ಶ್ರೀ ನಾರಾಯಣ ಗುರು ಜೀವನ ಚರಿತ್ರೆ : ಅಧ್ಯಾಯ 1

ಕುಮಾರನ್ ಆಶಾನ್ ಅವರು ರಚಿಸಿದ ಗುರುಗಳ ಜೀವನ ಚರಿತ್ರೆಯನ್ನು ಅನುವಾದಿಸುವ ಪ್ರಯತ್ನ ಇಲ್ಲಿದೆ. ಹದಿನೈದು ಪುಟ್ಟ ಅಧ್ಯಾಯಗಳ ಈ ಕೃತಿ ನಾರಾಯಣ ಗುರುಗಳ ಬದುಕಿನ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತದೆ. ಪ್ರತಿ ದಿನವೂ ಒಂದೊಂದು ಅಧ್ಯಾಯ ಪ್ರಕಟವಾಗಲಿದೆ.। ಎನ್.ಎ.ಎಂ.ಇಸ್ಮಾಯಿಲ್

ನಾರಾಯಣ ಗುರುಗಳು ಬದುಕಿರುವಾಗಲೇ ಅವರ ಕುರಿತ ಎರಡು ಜೀವನ ಚರಿತ್ರೆಗಳು ಪ್ರಕಟವಾದವುದು. ಇವುಗಳಲ್ಲಿ ಮೊದಲನೆಯದ್ದು ಮಹಾಕವಿ ಕುಮಾರನ್ ಆಶಾನ್ ಅವರ ‘ಶ್ರೀ ನಾರಾಯಣ ಗುರು (ಜೀವಚರಿತ್ರಂ)’. ಮತ್ತೊಂದು ನಟರಾಜ ಗುರುಗಳು ಬರೆದ ‘The way of the guru’. ಎರಡೂ ಕೃತಿಗಳು ಮೊದಲು ಪ್ರಕಟವಾದದ್ದು ನಿಯತಕಾಲಿಕಗಳಲ್ಲಿ. ಕುಮಾರನ್ ಆಶಾನ್ ಅವರ ಕೃತಿ ಅವರೇ ಸಂಪಾದಕರಾಗಿದ್ದ ‘ವಿವೇಕೋದಯಂ’ ಮಾಸ ಪತ್ರಿಕೆಯಲ್ಲಿ 1915ರಲ್ಲಿ ನಿಯತವಾಗಿ ಪ್ರಕಟವಾಯಿತು. ಜಿನೇವಾದಿಂದ ಪ್ರಕಟವಾಗುತ್ತಿದ್ದ The Sufi Quraterly 1928ರಲ್ಲಿ ನಟರಾಜ ಗುರುಗಳ ಬರಹವನ್ನು ಪ್ರಕಟಿಸಿತು. ಕುಮಾರನ್ ಆಶಾನ್ ಅವರ ಕೃತಿ ಮುಂದೆ ಪ್ರಕಟವಾದ ನಾರಾಯಣ ಗುರುಗಳ ಎಲ್ಲಾ ಜೀವನಚರಿತ್ರೆಗಳಿಗೂ ಆಧಾರ ಗ್ರಂಥವಾಗಿ ಪರಿಣಮಿಸಿತು. ನಟರಾಜ ಗುರುಗಳ ಬರಹವಂತೂ ಅನೇಕ ಪಾಶ್ಚಾತ್ಯ ವಿದ್ವಾಂಸರನ್ನೂ ನಾರಾಯಣ ಗುರುಗಳ ವಿಚಾರಧಾರೆಯೆಡೆಗೆ ಆಕರ್ಷಿಸಿತು.

