ಯಾರು ಜ್ಞಾನಿಗಳೋ ಅವರು ಸರಳವಾಗಿರುತ್ತಾರೆ, ಜನಜಂಗುಳಿಯಿಂದ ದೂರ ಇರುತ್ತಾರೆ, ಸಂಪತ್ತಿಗೆ ಕೈಚಾಚುವುದಿಲ್ಲ, ಅರಸನಿಗೆ ತಲೆ ಬಾಗುವುದಿಲ್ಲ. ತಮ್ಮಲ್ಲಿ ಏನಿದೆಯೋ ಅದೇ ಸಾಕಷ್ಟು ಅನ್ನುವ ಅರಿವು ಅವರನ್ನು ಹಣ – ಹೆಸರು – ಮನ್ನಣೆಗಳ ಹಪಾಹಪಿಯಿಂದ ದೂರ ಇಡುತ್ತದೆ. ಅಧಿಕಾರ ಕೇಂದ್ರದಿಂದ ದೂರ ಇಡುತ್ತದೆ । ಚೇತನಾ ತೀರ್ಥಹಳ್ಳಿ
ಮಹತ್ವಾಕಾಂಕ್ಷೆ ಹೊಂದಿರಲು ಬಹಳ ಸೋಮಾರಿ ನಾನು,
ಬಿಟ್ಟುಬಿಡುವೆನು ಜಗವನ್ನು ಅದರ ಪಾಡಿಗೆ.
ಹತ್ತು ದಿನ ಬೇಯುವಷ್ಟು ಅಕ್ಕಿ ಇದೆ ಜೋಳಿಗೆಯಲ್ಲಿ; ಕಟ್ಟಿಗೆ ಇದೆ, ಒಲೆಯುರಿಗೆ.
ಇರುಳ ಮಳೆ ಆಲಿಸುತ್ತ ಕಾಲು ಚಾಚಿ ಕೂರುವ ಬದಲು,
ಭ್ರಮೆ, ಜ್ಞಾನ ಎಂದೆಲ್ಲ ಹರಟುವುದೇಕೆ ಸುಮ್ಮನೆ?
18ನೇ ಶತಮಾನದ ರ್ಯೊಕಾನ್ ತೈಗು ತನ್ನನ್ನು ತಾನು ‘Too lazy to be ambitious’ ಅಂತ ಹೇಳಿಕೊಳ್ತಾನೆ. ತಿಳುವಳಿಕೆ ಉಳ್ಳವರೆಲ್ಲರೂ ಹೀಗೇ, ಮಹತ್ವಾಕಾಂಕ್ಷೆ ಹೊಂದುವ ವಿಷಯದಲ್ಲಿ ಮಹಾ ಸೋಮಾರಿಗಳು. ಅವರಿಗೆ ಏನಾದರೊಂದನ್ನು ಬಯಸುವ, ಹೊಂದುವ ಉತ್ಸಾಹವೇ ಇರೋದಿಲ್ಲ. ತಮ್ಮಲ್ಲಿ ಏನಿದೆಯೋ ಅದೇ ಸಾಕಷ್ಟು ಅನ್ನುವ ಅರಿವು, ಅವರನ್ನು ಹಣ – ಹೆಸರು – ಮನ್ನಣೆಗಳ ಹಪಾಹಪಿಯಿಂದ ದೂರ ಇಡುತ್ತದೆ.
