ನಮ್ಮಲ್ಲಿ ಬಹುತೇಕರು ಆ ಬಾಮೈದನ ಥರದೋರು ಅಂತ ಪ್ರತ್ಯೇಕ ಹೇಳ್ಬೇಕಿಲ್ಲ ತಾನೆ? ವ್ಯಾಪಾರಿ ಥರದೋದು ಅಪರೂಪದಲ್ಲಿ ಅಪರೂಪ. ಅವರು ಮಾತಾಡೋದಿಲ್ಲ, ಮಾಡೇಬಿಡ್ತಾರೆ. ಮಾತಾಡೋರು ತಮ್ಮ ‘ತಾ’ ಬಿಟ್ಟುಕೊಡೋದೇ ಇಲ್ಲ! ~ ಚೇತನಾ ತೀರ್ಥಹಳ್ಳಿ
ಒಂದೂರಲ್ಲಿ ಒಬ್ಬ ವ್ಯಾಪಾರಿ ಇದ್ನಂತೆ. ಅವ್ನಿಗೊಬ್ಳು ಹೆಂಡ್ತಿ. ಆ ಹೆಂಡ್ತಿಗೊಬ್ಬ ತಮ್ಮ. ಆ ತಮ್ಮ ಅವಾಗಿವಾಗ ನಾನು ಮನೆ ಬಿಟ್ ಹೋಗ್ತೀನಿ, ಸಮಣರ ಜೊತೆ ಸೇರ್ಕೊಂಡು ಸನ್ಯಾಸಿ ಆಗ್ತೀನಿ ಅಂತಿದ್ನಂತೆ.
ಅವ್ನು ಹಂಗ್ ಅಂದಾಗೆಲ್ಲ ವ್ಯಾಪಾರಿ ಹೆಂಡ್ತಿ ಅದನ್ನ ಅವ್ನಿಗೆ ಹೇಳೋಳು. ನನ್ ತಮ್ಮ ಹಿಂಗ್ ಹಂಗ್ ಅಂತಾನೆ ನೋಡಿ ಅನ್ನೋಳು.
ಹೆಂಡ್ತಿ ಅವ್ಳ ತಮ್ಮ ಸನ್ಯಾಸಿ ಆಗೋ ವಿಷ್ಯ ಹೇಳ್ದಾಗೆಲ್ಲ ವ್ಯಾಪಾರಿ ನಗ್ತಿದ್ನಂತೆ. ಅಲ್ಲ ಕಣೇ, ಬರ್ದಿಟ್ಕೋ. ಅವ್ನು ಈ ಜನ್ಮದಲ್ಲಿ ಸನ್ಯಾಸಿ ಆಗಲ್ಲ – ಅಂತಿದ್ನಂತೆ.
ಆಮೇಲೊಂದಿನ ಆ ವ್ಯಾಪಾರಿ ಅಂಗಡಿ ಮುಚ್ಚಿ ಬಂದು ಕಾಲು ತೊಳೆದುಕೊಳ್ತಾ ಇರುವಾಗ ಅವನ ಮನೆ ಮುಂದೆ ಸಮಣರ ಗುಂಪು ಹೋಗ್ತಾ ಇತ್ತಂತೆ. ಆ ಗುಂಪನ್ನು ಕಂಡ ಕೂಡ್ಲೇ ವ್ಯಾಪಾರಿ ತಲೆಯ ಮುಂಡಾಸು ಬಿಚ್ಚಿ ಬಾವಿ ಮೇಳಿಟ್ಟು, ಮೇಲಂಗಿ, ಧೋತರ ಕಳಚಿ ಅಂಗಳದಲ್ಲಿ ಬಿಸಾಡಿ, ಅಲ್ಲೇ ಜಿಲೇಬಿ – ಪಾಪಡಿ ಮೆಲ್ಲುತ್ತ ಕೂತಿದ್ದ ಬಾಮೈದನ ಕೂಗನ್ನೂ ಲೆಕ್ಕಿಸ್ದೆ, ಮೆಟ್ಟಿಲ ಮೇಲಿದ್ದ ಚಪ್ಪಲೀನೂ ಮೆಟ್ಟಿಕೊಳ್ದೆ ಮನೆ ತೊರೆದು ಹೋಗೇಬಿಟ್ನಂತೆ.
