ಕುಮಾರನ್ ಆಶಾನ್ ಅವರು ರಚಿಸಿದ ಗುರುಗಳ ಜೀವನ ಚರಿತ್ರೆಯನ್ನು ಅನುವಾದಿಸುವ ಪ್ರಯತ್ನ ಇಲ್ಲಿದೆ. ಹದಿನೈದು ಪುಟ್ಟ ಅಧ್ಯಾಯಗಳ ಈ ಕೃತಿ ನಾರಾಯಣ ಗುರುಗಳ ಬದುಕಿನ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತದೆ. ಈ ಸರಣಿಯ 13ನೇ ಅಧ್ಯಾಯ ಇಲ್ಲಿದೆ…। ಎನ್.ಎ.ಎಂ.ಇಸ್ಮಾಯಿಲ್
ಸ್ವಾಮಿಗಳು ಕೊಚ್ಚಿಯಲ್ಲಿ ಕುಳಂಬಡಿ ಎಂಬಲ್ಲಿರುವ ದುರ್ಗೆಯ ದೇಗುಲದ ಜೀರ್ಣೋದ್ಧಾರವನ್ನು ಪೂರ್ಣಗೊಳಿಸಿ ಪುನರ್ ಪ್ರತಿಷ್ಠೆ ನಡೆಸಿದರು. ಅಷ್ಟೇ ಅಲ್ಲ, ಇಲ್ಲಿ ನಡೆಯುತ್ತಿದ್ದ ಪೂರಂ ತುಳ್ಳಲ್ ಎಂಬ ಅಶ್ಲೀಲ ಆಯಾಮ ಪಡೆದುಕೊಳ್ಳುತ್ತಿದ್ದ ಕುಣಿತ ಮತ್ತು ಪ್ರಾಣಿಬಲಿಯನ್ನು ನಿಲ್ಲಿಸುವಂತೆ ಜನರನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು. ಅದೇ ವರ್ಷ ಮೇಷ ಮತ್ತು ವೃಷಭ ಮಾಸಗಳಲ್ಲಿ ಶಿವಗಿರಿಯ ಧಾರ್ಮಿಕ ಕಾರ್ಯಗಳಿಗಾಗಿ ಕೊಲ್ಲಂ ಮುಂತಾದ ತಾಲೂಕುಗಳಲ್ಲಿ ಪ್ರವಾಸ ಕೈಗೊಂಡರು.
ಹಿಂದಿನ ಅಧ್ಯಾಯ ಇಲ್ಲಿದೆ : https://aralimara.com/2024/08/02/guru-44/ ಮುಂದೆ ಓದಿ…
ಅಧ್ಯಾಯ 13
1084ರ ಸಿಂಹ ಮಾಸದ 26ನೇ ದಿನವು ಸ್ವಾಮಿಗಳ 53ನೇ ಜನ್ಮ ನಕ್ಷತ್ರ ದಿನವಾಗಿತ್ತು (ಸೆಪ್ಟೆಂಬರ್ 10, 1908). ಶಿವಗಿರಿಯಲ್ಲಿ ಅಂದು ಶಿಷ್ಯ ವೃಂದದ ಸಭೆಯೂ ಇತ್ತು. ಅದೇ ದಿನ ಸ್ವಾಮಿಗಳು ಶಿವಗಿರಿಯ ಶಾರದಾ ಮಠಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದರು. ‘ಜನನೀನವರತ್ನಮಂಜರಿ’ ಎಂಬ ಸುಮಧುರವಾದ ಸ್ತೋತ್ರ ಕೃತಿಯ ರಚನೆಯಾಗಿದ್ದೂ ಇದೇ ಕಾಲಘಟ್ಟದಲ್ಲಿ.
