‘ನಾವು ಇಂತಿಷ್ಟು ದಿನಗೂಲಿಗೆ ನಮ್ಮನ್ನ ಒಪ್ಪಿಸಿಕೊಂಡಾಗಿದೆ. ಕೊಟ್ಟ ಕೆಲಸ, ಕೊಡಲಾದ ಸಮಯಕ್ಕೆ ಮಾಡಿ ಮುಗಿಸೋದಷ್ಟೇ ನಮ್ಮ ಜವಾಬ್ದಾರಿ. ಮತ್ಯಾರೋ ಎಷ್ಟು ಮಾಡಿದ್ರು, ಅವರಿಗೆಷ್ಟು ಕೊಟ್ರು – ಇವೆಲ್ಲ ನಮಗೆ ಬೇಡದ ಉಸಾಬರಿ’ – ಇದು ಏಸು ಹೇಳಿದ ದೃಷ್ಟಾಂತ ಕತೆಯ ನೀತಿ । ಚೇತನಾ ತೀರ್ಥಹಳ್ಳಿ
ಒಂದೂರಲ್ಲಿ ಒಬ್ಬ ಶ್ರೀಮಂತ ಇರ್ತಾನೆ. ಅವ್ನದ್ದೊಂದು ದ್ರಾಕ್ಷಿ ತೋಟ ಇರತ್ತೆ.
ದ್ರಾಕ್ಷಿ ಬೆಳೆ ಕೈಗೆ ಸಿಗೋ ಕಾಲ ಬಂದಾಗ ಆ ಶ್ರೀಮಂತ ಕೆಲಸಗಾರರನ್ನ ಹುಡುಕ್ಕೊಂಡು ಹೊರಡ್ತಾನೆ. ಸಂತೆ ಬೀದೀಲಿ ನಿಂತು “ದಿನಕ್ಕೆ ಒಂದು ಬೆಳ್ಳಿ ನಾಣ್ಯ ಕೊಡ್ತೀನಿ, ನನ್ನ ವೈನ್ ಯಾರ್ಡಲ್ಲಿ ಕೆಲಸ ಮಾಡ್ತೀರಾ?” ಅಂತ ಜೋರಾಗಿ ಕೂಗಿ ಕೂಗಿ ಕೇಳ್ತಾನೆ.
ಒಂದಷ್ಟು ಜನ ಅವನ ಸುತ್ತ ಬಂದು ನಿಲ್ತಾರೆ. ಅವ್ರೆಲ್ಲ ಕೆಲಸ ಹುಡುಕ್ಕೊಂಡೇ ಸಂತೆಗೆ ಬಂದೋರು.
ಅವ್ರು ಶ್ರೀಮಂತನ ಕರಾರಿಗೆ ಒಪ್ಪಿ, ಅವನ ತೋಟಕ್ಕೆ ದಿನಗೂಲಿ ಮಾಡೋಕೆ ಹೋಗ್ತಾರೆ. ಶ್ರೀಮಂತ ಅವರಲ್ಲಿ ಕೆಲವರನ್ನ ಬೆಳಗ್ಗೆ ಹತ್ತು ಗಂಟೆಯಿಂದ, ಕೆಲವರನ್ನ ಹನ್ನೆರಡು ಗಂಟೆಯಿಂದ ಕೆಲವರನ್ನ ಮಧ್ಯಾಹ್ನ ಎರಡು ಗಂಟೆಯಿಂದ – ಹೀಗೆ ಮೂರು ಬೇರೆ ಬೇರೆ ಟೈಮಿಗೆ ನೇಮಿಸ್ತಾನೆ. ಆದ್ರೆ ಎಲ್ಲರ ಕೆಲಸ ಮುಗಿಸೋ ಗಡುವು ಸಂಜೆ ಸೂರ್ಯಾಸ್ತದ ಸಮಯಾನೇ.
ಸರಿ ಅವ್ರೆಲ್ಲ ಅವರವರ ಟೈಮಿಗೆ ತಮ್ಮ ಕೆಲಸ ಶುರು ಹಚ್ಕೋತಾರೆ. ಸಂಜೆ ಆಗತ್ತೆ. ಕೂಲಿ ಕೊಡೋ ಸಮಯಾನೂ ಬರತ್ತೆ.
ಶ್ರೀಮಂತ ತನ್ನ ಗುಮಾಸ್ತನಿಗೆ, “ಮೊದ್ಲು ಲೇಟಾಗಿ ಕೆಲ್ಸ ಶುರು ಮಾಡ್ದೋರಿಗೆ ಕೊಟ್ಬಿಡು” ಅಂತಾನೆ.
ಅದರಂತೆ ಗುಮಾಸ್ತ ಲೇಟಾಗಿ ಶುರು ಮಾಡ್ದೋರಿಗೆ 1 ಬೆಳ್ಳಿ ನಾಣ್ಯ ಕೊಡ್ತಾ ಹೋಗ್ತಾನೆ.
ಅದನ್ನ ನೋಡಿ ಉಳಿದೆರಡು ಸಮಯದವರು, “ಓಹೋ! ಲೇಟಾಗಿ ಕೆಲಸ ಶುರು ಮಾಡಿದೋರಿಗೇ 1 ನಾಣ್ಯ ಅಂದ್ರೆ, ಬೇಗ ಶುರು ಮಾಡಿದ ನಮಗೆ ಇನ್ನೂ ಜಾಸ್ತಿ ಕೊಡ್ತಾರೆ” ಅಂತ ಮನಸಲ್ಲೇ ಮಂಡಿಗೆ ಮುರೀತಾರೆ.
ಆದ್ರೆ ಅವರ ಈ ಮಂಡಿಗೆ ಅಕ್ಷರಶಃ ಮುರಿದುಹೋಗೋ ಸಮಯ ಬರುತ್ತೆ. ಗುಮಾಸ್ತ, ಬೇಗ ಕೆಲಸ ಶುರು ಮಾಡಿದವ್ರಿಗೂ ಒಂದೇ ನಾಣ್ಯ ಕೊಡ್ತಾ ಬರ್ತಾನೆ.
ಕೆಲಸಗಾರರು ಸಿಟ್ಟಿಂದ ಶ್ರೀಮಂತನ್ನ ಪ್ರಶ್ನೆ ಮಾಡ್ತಾರೆ. “ನಾವು ಆಗಿಂದ ಕೆಲಸ ಮಾಡ್ತಿದೀವಿ, ನಮ್ಗೂ ಲೇಟಾಗಿ ಬಂದೋರಿಗೆ ಕೊಟ್ಟಷ್ಟೇ ಕೊಡೋದಾ? ನಮ್ಗೆ ಜಾಸ್ತಿ ಕೊಡೋದು ಬೇಡ ಹೋಗ್ಲಿ, ಅವ್ರಿಗೆ ಕಮ್ಮಿ ಕೊಡಿ!” ಅಂತ ಗಲಾಟೆ ಮಾಡ್ತಾರೆ.
ಆಗ ಶ್ರೀಮಂತ, “ನಾನು ಯಾರಿಗೆ ಎಷ್ಟು ಕೊಡ್ತೀನಿ ಅನ್ನೋ ತಲೆಬಿಸಿ ಬೇಡ ನಿಮ್ಗೆ, ನೀವು ಒಂದು ಬೆಳ್ಳಿ ನಾಣ್ಯದ ದಿನಗೂಲಿಗೆ ಒಪ್ಪಿ ಬಂದೋರು. ನಿಮ್ಮ ಕೆಲಸ ನೀವು ಮಾಡಿದ್ರೆ ಸಾಕು. ನಿಮಗ್ಯಾಕೆ ಕೂಲಿ ನಿರ್ಧರಿಸೋ ಉಸಾಬರಿ?” ಅಂತ ಮರುಪ್ರಶ್ನೆ ಮಾಡ್ತಾನೆ.
ಬೈಬಲ್ಲಿನ ಈ ಕತೆ, ಏಸುಕ್ರಿಸ್ತ ಹೇಳಿದ 40 ದೃಷ್ಟಾಂತ ಕತೆಗಳಲ್ಲಿ ಒಂದು. “ನಾನು ಮೊದಲು ಬಂದವ, ಮೊದಲು ಅನುಯಾಯಿ ಆದವ, ನಂಗೇ ಜಾಸ್ತಿ ಕೃಪೆ ಸಿಗ್ಬೇಕು” ಅಂತಲೋ, “ನಾನು ಮೊದಲಿಂದಾ ಇದ್ದೀನಿ, ಏಸುವಿನ ಗಮನ ನೆನ್ನೆ ಮೊನ್ನೆ ಬಂದವರಿಗಿಂತ ನನ್ನ ಮೇಲೇ ಜಾಸ್ತಿ ಇರಬೇಕು” ಅಂತಲೋ ಹುಯಿಲೆಬ್ಬಿಸ್ತಿದ್ದ ಅನುಚರರಿಗೆ ಪಾಠ ಕಲಿಸಲು ಏಸು ಹೇಳಿದ ಕತೆಯಂತೆ ಇದು.