ಯಾಕೆ?
ಸನ್ಯಾಸಿ ಆಗೋಕೆ!
~
ನಮ್ಮಲ್ಲಿ ಬಹುತೇಕರು ಆ ಬಾಮೈದನ ಥರದೋರು ಅಂತ ಪ್ರತ್ಯೇಕ ಹೇಳ್ಬೇಕಿಲ್ಲ ತಾನೆ? ವ್ಯಾಪಾರಿ ಥರದೋದು ಅಪರೂಪದಲ್ಲಿ ಅಪರೂಪ. ಅವರು ಮಾತಾಡೋದಿಲ್ಲ, ಮಾಡೇಬಿಡ್ತಾರೆ. ಮಾತಾಡೋರು ತಮ್ಮ ‘ತಾ’ ಬಿಟ್ಟುಕೊಡೋದೇ ಇಲ್ಲ.
~
ಹಾಗಾದ್ರೆ ನಿರ್ಧಾರ ಮಾಡೋ ಮೊದಲು ಅದರ ಬಗ್ಗೆ ಚರ್ಚೆ ಮಾಡಬಾರ್ದಾ? ಯೋಚನೆ ಮಾಡಿ ತಾನೆ ನಿರ್ಧಾರ ತಗೊಳ್ಬೇಕು? ಹಾಗೆ ಇದ್ದಕ್ಕಿದ್ದ ಹಾಗೆ ಧಿಡೀರಂತ ಏನನ್ನಾದ್ರೂ ಮಾಡೋಕೆ ಆಗುತ್ತಾ? ಹಾಗೆ ಮಾಡೋ ಕೆಲಸ ಬಹಳ ಕಾಲ ನಡೆಯುತ್ತಾ?
ಖಂಡಿತಾ ಚರ್ಚೆ ಮಾಡ್ಬೇಕು. ಯಾರ ಹತ್ರ? ನಾವು ಯಾವ ವಿಷಯದ ಬಗ್ಗೆ ಆಸಕ್ತರಾಗಿದೀವೋ ಅದಕ್ಕೆ ಸಂಬಂಧಪಟ್ಟವರ ಹತ್ರ. ಯೋಚನೆನೂ ಮಾಡ್ಬೇಕು, ನಮ್ಮ ಮನಸ್ಸಿನೊಳಗೆ. ಹೊರಗೆ, ಇಡೀ ಜಗತ್ತಿಗೆ ಕೇಳುವಂತೆ ಬಡಾಯಿ ಕೊಚ್ಚುವುದಲ್ಲ.
ಕತೆಯಲ್ಲಿ ವ್ಯಾಪಾರಿ ಧಿಡೀರಂತ ನಿರ್ಧಾರ ತಗೊಂಡಿದ್ದಲ್ಲ, ಧಿಡೀರಂತ ಅದನ್ನು ಕಾರ್ಯಗತಗೊಳಿಸಿದ್ದು. ಅವನ ಎದೆಯೊಳಗೆ ಬಹಳ ಕಾಲ ಅದರ ಬಗ್ಗೆ ಯೋಚಿಸುತ್ತ, ಮೊದಲು ತನ್ನ ಆಸಕ್ತಿಯನ್ನು ತನಗೆ ಖಾತ್ರಿಪಡಿಸಿಕೊಂಡ ನಂತರವೇ ಹೆಜ್ಜೆ ಎತ್ತುವ ಮೂಲಕ ಇತರರಿಗೂ ಖಾತ್ರಿಪಡಿಸಿದ್ದು.
