ಸಾವಿನ ಪ್ರಶ್ನೆಗೆ ಬದುಕಿನ ಉತ್ತರ । ಅಧ್ಯಾತ್ಮ ಡೈರಿ #1

ನಾವು ಯಾರೂ ‘ನಾನೂ ಸಾಯ್ತೀನಾ?’ ಅನ್ನುವ ಪ್ರಶ್ನೆಯನ್ನು ಎಚ್ಚರದ ಸ್ಥಿತಿಯಲ್ಲಿ ಕೇಳಿಕೊಳ್ಳೋದಿಲ್ಲ. ಸಾವಿನ ಪ್ರಶ್ನೆ ಬಂದಾಗ ಜಾರಿಕೊಳ್ಳಲು ದಾರಿ ಹುಡುಕುವವರು ನಾವು. ಮತ್ತೊಬ್ಬರ ಶವ ಕಂಡಾಗ ಸ್ಮಶಾನ ವೈರಾಗ್ಯದಲ್ಲಿ ಕಣ್ಣೀರು ಸುರಿಸುತ್ತೇವೆ. ಮರುದಿನಕ್ಕೆ ನಾವು ಅಮರ ಚಿರಂಜೀವಿಗಳಾಗಿಬಿಟ್ಟಿರುತ್ತೇವೆ. ಪ್ರತಿಕ್ಷಣವೂ ನನಗೆ ಸಾವಿದೆ ಅನ್ನುವ ಎಚ್ಚರವಿದ್ದರೆ ಮಾತ್ರ, ನಮ್ಮ ಬದುಕೂ ಎಚ್ಚರದಿಂದ ಕೂಡಿರುತ್ತದೆ. ಸಾವನ್ನು ಮರೆತರೆ, ಬದುಕೂ ಮೈಮರೆಯುತ್ತದೆ… । ಚೇತನಾ ತೀರ್ಥಹಳ್ಳಿ

‘ನಾನೂ ಸಾಯ್ತೀನಾ?’ ಸಿದ್ಧಾರ್ಥ ಕೇಳಿದ. ಅರಮನೆಯಿಂದ ಹೊರಗೆ ವಿಹಾರ ನಡೆಸಿದ್ದವನ ಕಣ್ಣಿಗೆ ಮೊದಲ ಸಲ ಜೀವವಿಲ್ಲದ ದೇಹ ಕಂಡಿತ್ತು. ಸತ್ತ ಮನುಷ್ಯ, ಹೆಣವಾದ ಮನುಷ್ಯನನ್ನು ಅವನು ಕಂಡಿದ್ದ. ರಥ ನಡೆಸುತ್ತಿದ್ದ ಚೆನ್ನನನ್ನು ಕೇಳಿದ, ‘ಏನದು?’

‘ಅದು ಹೆಣ’

‘ಹಾಗಂದರೇನು?’

‘ಸತ್ತವರೆಲ್ಲ ಹೆಣವಾಗ್ತಾರೆ.

‘ಸತ್ತವರು ಅಂದರೆ?’

‘ಜೀವ ಹೋಗೋದು. ಒಂದಲ್ಲ ಒಂದು ದಿನ ಎಲ್ಲರ ಜೀವವೂ ಹೋಗುತ್ತೆ. ಕಾಲ ಬಂದಾಗ ಎಲ್ಲರೂ ಸಾಯ್ತಾರೆ’

‘ನಾನೂ!?’ ಆಳರಸನ ಮಗನಾದ ನನಗೆ ಇದರಿಂದ ವಿನಾಯಿತಿ ಇದೆಯೆಂದು ಸಿದ್ಧಾರ್ಥ ಅಂದುಕೊಂಡಿದ್ದನೇನೋ. ಚೆನ್ನ ಉತ್ತರಿಸದಿದ್ದರೂ ಅವನಿಗದು ಸಿಕ್ಕುಹೋಗಿತ್ತು. ಗಂಭೀರವಾಗಿ, ‘ಮನೆಗೆ ನಡಿ’ ಅಂದ.

