ನಿಭಾಯಿಸುವುದು ಮುಖ್ಯ, ಬಿಡುವುದಲ್ಲ : ಅಕ್ಕ ಮಹಾದೇವಿ #22

ದೇಹ-ಆತ್ಮಗಳಲ್ಲಿ ಯಾವುದು ಪ್ರಮುಖ ಎಂಬ ಪ್ರಶ್ನೆಗೆ ಮೂರು ಬಗೆಯ ಉತ್ತರಗಳು ವಚನಗಳಲ್ಲಿವೆ, ದೇಹ ಮುಖ್ಯ, ದೇಹ ಆತ್ಮ ಎರಡೂ ಮುಖ್ಯ, ಆತ್ಮವೇ ಹೆಚ್ಚು ಮುಖ್ಯ. ಅಕ್ಕನ ವಚನಗಳಲ್ಲಿ ದೇಹ ಆತ್ಮಗಳ ಸಮತೋಲಕ್ಕೆ ಹೆಚ್ಚಿನ ಒಲವು ಇರುವಂತೆ ತೋರುತ್ತದೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 2, ವಿಶ್ವಾಸ

ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ
ಹಾವಿನ ಸಂಗವೆ ಲೇಸು ಕಂಡಯ್ಯಾ.
ಕಾಯದ ಸಂಗವ ವಿವರಿಸಬಲ್ಲಡೆ
ಕಾಯದ ಸಂಗವೆ ಲೇಸು ಕಂಡಯ್ಯಾ
ತಾಯಿ ರಕ್ಕಸಿಯಾದಂತೆ ಕಾಯವಿಕಾರವು
ಚೆನ್ನಮಲ್ಲಿಕಾರ್ಜುನಯ್ಯಾ
ನೀನೊಲಿದವರು ಕಾಯಗೊಂಡಿದ್ದರೆನಬೇಡ [೪೧೯]

[ಕಾಯ=ದೇಹ]

ವಿಷದ ಹಲ್ಲನ್ನು ಕಿತ್ತು ಹಾವನ್ನು ಅಡಿಸುವುದು ಗೊತ್ತಿದ್ದರೆ ಹಾವಿನ ಸಂಗ ಒಳ್ಳೆಯದೇ ಹೊರತು ಕೆಟ್ಟದ್ದಲ್ಲ. ದೇಹಕ್ಕೂ ನಮಗೂ ಇರುವ ಸಂಬಂಧವನ್ನು ವಿವರಿಸಲು ಸಾಧ್ಯವಾದರೆ ಕಾಯದ ಸಂಗವೂ ಒಳ್ಳೆಯದೇ. ದೇಹದ ಬಯಕೆ ವಿಕೃತವಾದರೆ ಅದು ತಾಯಿಯೇ ರಾಕ್ಷಸಿಯಾದ ಹಾಗೆ. ಚೆನ್ನಮಲ್ಲಿಕಾರ್ಜುನನು ಯಾರನ್ನು ಒಲಿದಿರುತ್ತಾನೋ ಅವರನ್ನು ದೇಹವುಳ್ಳವರು ಅನ್ನಬೇಡ.

ಹಾವಿಗೆ ವಿಷವಿರುವುದು ಹಲ್ಲಿನಲ್ಲಿ ಮಾತ್ರ. ವಿಷದ ಹಲ್ಲಿರದಿದ್ದರೆ ಹಾವಿನ ಒಡನಾಟದಿಂದ ಅಪಾಯವಿಲ್ಲ. ದೇಹದ ವಿಕಾರ ಹೇಗೆ ಹುಟ್ಟಿತು, ನಮಗೂ ದೇಹಕ್ಕೂ ಇರುವ ಸಂಬಂಧವೇನು ಅನ್ನುವ ತಿಳಿವಳಿಕೆ ಇದ್ದರೆ ದೇಹವೂ ಕೆಡುಕು ಮಾಡದು. ʻದೇಹದ ಬಯಕೆ ವಿಕೃತವಾದರೆʼ ಅನ್ನುವ ಮಾತನ್ನು ಹಾವಿನ ವಿಷದ ಜೊತೆಗೆ ಹೋಲಿಸಿಕೊಳ್ಳಬೇಕು. ವಿಕೃತಿ ದೇಹದಲ್ಲ, ಮನಸಿನ ಬಯಕೆಯದು. ವಿಕೃತ ಬಯಕೆಯನ್ನು ನಿವಾರಿಸಿಕೊಂಡರೆ ದೇಹವೆಂಬ ಹಾವಿನ ಸಂಗ ಒಳ್ಳೆಯದು. ದೇಹವೂ ನಾನು ಅನ್ನುವುದರ ತಾಯಿ. ವಿಕೃತ ಬಯಕೆಯ ಕಾರಣಕ್ಕೆ ತಾಯಿ ರಕ್ಕಸಿಯಾಗಿದ್ದಾಳೆ. ಚೆನ್ನಮಲ್ಲಿಕಾರ್ಜುನ ಸಾವಿಲ್ಲದ, ಕೇಡಿಲ್ಲ, ರೂಹಿಲ್ಲದ ದೇಹವಿರದ ವಿಕೃತಿಗಳಿರದ ತಾಯಿಯ ಹಾಗೆ. ಅವನು ಒಲಿದರೆ ದೇಹದಿಂದ ಯಾವ ಕೆಡುಕೂ ಆಗದು.