ಮೊದಲು ಬಂದವರಿಗೆ ಆದ್ಯತೆ, ಅನಂತರ ಬಂದವರು ತನ್ನ ಕೃಪೆಗಾಗಿ ಸಾಲಲ್ಲಿ ಕಾಯಬೇಕು ಅನ್ನುವೆಲ್ಲ ಆಲೋಚನೆ ಏಸುವಿಗೆ ಇರಲಿಲ್ಲ. ಮೊದಲೋ ಆಮೇಲೋ… ತನ್ನ ಬಳಿ ಬಂದವರೆಲ್ಲರೂ ತನ್ನವರು, ಎಲ್ಲರಿಗೂ ತನ್ನ ಪ್ರೀತಿ ಸಮನಾಗಿ ಸಲ್ಲಬೇಕು ಅನ್ನುವುದೊಂದೆ ಅವನ ಉದ್ದೇಶ. ಇಷ್ಟಕ್ಕೂ ಅವನತ್ತ ಬಂದವರು ಹಾಗೆ ಬಂದಿದ್ದು ಅವನ ಕರುಣೆ ಮತ್ತು ಪ್ರೀತಿಗಾಗಿ ಹೊರತು, ಮತ್ತೊಬ್ಬರಿಗಿಂತ ಹೆಚ್ಚು ಕರುಣೆ, ಮತ್ತೊಬ್ಬರಿಗಿಂತ ಹೆಚ್ಚು ಪ್ರೀತಿಗಾಗಿ ಅಲ್ಲವಲ್ಲ? ಮತ್ಯಾಕೆ ತಲೆಬಿಸಿ! – ಇದು ಏಸುವಿನ ಚಿಂತನೆ.
~
ಈ ಕತೆ ಓದುವಾಗ “ಹಳತೆಲ್ಲ ಒಳಿತಲ್ಲ, ಹೊಸತೆಲ್ಲ ಕೆಡುಕಲ್ಲ” ಅನ್ನೋ ಗಾದೆ ನೆನಪಾಗುತ್ತೆ. ಜೊತೆಗೇ ಸಾಹಿತ್ಯ ಸೇರಿದಂತೆ ಎಲ್ಲ ಸೃಜನಶೀಲ ಮಾಧ್ಯಮಗಳು, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮಾಮೂಲಾಗಿಬಿಟ್ಟಿರುವ “ನೆನ್ನೆ ಮೊನ್ನೆ ಬಂದೋರಿಗೆ ಮಣೆ ಹಾಕ್ತಾರೆ” ಅನ್ನುವವರ ಗೊಣಗಾಟವೂ ನೆನಪಾಗುತ್ತೆ.
ಈ ಎಲ್ಲರ ಗೊಣಗಾಟಕ್ಕೆ ಏಸು ಕೊಟ್ಟ ಉತ್ತರವೇ ಉತ್ತರ. “ಯಾವಾಗ ಬಂದವರಿಗೆ ಯಾವ ಮನ್ನಣೆ ಸಿಗ್ತು ಅನ್ನೋ ತಲೆಬಿಸಿ ನಿಮ್ಗೆ ಬೇಡ. ನಿಮ್ಮ ಕೆಲಸ ನೀವು ಮಾಡ್ತಾ ಹೋಗಿ, ಸಾಕು!”
ಈ ಗೊಣಗುವವರ ಸಾಲಲ್ಲಿ ನಾವೂ ಇರಬಹುದು. ‘ನಾನ್ ಅವಾಗಿಂದ ನಿಂತಿದೀನಿ’, ‘ನಾನ್ ಅವಾಗಿಂದ ಮಾಡ್ತಿದೀನಿ’, ‘ನಾನ್ ಅವಾಗಿಂದ ನೋಡ್ತಿದೀನಿ’… ಇತ್ಯಾದಿ ಇತ್ಯಾದಿ. ಇಂಥ ಹೊತ್ತಲ್ಲೆಲ್ಲ ನಮ್ಮ ಅಸಹನೆ, ಬೇರೆಯವರಿಗೆ ನಮಗಿಂತ ಮೊದಲು ಅಥವಾ ಹೆಚ್ಚು ಸಿಕ್ಕುಬಿಡ್ತು ಅನ್ನೋದಷ್ಟೇ. ನಮಗೆ ಎಷ್ಟು ನಿಕ್ಕಿಯಾಗಿತ್ತೋ ಅಷ್ಟು ಸಿಕ್ಕೇಸಿಗುವುದು. ಅದರಲ್ಲೇನೂ ಮೋಸವಿಲ್ಲ. ಯಾವಾಗ ಸಿಗಬೇಕೋ ಆಗಲೇ ಸಿಗುವುದು. ಅದರಲ್ಲೂ ವಂಚನೆಯಿಲ್ಲ. ಆದ್ರೂ ನಮಗೆ ಅತೃಪ್ತಿ. ಯಾಕಂದ್ರೆ, ನಮಗಿಂತ ಬೇಗ, ನಮಗಿಂತ ಹೆಚ್ಚು ಮತ್ತೊಬ್ರಿಗೆ ಸಿಕ್ಕುಬಿಡ್ತು ಅನ್ನೋದು!
