ಕುಮಾರನ್ ಆಶಾನ್ ಅವರು ರಚಿಸಿದ ಗುರುಗಳ ಜೀವನ ಚರಿತ್ರೆಯನ್ನು ಅನುವಾದಿಸುವ ಪ್ರಯತ್ನ ಇಲ್ಲಿದೆ. ಹದಿನೈದು ಪುಟ್ಟ ಅಧ್ಯಾಯಗಳ ಈ ಕೃತಿ ನಾರಾಯಣ ಗುರುಗಳ ಬದುಕಿನ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತದೆ. ಈ ಸರಣಿಯ ಮೂರನೇ ಅಧ್ಯಾಯ ಇಲ್ಲಿದೆ…। ಎನ್.ಎ.ಎಂ.ಇಸ್ಮಾಯಿಲ್
ಸ್ವಾಮಿಗಳ ಬುದ್ಧಿಮತ್ತೆ ಮತ್ತು ನೆನಪಿನ ಶಕ್ತಿಗಳು ಆ ದಿನಗಳಲ್ಲೇ ಒಂದು ದಂತಕತೆಯಾಗಿತ್ತು. ಒಮ್ಮೆ ಓದಿದ ಪುಸ್ತಕ ಅಥವಾ ಕೇಳಿಸಿಕೊಂಡ ವಿಷಯವನ್ನು ಅವರು ಮರೆಯುತ್ತಿರಲಿಲ್ಲ. ಎರಡೇ ವರ್ಷಗಳ ಅವಧಿಯಲ್ಲಿ ಕಾವ್ಯ, ನಾಟಕ, ಅಲಂಕಾರಗಳಲ್ಲಿ ಪರಿಣಿತಿಯನ್ನು ಪಡೆದು ಗುರುದಕ್ಷಿಣೆಯನ್ನರ್ಪಿಸಿ ಅಲ್ಲಿನ ಕಲಿಕೆಯನ್ನು ಮುಗಿಸಿದರು.
ಹಿಂದಿನ ಅಧ್ಯಾಯ ಇಲ್ಲಿದೆ : https://aralimara.com/2024/07/23/guru-34/ ಮುಂದೆ ಓದಿ…
ಅಧ್ಯಾಯ ಮೂರು
ಮನೆಗೆ ಹಿಂದಿರುಗಿದ ನಂತರ ಕಾಯಿಲೆ ಬಹುಬೇಗ ವಾಸಿಯಾಯಿತು. ಕೆಲಕಾಲ ಚೆಂಬಳಂತಿಯಲ್ಲೇ ಇದ್ದ ಸ್ವಾಮಿಗಳು ಮಕ್ಕಳಿಗೆ ಓದು-ಬರಹ ಕಲಿಸುವುದರಲ್ಲಿ ತೊಡಗಿಸಿಕೊಂಡರು. ಇದರಿಂದಾಗಿ ಅವರಿಗೆ ‘ನಾಣು ಆಶಾನ್’ ಎಂಬ ಹೆಸರು ಬಂತು. ದಿನ ಕಳೆದಂತೆ ಸ್ವಾಮಿಗಳಿಗೆ ದೈವಭಕ್ತಿ ಹೆಚ್ಚುತ್ತಲೇ ಹೋಯಿತು. ಲೌಕಿಕ ಬದುಕಿನ ಆಸಕ್ತಿ ಕಡಿಮೆಯಾಗುತ್ತಾ ಬಂತು. ಆ ದಿನಗಳಲ್ಲಿ ಅವರು ‘ಗೀತಗೋವಿಂದ’ವೆಂಬ ಸಂಸ್ಕೃತ ಗ್ರಂಥವನ್ನು ಪ್ರತಿನಿತ್ಯವೂ ಪಾರಾಯಣ ಮಾಡುತ್ತಿದ್ದರೆಂದು ಹೇಳಲಾಗುತ್ತದೆ.
