ಬದುಕಬೇಕಾಗಿರುವುದು ಇಲ್ಲೇ : ಅಕ್ಕ ಮಹಾದೇವಿ #20

ಈ ವಚನ ನೋಡುವುದಕ್ಕೆ ಸರಳವೆನಿಸುತ್ತದೆ. ಆದರೆ ಕೊನೆಯ ಸಾಲಿನಲ್ಲಿ ಬರುವ ಚಿತ್ರ ಇಡೀ ವಚನಕ್ಕೇ ಬೇರೆಯ ಅರ್ಥವನ್ನು ಸೂಚಿಸುವಂತಿದೆ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 2, ವಿಶ್ವಾಸ.

ಆವ ವಿದ್ಯೆಯ ಕಲಿತಡೇನು
ಸಾವ ವಿದ್ಯೆ ಬೆನ್ನಬಿಡದು
ಅಶನವ ತೊರೆದಡೇನು
ವ್ಯಸನವ ಮರೆದಡೇನು
ಉಸುರ ಹಿಡಿದಡೇನು
ಬಸುರ ಕಟ್ಟಿದಡೇನು?
ಚೆನ್ನಮಲ್ಲಿಕಾರ್ಜುನದೇವಯ್ಯಾ
ನೆಲ ತಳವಾರನಾದಡೆ ಕಳ್ಳನೆಲ್ಲಿಗೆ ಹೋಹನು [೬೬]

[ಅಶನ=ಅನ್ನ; ವ್ಯಸನ=ಬಯಕೆ, ಗೀಳು; ತಳವಾರ=ಊರನ್ನು ಕಾಪಾಡುವ ಹೊಣೆ ಹೊತ್ತವನು]

ಈ ವಚನ ನೋಡುವುದಕ್ಕೆ ಸರಳವೆನಿಸುತ್ತದೆ. ಆದರೆ ಕೊನೆಯ ಸಾಲಿನಲ್ಲಿ ಬರುವ ಚಿತ್ರ ಇಡೀ ವಚನಕ್ಕೇ ಬೇರೆಯ ಅರ್ಥವನ್ನು ಸೂಚಿಸುವಂತಿದೆ. ಯಾವ ವಿದ್ಯೆಯನ್ನು ಕಲಿತರೂ ಸಾವು ಬೆನ್ನುಬಿಡದು, ಸಾಯುವ ವಿದ್ಯೆಯಿಂದ ತಪ್ಪಿಸಿಕೊಳ್ಳಲಾಗದು. ಇಡೀ ಬದುಕೇ ಸುದೀರ್ಘ ಸಾವು ಅನ್ನುವ ಮಾತು ಇದೆ. ಹಾಗೆ ನೋಡಿದಾಗ ಬದುಕೆನ್ನುವುದು ಸಾಯುವುದರ ಕಲಿಕೆ. ಸಾವಿನಿಂದ ತಪ್ಪಿಸಿಕೊಳ್ಳಲು ಉಪವಾಸ, ಆಸೆಗಳ ನಿಯಂತ್ರಣ, ಉಸಿರು ಬಿಗಿ ಹಿಡಿದು ಧ್ಯಾನ ಇಂಥವೇನು ಮಾಡಿದರೂ ಸಾಯುವ ಕ್ಷಣದಿಂದ ತಪ್ಪಿಸಿಕೊಳ್ಳಲು ಆಗದು. ಬದುಕು ಹೇಗೆ ಅನ್ನುವ ಆಯ್ಕೆ ಮೊದಲೇ ಮಾಡಿಕೊಂಡು ನಿರ್ಧಾರ ತಳೆಯುವುದು ಮುಖ್ಯ. ಏನು ಮಾಡಿದರೂ ಸಾವು ತಪ್ಪದು ಅನ್ನುವದರ ವರ್ಣನೆಯಾಗಿ ತಳವಾರನ ಚಿತ್ರ ಬರುತ್ತದೆ. ನಾವು ಬದುಕುವುದೇ ಭೂಮಿಯ ಮೇಲೆ, ನಾವು ಬದುಕುವ ನೆಲವೇ ತಳವಾರನಾದರೆ ತಪ್ಪಿಸಿಕೊಂಡು ಹೋಗುವುದು ಎಲ್ಲಿಗೆ? ಅದು ಅಸಾಧ್ಯ.

