ಕುಮಾರನ್ ಆಶಾನ್ ಅವರು ರಚಿಸಿದ ಗುರುಗಳ ಜೀವನ ಚರಿತ್ರೆಯನ್ನು ಅನುವಾದಿಸುವ ಪ್ರಯತ್ನ ಇಲ್ಲಿದೆ. ಹದಿನೈದು ಪುಟ್ಟ ಅಧ್ಯಾಯಗಳ ಈ ಕೃತಿ ನಾರಾಯಣ ಗುರುಗಳ ಬದುಕಿನ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತದೆ. ಈ ಸರಣಿಯ 14ನೇ ಅಧ್ಯಾಯ ಇಲ್ಲಿದೆ…। ಎನ್.ಎ.ಎಂ.ಇಸ್ಮಾಯಿಲ್
ಯೋಗಂನ ಪ್ರಧಾನ ಕಾರ್ಯದರ್ಶಿಗಳು ಶಾರದಾ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಸ್ವಾಮಿಗಳ ಅಪೇಕ್ಷೆಯನ್ನು ಅರಿತು ಅವರ ಆದೇಶಗಳನ್ನು ಪಡೆದು ಹಿಂದಿರುಗಿದರು. ಯೋಗಂ ಪದಾಧಿಕಾರಿಗಳೊಂದಿಗೆ ಚರ್ಚಿಸುವುದರ ಜೊತೆಗೆ ಶಾರದಾ ಪ್ರತಿಷ್ಠಾಪನೆಗೆ ರೂಪುಗೊಂಡಿದ್ದ ಸಮಿತಿಯೂ ಸಭೆ ನಡೆಸಿ ಮಲಯಾಳ ವರ್ಷ 1088ರ ಮೇಷ ಮಾಸದಲ್ಲಿ (ಮೇ-ಜೂನ್ 1913) ನಡೆಸಲು ನಿಶ್ಚಯಿಸಲಾಯಿತು… ಮುಂದೆ ಓದಿ.
ಹಿಂದಿನ ಅಧ್ಯಾಯ ಇಲ್ಲಿದೆ: https://aralimara.com/2024/08/03/guru-45/
ಅಧ್ಯಾಯ ಹದಿನಾಲ್ಕು
ಮಲಯಾಳ ವರ್ಷ 1088ರ ಮಕರ ಮಾಸದಲ್ಲಿ ಸ್ವಾಮಿಗಳು ಆಲುವಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡರು. ಮಕರ ಮಾಸದ ಒಂಬತ್ತನೇ ದಿನದಂದು ಕೊಚ್ಚಿ ಪ್ರಾಂತ್ಯದ ಮುನಂಬಂಗೆ ಸಮೀಪವಿರುವ ಚೆರಾಯಿಯಲ್ಲಿ ಈಳವ ಸಮುದಾಯದವರು ನಿರ್ಮಿಸುತ್ತಿದ್ದ ದೇಗುಲದ ಕಾಮಗಾರಿಯ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ‘ವಿದ್ಯಾಪೋಷಿಣಿ ಸಭಾ’ದವರು ನೀಡಿದ ಸನ್ಮಾನ ಪತ್ರವನ್ನು ಸ್ವೀಕರಿಸಿ ಪ್ರತಿಕ್ರಿಯಿಸಿದ ಅವರು ಧರ್ಮ, ನೈತಿಕತೆ, ಶಿಕ್ಷಣ ಮತ್ತು ಉದ್ಯಮ ಕ್ಷೇತ್ರವೂ ಸೇರಿದಂತೆ ಸಕಲ ಕ್ಷೇತ್ರಗಳಲ್ಲೂ ಸಮುದಾಯವು ಅಭಿವೃದ್ಧಿ ಹೊಂದಬೇಕಿರುವ ಅಗತ್ಯದ ಕುರಿತು ಮಾತನಾಡಿದರು.