ನನಗೂ ಸಾವಿದೆ, ನಾನು ಯಾರೇ ಆಗಿದ್ದರೂ ಏನೇ ಆಗಿದ್ದರೂ ನಾನೂ ಸಾಯ್ತೀನಿ ಅನ್ನುವ ಅರಿವು, ಸಿದ್ಧಾರ್ಥನಿಗೆ ನಿಜವಾದ ಬದುಕಿನ ಬಾಗಿಲು ತೆರೆದಿತ್ತು. ಇರುವಷ್ಟು ದಿನ ಬದುಕನ್ನು ಸಾರ್ಥಕವಾಗಿ, ಸಂತೋಷವಾಗಿ ಬಾಳಲು ಅವನು ಬಯಸಿದ. ಅಂಥ ಸಾರ್ಥಕತೆ, ಅಂಥ ಸಂತೋಷ ಒದಗುವುದು ಪ್ರಜ್ಞೆ ಶುದ್ಧವಾಗಿದ್ದರೆ ಮಾತ್ರ. ಪ್ರಜ್ಞೆ ಶುದ್ಧವಾಗೋದು – ನಾವೆಲ್ಲರೂ ಸೃಷ್ಟಿಯ ಕಣಗಳು, ಇಲ್ಲಿ ಮೇಲು ಕೀಳುಗಳಿಲ್ಲ, ಇರುವಷ್ಟು ದಿನ ಸಹಜೀವಿಗಳಿಗೆ ಧಕ್ಕೆಯಾಗದಂತೆ ಬಾಳಬೇಕು, ಯಾತನೆಗೆ ಕೊನೆಯಿಲ್ಲ, ಈ ಯಾತನೆಯ ಚಕ್ರದಡಿ ಸಿಲುಕದಂತೆ ಜಾಗೃತರಾಗಬೇಕು – ಅನ್ನುವ ಜ್ಞಾನೋದಯದಿಂದ. ಈ ಅಷ್ಟೂ ಅಂಶಗಳನ್ನು ಅರಿವಿನಿಂದ ತಾವೇ ತಾವಾಗಿ ಕಂಡುಕೊಂಡ ಕ್ಷಣದಿಂದ.

~

ಯಾರು ಬೇಕಾದ್ರೂ ಬುದ್ಧ ಆಗಬಹುದು. ಆದರೆ, ಎಲ್ಲರೂ ಬುದ್ಧ ಆಗಲಾಗದು.

ಯಾಕೆಂದರೆ, ನಾವು ಯಾರೂ ‘ನಾನೂ ಸಾಯ್ತೀನಾ?’ ಅನ್ನುವ ಪ್ರಶ್ನೆಯನ್ನು ಎಚ್ಚರದ ಸ್ಥಿತಿಯಲ್ಲಿ ಕೇಳಿಕೊಳ್ಳೋದಿಲ್ಲ. ಸಾವಿನ ಪ್ರಶ್ನೆ ಬಂದಾಗ ಜಾರಿಕೊಳ್ಳಲು ದಾರಿ ಹುಡುಕುವವರು ನಾವು. ಮತ್ತೊಬ್ಬರ ಶವ ಕಂಡಾಗ ಸ್ಮಶಾನ ವೈರಾಗ್ಯದಲ್ಲಿ ಕಣ್ಣೀರು ಸುರಿಸುತ್ತೇವೆ. ಮರುದಿನಕ್ಕೆ ನಾವು ಅಮರ ಚಿರಂಜೀವಿಗಳಾಗಿಬಿಟ್ಟಿರುತ್ತೇವೆ. ಪ್ರತಿಕ್ಷಣವೂ ನನಗೆ ಸಾವಿದೆ ಅನ್ನುವ ಎಚ್ಚರವಿದ್ದರೆ ಮಾತ್ರ, ನಮ್ಮ ಬದುಕೂ ಎಚ್ಚರದಿಂದ ಕೂಡಿರುತ್ತದೆ. ಸಾವನ್ನು ಮರೆತರೆ, ಬದುಕೂ ಮೈಮರೆಯುತ್ತದೆ.

‘ಹಾಗೆ ಪ್ರತಿ ದಿನ, ಪ್ರತಿ ಕ್ಷಣ ನಾನು ಸಾಯುತ್ತೇನೆ ಅನ್ನುವ ಭಯದಲ್ಲಿ ಬದುಕುವ ಅಗತ್ಯವಿದೆಯಾ?’ ಅನ್ನುವ ಪ್ರಶ್ನೆ ಬರುತ್ತದೆ. ಇದಕ್ಕೆ ಉತ್ತರ ಹೌದು ಮತ್ತು ಇಲ್ಲ.

