ಬೌದ್ಧರಾಗುವುದು ಅಷ್ಟು ಸುಲಭದ ಮಾತೇ!?

ತ್ಯಾಗಮಯ ಥೇರಾವಾದದಿಂದ ತಂತ್ರಮಯ ವಜ್ರಯಾನದವರೆಗೆ ಬೌದ್ಧ ಧರ್ಮ ಪ್ರಯಾಣ ಬೆಳೆಸಿದ್ದರೂ ಅದರ ಹೃದಯದಲ್ಲಿ ಬುದ್ಧ ಇನ್ನೂ ಜೀವಂತ. ಹಾಗೆಂದೇ, ಉಳಿದೆಲ್ಲ ಬದಲಾವಣೆಗಳ ಆಚೆಗೂ ಬೌದ್ಧ ಧರ್ಮ ತೂಕ ಉಳಿಸಿಕೊಂಡಿರೋದು, ನಮಗೆ ಆಪ್ತವಾಗೋದು… । ಚೇತನಾ ತೀರ್ಥಹಳ್ಳಿ

ವೈಶಾಖ ಹುಣ್ಣಿಮೆ, ಸೃಷ್ಟಿಯ ಇತಿಹಾಸದಲ್ಲೇ ಅತಿ ವಿಶಿಷ್ಟವಾದ ಹುಣ್ಣಿಮೆ. ಎಲ್ಲ ಎಲ್ಲೆಗಳನ್ನೂ ದಾಟಿ, ಭೂಮಿಯ ಎಲ್ಲ ಭಾಗವನ್ನೂ ತಲುಪಿದ ಬುದ್ಧನೆಂಬ ಬೆಳಕು ಹುಟ್ಟಿದ್ದು, ಜ್ಞಾನೋದಯ ಪಡೆದಿದ್ದು, ಕಾಲಗರ್ಭಕ್ಕೆ ಮರಳಿದ್ದು – ಈ ಮೂರೂ ಘಟನೆಗಳು ನಡೆದಿದ್ದು ವೈಶಾಖ ಹುಣ್ಣಿಮೆಯಂದೇ.

ಬುದ್ಧ ಜಗತ್ತಿನ ಉದ್ದಗಲ ತಲುಪಿದ್ದು ಸರಳತೆಯಿಂದ.  ಯಾವುದೇ ರಿವಾಜುಗಳಿಲ್ಲದೆ, ದೈನಂದಿನ ಆಚರಣೆಗಳು ಬೇಕಿಲ್ಲದೆ, ಕೇವಲ ಮತ್ತು ಕೇವಲ ಬುದ್ಧನ ಚಿಂತನೆಗಳನ್ನು ಒಪ್ಪಿ, ಅನುಸರಿಸಲು ಯತ್ನಿಸುವ ಮಾತ್ರದಿಂದ ಯಾವುದೇ ವ್ಯಕ್ತಿ ಬೌದ್ಧರಾಗಬಹುದು; ಬುದ್ಧನ ಅನುಯಾಯಿ ಆಗಬಹುದು, ಅದು ಕೂಡಾ ತಾನು ಹುಟ್ಟಿನಿಂದ ಪಡೆದ ಮತ-ಧರ್ಮದ ಗುರುತು ಕಳೆದುಕೊಳ್ಳದೆ.

ಹಾಗೊಮ್ಮೆ ಯಾರಾದರೂ ಆ ಗುರುತುಗಳನ್ನು ಕಳೆದುಕೊಂಡು ಬೌದ್ಧರಾಗುವುದೇ ಆದರೆ, ಅಂಥವರನ್ನು ಬೌದ್ಧ ಧರ್ಮ ಕೈಚಾಚಿ ಅಪ್ಪಿಕೊಳ್ಳುತ್ತದೆ. ಅಲ್ಲಿ ಒತ್ತಾಯವಿಲ್ಲ, ಬೆದರಿಕೆ ಇಲ್ಲ, ಸಾಂಸ್ಥಿಕವಾಗಿ ತನ್ನವರ ಸಂಖ್ಯೆ ಎದ್ದು ತೋರಬೇಕೆನ್ನುವ ಹಪಾಹಪಿ ಇಲ್ಲ. ಆದ್ದರಿಂದಲೇ ಸಾವಿರಾರು ವರ್ಷಗಳ ಕಾಲ ಬೌದ್ಧ ಧರ್ಮ ಹಲವು ಹೇರುಗಳನ್ನು ಹೊತ್ತು ಬದಲಾಗುತ್ತ ನಡೆದಿದ್ದರೂ ಅದರ ಆತ್ಮ ಮುಕ್ಕಾಗದೆ ಉಳಿದುಕೊಂಡಿದೆ. ಇವತ್ತಿಗೂ ಬೌದ್ಧ ಧರ್ಮದಲ್ಲಿ ಬುದ್ಧ ಹೃದಯ ಉಳಿದುಕೊಂಡಿದೆ.