ಶಿವಗಿರಿ ಮಠದಲ್ಲಿ ಆಗ ಮಠದ ನಿತ್ಯಕರ್ಮಗಳ ಜೊತೆಗೆ ಧರ್ಮಶಾಸ್ತ್ರಗಳ ಅಧ್ಯಯನ, ವಿವಿಧ ಗ್ರಂಥಗಳ ಪಾರಾಯಣಗಳು ನಿಯಮಿತವಾಗಿ ನಡೆಯುತ್ತಿದ್ದವು. ಪಾಂಡಿತ್ಯವಿದ್ದ ಹಲವು ಶಿಷ್ಯರು ಗೀತೆ, ಉಪನಿಷತ್ತುಗಳು, ವಾಸಿಷ್ಠ, ಸೂತಸಂಹಿತೆ ಮೊದಲಾದ ಪ್ರೌಢಗ್ರಂಥಗಳ ಅರ್ಥವನ್ನು ಸ್ವಾಮಿಗಳ ಬಾಯಿಂದಲೇ ಕೇಳಿ ಗ್ರಹಿಸಿ ಅವುಗಳ ಕುರಿತು ಚರ್ಚಿಸುತ್ತಿದ್ದರು. ದೇಗುಲ ನಿರ್ಮಾಣ ಮತ್ತು ಪ್ರತಿಷ್ಠಾಪನೆಗೆ ಸಂಬಂಧಿಸಿದ ತಾಂತ್ರಿಕ ಕ್ರಮಗಳು, ಕರ್ಮ ಸಂಸ್ಕಾರಗಳು ಮುಂತಾದುವುಗಳನ್ನು ಕಲಿಯುವ ವ್ಯವಸ್ಥೆಯೂ ಅಲ್ಲಿತ್ತು. ಸ್ವಜನರ ವಿವಾಹ, ಅಪರಕರ್ಮಗಳು, ಶ್ರಾದ್ಧ, ಕ್ಷೇತ್ರಪಿಂಡ ಇತ್ಯಾದಿಗಳಿಗಾಗಿ ಮಠದಿಂದಲೇ ವೈದಿಕರನ್ನು ಕಳುಹಿಸಿ ನಿಯಮಾನುಸಾರ ಅವುಗಳನ್ನು ನಡೆಸಲಾಗುತ್ತಿತ್ತು.
ವೃಷಭ ಮಾಸದಲ್ಲಿ ಎರ್ನಾಕುಳಂನಲ್ಲಿ ನಡೆದ ಎಸ್ಎನ್ಡಿಪಿ ಯೋಗಂ ಆರನೇ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕ ಸಭೆ ನಡೆಯಿತು. ಸ್ವಾಮಿಗಳು ಒಂದು ಲಿಖಿತ ಟಿಪ್ಪಣಿಯ ಮೂಲಕ ಧಾರ್ಮಿಕ ಮತ್ತು ಪರಂಪರಾನುಗತವಾದ ಆಚರಣೆಗಳಲ್ಲಿರುವ ತಂದಿರುವ ಸುಧಾರಣೆಗಳ ಅನುಷ್ಠಾನದಲ್ಲಿ ಯೋಗಂ ಕಾಳಜಿ ವಹಿಸಬೇಕೆಂಬುದನ್ನು ತಿಳಿಸಿದ್ದರು. ಇದು ಸುಧಾರಣೆಗಳನ್ನು ಜನರು ಹೆಚ್ಚು ಉತ್ಸಾಹದಿಂದ ಸ್ವೀಕರಿಸುವಂತೆ ಮಾಡಿತು.