ಇದಾದ ಕೆಲವೇ ದಿನಗಳಲ್ಲಿ ಮತ್ತೆ ಇದೇ ಸ್ಥಳದಿಂದ ಬಂದ ಆಹ್ವಾನವನ್ನು ಮನ್ನಿಸಿ ಮತ್ತೆ ಆಗಮಿಸಿ ನೀಡಿದ ಸ್ವಾಮಿಗಳು ದೇವತಾ ಪ್ರತಿಷ್ಠಾಪನೆ ನಡೆಸಿ ‘ಗೌರೀಶ್ವರಿ’ ಎಂಬ ಹೆಸರಿಟ್ಟರು. ಈ ದಿನಗಳಲ್ಲಿ ಸ್ವಾಮಿಗಳು ಪದೇ ಪದೇ ಆಲುವಾದಲ್ಲೇ ಉಳಿಯುತ್ತಿದ್ದರು. ಅಲ್ಲಿ ಶಾಶ್ವತವಾಗಿ ಉಳಿಯಬಹುದಾದ ಸಂಸ್ಥೆಯೊಂದನ್ನು ಸ್ಥಾಪಿಸುವ ತಮ್ಮ ಅಪೇಕ್ಷೆಯನ್ನು ಅವರು ತಮ್ಮ ಚಟುವಟಿಕೆಗಳ ಮೂಲಕವೇ ವ್ಯಕ್ತಪಡಿಸಿದರು. ಸುಮಾರು ಹತ್ತು ವರ್ಷಗಳ ಹಿಂದೆ ಸ್ವಾಮಿಗಳು ಅರುವಿಪ್ಪುರದಿಂದ ವರ್ಕಲಕ್ಕೆ ಪದೇ ಪದೇ ಹೋಗುತ್ತಿದ್ದಂತೆ ಈಗ ಶಿವಗಿರಿಯಿಂದ ಆಲುವಾಕ್ಕೆ ಪದೇ ಪದೇ ಹೋಗುತ್ತಿದ್ದರು ಎಂದರೆ ಅದು ಸರಿಯಾದ ಹೋಲಿಕೆಯಾಗಬಹುದು.
ಆಲುವಾದಲ್ಲಿ ಇರುವಾಗಲೇ ಅವರಿಗೆ ಮಂಗಳೂರಿನಿಂದ ಆಹ್ವಾನ ಬಂತು. ಅದನ್ನು ಮನ್ನಿಸಿ ಮಂಗಳೂರು ತಲುಪಿ ಕುಂಭ ಮಾಸದ 10ನೇ ದಿನ (ಫೆಬ್ರವರಿ 21, 1912) ಅಲ್ಲಿನ ದೇಗುಲದ ಕುಂಭಾಭಿಷೇಕವನ್ನು ನೆರವೇರಿಸಿ ದೇಗುಲಕ್ಕೆ ‘ತೃಪ್ಪತೀಶ್ವರಂ’ ಎಂಬ ಹೆಸರಿಟ್ಟರು. ಮಂಗಳೂರಿನ ಬಿಲ್ಲವ ಸಮುದಾಯದವರು ತಿರುಪತಿಯ ವಿಷ್ಣುದೇಗುಲಕ್ಕೆ ಪ್ರತೀವರ್ಷ ದೊಡ್ಡ ತೀರ್ಥಯಾತ್ರೆ ಕೈಗೊಂಡು ಭಾರೀ ಮೊತ್ತದ ಹಣವನ್ನು ಅಲ್ಲಿ ಕಾಣಿಕೆಯಾಗಿ ಹಾಕುವುದು ಸಾಮಾನ್ಯವಾಗಿತ್ತು. ಈ ಕಾಣಿಕೆಗಳನ್ನು ನಿಮ್ಮದೇ ದೇಗುಲಕ್ಕೆ ನೀಡಿದರೆ ಸಾಕು. ತಿರುಪತಿಯಲ್ಲಿರುವಂತೆಯೇ ಇಲ್ಲಿಯೂ ದೇವರ ಸಾನಿಧ್ಯವಿದೆ ಎಂದು ಭಕ್ತರೆಲ್ಲರಿಗೂ ಸ್ವಾಮಿಗಳು ತಿಳಿಸಿ ಹೇಳಿದ್ದರು. ‘ತೃಪ್ಪತೀಶ್ವರಂ’ ಎಂದು ದೇಗುಲಕ್ಕೆ ಹೆಸರಿಟ್ಟದ್ದೂ ಇದೇ ಕಾರಣಕ್ಕಿರಬಹುದು.