ದೇಹ ಮುಖ್ಯವಲ್ಲ, ಆತ್ಮವೇ ಮುಖ್ಯವೆನ್ನುವ ನಿಲುವನ್ನು ಅಕ್ಕ ಮತ್ತು ಇತರ ಅನೇಕ ವಚನಕಾರರು ಒಪ್ಪುವುದಿಲ್ಲ. ಭಕ್ತಿಯೂ ಒಂದು ಭಾವ. ಅದು ಕೂಡ ದೇಹದ ಮೂಲಕವೇ ವ್ಯಕ್ತವಾಗಬೇಕು. ಬೆಟ್ಟಕ್ಕೆ ಸಾರವಿಲ್ಲೆಂಬರು [೩೦೬] ಎಂಬ ವಚನದಲ್ಲಿ ಎನಗೆ ಕಾಯವಿಲ್ಲೆಂಬರು, ಚೆನ್ನಮಲ್ಲಿಕಾರ್ಜುನನನೊಲಿವ ಪರಿ ಇನ್ನೆಂತಯ್ಯಾ ಅನ್ನುವಾಗ ಈ ಮಾತು ಮತ್ತಷ್ಟು ಸ್ಪಷ್ಟವಾಗುತ್ತದೆ. ಮನ ಮನ ಬೆರೆಸಿದಲ್ಲಿ ತನು ಕರಗದಿದ್ದರೆ, ಸೋಂಕಿನಿಂದ ಪುಳಕವಾಗದಿದ್ದರೆ, ಕಂಡಾಗ ಕಂಬನಿ ಹೊಮ್ಮದಿದ್ದರೆ, ನುಡಿ ಗದ್ಗದಿಸದಿದ್ದರೆ ಭಕ್ತಿಗೆ ಬೇರೆ ಯಾವ ಚಿಹ್ನೆ ಇದೆ ಎಂದು ಬಸವವಚನವೊಂದು ಕೇಳುತ್ತದೆ. [ಸಂ.೧, ವಚನ ೩೭೯] ಭಕ್ತಿಯೂ ಪ್ರೀತಿಯ ಭಾವದ ಹಾಗೇ ದೇಹದ ಮೂಲಕವೇ ಸ್ಪಷ್ಟವಾಗುತ್ತದೆ. ಅನುಭಾವದ ಅನುಭವಕ್ಕೂ ದೇಹ ಬೇಕೇ ಬೇಕು. ದೇಹದ ನಿರಾಕರಣೆ ಅಥವ ಸೂಕ್ತವಲ್ಲದ ಬಳಕೆ ಆಧ್ಯಾತ್ಮವಲ್ಲ. ಜ್ಞಾನವನರಿದೆನೆಂದು ಕಾಯವ ದಂಡಿಸಲೇಕೆ ? ಎನ್ನುವುದು ಮೋಳಿಗೆ ಮಾರಯ್ಯ ವಚನದ  ಪ್ರಶ್ನೆ [ಸಂ. ೮, ವ. ೧೭೮೨] `ಕಾಯವೆಂಬ ಡಕ್ಕೆಯ ಮೇಲೆ ಜೀವವೆಂಬ ಹೊಡೆಚೆಂಡು ಬೀಳೆʼ ಎಂದು ಡಕ್ಕೆಯ ಬೊಮ್ಮಣ್ಣ ವಚನದ ನಿಲುವು.  [ಸಂ.೭. ವ. ೯೧೭]  ಹಾಗೆಯೇ ಅಕ್ಕನೂ ಸೇರಿದಂತೆ ಮಿಕ್ಕ ವಚನಕಾರರಲ್ಲೂ ದೇಹ ಮುಖ್ಯವಲ್ಲ ಅನ್ನುವ ಮಾತೂ ಬರುತ್ತದೆ. ʻತನು ಕರಗದವರಲ್ಲಿ…ʼ ಎಂಬ ಪ್ರಸಿದ್ದ ವಚನವನ್ನೇ ನೋಡಿ. ದೇಹ-ಆತ್ಮಗಳಲ್ಲಿ ಯಾವುದು ಮುಖ್ಯ ಎಂಬ ಪ್ರಶ್ನೆಗೆ ಮೂರು ಬಗೆಯ ಉತ್ತರಗಳು ವಚನಗಳಲ್ಲಿವೆ: ದೇಹ ಮುಖ್ಯ; ದೇಹ ಆತ್ಮ ಎರಡೂ ಮುಖ್ಯ; ಆತ್ಮವೇ ಹೆಚ್ಚು ಮುಖ್ಯ. ಅಕ್ಕನ ವಚನಗಳಲ್ಲಿ ದೇಹ ಆತ್ಮಗಳ ಸಮತೋಲಕ್ಕೆ ಹೆಚ್ಚಿನ ಒಲವು ಇರುವಂತೆ ತೋರುತ್ತದೆ. ಆತ್ಮವೇ ಹೆಚ್ಚು ಮುಖ್ಯ ಎಂಬ ಸಾಂಪ್ರದಾಯಿಕ ನಿಲುವಿನ ಮನಸುಗಳು ಮಾಡಿದ  ಪರಿಷ್ಕರಣೆಗಳಿಂದ ದೇಹ ಮುಖ್ಯವಲ್ಲ ಅನ್ನುವ ಧೋರಣೆಯ ವಚನಗಳು ರೂಪುಗೊಂಡಿರಬಹುದು ಅನಿಸುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.