಗೆಯೇ ಅಧ್ಯಾತ್ಮದ ಆಸೆ ಇರುವ ಅಕ್ಕನಿಗೆ ತನ್ನಂಥ ಮನೊಧರ್ಮದ ವ್ಯಕ್ತಿಗಳ ಒಡನಾಟ ಬೇಕು ಅನ್ನಿಸಿ, ಒಡನಾಟ ದೊರೆಯುವುದು ಎಲ್ಲಿ, ಗಳಿಸುವ ದಾರಿ ಯಾವುದು ಅನ್ನುವ ಯೋಚನೆ ಇಲ್ಲಿರುವಂತಿದೆ. ಮನೋಧರ್ಮಕ್ಕೆ ಇರುವ ಆನೆಯಂಥ ಶಕ್ತಿ, ಮತ್ತು ಹಾರುವ ಗಿಳಿಯಂಥ ಸ್ವಚ್ಛಂದ ಸಾಮರ್ಥ್ಯ ಇವಕ್ಕೆ ಮುಕ್ತವಾದ ಅವಕಾಶ ಕಲ್ಪಿಸಿಕೊಳ್ಳುವ ತವಕ ವ್ಯಕ್ತವಾಗುತ್ತದೆ.
ʻಗಿಳಿಯು ಪಂಜರದೊಳಗಿಲ್ಲʼ ಎಂದು ಆರಂಭವಾಗುವ ಪುರಂದರ ದಾಸರ ರಚನೆಯಲ್ಲಿ ಬರುವ ಗಿಳಿಯನ್ನು ನೆನೆದರೆ ಈ ವಚನವನ್ನು ನುಡಿಯುತ್ತಿರುವ ವ್ಯಕ್ತಿಯ ಜೀವ ಮತ್ತು ಭಾವ ಇಲ್ಲಿ ಈ ಲೋಕದ ಪಂಜರದಲ್ಲಿ ಸಿಕ್ಕಿ ಬಿದ್ದಿದೆ ಅನ್ನುವ ಅರ್ಥ ಹೇಳಬೇಕು ಅನಿಸಬಹುದು. ಮದಗಜ ಅನ್ನುವಂಥ ಹೋಲಿಕೆಗಳು ನೆನಪಾದರೆ ಆನೆಯು ಅಹಂಕಾರಕ್ಕೆ, ಮದಕ್ಕೆ ಹೋಲಿಕೆ, ಈ ವಚನದಲ್ಲಿರುವ ವ್ಯಕ್ತಿಯ ಅಹಂಕಾರವೇ ಗುಂಪಿನಿಂದ ಬೇರೆಯಾಗುವಂತೆ ಮಾಡಿ ಸೆರೆಗೆ ಒಳಗಾಗುವಂತೆ ಮಾಡಿದೆ ಅನಿಸಬಹುದು. ಅರ್ಥವೆನ್ನುವುದು ಸಹೃದಯರ ಮನಸಿನಲ್ಲಿ ಏನಿರುತ್ತದೋ ಅದರ ವ್ಯಕ್ತರೂಪವಷ್ಟೇ! ಆದರೂ ಗಿಳಿ, ಆನೆ, ನಾಯಿ, ಕೋತಿ, ಕೋಳಿ, ಹಸು, ಹಂಸ, ಇಂಥ ಎಲ್ಲ ಪ್ರಾಣಿಗಳಿಗೂ ಸುಮಾರಾಗಿ ಒಂದೇ ಬಗೆಯ ಅರ್ಥವನ್ನು ಹೇಳುವ ಪರಂಪರೆ ಭಾರತದ ಎಲ್ಲ ಭಾಷೆಗಳಲ್ಲೂ ಬೆಳೆದಿದೆ ಅನಿಸುತ್ತದೆ.