ಈ ನಡುವೆ ತಂದೆ-ತಾಯಿಗಳು ಮತ್ತು ಸಂಬಂಧಿಕರ ಒತ್ತಡದಿಂದ ಅವರು ಮದುವೆಯಾಗಬೇಕಾಯಿತು. ಆದರೆ ವಿಷಯ ಸುಖಗಳಿಗೆ ಸ್ವಾಮಿಗಳನ್ನು ಸೋಲಿಸಲಾಗಲಿಲ್ಲ. ಹೀಗಿರುವಾಗ ತಾಯಿಯೂ ಇಹಲೋಕ ತ್ಯಜಿಸಿದರು. ಮಲಯಾಳ ವರ್ಷ 1060ರಲ್ಲಿ (ಕ್ರಿ.ಶ.1885) ತಂದೆಯೂ ಕಾಲವಾದರು. ಆ ಹೊತ್ತಿಗಾಗಲೇ ಸ್ವಾಮಿಗಳು ದಾಂಪತ್ಯದ ಬಂಧನವನ್ನು ಕಳಚಿಕೊಂಡಿದ್ದರು. ಮಾತಾಪಿತರ ಅಗಲುವಿಕೆಯು ಅವರಿಗೆ ಕೌಟುಂಬಿಕ ಬಂಧನದಿಂದಲೂ ವಿಮೋಚಿತನಾಗುವ ಅವಕಾಶ ಕಲ್ಪಿಸಿತು.
ಕುಟುಂಬದ ಹಿರಿಯರು ಮನೆಯ ಯಜಮಾನಿಕೆಯನ್ನು ನಿರ್ವಹಿಸಬೇಕೆಂಬ ಒತ್ತಡ ಹೇರಿದರು. ಆ ಹೊತ್ತಿಗಾಗಲೇ ಸ್ವಾಮಿಗಳು ಧಾರ್ಮಿಕ ವಿಚಾರಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಸಂಕಲ್ಪ ಮಾಡಿ ದೃಢನಿರ್ಧಾರ ಕೈಗೊಂಡದ್ದರಿಂದ ಒತ್ತಡಗಳು ಯಾವ ಪರಿಣಾಮವನ್ನೂ ಬೀರಲಿಲ್ಲ. ನಂತರದ ದಿನಗಳಲ್ಲಿ ಅವರು ಮನೆಯಲ್ಲಿ ವಾಸಿಸಲೇ ಇಲ್ಲ. ಹತ್ತಿರವಿದ್ದ ಜನವಸತಿ ಇಲ್ಲದ ಗುಡ್ಡಗಳು, ಬಂಡೆಗಳ ನಡುವಣ ಗುಹೆಗಳು, ಸಮುದ್ರ ತೀರಗಳು, ದೇಗುಲಗಳು ಮತ್ತು ಎಲ್ಲೆಲ್ಲಿ ಏಕಾಂತ ಸಾಧ್ಯವೋ ಅಲ್ಲೆಲ್ಲಾ ಸ್ವಾಮಿಗಳು ಧ್ಯಾನಸ್ಥರಾಗಿ ಹಗಲು ರಾತ್ರಿಯೆನ್ನದೇ ಕುಳಿತಿರುವುದನ್ನೂ ಏಕಾಂಗಿಯಾಗಿ ಸಂಚರಿಸುತ್ತಿದ್ದುದನ್ನೂ ಅನೇಕರು ಕಂಡಿದ್ದರು.
