ನಿನ್ನ ತಿಳಿವು ದೊರೆತರೆ ನರಕವೂ ಮೋಕ್ಷ. ನಿನ್ನನ್ನು ಅರಿಯದೆ ಮುಕ್ತಿ ದೊರಕಿದರೂ ಅದು ನರಕ… |~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 2, ವಿಶ್ವಾಸ
ನಿನ್ನರಿಕೆಯ ನರಕವೆ
ಮೋಕ್ಷ ನೋಡಯ್ಯಾ
ನಿನ್ನನರಿಯದ ಮುಕ್ತಿಯೆ
ನರಕ ಕಂಡಯ್ಯಾ
ನೀನೊಲ್ಲದ ಸುಖವೆ
ದಃಖ ಕಂಡಯ್ಯಾ
ನೀನೊಲಿದ ದುಃಖವೆ
ಪರಮಸುಖ ಕಂಡಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ
ನೀ ಕಟ್ಟಿ ಕೆಡಹಿದ ಬಂಧನವ ನಿರ್ಬಂಧವೆಂದಿಪ್ಪೆನು [೨೬೨]
[ಅಱಿಕೆ=ತಿಳಿವಳಿಕೆ; ಕೆಡಹಿದ=ಕೆಡವಿದ; ನಿರ್ಬಂಧ-ಕಟ್ಟುಪಾಡು, ಮಿತಿ; ʼಬಂಧನವಿರದʼ ಅನ್ನುವ ಅರ್ಥವೂ ಈ ಸಂದರ್ಭದಲ್ಲಿ ಸಾಧ್ಯವಿದೆ]
ನಿನ್ನ ತಿಳಿವು ದೊರೆತರೆ ನರಕವೂ ಮೋಕ್ಷ. ನಿನ್ನನ್ನು ಅರಿಯದೆ ಮುಕ್ತಿ ದೊರಕಿದರೂ ಅದು ನರಕ. ನೀನು ಇಷ್ಟಪಡದಿದ್ದರೆ ಸುಖವೇ ನನಗೆ ದುಃಖ. ನೀನು ಇಷ್ಟಪಟ್ಟರೆ ದುಃಖವಿದ್ದರೂ ಅದು ಸುಖ. ಚೆನ್ನಮಲ್ಲಿಕಾರ್ಜುನ ನೀನು ನನ್ನ ಕಟ್ಟಿ ಹಾಕಿರುವ ಬಂಧನವೇ ಬಿಡುಗಡೆ, ನೀನು ವಿಧಿಸಿರುವ ಬಂಧನವೇ ನನಗೆ ಇರುವ ನಿರ್ಬಂಧ. ಅಥವಾ ನೀನು ಕಟ್ಟಿ ಕೆಡವಿರುವ ಬಂಧನವೇ ಬಿಡುಗಡೆ ಎಂದು ತಿಳಿದು ಇರುವೆ.
ಇಡೀ ವಚನ ವಿರೋಧಾಭಾಸ (ಪ್ಯಾರಡಾಕ್ಸ್)ಗಳ ಜೋಡಣೆಯಾಗಿದೆ. ಅಂದರೆ, ಇಲ್ಲಿ ಬಳಸಿರುವ ಮುಖ್ಯ ಪದಗಳಿಗೆ ನಾವು ಕಟ್ಟಿಕೊಂಡಿರುವ ಅರ್ಥಗಳು ಹೊಂದುವುದಿಲ್ಲ ಅನ್ನುವುದನ್ನು ಸಾರುವ ಹಾಗೆ ಈ ರಚನೆ ಇದೆ. ನಿನ್ನ ತಿಳಿವಳಿಕೆ ಇರದಿದ್ದರೆ ನರಕವೂ ಬಿಡುಗಡೆಯ, ಸ್ವಾತಂತ್ರ್ಯದ ಭಾವ ತರುತ್ತದೆ. ನಿನ್ನ ತಿಳಿವು ಇರದಿದ್ದರೆ ಸ್ವಾತಂತ್ರ್ಯವಿದ್ದರೂ ಅದು ನರಕ ಅನಿಸುತ್ತದೆ. ನೀನು ಒಲಿದರೆ ದುಃಖವೇ ಸುಖ, ಒಲಿಯದಿದ್ದರೆ ಸುಖವೂ ದುಃಖ. ಇವು ಆದ ಮೇಲೆ ಬರುವ ಕೊನೆಯ ಮಾತಿನ “ನಿರ್ಬಂಧ” ಗಮನ ಸೆಳೆಯುತ್ತದೆ. ಬಂಧನವು ಕಟ್ಟುಪಾಡು, ನಿರ್ಬಂಧ. ಆದರೆ ಅದೇ ಬಂಧನವಿರದ ಸ್ಥಿತಿಯೂ ಆಗುತ್ತದೆ ಚೆನ್ನಮಲ್ಲಿಕಾರ್ಜುನ ಒಲಿದರೆ, ಚೆನ್ನಮಲ್ಲಿಕಾರ್ಜುನ ನನಗೆ ಅರ್ಥವಾದರೆ. ಇದು ಬಂಧನವಲ್ಲ, ಬಂಧನವಿರದ ಸ್ಥಿತಿ.
ನರಕ-ಮುಕ್ತಿ, ಸುಖ-ದುಃಖ ಎಂಬ ಜೋಡಿಪದಗಳು ತೋರುವ ವಿರುದ್ಧ ಅನಿಸುವ ಅರ್ಥಗಳು ಕೊನೆಯಲ್ಲಿ ಕಟ್ಟುಪಾಡು ಮತ್ತು ಬಿಡುಗಡೆ ಎಂಬ ವಿರುದ್ಧ ಅರ್ಥಗಳನ್ನು ಹೊಂದಿರುವ ನಿರ್ಬಂಧ ಎಂಬ ಒಂದೇ ಪದದೊಡನೆ ನಿಲುಗಡೆಗೆ ಬರುತ್ತದೆ. ಇನ್ನೊಂದು ಹೆಜ್ಜೆ ಮುಂದೆ ಹೋದರೆ ಅರಿವು ಮತ್ತು ಒಲವಿನಿಂದ ಕೂಡಿರುವ, ದೇವರು ನಮ್ಮನ್ನು ಕಟ್ಟಿ ಕೆಡವಿರುವ ಮನುಷ್ಯ ಜನ್ಮವೇ ಅತಿ ದೊಡ್ಡ ಬಿಡುಗಡೆ, ಇದಕ್ಕಿಂತ ಬೇರೆ ಯಾವುದೂ ಅಗತ್ಯವಿಲ್ಲ ಅನ್ನುವ ಅರ್ಥವೂ ಹೊಳೆಯಬಹುದು. ಮನುಷ್ಯಜನ್ಮ ದೊಡ್ಡದು ಅನ್ನುವುದನ್ನು ವಿರೋಧಗಳ ಮಂಡನೆ ಮತ್ತು ಸಾಮರಸ್ಯ ಸಾಧನೆಯ ಭಾಷೆಯ ಬಳಕೆಯ ಮೂಲಕ ಹೇಳುವ ರೀತಿ ಆಗಿರಬಹುದು. ಅರಿವು ಮತ್ತು ಒಲುವು ಇವೇ ಬಿಡುಗಡೆಯ ಪರಿಕರಗಳು ಅನ್ನುವ ತೀರ್ಮಾನದ ನುಡಿಯೂ ಆಗಬಹುದು.