ಬುದ್ಧ – ಬೌದ್ಧ ಧರ್ಮ ಬರೀ ಭಾರತದ ಅಸ್ಮಿತೆ ಅಲ್ಲ, ಇಡೀ ಏಷ್ಯಾದ ಅಸ್ಮಿತೆ. ಮೊದಲಿಗೆ ಅಶೋಕನ ಕಾಲದಲ್ಲಿ, ನಂತರ ದಕ್ಷಿಣ ಭಾರತೀಯ ಬಿಕ್ಖುಗಳು, ಅನಂತರ ತಮಿಳರಸರು ಪೂರ್ವಕ್ಕೆ ಬೌದ್ಧ ಬೆಳಕನ್ನು ಒಯ್ದೊಯ್ದು ಬೆಳಗಿದರು. ಅವರಾದರೂ ಅದನ್ನು ಹೇಗೆ ತಮ್ಮದಾಗಿಸಿಕೊಂಡರು ಎಂದರೆ, ಮೂಲದ ಹಣತೆ ಇಂದು ಕ್ಷೀಣವಾಗಿದ್ದರೂ ಬುದ್ಧಬೆಳಕು ಅಲ್ಲೆಲ್ಲ ಹಲವಾಗಿ ನಂದಾದೀಪವಾಗಿ ಉರಿಯುತ್ತಲೇ ಇದೆ. ಆದ್ದರಿಂದಲೇ ಇಂದು ಅಲ್ಲಿಯ ಧಾರ್ಮಿಕ ಪಠ್ಯಗಳಿಗಿಂತ ಹೆಚ್ಚಾಗಿ ಬುದ್ಧ, ಜನಪದಗಳಲ್ಲಿ ಹಾಸುಹೊಕ್ಕಾಗಿ ಹೋಗಿದ್ದಾನೆ.

ನಾವು ಬುದ್ಧನೆನ್ನುವ ಬುದ್ಧ ಕೇವಲ 80 ವರ್ಷ ಬದುಕಿದ್ದ ಸಮಣ. ಅವನು ಸಂಘ ಸ್ಥಾಪಿಸಿದ್ದು ಧ್ಯಾನ ವಿಧಾನಗಳನ್ನು ಹೇಳಿಕೊಡಲಿಕ್ಕೆ, ಸತ್ಯ, ಅಹಿಂಸೆ, ಶೀಲ, ಸಹಜತೆಯೇ ಮೊದಲಾದ ಸರಳ – ನೇರ ಬದುಕಿನ ವಿಧಾನ ರೂಢಿ ಮಾಡಿಸಲಿಕ್ಕೆ. ತಾರತಮ್ಯ ಹೋಗಲಾಡಿಸಲಿಕ್ಕೆ, ಮೋಕ್ಷ ಹೊಂದಲು ಮತ್ಯಾವುದೋ ಪ್ರಾಣಿಯ ತಲೆ ಕಡಿಯಬೇಕಿಲ್ಲ, ನಿಮ್ಮ ನಿಮ್ಮ ತಲೆ ಶಾಂತವಾಗಿದ್ದರೆ ಸಾಕು ಎಂದು ಮನದಟ್ಟು ಮಾಡಿಸಲಿಕ್ಕೆ.

ನಾವು ಧರ್ಮ ಅನ್ನುವ ಬೌದ್ಧ ಧರ್ಮ ಮೂಲದಲ್ಲಿ ಇವಿಷ್ಟೇ.