ತಲಶ್ಶೇರಿಯ ದೇವಸ್ಥಾನಕ್ಕೆ ಸ್ವಾಮಿಗಳು ‘ಜಗನ್ನಾಥ’ನ ಹೆಸರಿಡುವಾಗಲೂ ಹೀಗೆಯೇ ಒಂದು ಉದ್ದೇಶವಿತ್ತು. ಭಾರತದ ಪ್ರಮುಖ ಹಿಂದೂ ತೀರ್ಥಕ್ಷೇತ್ರಗಳಲ್ಲಿ ಒರಿಸ್ಸಾದ ಪುರಿ ಎಂಬಲ್ಲಿರುವ ಜಗನ್ನಾಥ ದೇಗುಲ ಅತಿಪುರಾತನವೂ ಮುಖ್ಯವಾದುದೂ ಆಗಿದೆ. ಜಾತಿಭೇದ ಸ್ವಲ್ಪವೂ ಇಲ್ಲವೆಂಬ ವಿಶೇಷತೆಯೂ ಆ ದೇವಾಲಯಕ್ಕಿದೆ. ತನ್ನ ಪ್ರತಿಷ್ಠಾಪನೆಗಳೆಲ್ಲವೂ ಹಾಗೆಯೇ ಇರಬೇಕೆಂಬ ಅಪೇಕ್ಷೆ ಸ್ವಾಮಿಗಳಿಗಿದೆ. ಇದನ್ನು ಹಲವು ಸಂದರ್ಭಗಳಲ್ಲಿ ಸ್ವಾಮಿಗಳು ಹೇಳಿದ್ದಾರಷ್ಟೇ ಅಲ್ಲದೆ ತಮ್ಮ ಕೆಲಸಗಳ ಮೂಲಕವೂ ತೋರಿಸಿಕೊಟ್ಟಿದ್ದಾರೆ.
ತಲಶ್ಶೇರಿ ದೇಗುಲದಲ್ಲಿ ಕೆಲವು ಜಾತಿಗಳವರಿಗೆ ಪ್ರವೇಶ ನೀಡುವುದಕ್ಕೆ ತೀಯಾ ಸಮುದಾಯದಲ್ಲಿರುವ ಸಂಪ್ರದಾಯವಾದಿಗಳಿಗೆ ಇಷ್ಟವಿಲ್ಲ ಎಂಬುದು ಸ್ವಾಮಿಗಳಿಗೆ ತಿಳಿದಿತ್ತು. ದೇವಾಲಯಕ್ಕೆ ‘ಜಗನ್ನಾಥ’ನ ಹೆಸರಿಡುವುದರ ಹಿಂದೆ ತನಗಿರುವ ವಿಶಾಲಾತ್ಮಕ ನಿಲುವನ್ನು ಜನಗಳಿಗೆ ತಿಳಿಸಿಯೂ ಇದ್ದರು.
ಮಂಗಳೂರಿನಲ್ಲಿ ನಡೆಸಿದ ಪ್ರತಿಷ್ಠಾಪನೆಯೊಂದಿಗೆ ಸ್ವಾಮಿಗಳ ದೇಗುಲ ಸ್ಥಾಪನೆಯ ಪ್ರಯತ್ನಗಳು ಕೇರಳದ ಒಂದು ತುದಿಯಿಂದ ಆರಂಭಗೊಂಡು ಅದರಾಚೆಗಿನ ಮತ್ತೊಂದು ಕೊನೆಯ ತನಕವೂ ವಿಸ್ತರಿಸಿ ನೆಲೆಗೊಂಡಿತು. ದೇಗುಲ ಸ್ಥಾಪನೆಯ ಕೆಲಸ ಮುಗಿದ ನಂತರ ಅವುಗಳನ್ನು ಉಳಿಸಿ ಬೆಳೆಸುವುದರ ಬಗ್ಗೆ ಸ್ವಾಮಿಗಳು ಹೆಚ್ಚು ಚಿಂತಿತರಾಗಿದ್ದರು. ತಾವು ಸ್ಥಾಪಿಸಿದ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ಶಿವಗಿರಿಯೇ ಕೇಂದ್ರವಾಗಿರಬೇಕೆಂದು ಅವರ ಬಯಕೆಯಾಗಿತ್ತು. ಎಲ್ಲಾ ವ್ಯವಸ್ಥೆಗಳನ್ನು ಅದಕ್ಕೆ ತಕ್ಕಂತೆಯೇ ರೂಪಿಸಿದ್ದರು. ಶಿವಗಿರಿ ಪ್ರತಿಷ್ಠಾಪನಾ ಸಮಿತಿಯವರೂ ಸ್ವಾಮಿಗಳ ಸಂಕಲ್ಪವನ್ನು ಅರಿತಿದ್ದರು. ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಪಲ್ಪು ಮುಂತಾದ ಪ್ರಮುಖರು ಮಂಗಳೂರಿನವರೆಗೂ ಹೋಗಿ ಸ್ವಾಮಿಗಳನ್ನು ಶಿವಗಿರಿಗೆ ಕರೆತಂದರು. ಅಷ್ಟೇ ಅಲ್ಲ, ಪ್ರತಿಷ್ಠಾಪನೆಗೆ ಸಂಬಂಧಿಸಿದ ಬಹು ಮುಖ್ಯ ಸಿದ್ಧತೆಗಳನ್ನು ಸ್ವಾಮಿಗಳ ಯೋಜನೆಯ ಅನುಸಾರವಾಗಿಯೇ ಮಾಡಲಾಯಿತು.