‘ಪ್ರಾಚೀನ ಮಲಯಾಳಂ’ ಮುಂತಾದ ಕೃತಿಗಳ ಕರ್ತೃವಾದ ಕುಂಞನ್ಪಿಳ್ಳ ಚಟ್ಟಂಬಿ ಎಂಬ ಮಹಾನುಭಾವರನ್ನು ಸ್ವಾಮಿಗಳು ಪರಿಚಯಿಸಿಕೊಂಡದ್ದು ಈ ದಿನಗಳಲ್ಲೇ. ಅವರ ಮೂಲಕ ತಿರುವನಂತಪುರದ “ತೈಕ್ಕಾಟ್ಟ್ ಅಯ್ಯಾವು” ಎಂದು ಹೆಸರಾಗಿದ್ದ ಸುಬ್ರಹ್ಮಣ್ಯಸ್ವಾಮಿಯ ಭಕ್ತನೂ ಯೋಗಿಯೂ ಆಗಿದ್ದ ಗುರುವೊಬ್ಬರು ಸಿಕ್ಕರು. ಇವರ ಬಳಿ ಸ್ವಾಮಿಗಳು ಯೋಗಾಭ್ಯಾಸವನ್ನು ಕಲಿತರು. ಅವರು ಸುಬ್ರಹ್ಮಣ್ಯೋಪಾಸನೆಯಲ್ಲಿ ತೊಡಗಿದ್ದೂ ಗುರುಗಳ ಪ್ರೇರಣೆಯಿಂದಲೇ ಆಗಿತ್ತು. ಹೀಗೇ ಮುಂದಿನ ಎರಡು ಮೂರು ವರ್ಷಗಳ ಕಾಲ ಯೋಗಾಭ್ಯಾಸದಲ್ಲಿ ತೊಡಗಿಕೊಂಡ ಸ್ವಾಮಿಗಳ ಸಂಚಾರ ಮತ್ತು ವಾಸವು ತಮ್ಮ ಊರಿನ ಸುತ್ತಮುತ್ತಲಿನ ಪ್ರದೇಶಗಳಿಗೆ ಸೀಮಿತವಾಗಿತ್ತು.
ಕೆಲಕಾಲ ಸಮುದ್ರ ತೀರದಲ್ಲೊಂದು ಗುಡಿಸಲು ನಿರ್ಮಿಸಿ ವಾಸಿಸಿದ ಸ್ವಾಮಿಗಳು ಮುಂದೆ ಅಂಜುತೆಂಙು ಎಂಬಲ್ಲಿದ್ದ ಹಳೆಯ ದೇಗುಲವೊಂದರಲ್ಲಿ ಉಳಿದುಕೊಂಡಿದ್ದರು. ಈ ದಿನಗಳಲ್ಲಿ ಅವರು ತಮಗೆ ತೋಚಿದಾಗ ಆಸಕ್ತರಿಗೆ ಸಂಸ್ಕೃತಾಭ್ಯಾಸ ಮಾಡಿಸಿದ್ದೂ ಉಂಟು. ಆದರೂ ಸ್ವಾಮಿಗಳು ಸ್ಥಿರವಾಗಿ ಒಂದೆಡೆ ಇರುವ ಕಾಲ ಅದಾಗಿರಲಿಲ್ಲ. ಕೆಲಕಾಲ ಆ ಪ್ರದೇಶದಲ್ಲೆಲ್ಲೂ ಕಾಣಿಸಿಕೊಳ್ಳದ ಅವರು ಪಳನಿ ಮುಂತಾದ ದಕ್ಷಿಣ ಭಾರತದ ಪ್ರಸಿದ್ಧ ತೀರ್ಥಯಾತ್ರಾ ಕ್ಷೇತ್ರಗಳನ್ನು ಸಂದರ್ಶಿಸಿದರು. ಈ ಸಂಚಾರದ ಅವಧಿಯಲ್ಲಿ ಅವರಿಗೆ ಭಿಕ್ಷಾನ್ನವೇ ಆಹಾರ, ಹಾದಿಯಲ್ಲಿ ಸಿಕ್ಕ ದೇಗುಲಗಳೇ ರಾತ್ರಿ ಕಳೆಯುವ ಸ್ಥಳಗಳಾಗಿದ್ದವು. ಈ ದಿನಗಳಲ್ಲಿ ಸ್ವಾಮಿಗಳು ಹಲವು ಆಪತ್ತುಗಳನ್ನು ಎದುರಿಸಿ ಅದರಿಂದ ಪವಾಡ ಸದೃಶವಾಗಿ ಪಾರಾದ ಕುರಿತು ಹಲವು ಕತೆಗಳು ಜನಜನಿತವಾಗಿವೆ.
(ಮುಂದುವರಿಯುವುದು…)


[…] ಅಧ್ಯಾಯ ಇಲ್ಲಿದೆ : https://aralimara.com/2024/07/24/guru-35/ | ಮುಂದೆ […]
LikeLike