ಶ್ರೀ ನಾರಾಯಣ ಗುರು ಜೀವನಚರಿತ್ರೆ : ಅಧ್ಯಾಯ4

ಕುಮಾರನ್ ಆಶಾನ್ ಅವರು ರಚಿಸಿದ ಗುರುಗಳ ಜೀವನ ಚರಿತ್ರೆಯನ್ನು ಅನುವಾದಿಸುವ ಪ್ರಯತ್ನ ಇಲ್ಲಿದೆ. ಹದಿನೈದು ಪುಟ್ಟ ಅಧ್ಯಾಯಗಳ ಈ ಕೃತಿ ನಾರಾಯಣ ಗುರುಗಳ ಬದುಕಿನ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತದೆ. ಈ ಸರಣಿಯ ನಾಲ್ಕನೇ ಅಧ್ಯಾಯ ಇಲ್ಲಿದೆ…। ಎನ್.ಎ.ಎಂ.ಇಸ್ಮಾಯಿಲ್

ಕೆಲಕಾಲ ಸಮುದ್ರ ತೀರದಲ್ಲೊಂದು ಗುಡಿಸಲು ನಿರ್ಮಿಸಿ ವಾಸಿಸಿದ ಸ್ವಾಮಿಗಳು ಮುಂದೆ ಅಂಜುತೆಂಙು ಎಂಬಲ್ಲಿದ್ದ ಹಳೆಯ ದೇಗುಲವೊಂದರಲ್ಲಿ ಉಳಿದುಕೊಂಡಿದ್ದರು. ಈ ದಿನಗಳಲ್ಲಿ ಅವರು ತಮಗೆ ತೋಚಿದಾಗ ಆಸಕ್ತರಿಗೆ ಸಂಸ್ಕೃತಾಭ್ಯಾಸ ಮಾಡಿಸಿದ್ದೂ ಉಂಟು. ಆದರೂ ಸ್ವಾಮಿಗಳು ಸ್ಥಿರವಾಗಿ ಒಂದೆಡೆ ಇರುವ ಕಾಲ ಅದಾಗಿರಲಿಲ್ಲ.

ಹಿಂದಿನ ಅಧ್ಯಾಯ ಇಲ್ಲಿದೆ : https://aralimara.com/2024/07/24/guru-35/ | ಮುಂದೆ ಓದಿ…


ಅಧ್ಯಾಯ ನಾಲ್ಕು

ಬಹಳ ದಿನಗಳ ನಂತರ ಸ್ವಾಮಿಗಳು ಮತ್ತೆ ತಮ್ಮೂರಿಗೆ ಹಿಂದಿರುಗಿದರು. ಈ ಹೊತ್ತಿಗಾಗಲೇ ಸ್ವಾಮಿಗಳು ಕೇರಳದ ನಾನಾ ಭಾಗಗಳಲ್ಲಿ ಯಾವುದೇ ಗುರುತುಗಳಿಲ್ಲದೆ ಏಕಾಂಗಿಯಾಗಿ ಸಂಚರಿಸಿದ್ದರು. ದೃಢ ಬ್ರಹ್ಮಚರ್ಯ, ತಪಸ್ಸು ಮತ್ತು ಯೋಗಾಭ್ಯಾಸಗಳು ಕ್ರಮೇಣ ಅದ್ಭುತ ಎನ್ನಬಹುದಾದ ಫಲವನ್ನು ಕೊಡಲಾರಂಭಿಸಿದವು. ಸ್ವಾಮಿಗಳು ಹೋದಲ್ಲೆಲ್ಲಾ ಅವರ ಬಳಿಗೆ ಕುಷ್ಠ ಮೊದಲಾದ ಮಹಾರೋಗಗಳಿಂದ ಬಾಧಿತರಾದವರು ಬರುತ್ತಿದ್ದರು. ಹೀಗೆ ತಮ್ಮ ಬಳಿ ಬಂದವರಿಗೆ ಸ್ವಾಮಿಗಳು ಯಾವುದಾದರೊಂದು ಹಸಿರೆಲೆಯ ಮೂಲಿಕೆ ಅಥವಾ ತಿನ್ನುವ ಪದಾರ್ಥವನ್ನು ಕೊಟ್ಟು ರೋಗಗಳನ್ನು ವಾಸಿಯಾಗುವಂತೆ ಮಾಡುತ್ತಿದ್ದರು. ಬ್ರಹ್ಮರಾಕ್ಷಸನ ಬಾಧೆ, ಅಪಸ್ಮಾರ ಮುಂತಾದುವುಗಳಿಂದ ಬಹುಕಾಲ ಕಷ್ಟ ಅನುಭವಿಸಿದ್ದ ಅನೇಕರಿಗೆ ಸ್ವಾಮಿಗಳ ದರ್ಶನವೇ ಶಾಶ್ವತ ಪರಿಹಾರವನ್ನೂ ಕಲ್ಪಿಸಿತು. ಅನೇಕ ಕುಟ್ಟಿಚ್ಚಾತ್ತನ್ ಬಾಧೆಯನ್ನು ಸ್ವಾಮಿಗಳು ನಿವಾರಿಸಿದ್ದರು.