ಆದರೆ ಇವತ್ತು ದೇವ – ದೇವತೆಗಳ ರೂಪದಲ್ಲಿ, ಯಕ್ಷ – ಕಿಂಕರ ವೇಷದಲ್ಲಿ, ಬೋಧಿಸತ್ವರಾಗಿ, ತಂತ್ರಸಾಧಕರಾಗಿ, ಹಲವು ಸೂತ್ರ – ಹಲವು ಪಠ್ಯಗಳ ಪುಸ್ತಕ ರೂಪದಲ್ಲೆಲ್ಲ ಕಂಡುಬರುವುದು ಬುದ್ಧನ ನಂತರದ್ದು; ಅನುಯಾಯಿಗಳ ಸೃಷ್ಟಿ ಮಾತ್ರ.

ಆದ್ದರಿಂದಲೇ, ನಿರೀಶ್ವರವಾದಿ ಬುದ್ಧನ ಧರ್ಮದಲ್ಲಿ ಗಣೇಶ, ಅವಲೋಕಿತೇಶ, ತಾರಾ, ಅಮಿತಾಭ ಇತ್ಯಾದಿ ಇತ್ಯಾದಿ ಎಷ್ಟೊಂದು ದೇವರು, ಎಷ್ಟೊಂದು ಆಕಾರಗಳು! ಪೂಜಾ ವಿಧಾನಗಳು, ವಾದ್ಯಗಳು, ನರ್ತನಗಳು, ದೊಡ್ಡ ದೊಡ್ಡ ಗೋಪುರದ ಮಹಾದೇಗುಲಗಳು, ಅವುಗಳಲ್ಲಿ ಬಹುತೇಕ ಚಿನ್ನದ ಬುದ್ಧ ವಿಗ್ರಹಗಳು!!

ಬುದ್ಧನ ಬೋಧನೆಗಳ ಸರಳತೆ, ಜನಸಾಮಾನ್ಯರಿಗೆ ಸಹ್ಯವಾಗದೆ ಹೋಗಿದ್ದೇ ಈ ಎಲ್ಲ ಬೆಳವಣಿಗೆಗೆ ಕಾರಣ. ಬೌದ್ಧರಾಗುವುದು ಸುಲಭವೇ ಆದರೂ, ಸುಲಭವಾದದ್ದು ಎಲ್ಲರಿಗೂ ಸಾಧ್ಯವಾಗುವುದಿಲ್ಲವಲ್ಲ!

ಜನರಿಗೆ… ನಮಗೆ, ರೋಚಕತೆ ಬೇಕು. ಸ್ವರ್ಗ ನರಕಗಳು ಬೇಕು. ದೇವರು ದಿಂಡರು ಬೇಕು. ವರದಾನ – ಶಾಪಗಳು ಬೇಕು. ನಮ್ಮ ಅಹಂಕಾರಕ್ಕೆ ಸವಾಲು ಹಾಕುವ ಆಚರಣೆಗಳು ಬೇಕು. ಆದರೆ ಬುದ್ಧನ ಬೋಧನೆಗಳಲ್ಲಿ ಇದ್ಯಾವುದೂ ಇಲ್ಲ.

“ಸಹಜವಾಗಿರಿ! ಸರಿಯಾಗಿರಿ. ಸರಿಯಾಗಿರುವುದು ಅಂದರೆ ಮತ್ತೊಬ್ಬರಿಗೆ ತೊಂದರೆ ಕೊಡದಿರುವುದು.” – ಇಷ್ಟೇ ಬುದ್ಧನ ಬೋಧನೆಯ ಸಾರಾಂಶ. “ನೆನ್ನೆ ಹುಟ್ಟಿದ್ದೇವೆ, ನಾಳೆ ಸಾಯುತ್ತೇವೆ, ನಡುವಿನ ನಾಟಕಕ್ಕೆ ತಲೆಕೊಟ್ಟು ಬದುಕನ್ನು ದುಃಖಮಯ ಮಾಡಿಕೊಳ್ಳಬೇಡಿ” – ಇದು ಅವನು ಬೋಧಿಸಿದ ಜೀವನರಹಸ್ಯ. ಬದುಕು ಇಷ್ಟೇ, ಆದ್ದರಿಂದ “ಇರುವಷ್ಟು ಕಾಲ ಶಾಂತಿಯಿಂದ ಇರಬೇಕು” – ಅನ್ನುವ ಅರಿವೇ ಮಹಾಬೋಧೆ. ಈ ವಾಕ್ಯವನ್ನು ಹೃದಯದಿಂದ ಅರಿತಾಗಲಷ್ಟೇ ಮೋಕ್ಷ.