ಪ್ರತಿ ದಿನ, ಪ್ರತಿ ಕ್ಷಣ ನಾನು ಸಾಯುತ್ತೇನೆ ಅನ್ನುವ ಅರಿವಲ್ಲಿ ಬದುಕುವ ಅಗತ್ಯವಿದೆ. ಆದರೆ, ಅದಕ್ಕಾಗಿ ಭಯಪಡಬೇಕಿಲ್ಲ. ಅದು ಭಯಪಡಬೇಕಾದ ವಿಷಯವೇ ಅಲ್ಲ! ಯಾಕೆಂದರೆ, ಸಾವು ಸತ್ಯ. ಒಂದಲ್ಲ ಒಂದು ದಿನ ಬಂದೇ ತೀರುವ ಸತ್ಯ. ಸತ್ಯಕ್ಕೆ ಯಾರಾದರೂ ಭಯಪಡುತ್ತಾರಾ? ಅದನ್ನು ಒಪ್ಪಿಕೊಂಡ ಕ್ಷಣದಿಂದ ಬದುಕು ನಮ್ಮ ಹೆಗಲ ಮೇಲೆ ಕೈಹಾಕಿ ಗೆಳೆಯನಂತೆ ನಡೆಯತೊಡಗುತ್ತದೆ. ನಿರಾಕರಿಸಿದರೆ, ಒಳಗಿನ ವೈರಿಗಳ ಆರು ಸುತ್ತಿನ ಕೋಟೆಯೆದ್ದು, ಬದುಕನ್ನು – ಆನಂದಮಯ ಸಹಜ ಬದುಕನ್ನು – ದೂರ ಮಾಡುತ್ತದೆ. ನಾವು ಲೋಭ ಮೋಹ ಕಾಮ ಕ್ರೋಧ ಮದ ಮತ್ಸರಗಳ ಸುತ್ತಿನಲ್ಲಿ ಸಿಕ್ಕಿಕೊಂಡು, ಸಾವಿನ ಸತ್ಯ ತಾನಾಗೇ ಬಂದು ಅಪ್ಪಿಕೊಳ್ಳುವವರೆಗೂ ನರಳುತ್ತ ಬಾಳುತ್ತೇವೆ.

ಸಿದ್ಧಾರ್ಥ, ತನಗೂ ಸಾವಿದೆ ಎಂದು ಅರಿವಾದ ಕೂಡಲೇ ಅದನ್ನು ಒಪ್ಪಿಕೊಂಡ. ಅವನು ಭಯಪಡಲಿಲ್ಲ. ಅವನು ಅರಮನೆ ತೊರೆದು ಹೊರಟಿದ್ದು ಎಲ್ಲವನ್ನೂ ಕಳೆದುಕೊಳ್ಳುವ ಭಯದಿಂದಲ್ಲ. ಯಾತನೆಗೆ ಕಾರಣವಾಗುವ – ಕಳೆದುಕೊಳ್ಳುವ ಭಯಗಳನ್ನು ಮೀರಬೇಕೆಂದು. ಕಳೆಯಬಾರದೆಂದು ಕಟ್ಟಿಕೊಳ್ಳುವ ಬೇಲಿಗಳನ್ನು ದಾಟಬೇಕೆಂದು.

~

ಒಂದು ತತ್ವವಾಗಿ ಇದು ಬಹಳ ಚೆನ್ನಾಗಿದೆ. ಆದರೆ, ಕಾಯಕವೇ ಯುಗಧರ್ಮವಾಗಿರುವ ಈ ಕಾಲದಲ್ಲಿ ಬುದ್ಧನಂತೆ ಬಾಳಲು ಸಾಧ್ಯವೇ? ಮನೆ – ಜವಾಬ್ದಾರಿ ತೊರೆದು ಹೋಗಲು ಆಗುವುದೇ? ಈಗಿನ ಯುಗಧರ್ಮಕ್ಕೆ ಅದು ಸರಿಯೇ?