ವಿವಿಧ ಹಿಂದೂ ಜಾತಿಗಳ, ದೊಡ್ಡ ಮನೆತನಗಳ ಸಂತಾನವಿಲ್ಲದ ಹೆಣ್ಣು ಮಕ್ಕಳು ಸ್ವಾಮಿಗಳ ಕೈಯ್ಯಿಂದ ಹಣ್ಣನ್ನು ಪಡೆದು ತಿಂದ ಮೇಲೆ ಅಥವಾ ಅವರ ಆಶೀರ್ವಚನಗಳನ್ನು ಆಲಿಸಿದ ನಂತರ ಮಕ್ಕಳನ್ನು ಹೆತ್ತು ಹೊಸ ಬದುಕನ್ನು ಪಡೆದುಕೊಂಡಿದ್ದರು. ಕುಡಿತವನ್ನು ಬಿಡುವುದೇ ಇಲ್ಲವೆಂದು ಭಾವಿಸಿದ್ದ ಅನೇಕರು ಕುಡಿತವನ್ನು ನಿಲ್ಲಿಸುವಂತೆ ಮಾಡಿದ ಖ್ಯಾತಿ ಸ್ವಾಮಿಗಳದ್ದು.

ಕೆಲವರು ಸ್ವಾಮಿಗಳ ಮಾತನ್ನು ಉಲ್ಲಂಘಿಸಿ ಮತ್ತೆ ಕುಡಿಯಲು ಹೊರಟರು. ಆದರೆ ಅವರು ಮದ್ಯವನ್ನು ಕಂಡಾಗಲೇ ವಾಂತಿ ಮಾಡಿಕೊಂಡ ಪ್ರಸಂಗಗಳೂ ಇವೆ. ಸ್ವಾಮಿಗಳ ಪವಾಡಗಳನ್ನೂ ಸಾತ್ವಿಕ ನಿಷ್ಠೆಯನ್ನೂ ಕಂಡ ಜನರು ಅವರನ್ನು ದೇವರೆಂದೇ ಭಾವಿಸಿ ಹರಕೆಗಳನ್ನು ಹೇಳಿಕೊಂಡು ರೋಗ ನಿವಾರಣೆ ಮುಂತಾದ ಫಲಗಳನ್ನು ಪಡೆದದ್ದೂ ಉಂಟು.

ತಾರುಣ್ಯ ಸಹಜವಾದ ಸುಂದರ ಮುಖಭಾವದ ಜೊತೆಗೆ ಶಾಂತ ಹೃದಯವನ್ನೂ ಹೊಂದಿದ್ದ ಸ್ವಾಮಿಗಳು ಎಷ್ಟೇ ಜನರ ಮಧ್ಯೆ ಇದ್ದರೂ ಎದ್ದು ಕಾಣುವಂತ ವ್ಯಕ್ತಿತ್ವವನ್ನು ಹೊಂದಿದ್ದರು. ಯೋಗಶಕ್ತಿಯಿಂದ ಉಜ್ವಲವಾಗಿದ್ದ ಮುಖದಲ್ಲಿದ್ದ ವಿಶಿಷ್ಟ ತೇಜಸ್ಸು ಅವರ ವೈಶಿಷ್ಟ್ಯವನ್ನು ಸಾರಿ ಹೇಳುತ್ತಿತ್ತು. ಸ್ವಾಮಿಗಳು ಜನಸಮೂಹದಿಂದ ದೂರವಾಗಿ ಏಕಾಂಗಿಯಾಗಿ ಸಂಚರಿಸುವುದು ಹೆಚ್ಚಾಗಿತ್ತು. ಯಾವುದಾದರೂ ಹಳ್ಳಿ ಅಥವಾ ಪಟ್ಟಣದಲ್ಲಿ ಸ್ವಾಮಿಗಳು ಕಾಣಿಸಿಕೊಂಡರೆ ದರ್ಶನಕ್ಕಾಗಿ ಜನರು ಗುಂಪುಗೂಡುವುದು ಸಾಮಾನ್ಯವಾಗಿತ್ತು.

ಆ ದಿನಗಳಲ್ಲಿ ಸ್ವಾಮಿಗಳು ಸಂಸ್ಕೃತದಲ್ಲೂ ಮಲಯಾಳಂನಲ್ಲೂ ಸುಂದರವಾದ ಸುಬ್ರಹ್ಮಣ್ಯ ಸ್ತೋತ್ರಗಳನ್ನು ರಚಿಸಿದರು. ಪಾಶ್ಚಾತ್ಯ ಶಿಕ್ಷಣದ ಆವಿರ್ಭಾವದೊಂದಿಗೆ ನಾಡನ್ನು ಬಾಧಿಸುತ್ತಿದ್ದ ನಾಸ್ತಿಕ ವಿಚಾರಗಳಿಗೆ ಸ್ವಾಮಿಗಳ ಬದುಕೇ ಹಲವರ ಮಟ್ಟಿಗೆ ಒಂದು ಪರಿಹಾರವಾಗಿದ್ದು ಇಲ್ಲಿ ಉಲ್ಲೇಖಿಸಲೇಬೇಕಾದ ಸಂಗತಿ.

ಈ ಕಾಲಘಟ್ಟದಲ್ಲಿ ಸ್ವಾಮಿಗಳು ಆಹಾರ ಪಾನೀಯಗಳ ವಿಷಯದಲ್ಲಿ ಯಾವುದೇ ಭೇದಭಾವವನ್ನು ತೋರುತ್ತಿರಲಿಲ್ಲ. ಜಾತಿ ಭೇದವನ್ನಂತೂ ಅವರು ಎಂದೂ ಆಚರಿಸಲಿಲ್ಲ. ಯಾರು ಏನನ್ನು ಕೊಟ್ಟರೂ ತಿನ್ನುತ್ತಿದ್ದರು. ಹೀಗಾಗಿ ಹಲವು ಬಾರಿ ವಿಷಪೂರಿತ ಆಹಾರವನ್ನು ಸೇವಿಸಿಯೂ ಏನೂ ಆಗದವರಂತೆ ಇರುತ್ತಿದ್ದರೆಂದು ಹೇಳುವುದುಂಟು.


(ಮುಂದುವರಿಯುವುದು…)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.