ಶ್ರೀ ನಾರಾಯಣ ಗುರು ಜೀವನಚರಿತ್ರೆ : ಅಧ್ಯಾಯ 8

ಕುಮಾರನ್ ಆಶಾನ್ ಅವರು ರಚಿಸಿದ ಗುರುಗಳ ಜೀವನ ಚರಿತ್ರೆಯನ್ನು ಅನುವಾದಿಸುವ ಪ್ರಯತ್ನ ಇಲ್ಲಿದೆ. ಹದಿನೈದು ಪುಟ್ಟ ಅಧ್ಯಾಯಗಳ ಈ ಕೃತಿ ನಾರಾಯಣ ಗುರುಗಳ ಬದುಕಿನ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತದೆ. ಈ ಸರಣಿಯ 8ನೇ ಅಧ್ಯಾಯ ಇಲ್ಲಿದೆ…। ಎನ್.ಎ.ಎಂ.ಇಸ್ಮಾಯಿಲ್

ತಿರುವಿದಾಂಕೂರು ಮತ್ತು ಉತ್ತರ ತಿರುವಿದಾಂಕೂರಿನ ಹಲವು ಪ್ರದೇಶಗಳ ಜನರ ಅಪೇಕ್ಷೆಯ ಮೇರೆಗೆ ಸ್ವಾಮಿಗಳು ಹಲವು ದೇಗುಲ ಪ್ರತಿಷ್ಠಾಪನೆ ಮಾಡಿದರು. ಈ ಎಲ್ಲಾ ದೇಗುಲಗಳಲ್ಲಿಯೂ ಸುಧಾರಿತ ಆರಾಧನಾ ಕ್ರಮಗಳಲ್ಲಿಯೇ ಪೂಜಾದಿ ಕ್ರಿಯೆಗಳು ನಡೆಯುವ ವ್ಯವಸ್ಥೆಯೂ ಆಯಿತು.

ಹಿಂದಿನ ಅಧ್ಯಾಯ ಇಲ್ಲಿದೆ : https://aralimara.com/2024/07/28/guru-39/  ಮುಂದೆ ಓದಿ…  


ಅಧ್ಯಾಯ ಎಂಟು

ಮಲಯಾಳ ವರ್ಷ 1078ರ ಧನು ಮಾಸದ 23ನೇ ದಿನ (ಜನವರಿ 3, 1903) ಸ್ವಾಮಿಗಳು ಮತ ಮತ್ತು ಸಮುದಾಯಕ್ಕೆ ಸಂಬಂಧಿಸಿದ ತಮ್ಮ ಚಿಂತನೆಗಳ ಅನುಷ್ಠಾನಕ್ಕಾಗಿ “ಶ್ರೀ ನಾರಾಯಣ ಧರ್ಮಪರಿಪಾಲನ ಯೋಗಂ” ಎಂಬ ಸಂಘಟನೆಯನ್ನು ಸ್ಥಾಪಿಸಿದರು.  “ಅರುವಿಪ್ಪುರಂ ಕ್ಷೇತ್ರ ಯೋಗಂ” ಹೊಸ ಸಂಘಟನೆಯೊಳಗೆ ವಿಲೀನವಾಯಿತು. ಇದರ ಹಿಂದೆಯೇ ಸ್ವಾಮಿಗಳು ಉತ್ತರ ಪರವೂರ್ ಶ್ರೀ ನಾರಾಯಣ ಮಂಗಲಂ ದೇಗುಲದ ಪ್ರತಿಷ್ಠಾಪನೆಗಾಗಿ ಪ್ರಯಾಣ ಬೆಳೆಸಿದರು. ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ ತೃಪ್ರಯಾರ್‌ಗೆ ಸಮೀಪವಿರುವ ಪೆರಿಙೋಟ್ಟುಕರ, ವಲಪ್ಪಾಡ್, ವಡನಪ್ಪಳ್ಳಿ ಮುಂತಾದೆಡೆಗಳಿಗೆ ಭೇಟಿ ನೀಡಿ ಪರವೂರ್‌‌ಗೆ ಹಿಂದಿರುಗಿದರು. ಮಕರ ಮಾಸದ  20ನೇ ದಿನ (ಫೆಬ್ರವರಿ 1, 1903) ದೇಗುಲ ಪ್ರತಿಷ್ಠಾಪನೆಯನ್ನು ನೆರವೇರಿಸಿ ಶಿವರಾತ್ರಿಗೂ ಮುನ್ನವೇ ಅರುವಿಪ್ಪುರಂಗೆ ಮರಳಿದರು. ಈ ಅವಧಿಯಲ್ಲಿ ಸ್ವಾಮಿಗಳು ತಾವು ಭೇಟಿ ನೀಡಿದ ಊರುಗಳಲ್ಲಿದ್ದ ಹಲವು ಪ್ರಮುಖರನ್ನು ಶ್ರೀ ನಾರಾಯಣ ಧರ್ಮಪರಿಪಾಲನ ಯೋಗಂ ಸದಸ್ಯರನ್ನಾಗಿಸಿದರು. ಅಷ್ಟೇ ಅಲ್ಲ, ಹಲವೆಡೆ ತಮ್ಮ ಮತಸಂಬಂಧೀ ಚಿಂತನೆಗಳ ಅನುಷ್ಠಾನಕ್ಕೆ ಅಗತ್ಯವಿರುವ ಸಂಸ್ಥೆಗಳನ್ನು ಆರಂಭಿಸುವ ವ್ಯವಸ್ಥೆಯನ್ನೂ ಮಾಡಿದರು.