ಕುಮಾರನ್ ಆಶಾನ್

ಕುಮಾರನ್ ಆಶಾನ್ ಜನನ 1873ರ ಏಪ್ರಿಲ್ 15ರಂದು ತಿರುವನಂತಪುರ ಜಿಲ್ಲೆಯ ಕಾಯಿಕ್ಕರ ಎಂಬ ಗ್ರಾಮದಲ್ಲಾಯಿತು. ಇವರ ತಂದೆ ನಾರಾಯಣನ್ ಪೆರುಙಾಡಿ ಮಲಯಾಳಂ ಮತ್ತು ತಮಿಳು ಭಾಷೆಗಳರೆಡರಲ್ಲೂ ನಿಪುಣರಾಗಿದ್ದರು. ಮಲಯಾಳಂನಲ್ಲಿ ಕೀರ್ತನೆಗಳನ್ನು ರಚಿಸಿ ಅವುಗಳನ್ನು ಹಾಡುತ್ತಿದ್ದ ನಾರಾಯಣನ್ ಅವರ ವೃತ್ತಿ ವ್ಯಾಪಾರವಾಗಿತ್ತು. ಸಾಮಾಜಿಕ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದ ಅವರು ಸಹಜವಾಗಿಯೇ ಈಳವ ಸಮುದಾಯವನ್ನು ಪ್ರತಿನಿಧಿಸುವ ಪ್ರಮುಖರಲ್ಲಿ ಒಬ್ಬರಾಗಿದ್ದರು. ಇವರ ಒಂಬತ್ತು ಮಂದಿ ಮಕ್ಕಳಲ್ಲಿ ಕುಮಾರನ್ ಆಶಾನ್ ಎರಡನೆಯವರು. ಕಾವ್ಯ ಮತ್ತು ಸಂಗೀತದಲ್ಲಿ ಆಶಾನ್‌ಗೆ ಆಸಕ್ತಿ ಹುಟ್ಟಿದ್ದೇ ತಂದೆಯಿಂದ ಎನ್ನಬಹುದು. ಬಾಲ್ಯಕಾಲವಿಡೀ ಆಶಾನ್ ಒಂದಲ್ಲಾ ಒಂದು ಕಾಯಿಲೆಯಿಂದ ಬಾಧಿತರಾಗಿದ್ದರು. ಕೌಮಾರ್ಯ ಕಳೆದು ಯೌವ್ವನದ ಹೊಸ್ತಿಲಲ್ಲಿ ಇರುವಾಗಲೂ ಕಾಯಿಗಳು ಕಾಟ ಮುಂದುವರಿದಿತ್ತು. ಆಶಾನ್‌ಗೆ ಸುಮಾರು ಹದಿನೆಂಟು ವರ್ಷಗಳಾಗುತ್ತಿದ್ದ ಹೊತ್ತಿನಲ್ಲಿ ಅವರ ತಂದೆ ನಾರಾಯಣ ಗುರುಗಳನ್ನು ಮನೆಗೆ ಕರೆತಂದರು. ಅಂದೂ ರೋಗ ಪೀಡಿತನಾಗಿ ವಿಶ್ರಾಂತಿಯಲ್ಲಿ  ಆಶಾನ್‌ರನ್ನು ಎಬ್ಬಿಸಿ ಗುರುಗಳು ತಮ್ಮೊಂದಿಗೆ ಕರೆದೊಯ್ದರು. ಗೋವಿಂದನ್ ಆಶಾನ್ ಅವರ ಬಳಿ ಯೋಗ ಮತ್ತು ತಾಂತ್ರಿಕ ವಿದ್ಯೆಗಳನ್ನು ಅಭ್ಯಾಸ ಮಾಡುತ್ತಾ ದೇವಾಲಯವೊಂದರ ಅಂಗಳದಲ್ಲಿ ವಾಸಿಸುತ್ತಿದ್ದಾಗ ಆಶಾನ್‌ರ ಕಾವ್ಯ ರಚನಾ ಕ್ರಿಯೆ ಆರಂಭವಾಯಿತು.

ಆಶಾನ್‌ ಅವರ ಉನ್ನತ ವಿದ್ಯಾಭ್ಯಾಸ ನಡೆಸಿದ್ದು ಬೆಂಗಳೂರು ಮತ್ತು ಕೊಲ್ಕತ್ತಾಗಳಲ್ಲಿ. ನಾರಾಯಣ ಗುರುಗಳ ಆದೇಶದಂತೆ ಬೆಂಗಳೂರಿನಲ್ಲಿದ್ದ ಡಾ. ಪಲ್ಪು ಅವರು ಕುಮಾರನ್ ಆಶಾನ್‌ರ ಉನ್ನತ ಶಿಕ್ಷಣದ ವ್ಯವಸ್ಥೆ ಮಾಡಿದರು. ಬೆಂಗಳೂರಿನ ಚಾಮರಾಜೇಂದ್ರ ಸಂಸ್ಕೃತ ವಿದ್ಯಾಲಯದಲ್ಲಿ ಪ್ರವೇಶ ಪಡೆದ ಆಶಾನ್ ನ್ಯಾಯಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡಿದರು. ಮುಂದೆ 1898ರಲ್ಲಿ ಕೊಲ್ಕೊತ್ತಾಕ್ಕೆ ಹೋಗಿ ಅಲ್ಲಿನ ಸಂಸ್ಕೃತ ವಿದ್ಯಾಲಯದಲ್ಲಿ ಅಧ್ಯಯನ ಪೂರ್ಣಗೊಳಿಸಿದರು. ಕೊಲ್ಕೊತ್ತಾದಿಂದ ಗುರುಗಳ ಆದೇಶದಂತೆ ಅರುವಿಪ್ಪುರಕ್ಕೆ ಬಂದ ಆಶಾನ್ ತಮ್ಮ ಕಾವ್ಯ ರಚನೆಯ ಜೊತೆಗೆ ಸಾಮಾಜಿಕ ಸುಧಾರಣಾ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡರು.

