ಯಾವುದಾದರೂ ಒಂದು ಮಾತ್ರ… : ಅಕ್ಕ ಮಹಾದೇವಿ #19

ಒಪ್ಪಿದ ನೀತಿಯ ದೃಷ್ಟಿಯಿಂದ ನೋಡಿದರೆ ಒಳಗಿನ ಗಂಡನಾದ ಚೆನ್ನಮಲ್ಲಿಕಾರ್ಜುನನಿಗೆ ನಿಷ್ಠೆಯಿಂದ ಇರುವುದರತ್ತಲೇ ಒಲವು ಇರುವಂತೆ ಅನ್ನಿಸುತ್ತದೆ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 2, ವಿಶ್ವಾಸ.

ಒಳಗಣ ಗಂಡನಯ್ಯಾ
ಹೊರಗಣ ಮಿಂಡನಯ್ಯಾ.
ಎರಡನೂ ನಡೆಸಲು ಬಾರದಯ್ಯಾ.
ಲೌಕಿಕ ಪಾರಮಾರ್ಥವೆಂಬೆರಡನೂ ನಡೆಸಲು ಬಾರದಯ್ಯಾ
ಚೆನ್ನಮಲ್ಲಿಕಾರ್ಜುನಯ್ಯಾ
ಬಿಲ್ವ ಬೆಳವಲಕಾಯಿ ಒಂದಾಗಿ ಹಿಡಿಯಲು ಬಾರದಯ್ಯಾ [೧೩೨]

ಹಿಂದೆ ಒಂದು ವಚನದಲ್ಲಿ ಬಂದಿದ್ದ ಬಿಲ್ವ-ಬೆಳವಲ ಕಾಯಿ ಇಲ್ಲೂ ಇವೆ. ಚೆನ್ನಮಲ್ಲಿಕಾರ್ಜುನ ಗಂಡ ಮಿಕ್ಕವರೆಲ್ಲ ಎದೆಯಲ್ಲಿ ಕಬ್ಬಿಣದ ಮುಳ್ಳು ಇರುವವರು ಅವರನ್ನು ಅಪ್ಪಲಾರೆ ಎಂದು ಹೇಳಿದ್ದ ವಚನವೂ ಇದೆ. ಲೌಕಿಕ-ಪರಮಾರ್ಥ ಎಂಬ ದ್ವಂದ್ವವನ್ನು ಕೂಡ ಇಲದಲಿ ಸ್ಪಷ್ಟವಾಗಿ ಹೇಳಲಾಗಿದೆ.

ಆ ವಚನಗಳಲ್ಲಿ ಕಾಣದ ನಿರ್ದಿಷ್ಟವಾದ ಆಯ್ಕೆಯ ತೀರ್ಮಾನ ಇಲ್ಲಿ ವ್ಯಕ್ತವಾಗುತ್ತದೆ. ಗಂಡ-ಮಿಂಡ ಪದಗಳಿಗಿರುವ ಅರ್ಥಗಳ ಬೆಲೆ ನೋಡಿದರೆ ಅಂತಂಗದ ಗಂಡನಿಗೆ ನಡೆದುಕೊಳ್ಳುವುದೇ ಒಳ್ಳೆಯದು ಅನ್ನುವ ನೈತಿಕ ನಿಲುವೂ ಇರುವಂತಿದೆ. ನಡೆಸು ಅನ್ನುವ ಕ್ರಿಯಾಪದವನ್ನು ಕನ್ನಡದಲ್ಲಿ ʻಸಂಸಾರ ನಡೆಸುವುದುʼ ಅನ್ನುವ ರೀತಿಯಲ್ಲಿ ಬಳಸುತ್ತೇವೆಯಷ್ಟೇ. ಇಲ್ಲಿ ಗಂಡ ಚೆನ್ನಮಲ್ಲಿಕಾರ್ಜುನ, ಪರಮಾರ್ಥದ ಸಂಸಾರ; ಮಿಂಡ- ಲೋಕದ ಗಂಡಂದಿರು, ಲೌಕಿಕ; ಈ ಎರಡೂ ಸಂಸಾರವನ್ನು ʻನಡೆಸಲುʼ ಸಾಧ್ಯವಿಲ್ಲ ಅನ್ನುವ ಗಟ್ಟಿ ನಿರ್ಧಾರವಿದೆಯಲ್ಲ ಅದು ಗಮನ ಸೆಳೆಯುತ್ತದೆ.