ಮಲಯಾಳ ವರ್ಷ 1079ರಿಂದಲೇ (ಕ್ರಿ.ಶ.1904) ಸ್ವಾಮಿಗಳು ಆಚರಣೆಗಳ ಸುಧಾರಣೆಯಲ್ಲಿ ತೀವ್ರವಾಗಿ ತೊಡಗಿಸಿಕೊಂಡರು. ತಮ್ಮ ಸಮುದಾಯದ ಜನಗಳಲ್ಲಿ ವ್ಯಾಪಕವಾಗಿದ್ದ ತಾಲಿಕೆಟ್ಟು[1] ಮದುವೆಯಂಥ ಅನಗತ್ಯ ಸಮಾರಂಭಗಳನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರಷ್ಟೇ ಅಲ್ಲದೆ ಮದುವೆಗಳಿಗಾಗಿ ಹೊಸ ವಿಧಾನವೊಂದನ್ನು ರೂಪಿಸಿ ಜನರು ಅದನ್ನು ಅಳವಡಿಸಿಕೊಳ್ಳುವಂತೆ ಮಾಡಿದರು. ಈ ಕೆಲಸಗಳಿಗಾಗಿ ಸಮುದಾಯದ ಹಲವು ಮಹಾಸಭೆಗಳಲ್ಲಿ ಸ್ವಾಮಿಗಳೇ ಸಾನಿಧ್ಯ ವಹಿಸಿ ಜನರಿಗೆ ಒಳಿತು ಕೆಡುಕುಗಳ ಅರಿವನ್ನು ಮೂಡಿಸಿದರು. ಆಚರಣೆಗಳಿಗೆ ಸಂಬಂಧಿಸಿದ ತಮ್ಮ ಚಿಂತನೆಗಳನ್ನು ಶ್ರೀನಾರಾಯಣ ಧರ್ಮ ಪರಿಪಾಲದ ಯೋಗಂ ಹಾಗೂ ಮತ್ತಿತರ ಮಾರ್ಗಗಳ ಮೂಲಕ  ಜನರನ್ನು ತಲುಪುವಂತೆ ನೋಡಿಕೊಂಡರು. ಇವೆಲ್ಲದರ ಫಲವೆಂಬಂತೆ ಹಲವು ಪ್ರದೇಶಗಳಲ್ಲಿ ಈಳವ ಸಮುದಾಯಕ್ಕೆ ಸೇರಿದವರು ‘ತಾಲಿಕೆಟ್ಟು ಮದುವೆ’ಗಳನ್ನು ನಿಲ್ಲಿಸಿ ಗುರುಗಳು ಆವಿಷ್ಕರಿಸಿದ ವಿಧಾನದಲ್ಲಿ ಮದುವೆಗಳನ್ನು ನಡೆಸತೊಡಗಿದರು.

ಈಗ ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರಾಗಿರುವ ಸದಾಶಿವ ಅಯ್ಯರ್ ಈ ಮೊದಲು ತಿರುವಿದಾಂಕೂರಿನಲ್ಲಿ ಮುಖ್ಯ ನ್ಯಾಯಾಧೀಶರಾಗಿದ್ದಾಗ ನೀಡಿದ ತೀರ್ಪೊಂದರಲ್ಲಿ ಈ ಕೆಳಗಿನಂತೆ ಹೇಳಿದ್ದಾರೆ.