1903ರಲ್ಲಿ ಗುರುಗಳು ಶ್ರೀ ನಾರಾಯಣ ಧರ್ಮಪರಿಪಾಲನ ಯೋಗಂ ಆರಂಭಿಸಿದಾಗ ಅದರ ಸ್ಥಾಪಕ ಕಾರ್ಯದರ್ಶಿಯಾಗಿ ನೇಮಕಗೊಂಡರು. 1904ರಲ್ಲಿ ಆಶಾನ್ ತಮ್ಮದೇ ಸಂಪಾದಕತ್ವದಲ್ಲಿ ಸಂಸ್ಥೆಯ ಮುಖವಾಣಿಯಾದ ‘ವಿವೇಕೋದಯಂ’ನ ಪ್ರಕಟಣೆಗೆ ಮುಂದಾದರು. ಗುರುಗಳ ಜೀವನ ಚರಿತ್ರೆ ಮೊದಲು ಪ್ರಕಟವಾದದ್ದು ಇದೇ ಪತ್ರಿಕೆಯಲ್ಲಿ. ತಮ್ಮ ಖಂಡಕಾವ್ಯಗಳ ಮೂಲಕ ಮಲಯಾಳಂ ಕಾವ್ಯದ ಇತಿಹಾಸದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುವ ಕುಮಾರನ್ ಆಶಾನ್‌ ಅವರಿಗೆ ಮಹಾಕವಿ ಎಂಬ ಬಿರುದೂ ಇದೆ. ಅವರು ತಮ್ಮ 51ನೇ ವಯಸ್ಸಿನಲ್ಲಿ (1924ರ ಜನವರಿ 16) ಪಲ್ಲನ ಎಂಬಲ್ಲಿ ಸಂಭವಿಸಿದ ದೋಣಿದುರಂತದಲ್ಲಿ ಮೃತಪಟ್ಟರು.

ಕುಮಾರನ್ ಆಶಾನ್ ಅವರು ರಚಿಸಿದ ಗುರುಗಳ ಜೀವನ ಚರಿತ್ರೆಯನ್ನು ಅನುವಾದಿಸುವ ಪ್ರಯತ್ನ ಇಲ್ಲಿದೆ. ಹದಿನೈದು ಪುಟ್ಟ ಅಧ್ಯಾಯಗಳ ಈ ಕೃತಿ ನಾರಾಯಣ ಗುರುಗಳ ಬದುಕಿನ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತದೆ. ಪ್ರತಿ ದಿನವೂ ಒಂದೊಂದು ಅಧ್ಯಾಯ ಪ್ರಕಟವಾಗಲಿದೆ.


ಅಧ್ಯಾಯ ಒಂದು

ನಾರಾಯಣ ಗುರುಗಳು ಜನಿಸಿದ ಮನೆ

ತಿರುವನಂತಪುರದಿಂದ ಉತ್ತರಕ್ಕೆ ಮೂರು ಮೈಲು ದೂರದಲ್ಲಿ ಪ್ರಸಿದ್ಧವಾದ ಉಳ್ಳೂರು ಸುಬ್ರಹ್ಮಣ್ಯ ಕ್ಷೇತ್ರವಿದೆ. ಅಲ್ಲಿಂದ ಈಶಾನ್ಯಾಭಿಮುಖವಾಗಿ ಎರಡು ಮೈಲುಗಳಷ್ಟು[1] ಸಾಗಿದರೆ ಚೆಂಬಳಂತಿ ಎಂಬ ಇತಿಹಾಸ ಪ್ರಸಿದ್ಧವಾದ ಹಳೆಯ ಗ್ರಾಮವೊಂದಿದೆ. ಅಲ್ಲಿರುವ ಪುರಾತನವಾದ ಈಳವ ಕುಟುಂಬವೊಂದರಲ್ಲಿ ಮಲಯಾಳ ವರ್ಷ 1032ರ ಸಿಂಹ ಮಾಸದ ಶತಭಿಷಾ ನಕ್ಷತ್ರದಲ್ಲಿ (20, ಆಗಸ್ಟ್ 1856) ಸ್ವಾಮಿಗಳ ಜನನವಾಯಿತು. ತಂದೆ ತಾಯಿಗಳು ಸದಾಚಾರವಂತರೂ ದೈವಭಕ್ತಿಯುಳ್ಳವರಾಗಿದ್ದರು. ತಂದೆ ಮಾಡನ್ ಆಶಾನ್ ಶಿಕ್ಷಕರು. ಸೋದರ ಮಾವ ಕೃಷ್ಣನ್ ವೈದ್ಯನ್ ಚಿಕಿತ್ಸಕರಾಗಿದ್ದರು.