ಶಿವಗಿರಿಯ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಹಾಜರಿರುವುದಕ್ಕಾಗಿ ಸಾರ್ವಜನಿಕ ಮತ್ತು ದಾನಿಗಳ ಸಹಾಯದಿಂದ ನಿರ್ಮಾಣಗೊಂಡು ಸ್ವಾಮಿಗಳು ಪ್ರತಿಷ್ಠಾಪನೆ ಮಾಡಿದ 50ಕ್ಕೂ ಹೆಚ್ಚು ಚಿಕ್ಕ-ದೊಡ್ಡ ದೇಗುಲಗಳಿಗೆ ಆಹ್ವಾನಗಳನ್ನು ತಲುಪಿಸಲಾಗಿತ್ತು. ಇದಕ್ಕೆ ಓಗೊಟ್ಟು ಭಾಗವಹಿಸಿದ್ದ ದೇಗುಲಗಳ ಉತ್ಸವ ಮೂರ್ತಿಗಳನ್ನು ಆನೆಯ ಮೇಲಿನ ಮೆರವಣಿಗೆಯ ಮೂಲಕ ಶಿವಗಿರಿಗೆ ತರಲಾಯಿತು. ಸ್ವಾಮಿಗಳೇ ನಿಶ್ಚಯಿಸಿದಂತೆ ಮಲಯಾಳ ವರ್ಷ 1088ರ ಮೇಷ ಮಾಸದ 18ನೇ ದಿನ (ಏಪ್ರಿಲ್ 30, 1913) ಮಧ್ಯರಾತ್ರಿ ಮೂರು ಗಂಟೆಗೆ ಮಹಾದೇವನ ಪ್ರತಿಷ್ಠಾಪನೆ ನಡೆಯಿತು. ಐದು ಗಂಟೆಯ ಮಧ್ಯೆ ಶಾರದಾ ಪ್ರತಿಷ್ಠಾಪನೆಯನ್ನು ಸ್ವಾಮಿಗಳು ತಮ್ಮ ಪಾವನ ಹಸ್ತದಿಂದ ನೆರವೇರಿಸಿದರು.
ಅಂದುಕೊಂಡಿದ್ದಕ್ಕಿಂದ ಹೆಚ್ಚು ಚೆನ್ನಾಗಿಯೂ ವಿಜೃಂಭಣೆಯಿಂದಲೂ ಮಂಗಳಕರವಾಗಿಯೂ ಎಲ್ಲವೂ ನಡೆಯಿತೆಂಬುದು ಪ್ರತಿಷ್ಠಾಪನಾ ಸಮಿತಿಗೂ ಸ್ವಾಮಿಗಳಿಗೂ ಸಮುದಾಯಕ್ಕೂ ಸಾರ್ಥಕ್ಯದ ಭಾವವನ್ನು ತಂದಿತು. ಇಷ್ಟು ಬೃಹತ್ತಾದ, ಮುಖ್ಯವಾದ ಮತ್ತು ಎಲ್ಲದಕ್ಕೂ ಮಿಗಿಲಾಗಿ ವಿಜೃಂಭಣೆಯಿಂದ ಕೂಡಿದ ಮಹಾ ಉತ್ಸವವೊಂದನ್ನು ಈ ಮೊದಲು ಕೇರಳದ ತೀಯಾ ಜನಾಂಗದವರು ಯಾವತ್ತೂ ನಡೆಸಿರಲಿಲ್ಲ ಎಂಬುದಂತೂ ಖಚಿತ.
(ಮುಂದುವರಿಯುವುದು…)


[…] ಹಿಂದಿನ ಅಧ್ಯಾಯ ಇಲ್ಲಿ ಓದಿ: https://aralimara.com/2024/08/04/guru-46/ […]
LikeLike