ಈ ವಚನವು ಅಕ್ಕನವಚನ ಸಂಕ್ಷಿಪ್ತವಾಗಿ ತೀವ್ರವಾಗಿ ಹೇಳುವ ಕನಸಿನ ವಿಸ್ತಾವಾದ ಧಾರ್ಮಿಕ ವಿವರದಂತೆ, ಅಕ್ಕನ ಇತರ ವಚನಗಳ ನುಡಿಯನ್ನು ಸೇರಿಸಿಕೊಂಡು ವಿಸ್ತಾರಗೊಂಡಂತೆ ಕಾಣುತ್ತದೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ
ಅಕ್ಕ ಕೇಳೌ
ನಾನೊಂದು ಕನಸ ಕಂಡೆ
ಅಕ್ಕಿ ಅಡಕೆ ಓಲೆ ತೆಂಗಿನಕಾಯ ಕಂಡೆ
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು
ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ
ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು.
ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆನು [೧೨]
[ಸುಲಿಪಲ್ಲ=ಸ್ವಚ್ಛವಾದ ಬಿಳಿಯ ಹಲ್ಲಿನ; ಮಿಕ್ಕು ಮೀರಿ=ಅತಿರೇಕದಿಂದ ವರ್ತಿಸು; ಹೋಹನ=ಹೋಗುವವನ; ಬೆಂಬತ್ತಿ=ಬೆನ್ನು ಹತ್ತಿ; ಕೈವಿಡಿದೆ=ಕೈ ಹಿಡಿದೆ]
ಅಕ್ಕಾ, ನನಗೊಂದು ಕನಸು. ೧. ಅದರಲ್ಲಿ ಅಕ್ಕಿ, ಅಡಕೆ, ಓಲೆ, ತೆಂಗಿನ ಕಾಯಿ ಕಂಡೆ, ೨. ಚಿಕ್ಕ ಚಿಕ್ಕ ಜಡೆಗಳ, ಬಿಳಿಯ ಸ್ವಚ್ಛ ಹಲ್ಲಿನ ಗೊರವ ಭಿಕ್ಷಕ್ಕೆ ಮನೆಗೆ ಬಂದಿದ್ದ. ೩. ಅವನು ಅತಿರೇಕದಿಂದ ವರ್ತಿಸಿದ. ೪.ಅವನನ್ನು ಅಟ್ಟಿಕೊಂಡು ಹೋಗಿ ಕೈ ಹಿಡಿದೆ. ೪.ಅವನು ಚೆನ್ನಮಲ್ಲಿಕಾರ್ಜುನ. ಅವನನ್ನು ಕಂಡು ಕಣ್ಣು ತೆರೆದೆ
ಮೊದಲ ಮತ್ತು ಕೊನೆಯ ವಾಕ್ಯಗಳು ಕಂಡ ಕನಸು ಹೇಗೆ ಶುರುವಾಗಿ ಹೇಗೆ ಮುಗಿಯಿತು ಎಂಬುದನ್ನು ಸೂಚಿಸುವ ಆವರಣ ಚಿಹ್ನೆಗಳು. ಅವರೆಡರ ನಡುವೆ ಬರುವ ನಾಲ್ಕೂ ಚಿತ್ರಗಳು ಕನಸಿನಲ್ಲಿ ಕಾಣುವಂಥ ಪರಸ್ಪರ ಸಂಬಂಧವಿಲ್ಲವೆಂಬಂತೆ ತೋರುವ ದೃಶ್ಯಗಳು. ಕನಸಲ್ಲಿ ಕಂಡ ಗೊರವ ಅತಿರೇಕದಿಂದ ವರ್ತಿಸಿದ್ದಕ್ಕೆ ಅವನನ್ನು ಅಟ್ಟಿಸಿಕೊಂಡು ಹೋಗಿ, ಕೈ ಹಿಡಿದು, ಅವನೇ ಚೆನ್ನಮಲ್ಲಿಕಾರ್ಜುನನನ ಒಂದು ರೂಪ ಎಂದು ತಿಳಿದೆ ಎನ್ನುವ ಮಾತು ಕನಸಿನ ಶಿಖರ ಸ್ಥಿತಿ. ಹೀಗೆ ಅತ್ಯಂತ ವಾಸ್ತವ ರೀತಿಯಲ್ಲಿ ಕನಸನ್ನು ಶಾರ್ಟ್‌ಹ್ಯಾಂಡ್ ರೀತಿಯಲ್ಲಿ ವಿವರಿಸಿರುವುದು ಕನ್ನಡ ಸಾಹಿತ್ಯದಲ್ಲಿ ಅಪರೂಪ.