ಇದು ಒಂದು ಅರ್ಥವಾದರೆ ತನ್ನನ್ನು ತಾನು ಕಳ್ಳ ಅಂದುಕೊಳ್ಳುವುದು ಸತ್ಯವನ್ನು ನೋಡದೆ ಕಳ್ಳತಪ್ಪಿಸಿಕೊಳ್ಳುವ ಸ್ವಭಾವವನ್ನು ಕುರಿತ ಮಾತು ಅಂದುಕೊಂಡರೆ ವ್ರತ, ನೇಮ, ಉಪವಾಸ, ಧ್ಯಾನ ಇವೆಲ್ಲ ಸಾವಿನಿಂದ ತಪ್ಪಿಸಿಕೊಂಡು ಚಿರಂಜೀವಿಯಾಗುವ ಕಳ್ಳಬಯಕೆಗಳು ಅದಕ್ಕೆ ಗುರಿಯಾಗದೆ ಬದುಕು ಸರಿಯಾಗಿ ಬದುಕಬೇಕು ಅನ್ನುವ ನಿಲುವಿಗೆ ಇನ್ನಷ್ಟು ಹತ್ತಿರ ಬಂದ ಸ್ಥಿತಿ ಈ ವಚನದಲ್ಲಿದೆ ಅನ್ನಿಸುತ್ತದೆ. 

ʻನೆಲ ತಳವಾರನಾದಡೆ ಕಳ್ಳನೆಲ್ಲಿಗೆ ಹೋಹನುʼ ಅನ್ನುವುದು ಗಾದೆಯ ಮಾತು ಇದ್ದಿರಬೇಕು. ಇದೇ ವಾಕ್ಯ ಮೋಳಿಗೆ ಮಾರಯ್ಯವರ ವಚನದಲ್ಲೂ ಕಾಣುತ್ತದೆ (೮.೧೮೩೬) ಅಲ್ಲಮ ಪ್ರಭುದೇವರ ವಚನವೊಂದರಲ್ಲಿ ಗುಹೇಶ್ವರನನ್ನೇ ತಳವಾರ ಅಂದಿರುವುದೂ ಉಂಟು. ಒಂದು ಬಸವವಚನದಲ್ಲಿ ʻತಳವಾರ ಉಟ್ಟ ಸೀರೆಯ ಸುಲಿದʼ ಎಂಬ ಮಾತು ಬರುತ್ತದೆ (೧.೧೧೧). ಸಿದ್ಧರಾಮ ವಚನದಲ್ಲಿ ಅರುವರು ತಳವಾರರು (೪.೧೯೫) ಎಂಬ ಮಾತು ಮನುಷ್ಯರನ್ನು ಕಾಡುವ ಆರು ಭಾವಗಳನ್ನೋ ಆರು ಸ್ಥಲಗಲನ್ನೋ ಕುರಿತದ್ದಾಗಬಹುದು.  ತಳವಾರ ಅನ್ನುವ ಹೋಲಿಕೆ ಯಾವುದಕ್ಕೇ ಆಗಿರಲಿ ಅದು ಅಂತರಂಗದೊಳಗೇ ಇದ್ದು ಮನುಷ್ಯರ ವರ್ತನೆಗಳನ್ನು ಹದ್ದುಬಸ್ತಿನಲ್ಲಿಡುವ ನೈತಿಕ ಮೌಲ್ಯಗಳೇ ಅಗಿವೆ ಅನಿಸುತ್ತದೆ. ನೆಲವೇ ತಳವಾರನಾದರೆ ಅನ್ನುವ ಮಾತು ನೈತಿಕ ಮೌಲ್ಯಮಾಪನದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಅನ್ನುವುದನ್ನೂ ಹೇಳುವಂತಿದೆ. ವಚನದಲ್ಲಿದೆ ಅನ್ನಿಸುತ್ತದೆ. 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

  1. H S RAGHAVENDRA RAO's avatar H S RAGHAVENDRA RAO

    ಅಕ್ಕಮಹಾದೇವಿ ಈ ವಚನವನ್ನು ಬರೆದಿರುವುದೇ ಆಶ್ಚರ್ಯ/ಅನುಮಾನ. ಇದರ ಆಶಯ, ಆಕೃತಿ ಎರಡೂ ಅವಳದಲ್ಲ. ಬಹಳ ಡೈಡ್ಯಾಕ್ಟಿಕ್.

    Like

Leave a reply to H S RAGHAVENDRA RAO ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.