ಇದಕ್ಕೂ ಕೆಲ ದಿನಗಳಿಗೆ ಮೊದಲೇ ಮತ್ತೊಂದು ಬೆಳವಣಿಗೆ ನಡೆದಿತ್ತು. ಉತ್ತರ ಮಲಯಾಳದ ಸಾವಿರಾರು ಈಳವರು ಪ್ರತೀವರ್ಷವೂ ಕೊಟ್ಟಿಯೂರ್ ಎಂದೂ ಕರೆಯಲಾಗುವ ತೃಚ್ಚಂಬರತ್ತ್ ದೇಗುಲಕ್ಕೆ ಪ್ರಯಾಣ ಬೆಳೆಸಿ ಅಲ್ಲಿ ಎಳನೀರಿನ ಅಭಿಷೇಕ ಮತ್ತು ಕಾಣಿಕೆಗಳಿಗಾಗಿ ಭಾರೀ ಮೊತ್ತವನ್ನು ವ್ಯಯಿಸುತ್ತಿದ್ದರು. ಇದನ್ನು ನಿಲ್ಲಿಸಿ ತಲಶ್ಶೇರಿಯ ಜಗನ್ನಾಥ ದೇಗುಲವನ್ನು ಇವರೆಲ್ಲರೂ ಸಂದರ್ಶಿಸಲಿ ಎಂಬುದು ಸ್ವಾಮಿಗಳ ಅಪೇಕ್ಷೆಯಾಗಿತ್ತು. ಇದನ್ನು ಜನರಿಗೆ ತಿಳಿಸುವುದಕ್ಕಾಗಿ ಅವರು ಪತ್ರಿಕಾ ಪ್ರಕಟಣೆಗಳನ್ನೂ ನೀಡಿದ್ದರು.
ವೃಷಭ ಮಾಸದ 29ನೇ ದಿನ ತಲಶ್ಶೇರಿಯ ಜಗನ್ನಾಥ ದೇವಾಲಯದಲ್ಲಿ ಅಭಿಷೇಕೋತ್ಸವವು ವಿಜೃಂಭಣೆಯಿಂದ ನಡೆಯಿತು. ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರಿಂದ ಕಾಣಿಕೆಯ ಪ್ರಮಾಣವೂ ದೊಡ್ಡದಾಗಿತ್ತು. ಆ ವರ್ಷ ಕೊಟ್ಟಿಯೂರ್ಗೆ ಹೋಗಿದ್ದ ಕೆಲವರು ದೋಣಿ ದುರಂತದಲ್ಲಿ ಮೃತಪಟ್ಟ ದುರದೃಷ್ಟಕರ ಘಟನೆಯೂ ನಡೆಯಿತು. ಇದು ಕೊಟ್ಟಿಯೂರ್ ಯಾತ್ರೆಗೆ ಹೋಗದೇ ಉಳಿದ ಭಕ್ತರಲ್ಲಿ ಸ್ವಾಮಿಗಳ ಮಾತಿನ ಬಗೆಗಿನ ನಂಬಿಕೆಯನ್ನು ಹೆಚ್ಚಿಸಿತು ಎಂಬುದಿಲ್ಲಿ ಉಲ್ಲೇಖಾರ್ಹ.
ಈ ಸಂದರ್ಭದಲ್ಲೇ ಸ್ವಾಮಿಗಳು ತಮ್ಮ ಶಿಷ್ಯರಲ್ಲಿ ಕೆಲವರನ್ನು ಆರಿಸಿ ನಾಡಿನ ವಿವಿಧೆಡೆ ಭಾಷಣ ಮತ್ತು ಉಪನ್ಯಾಸಗಳನ್ನು ಏರ್ಪಡಿಸಿ ಜನರಲ್ಲಿ ಸದಾಚಾರ ಮತ್ತು ನಿಜ ಧಾರ್ಮಿಕತೆಯ ಅರಿವು ಮೂಡಿಸುವ ಜವಾಬ್ದಾರಿಯನ್ನು ವಹಿಸಿ ಬೀಳ್ಕೊಟ್ಟರು. ಭಾಷಣಗಳನ್ನು ಆಲಿಸಿದವರು ಋಜುಮಾರ್ಗ ನಿಷ್ಠರಾಗಿ ಪರಿವರ್ತಿತರಾಗಬೇಕು ಎಂಬ ವಿಶೇಷ ನಿರ್ದೇಶನವನ್ನೂ ಸ್ವಾಮಿಗಳು ತಮ್ಮ ಶಿಷ್ಯರಿಗೆ ನೀಡಿದ್ದರು. ಇದೇ ವರ್ಷ ಶಿವಗಿರಿ ಮಠಕ್ಕಾಗಿ ಸುತ್ತಲಿನ ಕೆಲವು ಜಮೀನುಗಳನ್ನು ಖರೀದಿ ಹಾಗೂ ಭೋಗ್ಯವಾಗಿ ಪಡೆಯಲಾಯಿತು.
