ನೀವು ಏನೇ ಮಾಡುತ್ತಿದ್ದರೂ ಆ ಕುರಿತು ನಿಮಗೆ ಪ್ರಜ್ಞೆ ಇರಲಿ. ನೀವು ಮುಖವಾಡ ಧರಿಸಿದ್ದರೂ ಆ ಬಗ್ಗೆ ನಿಮಗೆ ಪ್ರಜ್ಞೆ ಇರಲಿ; ಮುಖವಾಡವನ್ನು ಪ್ರಜ್ಞಾ ಪೂರ್ವಕವಾಗಿ ಧರಿಸಿ, ಇದು ನಿಮಗೆ ಗೊತ್ತಿರದೇ ಆಗಬಾರದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಅನೇಕಬಾರಿ ತಮಾಷೆ,
ಒಂದು ಮುಖವಾಡ.
ನೀನು ಅದನ್ನ ಬೇಧಿಸಬಲ್ಲೆಯಾದರೆ,
ಅಲ್ಲಿ ನಿನಗೆ ಕಾಣುವುದು,
ಒಬ್ಬ ಕೃದ್ಧ ಮೇಧಾವಿ ಅಥವಾ
ಒಂದು ಪ್ರಯಾಸದ ಜಾಣತನ.
~ ಖಲೀಲ್ ಜಿಬ್ರಾನ್
ನೀವು ದುಃಖದ ಮೂಡ್ ನಲ್ಲಿದ್ದೀರಿ ಮತ್ತು ಆಗ ಯಾರೋ ಒಬ್ಬರು ನಿಮ್ಮನ್ನು ನೋಡಲು ಬರುತ್ತಾರೆ, ಆಗಲೂ ನೀವು ದುಃಖದ ಮೂಡ್ ನಲ್ಲಿಯೇ ಇದ್ದರೆ, ನೀವು ಅವರನ್ನೂ ದುಃಖಿತರನ್ನಾಗಿಸುತ್ತೀರಿ. ಇದರಲ್ಲಿ ಅವರ ತಪ್ಪೇನೂ ಇಲ್ಲ, ಈ ದುಃಖಕ್ಕೆ ಅವರು ಬಾಧ್ಯರಲ್ಲ . ಆದ್ದರಿಂದ ಯಾಕೆ ನೀವು ಅವರನ್ನು ದುಃಖಿತರನ್ನಾಗಿಸುವುದು? ಅವರು ನಿಮ್ಮ ಎದುರು ಇರುವಾಗ , ಇದು ಮುಖವಾಡ ಎನ್ನುವುದು ನಿಮಗೆ ಗೊತ್ತಿದ್ದರೂ ನಗು ಮುಖದಲ್ಲಿ ಅವರನ್ನು ಮಾತನಾಡಿಸಿ. ಅವರು ಅಲ್ಲಿಂದ ಹೊರಟು ಹೋದ ಮೇಲೆ ಬೇಕಾದರೆ ಮತ್ತೆ ನಿಮ್ಮ ದುಃಖಕ್ಕೆ ಮರಳಿ. ಇದು ಕೇವಲ ಒಂದು ಸಾಮಾಜಿಕ ಔಪಚಾರಿಕತೆ. ಇದನ್ನು ನೀವು ಪ್ರಜ್ಞಾಪೂರ್ವಕವಾಗಿ ಮಾಡುತ್ತಿದ್ದರೆ ಯಾವ ತೊಂದರೆಯೂ ಇಲ್ಲ.
