ಪ್ರಸಿದ್ಧ ಸಿನೇಮಾ ನಿರ್ದೇಶಕ, ಚಿಂತಕ, ಮಹೇಶ್ ಭಟ್ ಈಗಿನ ವಿಷಮಯ ಸಂದರ್ಭದ ಕುರಿತು ತಮ್ಮ ಸಂಕಟ ವ್ಯಕ್ತಪಡಿಸಿದ್ದು ಹೀಗೆ… । ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ನನ್ನ ತಾಯಿ ಶಿರೀನ್ ಅಲಿ, ಶಿಯಾ ಮುಸಲ್ಮಾನಳು, ತಂದೆ ನಾನಾಭಾಯಿ ಭಟ್, ನಾಗರ ಬ್ರಾಹ್ಮಣ. ಚಿಕ್ಕಂದಿನಲ್ಲಿ ನನ್ನ ತಾಯಿ ನನಗೆ ಸ್ನಾನ ಮಾಡಿಸುವಾಗ, ಊಟ ಮಾಡಿಸುವಾಗ, ಶಾಲೆಗೆ ಕರೆದುಕೊಂಡು ಹೋಗುವಾಗಲೆಲ್ಲ ಹೇಳುತ್ತಿದ್ದಳು, “ಮಗನೇ, ನೀನು ನಾಗರ ಬ್ರಾಹ್ಮಣ ಕುಲದವನು, ಭಾರ್ಗವ ಗೋತ್ರ, ಅಶ್ವಿನಿ ಶಾಖಾ, ಆದರೆ ನಿನಗೆ ಯಾವಾಗಲಾದರೂ ಯಾವ ಕಾರಣಕ್ಕಾದರೂ ಭಯ ಆಗುತ್ತಿದ್ದರೆ ಯಾ ಅಲೀ ಮದತ್ ಕರ್ ಎಂದು ಪ್ರಾರ್ಥನೆ ಮಾಡು”.
ಹೀಗೆ ನಾವು ಹಿಂದೆ, ಆ ಬಹುತ್ವ ಭಾರತದ ಅತ್ಯುತ್ತಮ ಉದಾಹರಣೆಗಳಾಗಿದ್ದೆವು. ಯಾವತ್ತೂ ಆಲೋಚನೆ ಮಾಡಿರಲಿಲ್ಲ ನಾನು, ಈ ಬಹುತ್ವದ ಸಂಸ್ಕೃತಿ ಯಾವುದು ನನ್ನ ದೇಹದ, ಆತ್ಮದ, ಅಣು ಅಣುವಿನ ಸತ್ಯವಾಗಿದೆಯೋ ಅದನ್ನು ಒಂದು ಗಾಯದ ಹಾಗೆ ಹೊತ್ತುಕೊಂಡು ಓಡಾಡುವ ಕಾಲ ಬರಬಹುದೆಂದು.