ಮಲಯಾಳ ವರ್ಷ 1085ರ ಧನು ಮಾಸದ 16ನೇ ದಿನ (ಡಿಸೆಂಬರ್ 30, 1909) ಸ್ವಾಮಿಗಳು ಶಿವಗಿರಿಯಿಂದ ತಿರುನಲ್ವೇಲಿ ಮಾರ್ಗವಾಗಿ ಮಂಗಳೂರಿಗೆ ಹೊರಟರು. ಮಾರ್ಗ ಮಧ್ಯೆ ಮಧುರೈಯಲ್ಲಿ ಕೆಲವು ದಿನಗಳ ಉಳಿದುಕೊಂಡರು. ಅಲ್ಲಿಂದ ಕೋಝಿಕ್ಕೋಡ್, ಮಾಹೆ, ತಲಶ್ಶೇರಿ, ಕಣ್ಣೂರು ಮೊದಲಾದೆಡೆಗೆ ಭೇಟಿ ನೀಡಿ ಅಲ್ಪಕಾಲದ ವಿಶ್ರಾಂತಿ ಪಡೆಯುತ್ತಾ ಮಂಗಳೂರು ತಲುಪಿದರು. ಮಕರ ಮಾಸದ ಮೂರನೇ ದಿನ (ಜನವರಿ 15, 1910) ಮಂಗಳೂರಿನ [ಈಗ ತೃಪ್ಪತೀಶ್ವರಂ[1] ಎಂದು ಕರೆಯುತ್ತಾರೆ] ದೇಗುಲಕ್ಕಾಗಿ ದೊಡ್ಡ ಸಮಾರಂಭದಲ್ಲಿ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಕುಂಭ ಮಾಸದ ಎರಡನೇ ದಿನದಂದು (ಫೆಬ್ರವರಿ 13, 1910) ಶಿವಗಿರಿಗೆ ಸ್ವಾಮಿಗಳ ಪುನರಾಗಮನವಾಯಿತು. ಮೇಷ ಮಾಸದಲ್ಲಿ ಮತ್ತೆ ಮಲಬಾರಿಗೆ ಪ್ರಯಾಣ ಬೆಳೆಸಿದ ಅವರು ಅದೇ ತಿಂಗಳ 29ನೇ ದಿನದಂದು ಕೋಝಿಕ್ಕೋಡಿನಲ್ಲಿ ‘ಶ್ರೀಕಂಠೇಶ್ವರಂ’ ಎಂದು ತಾವೇ ಮರುನಾಮಕರಣ ಮಾಡಿದ್ದ ದೇಗುಲದಲ್ಲಿ ಕುಂಭಾಭಿಷೇಕವನ್ನು ನೆರವೇರಿಸಿದರು.