ನಿಮಗೆ ಗಾಯವಾಗಿದ್ದರೆ, ಅದನ್ನು ಎಲ್ಲರಿಗೂ ತೋರಿಸುವ ಅವಶ್ಯಕತೆಯಿಲ್ಲ ; ಈ ಬಗ್ಗೆ ಅವರಿಗೆ ಯಾವ ಸಂಬಂಧವೂ ಇಲ್ಲ. ಯಾಕೆ ಅವರ ಮೈಂಡ್ ನಲ್ಲಿ ನಿಮ್ಮ ಗಾಯದ ಕುರಿತು ದುಃಖವನ್ನು ಮೂಡಿಸುವುದು? ಯಾಕೆ ಈ ಪ್ರದರ್ಶನ ಪ್ರಿಯತೆ? ನಿಮ್ಮ ಗಾಯಕ್ಕೆ ನೀವೇ ಉಪಚಾರ ಮಾಡಿ, ಅದರ ಬಗ್ಗೆ ಕಾಳಜಿ ವಹಿಸಿ. ಬೇಕಾದರೆ ಡಾಕ್ಟರ್ ನ ಸಂಪರ್ಕಿಸಿ. ಆದರೆ ಗಾಯವನ್ನು ದಾರಿಯಲ್ಲಿ ಹೋಗುವ ಎಲ್ಲರಿಗೂ ತೋರಿಸುವ ಅವಶ್ಯಕತೆಯಿಲ್ಲ. ಆದರೆ ಆ ಗಾಯದ ಬಗ್ಗೆ ನಿಮಗೆ ಪ್ರಜ್ಞೆ ಇರಲಿ.
ಬದುಕಿನಲ್ಲಿ ಬಹಳಷ್ಟು ಮುಖವಾಡಗಳನ್ನು ಧರಿಸುವ ಅವಶ್ಯಕತೆ ಬರಬಹುದು ; ಅವು ಲೂಬ್ರಿಕಂಟ್ ಥರ ಕೆಲಸ ಮಾಡುತ್ತವೆ. ಯಾರೋ ಒಬ್ಬರು ಬಂದು “ಹೇಗಿದ್ದೀರಿ?” ಎಂದು ನಿಮ್ಮನ್ನು ಪ್ರಶ್ನೆ ಮಾಡುತ್ತಾರೆ, ಮತ್ತು ನೀವು ಅವರ ಎದುರು ನಿಮ್ಮ ಎಲ್ಲ ಸಮಸ್ಯೆಗಳನ್ನು ಹೇಳುತ್ತ ನಿಂತು ಬಿಡುತ್ತೀರಿ. ಅವರು ನಿಮ್ಮ ಸಮಸ್ಯೆಗಳ ಬಗ್ಗೆ ಕೇಳಿರಲಿಲ್ಲ, ಅವರು ಸುಮ್ಮನೇ ನಿಮಗೆ ಹಲೋ ಹೇಳಿದ್ದರು. ಈಗ ಅವರು ಒಂದು ಗಂಟೆ ನಿಮ್ಮ ಸಮಸ್ಯೆಗಳನ್ನು ಕೇಳುತ್ತ ಕುಳಿತುಕೊಳ್ಳಬೇಕು. ಇದು ಅತೀ ಆಯಿತು! ಮುಂದಿನ ಬಾರಿ ಅವರು ನಿಮಗೆ ಹಲೋ ಕೂಡ ಹೇಳುವುದಿಲ್ಲ, ನಿಮ್ಮನ್ನು ಕಂಡರೆ ಓಡಿ ಹೋಗುತ್ತಾರೆ.
ಬದುಕಿನಲ್ಲಿ ಔಪಚಾರಿಕತೆಗಳು ಬೇಕಾಗುತ್ತವೆ, ಏಕೆಂದರೆ ಈ ಜಗತ್ತಿನಲ್ಲಿ ಇರುವುದು ನೀವು ಒಬ್ಬರೇ ಅಲ್ಲ ಮತ್ತು ಸಮಾಜದ ಕಟ್ಟುಪಾಡುಗಳಿಗೆ ಅನುಗುಣವಾಗಿ ನಡೆಯದಿದ್ದರೆ ನೀವು ನಿಮಗೆ ಕಷ್ಟಗಳನ್ನು ತಂದುಕೊಳ್ಳುತ್ತೀರಿ, ಬೇರೇನೂ ಇಲ್ಲ.


ಹೋದಲೆಲ್ಲಾ ನಮ್ಮ ರಗಳೆಗಳನ್ನು ಹೇಳುವುದಕ್ಕಿಂತ ಇದು ಸರಿ… ಸಾಮಾಜಿಕ ಔಪಚಾರಿಕತೆ… 👍
LikeLike