ಗಂಡನುಳ್ಳ ಗರತಿ ಬೇರೆಯ ಸಂಬಂಧಕ್ಕೆ ಮನಕೊಟ್ಟರೆ ನಿಂದನೆಗೆ ಒಳಗಾಗುವ ಹಾಗೆ ಒಳಗಿನ ದೈವದೊಡನೆ ಸಂಸಾರ ನಡೆಸುವ ನಾನು ಹೊರಗಿನ, ʻಗಂಡರʼನ್ನು ಒಲ್ಲೆ ಅನ್ನುವ ತೀರ್ಮಾನವಿದೆ. ಆದರೆ ಸಂಸಾರ ಇಲ್ಲಿಯದೇ ಆಗಲಿ, ಈ ಲೋಕದಲ್ಲದ ಪರಮಾರ್ಥದ್ದೇ ಆಗಲಿ ಅದನ್ನು ʻನಡೆಸುವುದುʼ ಪ್ರಾಮಾಣಿಕತೆಯ ಪ್ರಶ್ನೆ. ಈ ವಚನ ಒಳಗಿನ ಗಂಡನ ಸಂಸಾರವನ್ನು ನಿಸ್ಸಂಶಯವಾಗಿ ಆಯ್ಕೆ ಮಾಡಿಕೊಳ್ಳುತ್ತದೆ.  ಭಕ್ತಿ, ವಿರಕ್ತಿ ಇವೆಲ್ಲ ಗಂಡಸರಿಗೇ ಸಲ್ಲುವಂಥವು, ಹೆಣ್ಣು ಮಾಯೆ ಅನ್ನುವ ದೃಷ್ಟಿಯೇ ಪ್ರಬಲವಾಗಿದ್ದಾಗ ಹೆಣ್ಣು ಮನಸ್ಸು ಇಂಥ ತೀರ್ಮಾನ ತೆಗೆದುಕೊಳ್ಳುವುದು ಎಷ್ಟು ದೊಡ್ಡ ಸಂಗತಿಯಾಗಿರಬಹುದು.  ಒಳಗು-ಹೊರಗು ಅನ್ನುವ ವ್ಯತ್ಯಾಸ ಇರಲೇಬಾರದು, ಪಾರದರ್ಶಕವಾದ ಸ್ಫಟಿಕದ ಶಲಾಕೆಯಂತೆ ಇರಬೇಕು ಅನ್ನುವುದು ಅನುಭಾವೀ ಆದರ್ಶ. ಒಳಗು-ಹೊರಗುಗಳ ವ್ಯತ್ಯಾಸವಿದೆ, ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲೇಬೇಕು ಅನ್ನುವುದು ಮನುಷ್ಯರಿಗೆ ಸಹಜವಾಗಿ ಎದುರಾಗುವ ಸವಾಲು. ಬಸವಣ್ಣ ಅಲ್ಲಮರೂ ಸೇರಿದ ಹಾಗೆ ಪ್ರಮುಖ ವಚನಕಾರರು ಅಂತರಂಗ-ಬಹಿರಂಗಗಳ ವ್ಯತ್ಯಾಸವನ್ನು ಇಲ್ಲವಾಗಿಸುವ ಹಂಬಲ ಹೊಂದಿದ್ದರೂ ದ್ವಂದ್ವದ ಅರಿವೂ ಇತ್ತು. ಒಳಗಣ ಭವಿ, ಹೊರಗಣ ಭವಿ (ಚೆನ್ನಬಸವಣ್ಣ ೩.೨೨೨) ಒಳಗಣ ರಣರಂಗ ಹೊರಗಣ ಶೃಂಗಾರ (ಅಲ್ಲಮ ೨.೩೧೬) ಒಳಗಣ ಕಪಟ ಹೊರಗಣ ಬಣ್ಣ, (ಕೋಲಶಾಂತಯ್ಯ ೭. ೧೫೮) ಅಂತರಂಗಶುದ್ದಿ-ಬಹಿರಂಗ ಶುದ್ಧಿಗಳೆರಡೂ ಅಗತ್ಯವೆಂಬ ಮಾತು, ಒಳಗಣ ಕಪಟ ಹೊರಗಣ ಬಣ್ಣ, (ಸಗರದ ಬೊಮ್ಮಣ್ಣ ೯.೫೪೭) ಎಂಬಂಥ ಅನೇಕ ಉದಾಹರಣೆ ಸಿಗುತ್ತವೆ. ಬಹಳಷ್ಟು ವಚನಗಳಲ್ಲಿ ಅಂತರಂಗ ಮುಖ್ಯ ಅನ್ನುವ ನಿಲುವು ಇದೆ. ಈ ವಚನದಲ್ಲಿ ನಿರ್ಧಾರವಿದ್ದರೂ ಅಕ್ಕಮಹಾದೇವಿಯ ವಚನಗಳಲ್ಲಿ ಈ ದ್ವಂದ್ವ ಮತ್ತೆ  ಮತ್ತೆ ತಲೆ ಎತ್ತುತ್ತಲೇ ಇರುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.