ಸ್ವಾಮಿಗಳಿಗೆ ಮೂವರು ಸೋದರಿಯರಿದ್ದರು. ಬಾಲಕನಾಗಿದ್ದಾಗ ಸ್ವಾಮಿಗಳು ಶಾಂತ ಸ್ವಭಾವದವರೇನೂ ಆಗಿರಲಿಲ್ಲ. ಸುಲಭದಲ್ಲಿ ಮುನಿಸಿಕೊಳ್ಳುವ ಬಾಲಕ. ಹಾಗೆಂದು ತುಂಟತನವೇನೂ ಕಡಿಮೆಯಿರಲಿಲ್ಲ ಎಂದೂ ಹೇಳಬಹುದು. ಮನೆಯಲ್ಲಿ ಪೂಜೆಗಾಗಿ ತೆಗೆದಿರಿಸಿದ್ದ ಹಣ್ಣು ಮತ್ತು ತಿನಿಸುಗಳನ್ನು ಪೂಜೆ ಮುಗಿಯುವ ಮುನ್ನವೇ ತಿನ್ನುವುದಕ್ಕೆ ಈ ಬಾಲಕನಿಗೆ ಎಲ್ಲಿಲ್ಲದ ಉತ್ಸಾಹ. ‘ನನಗೆ ಸಂತೋಷವಾದರೆ ದೇವರಿಗೂ ಸಂತೋಷ’ ಎಂದು ವಾದಕ್ಕಿಳಿಯುವುದಷ್ಟೇ ಅಲ್ಲದೆ ತಡೆಯಲು ಬರುವವರನ್ನು ಸೋಲಿಸುವುದರಲ್ಲೂ ನಿಷ್ಣಾತ.

ಯಾರನ್ನು ಮುಟ್ಟಿಸಿಕೊಳ್ಳಬಾರದು ಎಂದು ಹಿರಿಯರು ಹೇಳುತ್ತಿದ್ದರೋ ಆ ಕೆಳಜಾತಿಯವರು ದೂರದಲ್ಲಿ ಕಂಡರೂ ಅವರತ್ತ ಓಡಿ ಹೋಗಿ ಮುಟ್ಟಿ ಬಂದು ಸ್ನಾನ ಮಾಡದೆಯೇ ಅಡುಗೆ ಮನೆಗೆ ನುಗ್ಗಿ ಹೆಂಗಸರನ್ನು, ಅತಿಯಾದ ಮಡಿ ಆಚರಿಸುವ ಗಂಡಸರನ್ನು ಮುಟ್ಟಿ ಮೈಲಿಗೆ ಮಾಡುವುದು ಈ ಬಾಲಕನಿಗೆ ಬಹಳ ಇಷ್ಟದ ಆಟವಾಗಿತ್ತು. ಬುದ್ಧಿವಂತನೂ ಸುಂದರನೂ ಮನೆತನದ ಏಕೈಕ ಗಂಡು ಸಂತಾನವೂ ಆಗಿದ್ದ ಈ ಬಾಲಕನ ತನ್ನ ಈ ಬಗೆಯ ತುಂಟತನಗಳಿಗಾಗಿ ತಂದೆ ತಾಯಿಗಳಿಂದ ಯಾವತ್ತೂ ಪೆಟ್ಟು ತಿನ್ನಲಿಲ್ಲ.


1 ಮೂಲದಲ್ಲಿ ಬಳಸಿರುವ ಪದ “ನಾಳಿಕ”. ಸಮಯ ಮತ್ತು ದೂರಗಳ ಗಣನೆಗೆ ಇದನ್ನು ಪ್ರಮಾಣವಾಗಿ ಬಳಸುವುದು ಮಲಯಾಳಂನಲ್ಲಿ ಸಾಮಾನ್ಯ. ಇಂಗ್ಲಿಷ್ ಅನುವಾದಕ್ಕೆ ‘Mile’ಅನ್ನು ಬಳಸಲಾಗಿದೆ. ಅದನ್ನೇ ಇಲ್ಲಿ ಬಳಸಿಕೊಂಡಿದ್ದೇನೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