ಕೇಳವ್ವಾ ಕೇಳವ್ವಾ ಕೆಳದಿ ಎಂದು ಆರಂಭವಾಗುವ ವಚನ ಇದೆ [೧೮೨] ಕೇಳವ್ವಾ ಕೇಳವ್ವಾ ಕೆಳದಿ ನಾನೊಂದು ಕನಸಕಂಡೆ./ಗಿರಿಯಮೇಲೊಬ್ಬ ಗೊರವ ಕುಳ್ಳಿರ್ದುದ ಕಂಡೆ./ ಗಿರಿಯೆಂಬುದು ಸಿರಿಶೈಲ ಗೊರವನೆ ಚೆನ್ನಮಲ್ಲಿಕಾರ್ಜುನನು./ ಅದು ಈ ವಚನದ ಇನ್ನೊಂದು ರೂಪ. ಅದರಲ್ಲಿ ಗಿರಿಯೆನ್ನುವುದು ಶ್ರೀಶೈಲ, ಗೊರವನೆಂಬುವನು ಚೆನ್ನಮಲ್ಲಿಕಾರ್ಜುನ ಎಂಬ ಮಾಮೂಲು ವಿವರಣೆ ಇದೆ. ಅದು ಕಂಡ ಕನಸನ್ನು ಹೇಳುವುದು ಮಾತ್ರವಲ್ಲ, ಅಕ್ಕನೇ ಮಾಡಿರಬಹುದು ಅನಿಸುವಂಥ ಕನಸಿನ ಅರ್ಥದ ವ್ಯಖ್ಯಾನವಾಗಿ ರೂಪ ಪಡೆದಿದೆ. ಹೊಳೆವ ಕೆಂಜೆಡೆಗಳ, ಮಣಿಮಕುಟದ, ಒಪ್ಪುವ ಸುಲಿಪಲ್ಗಳ ಎಂದು ಅರಂಭವಾಗುವ ಇನ್ನೊಂದು ವಚನ [೫.೪೩೨] ಇದೆ. ʼಹೊಳೆವ ಕೆಂಜೆಡೆಗಳ, ಮಣಿಮಕುಟದ, ಒಪ್ಪುವ ಸುಲಿಪಲ್ಗಳ/ನಗೆಮೊಗದ, ಕಂಗಳ ಕಾಂತಿಯ,/ಈರೇಳುಭುವನವ ಬೆಳಗುವ ದಿವ್ಯಸ್ವರೂಪನ ಕಂಡೆ ನಾನು./ ಕಂಡೆನ್ನ ಕಂಗಳ ಬರ ಹಿಂಗಿತ್ತೆನಗೆ./ ಗಂಡಗಂಡರೆಲ್ಲರ ಹೆಂಡಿರಾಗಿ ಆಳುವ/ ಗರುವನ ಕಂಡೆ ನಾನು./ ಜಗದಾದಿ ಶಕ್ತಿಯೊಳು ಬೆರಸಿ ಮಾತನಾಡುವ ಪರಮಗುರು / ಚೆನ್ನಮಲ್ಲಿಕಾರ್ಜುನನ ನಿಲವ ಕಂಡು ಬದುಕಿದೆನು/ ಇದು ಕನಸಿನಿಂದ ಎಚ್ಚರಗೊಂಡು, ಆಮೇಲೆ ಯಾರಿಗೋ ಹೇಳಿದ ಕನಸಿನ ವಿವರಣೆಯಂತೆ ತೋರುತ್ತದೆ. ಪರಮಗುರು, ಈರೇಳು ಭುವನವ ಬೆಳಗುವ, ಆಳುವ ಗರುವ ಇಂಥ ಗುಣವಿಶೇಷಗಳು ಹೇರಳವಾಗಿ ಬಳಕೆಯಾಗಿವೆ, ಈ ವಚನವು ಅಕ್ಕನವಚನ ಸಂಕ್ಷಿಪ್ತವಾಗಿ ತೀವ್ರವಾಗಿ ಹೇಳುವ ಕನಸಿನ ವಿಸ್ತಾವಾದ ಧಾರ್ಮಿಕ ವಿವರದಂತೆ, ಅಕ್ಕನ ಇತರ ವಚನಗಳ ನುಡಿಯನ್ನು ಸೇರಿಸಿಕೊಂಡು ವಿಸ್ತಾರಗೊಂಡಂತೆ ಕಾಣುತ್ತದೆ. ಅಕ್ಕ ನುಡಿದ ಮಿತ ಭಾಷೆಯ ತೀವ್ರ ಭಾವವನ್ನು ತಮಗೆ ತಿಳಿದಂತೆ ಕನ್ನಡ ಮನಸು ವಿಸ್ತರಿಸಿಕೊಂಡ ಉದಾಹರಣೆಗಳೆಂಬಂತೆ ಈ ಎರಡು ವಚನಗಳು ಕಾಣುತ್ತವೆ. ವಚನಗಳಿಗೆ ಕನ್ನಡ ಮನಸ್ಸು ಕಾಲಕ್ರಮದಲ್ಲಿ ನೀಡಿದ ವಿವರಣೆಗಳೂ ವಚನ ರೂಪದಲ್ಲಿ, ಪ್ರಾಚೀನರೇ ಹೇಳಿರಬಹುದು ಅನಿಸುವಂಥ ರಚನೆಗಳು ಇವು ಅನಿಸುತ್ತದೆ.
ಮನಸಿನ ಆಸೆ ಕನಸಾಗಿ ಕಾಡುವ ಚಿತ್ರಣ ಮುಂದಿನ ಎರಡು ವಚನಗಳಲ್ಲಿ ಮುಂದುವರೆದಿದೆ. ಅದನ್ನು ಗಮನಿಸೋಣ. ಅಕ್ಕನ ಕನಸಿನ ಬೇರೆ ಮಗ್ಗುಲು ಅಲ್ಲಿವೆ.