ಮಂಗಳೂರಿನಲ್ಲಿ ಗುದ್ದಲಿ ಪೂಜೆ ನಡೆಸಲಾಯಿತೆಂದು ಮೇಲೆ ಹೇಳಿದ ದೇಗುಲದ ಷಡಾಧಾರ ಪ್ರತಿಷ್ಠೆಯನ್ನು ಹದಿನೆಂಟನೇ ದಿನದಂದು ನಡೆಸಿದರು. ಮಿಥುನ ಮಾಸದಲ್ಲಿ ಸ್ವಾಮಿಗಳು ನೈಯ್ಯಾಟಿಂಕರ, ತಿರುವುನಂತಪುರಂ ಮುಂತಾದೆಡೆ ಪ್ರವಾಸ ಮಾಡಿ ಮಠದ ನಿರ್ವಹಣೆಗೆ ಬೇಕಿರುವ ಧನ ಸಂಗ್ರಹಕ್ಕೆ ಪ್ರಯತ್ನಿಸಿದರು. ಈ ವೇಳೆ ಹಲವು ಬೆಲೆಬಾಳುವ ಆಸ್ತಿಗಳು ದಾನಪತ್ರದ ಮೂಲಕ ದೊರೆತವು.
ಮಲಯಾಳ ವರ್ಷ 1086ರ ತುಲಾ ಮಾಸದದಲ್ಲಿ (ಅಕ್ಟೋಬರ್, ನವೆಂಬರ್ 1910) ತಿರುವನಂತಪುರ ಮತ್ತು ನೈಯಾಟಿಂಕರ ತಾಲೂಕುಗಳಲ್ಲಿ ಈಳವರ ಧಾರ್ಮಿಕ ಆಚಾರಗಳ ಸುಧಾರಣೆ ಹಾಗೂ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಸ್ವಾಮಿಗಳು ಪ್ರವಾಸ ನಡೆಸಿದರು. ಮಕರ ಮಾಸದ ಐದನೇ ದಿನ ಕಾರಂಕುಳ ಎಂಬಲ್ಲಿ ಪ್ರತಿಷ್ಠಿತ ಈಳವ ಕುಟುಂಬವೊಂದು ‘ತಾಲಿಕೆಟ್ಟು’ ಮದುವೆಯೊಂದನ್ನು ಬಹು ವಿಜೃಂಭಣೆಯಿಂದ ನಡೆಸಲು ಹೊರಟಿತ್ತು. ಮದುವೆಯ ಚಪ್ಪರಕ್ಕೆ ಪ್ರವೇಶಿಸಿದ ಸ್ವಾಮಿಗಳು ಆ ಮದುವೆಯನ್ನು ತಡೆದರು. ಇನ್ನು ಮುಂದೆ ಯಾರೂ ಈ ಬಗೆಯ ಮದುವೆಗಳನ್ನು ನಡೆಸಬಾರದೆಂದು ನೆರೆದಿದ್ದ ಜನರನ್ನುದ್ದೇಶಿಸಿ ಉಪದೇಶಿದರು.
ಶಿವಗಿರಿ ಮಠದ ಸಂಸ್ಕೃತ ಪಾಠಶಾಲೆಯನ್ನು ಅಭಿವೃದ್ಧಿಪಡಿಸಿ ಸಂಸ್ಕೃತದ ಜೊತೆಗೆ ಗಣಿತ, ಇಂಗ್ಲಿಷ್ ಮುಂತಾದ ವಿಷಯಗಳನ್ನು ಬೋಧಿಸುವ ವ್ಯವಸ್ಥೆಯಾಯಿತು. ಇಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯೂ ಐವತ್ತು ಮೀರಿತು. ಶಾರದಾಮಠದ ಪ್ರತಿಷ್ಠಾಪನೆಯನ್ನು ಇದೇ ವರ್ಷ ಮೇಷ ಮಾಸದಲ್ಲಿ ನಡೆಸಬೇಕೆಂದು ಈ ಮೊದಲು ಸ್ವಾಮಿಗಳು ನಿರ್ಧರಿಸಿದ್ದರು. ಆದರೆ ಅದಕ್ಕೆ ಬೇಕಿರುವ ಕೆಲವು ಸಿದ್ಧತೆಗಳು ಪೂರ್ಣವಾಗದೇ ಇದ್ದದ್ದರಿಂದ ಪ್ರತಿಷ್ಠಾಪನೆಯನ್ನು ಮುಂದೂಡಬೇಕಾಯಿತು. ಮಲಯಾಳ ವರ್ಷ 1087ರ ಸಿಂಹ ಮಾಸದಲ್ಲಿ (ಸೆಪ್ಟೆಂಬರ್ 8, 1911) ಸ್ವಾಮಿಗಳ ಜನ್ಮ ನಕ್ಷತ್ರ ದಿನದಂದು ಪ್ರತಿಷ್ಠಾಪನೆಯಾದರೆ ಉತ್ತಮ ಎಂದು ಸಂಘಟನೆಯ ಪದಾಧಿಕಾರಿಗಳು ಅಭಿಪ್ರಾಯಪಟ್ಟರು. ಆದರೆ ಅಂದೂ ಅದು ಸಾಧ್ಯವಾಗಲಿಲ್ಲ.