ಇಷ್ಟು ಸರಳವಾದ್ದು ನಮಗೆ ಒಗ್ಗುವುದು ಹೇಗೆ? ಬಣ್ಣಗಳಲ್ಲೇ ಬದುಕುವ ನಮಗೆ ಬುದ್ಧನ ಕಾಷಾಯ ವಸ್ತ್ರ ರುಚಿಸುವುದೇ? ಆದ್ದರಿಂದಲೇ ಬೌದ್ಧ ಧರ್ಮದ ವೃಕ್ಷಕ್ಕೂ ಹಲವು ಕವಲು.

ಅದೇನಿದ್ದರೂ… ಮೊದಲೇ ಹೇಳಿದಂತೆ, ತ್ಯಾಗಮಯ ಥೇರಾವಾದದಿಂದ ತಂತ್ರಮಯ ವಜ್ರಯಾನದವರೆಗೆ ಬೌದ್ಧ ಧರ್ಮ ಪ್ರಯಾಣ ಬೆಳೆಸಿದ್ದರೂ ಅದರ ಹೃದಯದಲ್ಲಿ ಬುದ್ಧ ಇನ್ನೂ ಜೀವಂತ. ಹಾಗೆಂದೇ, ಉಳಿದೆಲ್ಲ ಬದಲಾವಣೆಗಳ ಆಚೆಗೂ ಬೌದ್ಧ ಧರ್ಮ ತೂಕ ಉಳಿಸಿಕೊಂಡಿರೋದು, ನಮಗೆ ಆಪ್ತವಾಗೋದು.

ಇಂದು ಬುದ್ಧ ಹುಣ್ಣಿಮೆ. ಮಾನಸಿಕವಾಗಿ, ಬೌದ್ಧಿಕವಾಗಿ ಇನ್ನೂ ಸಾಕಷ್ಟು ಹಂತಗಳಲ್ಲಿ ವಿಕಾಸವಾಗಬೇಕಿರುವ ನಮ್ಮಂಥ ಜನಸಾಮಾನ್ಯರಿಗೆ ಬುದ್ಧ ಬೋಧೆಯನ್ನು ಯಥಾವತ್ ಅನುಸರಿಸುವುದು ಕಷ್ಟದ ಮಾತು. ಹೆಚ್ಚೆಂದರೆ ಬುದ್ಧನ ಚಿತ್ರವನ್ನು ಮುಂದಿಟ್ಟುಕೊಂಡು, ಅದು ಸೂಸುವ ಶಾಂತಿಯನ್ನು ಆತ್ಮದಿಂದ ಹೀರಿಕೊಂಡು, ಮತ್ತೊಬ್ಬರಿಗೂ ಹಂಚಲು ಆಗಾಗ ಪ್ರಯತ್ನಿಸಬಹುದು. ತಾರತಮ್ಯ ತೋರದೆ ಬದುಕಬಹುದು. ಸ್ವಾರ್ಥ ಮೀರಿ ಕರುಣೆ ತೋರಲು ಯತ್ನಿಸಬಹುದು.

ಕೊನೆಪಕ್ಷ ಪ್ರಾಮಾಣಿಕವಾಗಿ ಇಷ್ಟಾದರೂ ಮಾಡಲು ಸಾಧ್ಯವಾದರೆ, ಅದು ನಮ್ಮ ಬುದ್ಧೋಪಾಸನೆ. ಅದು ನಮ್ಮ ಬೌದ್ಧ ಪ್ರೀತಿ. ‘ ಧಮ್ಮ ‘ ದ ದಾರಿಯಲ್ಲಿ ನಮ್ಮ ದಿಟ್ಟ ಹೆಜ್ಜೆ.


ಎಲ್ಲ ಓದುಗರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.