ಈ ವಚನ ನಿರ್ಣಯದಿಂದ ಮೂಡುವ ನಿರಾಳ ಸ್ಥಿತಿಯನ್ನು ಚಿತ್ರಿಸುತ್ತದೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 2, ವಿಶ್ವಾಸ
ಕಿಡಿ ಕಿಡಿ ಕೆದರಿದಡೆ
ಎನಗೆ ಹಸಿವು ತೃಷೆಯಡಗಿತ್ತೆಂಬೆನು
ಮುಗಿಲು ಹರಿದು ಬಿದ್ದಡೆ
ಎನಗೆ ಮಜ್ಜನಕ್ಕೆರೆದರೆಂಬೆನು.
ಗಿರಿ ಮೇಲೆ ಬಿದ್ದಡೆ
ಎನಗೆ ಪುಷ್ಪವೆಂಬೆನು.
ಚೆನ್ನಮಲ್ಲಿಕಾರ್ಜುನಯ್ಯಾ
ಶಿರ ಹರಿದು ಬಿದ್ದಡೆ ಪ್ರಾಣ ನಿಮಗರ್ಪಿತವೆಂಬೆನು [೧೭೨]
[ತೃಷೆ=ಬಾಯಾರಿಕೆ; ಮಜ್ಜನ=ಸ್ನಾನ]
ನನ್ನ ಮೇಲೆ ಕಿಡಿ ಸುರಿದರೆ ಹಸಿವು, ಬಾಯಾರಿಕೆ ಅಡಗಿತು ಅನ್ನುತ್ತೇನೆ. ಮೋಡ ಹರಿದು ನೀರು ಸುರಿದರೆ ನನಗೆ ಸ್ನಾನವಾಯಿತು ಅನ್ನುತ್ತೇನೆ. ಬೆಟ್ಟ ನನ್ನ ಮೇಲೆ ಬಿದ್ದರೆ ಅದನ್ನು ನನಗೆ ಕೊಟ್ಟ ಹೂವು ಅನ್ನುತ್ತೇನೆ. ತಲೆಯೇ ಕತ್ತರಿಸಿ ಬಿದ್ದರೆ ಪ್ರಾಣ ನಿಮಗೆ ಅರ್ಪಣೆಯಾಯಿತು ಅನ್ನುತ್ತೇನೆ.
ಸುರಿವ ಬೆಂಕಿಯ ಕಿಡಿ ಹಸಿವು ನೀಗಿಸುವ ಅನ್ನದ ತಯಾರಿಗೆ ಒದಗುವ ಬೆಂಕಿಯಾಗಿ, ಸುರಿವ ಮಳೆ ಸ್ನಾನವಾಗಿ, ನೆತ್ತಿಯ ಮೇಲೆ ಬೀಳುವ ಬೆಟ್ಟ ಹೂವಾಗಿ—ಇವೆಲ್ಲ ಅಸಾಧ್ಯ ಕಲ್ಪನೆ ಹೌದು. ಆದರೆ ಅದರ ಹಿಂದೆ ಇರುವ ವ್ಯಕ್ತಿತ್ವದ ಗಟ್ಟಿತನ ಗಮನ ಸೆಳೆಯುತ್ತದೆ. ಅದು ಸ್ಪಷ್ಟವಾಗುವುದು ಕೊನೆಯ ಸಾಲಿನಲ್ಲಿ. ಮೊದಲ ಸಾಲುಗಳಲ್ಲಿ ಬಂದ ಕಿಡಿ, ಹರಿದು ಬಿದ್ದ ಮುಗಿಲು, ಮೇಲೆ ಬಿದ್ದ ಬೆಟ್ಟ ಇವೆಲ್ಲವೂ ನನ್ನ ಪಾಲಿಗೆ ಕೇಡು ಅಲ್ಲ, ಅವೆಲ್ಲ ನನ್ನ ಅಲಂಕಾರಕ್ಕೆ, ನನ್ನ ಸಿಂಗಾರಕ್ಕೆ ಎಂದು ಕಲ್ಪಿಸಿಕೊಂಡ ಮನಸ್ಸು ನನ್ನ ತಲೆ ಕತ್ತರಿಸಿ ಬಿದ್ದರೆ ಪ್ರಾಣ ನಿನಗೆ ಅರ್ಪಣೆ ಅಂತಲೂ ಅನ್ನುತ್ತದೆ. ಕೆಡುಕೇ ಒಳಿತಾಗುವ ಅಥವಾ ಕೆಡುಕು ಒಳಿತನ ವ್ಯತ್ಯಾಸ ಅಳಿದು ಹೋಗುವ ಸ್ಥಿತಿಯ ಚಿತ್ರಣ ಇದು ಅನಿಸುತ್ತದೆ. ಅಲ್ಲಮನ ಒಂದು ವಚನ ʻನಿರ್ಣಯವನರಿಯದ ಮನವೇ ದುಗುಡವನಾಹಾರಗೊಂಡೆಯಲ್ಲಾʼ ಅನ್ನುತ್ತದೆ. ನಿರ್ಣಯ ಮಾಡಲಾಗದ ಸ್ಥಿತಿ ದುಗುಡಕ್ಕೆ, ಕಳವಳಕ್ಕೆ ಕಾರಣವಾಗುತ್ತದೆ, ಇಡೀ ವ್ಯಕ್ತಿತ್ವದ ಮೂಲಕ ಸ್ವೀಕರಿಸಿದ ನಿರ್ಣಯ ನಿರಾಳತೆಯನ್ನು ತರುತ್ತದೆ. ಈ ವಚನ ನಿರ್ಣಯದಿಂದ ಮೂಡುವ ನಿರಾಳ ಸ್ಥಿತಿಯನ್ನು ಚಿತ್ರಿಸುತ್ತದೆ. ಬಸವ ವಚನದಲ್ಲಿ (೧. ೬೯೨) ಬರುವ ʻಶಿರಹರಿದು ಅಟ್ಟೆ ನೆಲಕ್ಕೆ ಬಿದ್ದಡೆ ನಾಲಗೆ ಕೂಡಲಸಂಗಾ ಶರಣೆನ್ನುತಿದ್ದಿತಯ್ಯಾʼ ಅನ್ನುವ ಮಾತು ಗಂಡುತನದ ವೀರನದು. ಇಲ್ಲಿ ಬರುವ ವರ್ಣನೆ ಎದುರಾಗುವ ಕೇಡನ್ನೆಲ್ಲ ಅಲಂಕಾರವಾಗಿ ಭಾವಿಸಿ ಒಲಿದ ದೈವದ ಅರ್ಪಣೆಗೆ ಸಿದ್ಧವಾಗುವ ಹೆಣ್ಣು ಮನಸಿನ ಮಾತು. ನನಗಾಗುವ ಕೇಡೆಲ್ಲವು ನಿಮಗೆ ಅರ್ಪಣೆಯಾಗುವ ಪೂಜೆಯ ಭಾಗ ಅನ್ನುವ ನಿಲುವು ಅಪರೂಪದ್ದು ಅನಿಸುತ್ತದೆ.