ಈ ನಡುವೆ 1086ರ ವೃಷಭ ಮಾಸದಲ್ಲಿ (ಮೇ-ಜೂನ್, 1911) ಸ್ವಾಮಿಗಳು ಕರುನಾಗಪಳ್ಳಿ ಆಸುಪಾಸಿನ ಪ್ರದೇಶದಲ್ಲಿ ಪ್ರವಾಸ ಕೈಗೊಂಡರು. ಈ ವೇಳೆ ಅಲ್ಲಿನ ಎರಡು ಪ್ರಮುಖ ಈಳವ ಕುಟುಂಬಗಳ ನಡುವೆ ನಡೆಯುತ್ತಿದ್ದ ಅಪಾಯಕಾರಿಯಾದ ಸ್ಪರ್ಧೆಯನ್ನು ತಡೆಯಲು ಬೇಕಾದ ಮಾತುಕತೆಗಳನ್ನು ನಡೆಸಿ ಯಶಸ್ವಿಯಾದರು. ಮಲಯಾಳ ವರ್ಷ 1088ರ ಕಟಕ ಮಾಸದಲ್ಲಿ (ಜುಲೈ-ಆಗಸ್ಟ್ 1913) ಕೆಲವು ದಿನಗಳ ಕಾಲ ಕುಟ್ಟಾಲಕ್ಕೆ ಹೋಗಿ ವಿಶ್ರಾಂತಿ ಪಡೆದರು.
1087ರ ಕನ್ಯಾ ಮಾಸದ 21ನೇ ದಿನ (ಅಕ್ಟೋಬರ್ 7, 1911) ಶಿವಗಿರಿಯಲ್ಲಿ ನಡೆದ ಎಸ್ಎನ್ಡಿಪಿ ಯೋಗಂನ ಎಂಟನೇ ವಾರ್ಷಿಕೋತ್ಸವದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ ಸ್ವಾಮಿಗಳು ಒಂದು ಸಮಿತಿಯನ್ನು ರೂಪಿಸಿ ಅದಕ್ಕೆ ಶಾರದಾ ಪ್ರತಿಷ್ಠಾಪನೆಯ ಜವಾಬ್ದಾರಿಯನ್ನು ವಹಿಸಿಕೊಟ್ಟರು. ಇದೇ ವರ್ಷದ ತುಲಾ ಮಾಸದಲ್ಲಿ (ಅಕ್ಟೋಬರ್-ನವೆಂಬರ್ 1911) ಪಾಪನಾಶಂ ಎಂಬ ತೀರ್ಥಸ್ಥಳದಲ್ಲಿ ಕೆಲಕಾಲ ವಿಶ್ರಮಿಸಿದರು. ಈ ಯಾತ್ರೆಯ ವೇಳೆ ತಿರುನಲ್ವೇಲಿ, ಮಧುರೈ, ತಂಜಾವೂರು ಜಿಲ್ಲೆಗಳಲ್ಲಿರುವ ಹಲವು ಪುಣ್ಯಸ್ಥಳಗಳಲ್ಲಿ ಕೆಲವು ದಿನಗಳ ಕಾಲ ಉಳಿದುಕೊಂಡು ಧನುರ್ಮಾಸದಲ್ಲಿ (ಡಿಸೆಂಬರ್ 1911) ಮಲಬಾರ್ ಪ್ರದೇಶವನ್ನು ತಲುಪಿದರು.