“I hope I might be pardoned for expressing in conclusion my very great satisfaction that through the efforts of the venerable Asan of the Ezhava Community and his Ezhava Samajam, most desirable reforms (or rather the relinquishment of the medieval pernicious customs and conventions which have outlived their original usefulness and which are unsuited to the needs of a progressive community) are taking place among the Ezhavas without the necessity at present to the resort to the legislature. Allude especially to the fast-dying customs of polygamy and polyandry (through restricted to the case of woman being the common wife of brothers) the now unmeaning Thalikettu or Minnukettu ceremoney, the conniving by the Society at the loss of virginity by an unmarried girl remaining in her mother’s house and so on. (C.A. No: 46 & 47 of 1083)”

“ಈಳವ ಸಮುದಾಯದ ಗೌರವಾನ್ವಿತ ಗುರುಗಳು ಮತ್ತು ಈಳವ ಸಮಾಜದ ಪ್ರಯತ್ನಗಳಿಂದಾಗಿ ಬಹಳ ಅಪೇಕ್ಷಣೀಯವಾದ ಸುಧಾರಣೆಗಳು (ಅಥವಾ ಈ ಕಾಲದಲ್ಲಿ ಯಾವ ಉಪಯೋಗವೂ ಇಲ್ಲದಿರುವ, ಪ್ರಗತಿಯ ಹಾದಿಯಲ್ಲಿರುವ ಸಮುದಾಯಕ್ಕೆ ಒಂದಿಷ್ಟೂ ಒಪ್ಪದ ಮತ್ತು ಮಾರಕವೆನಿಸುವಂತೆ ಉಳಿದುಕೊಂಡಿರುವ ಮಧ್ಯಕಾಲೀನ ಆಚಾರಗಳು ಮತ್ತು ಸಂಪ್ರದಾಯಗಳನ್ನು ನಿಲ್ಲಿಸುವ ವ್ಯವಸ್ಥೆ) ಯಾವುದೇ ಕಾನೂನಿನ ಅಗತ್ಯವಿಲ್ಲದೆಯೇ ಈಳವರ ನಡುವೆ ನಡೆಯುತ್ತಿದೆ. ಇದು ನನಗೆ ಬಹಳ ಸಮಾಧಾನ ತಂದಿದೆ ಎಂದು ಹೇಳುವುದು ತಪ್ಪಲ್ಲ ಎಂದು ಭಾವಿಸಿದ್ದೇನೆ. ಬಹು ಪತ್ನಿತ್ವ ಮತ್ತು ಬಹು ಪತಿತ್ವಗಳು (ಒಂದೇ ಹೆಣ್ಣು ಅವಳು ಮದುವೆಯಾಗಿ ಹೋಗುವ ಕುಟುಂಬದ ಸೋದರರೆಲ್ಲರಿಗೂ ಪತ್ನಿಯಾಗಿರುವುದಕ್ಕೆ ಬಹುಪತಿತ್ವ ಸೀಮಿತವಾಗಿದೆ) ಶೀಘ್ರ ಮರಣವನ್ನಪ್ಪುತ್ತಿವೆ.  ಇದರ ಜೊತೆಗೆ ಅರ್ಥಹೀನವಾಗಿರುವ ‘ತಾಲಿಕೆಟ್ಟು’ ಅಥವಾ ‘ಮಿನ್ನುಕೆಟ್ಟು’ ಇಲ್ಲವಾಗುತ್ತದೆಂದು ಸೂಚಿಸಲಿಚ್ಛಿಸುತ್ತೇನೆ. ಈ ‘ಮದುವೆ’ಗಳ ಮೂಲಕ ತಾಯಿಯ ಮನೆಯಲ್ಲೇ ಇರುವ ಹೆಣ್ಣುಮಕ್ಕಳ ಕನ್ಯತ್ವ ಭಂಗಕ್ಕೆ ಸಮಾಜವೇ ಸಂಚು ಹೂಡುತ್ತಿದೆ.”

ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖವಾಗಿರುವ ಮೇಲಿನ ಮಾತುಗಳು ಸ್ವಾಮಿಗಳು ಕೈಗೊಂಡ ಸುಧಾರಣೆಗಳಿಗೆ ವಿದ್ವಜ್ಜನರ ಒಪ್ಪಿಗೆ ಮತ್ತು ಶ್ಲಾಘನೆಗಳನ್ನು ಬೆಳಕಿಗೆ ತರುತ್ತವೆ.

ಈ ದಿನಗಳಲ್ಲೂ ಸ್ವಾಮಿಗಳು ಸಾಹಿತ್ಯ ರಚನೆಯ ಪ್ರಯತ್ನಗಳಿಂದ ದೂರವಾಗಿದ್ದಿಲ್ಲ. ಅವರು ತಮ್ಮ ಪರಿಪಕ್ವವಾದ ಜ್ಞಾನಾನಂದಾನುಭೂತಿಯನ್ನು ಸಂಗ್ರಹಿಸಿ ರಚಿಸಿರುವ ‘ಆತ್ಮೋಪದೇಶ ಶತಕಂ’ ಎಂಬ ಮಣಿಪ್ರವಾಳ ಪದ್ಯಗ್ರಂಥ ಹೊರಬಂದದ್ದೂ ಈ ದಿನಗಳಲ್ಲೇ.