~
ಯಾವ್ದೇ ಕೆಲಸ ಮಾಡೋಕೆ ಒಬ್ಬೊಬ್ಬರದ್ದು ಒಂದೊಂದು ಶೈಲಿ ಇರುತ್ತೆ, ಹೌದು. ಕೆಲವರಿಗೆ ಹೀಗೆ ಮೊದಲೇ ಹೇಳಿಕೊಂಡುಬಿಟ್ರೆ ಅದಕ್ಕೆ ಕಮಿಟ್ ಆಗಿ ಮಾಡಲೇಬೇಕಾದ ತುರ್ತಿಗೆ ಬಿದ್ದಾದ್ರೂ ಕೆಲಸ ಮುಗಿಸ್ತಾರೆ. ಇನ್ನು ಕೆಲವರಿಗೆ ಇಂಥದ್ದನ್ನು ಮಾಡೋಕೆ ಹೊರಟಿದೀನಿ ಅಂದಾಗ ಸಿಗುವ ಉತ್ತೇಜನದ ಮಾತುಗಳೇ ಟಾನಿಕ್. ಇನ್ನು ಕೆಲವರು ಜನ ಏನಂತಾರೆ ಅಂತ ತಿಳಿಯೋದಕ್ಕೇ ಅನೋನ್ಸ್ ಮಾಡಿಕೊಳ್ಳೋದು. ತುಂಬಾ ಜನ ಬೇಡ ಅಂದ್ರೆ ರಿಸ್ಕ್ ತಗೊಳೋದು ಬೇಡ, ಬಿಟ್ಟುಬಿಡೋಣ ಅನ್ನುವ ಆಲೋಚನೆ ಅವರದ್ದು.
ಆದ್ರಿಂದ, ಡೈಲಿ ಲೈಫಿನಲ್ಲಿ ವ್ಯಾಪಾರಿ ಮಾಡಿದಂಗೇ ಮಾಡ್ಬೇಕು ನಾವೂ – ಅನ್ನೋದು ಎಷ್ಟು ಸರಿಯೋ ಗೊತ್ತಿಲ್ಲ. ಫಿಲಾಸಫಿ ಕೆಲವೊಮ್ಮೆ ಭೌತಿಕ ಮತ್ತು ವ್ಯವಹಾರಕ್ಕೆ ಹೊಂದಿಕೆಯಾಗೋದಿಲ್ಲ. ಆದರೆ, ಮಾನಸಿಕ ತುಮುಲಕ್ಕೆ ಇದು ಒಳ್ಳೆಯ ಮದ್ದು.
ಯಾರ ಮೇಲಿನದ್ದಾದರೂ ಪ್ರೇಮವನ್ನೋ ದ್ವೇಷವನ್ನೋ ಜಿದ್ದನ್ನೋ ಮತ್ತೇನನ್ನೋ ಬಿಟ್ಟುಬಿಡಬೇಕು ಅನ್ನಿಸಿದರೆ; ಅದನ್ನು ವ್ಯಾಪಾರಿಯ ಹಾಗೆ ಒಮ್ಮಿಂದೊಮ್ಮೆಗೆ ಬಿಟ್ಟೇಬಿಡಬೇಕು ಹೊರತು ಬಾಮೈದನ ಹಾಗೆ ಬಿಡ್ತೀನಿ ಬಿಡ್ತೀನಿ ಅಂತ ಅವರಿಗೆ ಅಂಟಿಕೊಂಡೇ ಇರಬಾರದು. ಇದರಿಂದ ನಾವು ಜನರ ಕಣ್ಣಲ್ಲಿ ದುರ್ಬಲರಾಗಿ ಕಾಣ್ತೀವಿ. ಕೆಲವೊಮ್ಮೆ ಚೀಪ್ ಕೂಡಾ ಆಗಿಬಿಡ್ತೀವಿ.
ಅದರಲ್ಲೂ ಟಾಕ್ಸಿಕ್ ಪರ್ಸನಾಲಿಟಿ ಜನರ ಜೊತೆ ಏಗುವಾಗ ಈ ಎಚ್ಚರ ಬಹಳ ಮುಖ್ಯವಾಗುತ್ತೆ. ಅವರ ಸಹವಾಸ ಬಿಡಬೇಕು ಅನ್ನಿಸಿದಾಗ ಬಿಟ್ಟುಬಿಡಲೇಬೇಕು. ಬಿಡಲು ಸಾಧ್ಯವಾಗ್ಲಿಲ್ಲ ಅಂತಾದ್ರೆ, ನಾವು ಕೊನೆತನಕ ಅವರ ಬಲೆಯಲ್ಲಿ ಹೆಣಗುವ ಮೀನುಗಳಾಗೇ ಸಾಯೋದು.