ಹಿಂದಿಯಲ್ಲೊಂದು ಹೇಳಿಕೆ ಇದೆ. “ವಕ್ತ್ ಸೆ ಪೆಹಲೇ ಕಿಸ್ಮತ್ ಸೆ ಜ್ಯಾದಾ ನ ಕಭಿ ಕಿಸೀ ಕೋ ಮಿಲಾ ಹೈ, ನ ಮಿಲೇಗಾ” ಅಂತ. ಯಾವಾಗ ಏನಾಗ್ಬೇಕೋ ಅದು ಆಗೇ ಆಗುತ್ತೆ. ಏನಾಗ್ಬೇಕೋ ಅದೇ ಆಗುತ್ತೆ! ಚೂರೂ ಹೆಚ್ಚಿಲ್ಲ, ಚೂರೂ ಕಡಿಮೇನೂ ಇಲ್ಲ.
ನಾವು ಇಂತಿಷ್ಟು ದಿನಗೂಲಿಗೆ ನಮ್ಮನ್ನ ಒಪ್ಪಿಸಿಕೊಂಡಾಗಿದೆ. ಕೊಟ್ಟ ಕೆಲಸ, ಕೊಡಲಾದ ಸಮಯಕ್ಕೆ ಮಾಡಿ ಮುಗಿಸೋದಷ್ಟೇ ನಮ್ಮ ಜವಾಬ್ದಾರಿ. ಮತ್ಯಾರೋ ಎಷ್ಟು ಮಾಡಿದ್ರು, ಅವರಿಗೆಷ್ಟು ಕೊಟ್ರು – ಇವೆಲ್ಲ ನಮಗೆ ಬೇಡದ ಉಸಾಬರಿ.
ತಡವಾಗಿ ಕೆಲಸ ಶುರು ಮಾಡಿದವರಿಗೂ ಬೇಗ ಶುರು ಮಾಡಿದವರಿಗೆ ಕೊಟ್ಟಷ್ಟೇ ಕೂಲಿ ಕೊಟ್ಟ ಶ್ರೀಮಂತನೇನೂ ತಲೆತಿರುಕನಲ್ಲ. ಹೇಳಿಕೇಳಿ ಅವನೊಬ್ಬ ಬಂಡವಾಳಗಾರ. ಅವನದ್ದೇನೋ ಲೆಕ್ಕಾಚಾರ ಇದ್ದೇ ಇರುತ್ತೆ. ಅವನು ಉದ್ಯೋಗ ಸೃಷ್ಟಿ ಮಾಡಿರ್ತಾನೆ. ಕೂಲಿಯವರಿಗೆ ಸುಖಾಸುಮ್ಮನೆ ದುಡ್ಡು ಕೊಟ್ಟು ಅವನಿಗೇನೂ ಆಗಬೇಕಾದ್ದಿಲ್ಲ. ಹಾಗವನು ತಡವಾಗಿ ಬಂದವರಿಗೂ ಒಂದು ಬೆಳ್ಳಿ ನಾಣ್ಯ ಕೊಟ್ಟಿದ್ದಾನೆ ಅಂದ್ರೆ ಅವನಿಗೇನೋ ಲಾಭವಾಗಿದೆ ಅಂತಲೇ ಅರ್ಥ. ತಡವಾಗಿ ಶುರು ಮಾಡಿದ ಕೆಲಸಗಾರರಿಂದ ಏನು ದಕ್ಕಬೇಕೋ ಅದು ದಕ್ಕಿದೆ ಅಂತಲೇ ಅರ್ಥ. ಬಂಡವಾಳಗಾರರು ಯಾವತ್ತೂ ಪಕ್ಷಪಾತಿಗಳಲ್ಲ. ಅವರದ್ದು ಸದಾ ಕಾಲಕ್ಕೂ ಲಾಭದ ಪಕ್ಷವೇ! ಹೀಗಿರುವಾಗ, ಉಳಿದ ಕೆಲಸಗಾರರು ತಮಗೆ ಕೆಲಸ ಕೊಟ್ಟವನನ್ನು ಪ್ರಶ್ನಿಸೋದು ಎಷ್ಟು ಸರಿ? ಅವ ಇವರಿಗೆ ಕಡಿಮೆ ಕೊಟ್ಟಿದ್ದರೆ ಅದು ಅನ್ಯಾಯ. ಅದು ಶೋಷಣೆ. ಇಲ್ಲಿ ಇವರ ಆಕ್ಷೇಪ, ಅವ ಮತ್ತೊಬ್ಬರಿಗೂ ತಮ್ಮಷ್ಟೇ ಕೂಲಿ ಕೊಟ್ಟ ಅನ್ನೋದು!