ಈ ಪ್ರಶ್ನೆಗಳು ಸಹಜ’ ಆದರೆ ಈ ಪ್ರಶ್ನೆಗಳು ತಪ್ಪು. ಬುದ್ಧನಂತೆ ಬಾಳುವುದೆಂದರೆ ಮನೆಬಿಟ್ಟು, ತಲೆ ಬೋಳಿಸಿಕೊಂಡು ಕಾವಿ ತೊಟ್ಟು, ಭಿಕ್ಷಾಪಾತ್ರೆ ಹಿಡಿದು ನಡೆದಾಡುವುದಲ್ಲ. ಬುದ್ಧನಂತೆ ಬಾಳುವುದೆಂದರೆ, ಅವನಂತೆ ಆಲೋಚಿಸುವುದು, ಅವನ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವುದು. ಅವನ ಕಾಲದಲ್ಲಿ ವೈರಾಗ್ಯವನ್ನು ವರ್ಬಲ್ ಆಗಿ ತೋರಿಸುವ ಅಗತ್ಯವಿತ್ತು. ಅದಿನ್ನೂ ಮನುಷ್ಯರ ಬೌದ್ಧಿಕ – ಭಾವನಾತ್ಮಕ ವಿಕಾಸದ ಆರಂಭಿಕ ಹಂತ. ಅದಾಗಿ ಸಾವಿರಾರು ವರ್ಷಗಳ ನಂತರವೂ ನಾವು ನಮ್ಮ ಡಿಟ್ಯಾಚ್‌ಮೆಂಟ್ ಅನ್ನು ಸಂಕೇತಗಳ ಮೂಲಕ ತೋರಿಸಬೇಕಿಲ್ಲ. ಕಬೀರ ಹೇಳುವಂತೆ, ‘ಸಂತೆಯಲ್ಲಿ ಸಂತರಂತೆ ನಿಲ್ಲುವ’ ಯುಗಧರ್ಮ ನಮ್ಮದು. ಶರಣರು ಹೇಳುವಂತೆ, ನಮಗೆ ‘ಕಾಯಕವೇ ಕೈಲಾಸ’. ಅದನ್ನು ಬಿಡಲಾಗದು.

ಆದರೆ, ಬುದ್ಧನಂತೆ ಸಾವಿಗೆ ಭಯಪಡದೆ ಬಾಳುವುದನ್ನು ರೂಢಿಸಿಕೊಳ್ಳಬಹುದು. ಸಾವಿನವರೆಗಿನ ಬದುಕನ್ನು ಯಾತನೆಯಿಂದ ಮುಕ್ತವಾಗಿಸಲು, ಒಳಗಿನ ಆರುವೈರಿಗಳ ಹಿಡಿತಕ್ಕೆ ಸಿಲುಕದಂತೆ ನಮ್ಮನ್ನು ಎಚ್ಚರದಿಂದ ಇರಿಸಿಕೊಳ್ಳಬಹುದು. ನಾವೆಲ್ಲರೂ ಸೃಷ್ಟಿಯ ಸಮಾನ ಕಣಗಳು ಅನ್ನುವುದನ್ನು ಅರ್ಥ ಮಾಡಿಕೊಂಡು ಮೇಲುಕೀಳೆಣಿಸದೆ ಬದುಕಬಹುದು. ಆಗ, ಬುದ್ಧನಿಗೆ ದೊರೆತ ಶಾಂತಿ ನಮಗೂ ಒದಗುವುದು.

 Quick tips: ಯಾರ ಮೇಲಾದ್ರೂ ಹೊಟ್ಟೆಕಿಚ್ಚಾಗ್ತಿದ್ಯಾ ಅಥವಾ ಸಿಟ್ಟು ಬರ್ತಿದ್ಯಾ? ‘ನಾನೂ ಸಾಯ್ತೀನಿ’ ಅನ್ನೋದನ್ನ ನೆನೆಸ್ಕೊಳೋಣ. ಈ ಸತ್ಯ ನಮ್ಮ ಅರಿವಿನಿಂದ, ನಮ್ಮ ಎಚ್ಚರದ ಸ್ಥಿತಿಯಿಂದ ಹೊಮ್ಮಿದ್ದೇ ಹೌದಾದ್ರೆ, ಆ ಕ್ಷಣ ನಾವು ಹೊಟ್ಟೆಕಿಚ್ಚಿಂದ, ಸಿಟ್ಟಿಂದ ಬಿಡುಗಡೆ ಪಡೀತೀವಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.