“ನೆರೆಹೊರೆಯ ಸಂಬಂಧಗಳ ಹಸನಾಗಿಸುವ ಪ್ರಯತ್ನವ ನೀತಿಯರಿತ ನರನಾಚರಿಸಬೇಕು”
“ಅವರವರ ಆತ್ಮಸುಖಕ್ಕಾಗಿ ಮಾಡುವ ಕೆಲಸಗಳು ಇತರರ ಸುಖಕ್ಕೂ ಆಗಿಬರಬೇಕು”
“ಹಲಮತಸಾರವೂ ಏಕವೆಂದರಿಯದೆ
ಆನೆಯೊಂದ ತಡವಿ ಅರಿವ ಅಂಧರಂತೆ
ಹಲವಿಧ ತರ್ಕವನೊದರುತ್ತ ಪಾಮರರು
ಅಲೆಯುವುದ ಕಂಡಲೆಯದಿರಬೇಕು”

– ಮೇಲಿನಂಥ ತತ್ವ ರತ್ನಗಳು ಆ ಮಣಿಪ್ರವಾಳ ಗೀತೆಯಲ್ಲಿ ಸಾಕಷ್ಟಿವೆ.

(ಮುಂದುವರಿಯುವುದು…)


[1] ತಾಲಿಕೆಟ್ಟು ಕಲ್ಯಾಣಂ ಮಾತೃಪ್ರಧಾನ ವ್ಯವಸ್ಥೆಯನ್ನು ಅನುಸರಿಸುತ್ತಿದ್ದ ಕೇರಳ ಮಧ್ಯಮ ಮತ್ತು ಕೆಳಜಾತಿಗಳಲ್ಲಿದ್ದ ಆಚರಣೆ. ಹೆಣ್ಣು ಮಕ್ಕಳು ಋತುಮತಿಯಾಗುವ ಮೊದಲೇ ‘ತಾಳಿ ಕಟ್ಟುವ’ ಈ ಆಚರಣೆಯಲ್ಲಿ ತಾಳಿ ಕಟ್ಟುತ್ತಾ ಇದ್ದದ್ದು ಬ್ರಾಹ್ಮಣರಂಥ ಮೇಲ್ಜಾತಿಯವರು. ಇಲ್ಲವೇ ಜಾತಿಯಲ್ಲೇ ಇದ್ದ ಆಢ್ಯರು. ಈ ಮದುವೆಗಳನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುತ್ತಿತ್ತು. ವಾಸ್ತವದ ಮದುವೆಗೂ ಇದಕ್ಕೂ ಸಂಬಂಧವೇ ಇರಲಿಲ್ಲ. ಈ ಆಚರಣೆಯ ಮೂಲದಲ್ಲಿ ದೇವದಾಸಿ ಪದ್ಧತಿಯಿತ್ತು ಎಂದು ದಕ್ಷಿಣ ಭಾರತದ ಜಾತಿಗಳು ಮತ್ತು ಬುಡಕಟ್ಟುಗಳ ದಾಖಲೀಕರಣ ಮಾಡಿರುವ ಎಡ್ಗರ್ ಥರ್ಸ್ಟನ್ ಅಭಿಪ್ರಾಯಪಟ್ಟಿದ್ದಾರೆ. (https://en.wikisource.org/wiki/Castes_and_Tribes_of_Southern_India/Tali-kettu_kalyanam). ನಾರಾಯಣ ಗುರುಗಳು ಈ ಆಚರಣೆಯ ಹಿಂದಿನ ತರ್ಕಹೀನತೆ, ಸ್ತ್ರೀಶೋಷಣೆಗಳನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ಪೂರ್ಣವಾಗಿ ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.


(‘ಆತ್ಮೋಪದೇಶ ಶತಕಂ’ನ ಸಾಲುಗಳ ಕನ್ನಡ ಭಾಷಾಂತರವನ್ನು ವಿನಯ ಚೈತನ್ಯ ಕನ್ನಡಕ್ಕೆ ಅನುವಾದಿಸಿರುವ ‘ನಾರಾಯಣ ಗುರು ಸಂಪೂರ್ಣ ಕೃತಿಗಳು’ ಪುಸ್ತಕದಿಂದ ಆರಿಸಿಕೊಂಡು ಪರಿಷ್ಕರಿಸಲಾಗಿದೆ.)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