ನಮ್ಮ ಆಕ್ಷೇಪ ನಮಗೆ ಕಡಿಮೆ ಸಿಗ್ತು ಅಂತಲ್ಲ. ನಮಗೆ ಅವಕಾಶ ಸಿಗ್ಲಿಲ್ಲ ಅಂತಲ್ಲ. ಇನ್ಯಾರಿಗೋ ಸಿಗ್ತು ಅನ್ನೋದು ನಮ್ಮ ಕೊಸರು. ನನ್ನನ್ನ ಪದ್ಯ ಓದೋಕೆ ಕರೆದಿಲ್ಲ ಅಂತಲ್ಲ, ಅದ್ಯಾರೋ ಇತ್ತೀಚೆಗೆ ಬರೆಯೋರನ್ನೂ ಕರೆದಿದ್ದಾರೆ ಅನ್ನೋದು ನಮ್ಮ ತಕರಾರು. ನನಗೆ ಪ್ರಶಸ್ತಿ ಬಂದಿದ್ದು ಖುಷಿಯಲ್ಲ, ತಡವಾಗಿ ಬೆಳಕಿಗೆ ಬಂದ ಇನ್ನೊಬ್ಬರಿಗೂ ನನ್ನ ಜೊತೆಗೇ ನನಗೆ ಕೊಟ್ಟ ಪ್ರಶಸ್ತಿಯನ್ನೇ ಕೊಟ್ಟಿದ್ದಾರೆ ಅನ್ನೋ ಅಸಮಾಧಾನ! ನನಗೆ ಪ್ರಮೋಶನ್ ಆದ ಸಂಭ್ರಮವನ್ನ ಜ್ಯೂನಿಯರ್ ಒಬ್ಬರಿಗೂ ಪ್ರಮೋಶನ್ ಆದ ಸಂಗತಿ ಕೊಂದೇ ಹಾಕುವುದು. ಒಟ್ಟಾರೆ ನಮಗೆ ಸಿಗಬೇಕಿದ್ದು ಸಿಕ್ಕಿದೆ ಅನ್ನುವುದಕ್ಕಿಂತ ಮತ್ಯಾರಿಗೋ ಅದು ಸಿಗಬಾರದಿತ್ತು ಅನ್ನುವ ಲೆಕ್ಕಾಚಾರ ನಮ್ಮದು.
ಸೀನಿಯಾರಿಟಿ ಅನ್ನುವುದೊಂದು ಕಾಂಪ್ಲೆಕ್ಸ್. ಮೊದಲು ಹುಟ್ಟಿದವರು, ಮೊದಲು ಶುರು ಹಚ್ಚಿದವರು, ಮೊದಲು ಸಾಧನೆ ಮಾಡಿದವರು ಇತ್ಯಾದಿ ಮೊದಲುಗಳ ಲೆಕ್ಕಕ್ಕೆ ಬಿದ್ದು ನಮಗೆ ಹೆಚ್ಚಿನ ಮನ್ನಣೆ ಸಿಗಬೇಕು ಅಂದುಕೊಳ್ಳುವುದು ಸಾಲಿನಲ್ಲಿ ಮೊದಲು ನಿಂತವರ ಅಹಂಕಾರವಷ್ಟೇ. ಈ ಅಹಂಕಾರ ಕಳೆದುಕೊಳ್ಳದ ಹೊರತು ಸಾಧನೆಯ ಸುಖವೂ ಸಿಗೋದಿಲ್ಲ, ಪ್ರತಿಫಲದ ಸವಿಯೂ ನಿಲುಕೋದಿಲ್ಲ.