ಹಲವು ತಿಂಗಳುಗಳ ಕಾಲ ಶಿವಗಿರಿ ಮಠದಿಂದ ದೂರವಾಗಿ ಸ್ವಾಮಿಗಳು ಪ್ರವಾಸ ನಿರತರಾದುದನ್ನು ಕಂಡ ಜನರು ಶಾರದಾ ಪ್ರತಿಷ್ಠಾಪನೆಯ ಕೆಲಸ ತಡವಾಗುತ್ತಿರುವುದರಿಂದ ಸ್ವಾಮಿಗಳಿಗೆ ಬೇಸರವಾಗಿದೆ ಎಂದು ಹೇಳತೊಡಗಿದರು. ವಾಸ್ತವದಲ್ಲಿ ಸ್ವಾಮಿಗಳನ್ನು ಸುದೀರ್ಘ ಪ್ರವಾಸಕ್ಕೆ ಪ್ರೇರೇಪಿಸಿದ ಸಂಗತಿ ಯಾವುದೆಂದು ಹೆಚ್ಚಿನವರಿಗೆ ತಿಳಿದಿರಲಿಲ್ಲ. ಜನರ ನಡುವೆ ಈ ಬಗೆಯ ಮಾತುಗಳು ಹರಡಿದ್ದನ್ನು ಗಮನಿಸಿದ ಯೋಗಂನ ಪ್ರಧಾನ ಕಾರ್ಯದರ್ಶಿ ತಲಶ್ಶೇರಿಗೆ ಹೋಗಿ ಸ್ವಾಮಿಗಳನ್ನು ಭೇಟಿಯಾದರು. ಶಾರದಾ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಸ್ವಾಮಿಗಳ ಅಪೇಕ್ಷೆಯನ್ನು ಅರಿತು ಅವರ ಆದೇಶಗಳನ್ನು ಪಡೆದು ಹಿಂದಿರುಗಿದರು. ಯೋಗಂ ಪದಾಧಿಕಾರಿಗಳೊಂದಿಗೆ ಚರ್ಚಿಸುವುದರ ಜೊತೆಗೆ ಶಾರದಾ ಪ್ರತಿಷ್ಠಾಪನೆಗೆ ರೂಪುಗೊಂಡಿದ್ದ ಸಮಿತಿಯೂ ಸಭೆ ನಡೆಸಿ ಮಲಯಾಳ ವರ್ಷ 1088ರ ಮೇಷ ಮಾಸದಲ್ಲಿ (ಮೇ-ಜೂನ್ 1913) ನಡೆಸಲು ನಿಶ್ಚಯಿಸಲಾಯಿತು.
[1] ಗೋಕರ್ಣನಾಥ ಕ್ಷೇತ್ರವೆಂದು ಪ್ರಸಿದ್ಧವಾಗಿರುವ ಈ ದೇವಾಲಯ ಮಂಗಳೂರಿನ ಕುದ್ರೋಳಿಯಲ್ಲಿದೆ. ಈ ದೇಗುಲ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಾರಾಯಣ ಗುರುಗಳು ಮೂರು-ನಾಲ್ಕು ಬಾರಿ ಮಂಗಳೂರಿಗೆ ಭೇಟಿ ನೀಡಿದ್ದಾರೆ.


[…] ಹಿಂದಿನ ಅಧ್ಯಾಯ ಇಲ್ಲಿದೆ: https://aralimara.com/2024/08/03/guru-45/ […]
LikeLike