ರ್ಯೊಕಾನ್ ತನ್ನನ್ನು ತಾನು ಸೋಮಾರಿ ಎಂದು ಹೇಳಿಕೊಳ್ಳುತ್ತಿರುವುದು, ಜನರನ್ನು ದೂರ ಇಡಲು. ಯಾಕೆಂದರೆ ಅವನಿಗೆ ಗೊತ್ತು, ತನ್ನ ಬಳಿ ಬರುವವರೆಲ್ಲ ತನ್ನ ಕಾಣ್ಕೆಯನ್ನು ಅರಿಯಲು ಬರುವವರಲ್ಲ, ತನ್ನ ಮಾತು ಆಲಿಸಲು ಬರುವವರಲ್ಲ, ಅವರೆಲ್ಲರೂ ತಮ್ಮ ಪಾಂಡಿತ್ಯ ಪ್ರದರ್ಶನ ಮಾಡಲು ಬರುವವರು ಅಥವಾ ನನ್ನನ್ನು ಪರೀಕ್ಷಿಸಲು ಬರುವವರು ಎಂದು. ಅವರು ಭ್ರಮೆಗಳ ಬಗ್ಗೆ ಮಾತಾಡುತ್ತಾರೆ, ಜ್ಞಾನೋದಯದ ಬಗ್ಗೆ ಮಾತಾಡುತ್ತಾರೆ. ಅವೆರಡೂ ಅನುಭವದಿಂದ ಅರಿಯಬೇಕಾದ ಸಂಗತಿಗಳಾದ್ದರಿಂದ, ಅವುಗಳ ಮಾತು ಅರ್ಥವಿಲ್ಲದ ಕಾಲಹರಣ ಅನ್ನೋದು ಅವನ ನಿಲುವು. ಇಂಥಾ ಅಸಂಬದ್ಧ ವಟಗುಡುವಿಕೆಯನ್ನು ಕಿವಿಯ ಮೇಲೆ ಬೀಳಿಸಿಕೊಳ್ಳುವುದಕ್ಕಿಂತ, ಒಬ್ಬನೇ ಕುಳಿತು ಮಳೆಯ ಸದ್ದು ಆಲಿಸುವುದೇ ಮೇಲೆಂದು ಅವನ ಅಭಿಪ್ರಾಯ.
ಇಂಥ ಕತೆಗಳು ಬಹುತೇಕ ಎಲ್ಲ ಮತ – ಪಂಥಗಳಲ್ಲೂ ಕಾಣಸಿಗುತ್ತವೆ. ಭಾರತೀಯ ಕತೆಗಳಲ್ಲಿ, ಸೂಫಿ ಕತೆಗಳಲ್ಲಿ, ಜೆನ್ ಕತೆಗಳಲ್ಲಿ, ಐತಿಹಾಸಿಕ ಕಟ್ಟುಕತೆಗಳಲ್ಲಿ… ಎಲ್ಲ ಕಡೆಯಲ್ಲೂ. ಯಾರು ಜ್ಞಾನಿಗಳೋ ಅವರು ಸರಳವಾಗಿರುತ್ತಾರೆ, ಜನಜಂಗುಳಿಯಿಂದ ದೂರ ಇರುತ್ತಾರೆ, ಸಂಪತ್ತಿಗೆ ಕೈಚಾಚೋದಿಲ್ಲ, ಅರಸನಿಗೆ ತಲೆ ಬಾಗೋದಿಲ್ಲ.
ಛಾಂದೋಗ್ಯ ಉಪನಿಷತ್ತಿನಲ್ಲಿ ಜಾನುಶ್ರುತಿ ಎಂಬ ರಾಜನ ಕತೆ ಇದೆ. ಆಡಳಿತದಲ್ಲೂ ಅಲೌಕಿಕ ಅರಿವಿನಲ್ಲೂ ಸಾಕಷ್ಟು ಸಾಧನೆ ಮಾಡಿದ್ದ ಜಾನುಶ್ರುತಿಗೆ ತಾನು ಇನ್ನೂ ಹೆಚ್ಚಿನ ಜ್ಞಾನ ಪಡೆದುಕೊಳ್ಬೇಕು, ಯಾವುದನ್ನು ಅರಿತ ಮೇಲೆ ಮತ್ತೇನೂ ಉಳಿಯೋದಿಲ್ವೋ ಅದನ್ನ ತಿಳಿದುಕೊಳ್ಬೇಕು ಅನ್ನುವ ಹಂಬಲ ಬಹಳವಿತ್ತು. ಅದನ್ನು ಬೋಧಿಸಬಲ್ಲವರು ಯಾರಾದರೂ ಇದ್ದಾರಾ ಎಂದು ಆಲೋಚಿಸುತ್ತ ಉದ್ಯಾನದಲ್ಲಿ ಪಲ್ಲಂಗದ ಮೇಲೆ ಒರಗಿದ್ದಾಗ, ಅವನ ತಲೆ ಮೇಲಿಂದ ಎರಡು ಹಂಸಗಳು ಹಾರಿ ಹೋದವು. ಆ ಹಂಸಗಳು ರೈಕ್ವನೆಂಬ ಬಂಡಿ ಹೊಡೆಯುವವನ ಬಗ್ಗೆ ಮಾತಾಡುತ್ತಿದ್ದವು. ಅವನು ಮಹಾ ಜ್ಞಾನಿಯೆಂದೂ ಅವನ ತೇಜಸ್ಸಿನ ಮುಂದೆ ಜಾನುಶ್ರುತಿ, ಸೂರ್ಯನ ಮುಂದಿನ ಹಣತೆಯಂತೆ ಎಂದೂ ಹೇಳುತ್ತಿದ್ದವು. ಹಂಸಗಳ ಸಂಭಾಷಣೆ ಕೇಳಿಸಿಕೊಂಡ ಜಾನುಶ್ರುತಿ ಕೂಡಲೇ ತನ್ನ ಮಂತ್ರಿಯನ್ನು ಕರೆಸಿ, ರೈಕ್ವನನ್ನು ಹುಡುಕಿ ತರುವಂತೆ ಆದೇಶಿಸಿದ. ರಾಜ್ಯದ ನಗರ – ಪಟ್ಟಣಗಳೆಲ್ಲ ಅಲೆದು ಸೋತ ಮೇಲೆ, ಕುಗ್ರಾಮದ ಅಂಚಿನಲ್ಲಿ ಮುರುಕು ಬಂಡಿಯ ಕೆಳಗೆ ಹರಕು ಬಟ್ಟೆ ತೊಟ್ಟು ಕುಳಿತಿದ್ದ ರೈಕ್ವ ಕಂಡ. ಅವನು ರಾಜನ ಆಹ್ವಾನ ಸ್ವೀಕರಿಸಲಿಲ್ಲ. ಕೊನೆಗೆ ರಾಜನೇ ಬಂದು ಅವನ ಮುಂದೆ ಮಂಡಿಯೂರಿದ.
ಇಂಥದೇ ಕತೆ, ಜಗತ್ತನ್ನೇ ಗೆದ್ದವನೆಂದು ಖ್ಯಾತಿ ಗಳಿಸಿದ್ದ ಅಲೆಗ್ಸಾಂಡರ್ ಬಗೆಗೂ ಇದೆ. ಅವನು ಕೂಡ ತನ್ನ ಆಹ್ವಾನ ನಿರಾಕರಿಸಿದ್ದ ತಕ್ಷಶಿಲೆಯ ಜ್ಞಾನಿ ಬಿಕ್ಖು ದಂಡನೀಸನನ್ನು ನೋಡಲು ತಾನಾಗಿ ತೆರಳಿದ್ದ. ನಂತರ ಡಯೋಜಿನೀಸ್ ವಿಷಯದಲ್ಲೂ ಇದು ಪುನರಾವರ್ತನೆಯಾಯಿತು.
ಭಾರತದ ಸೂಫಿ ನಿಜಾಮುದ್ದೀನ್ ಔಲಿಯಾ, ಸುಲ್ತಾನ್ ಅಲ್ಲಾ ಉದ್ ದಿನ್ ಖಿಲ್ಜಿ ತಾನು ಬರುತ್ತೇನೆಂದು ಹೇಳಿ ಕಳಿಸಿದಾಗ, “ನನ್ನ ಮನೆಗೆ ಎರಡು ಬಾಗಿಲುಗಳಿವೆ. ಒಂದು ಬಾಗಿಲಿನಿಂದ ಸುಲ್ತಾನ ಒಳ ಬಂದರೆ, ಮತ್ತೊಂದರಿಂದ ನಾನು ಹೊರಗೆ ಹೋಗ್ತೀನಿ” ಅಂದಿದ್ದನಂತೆ. ನಾನಾಯಿತು, ನನ್ನ ಪಡಾಯಿತು ಎಂದಿರುವವನ ಬಳಿ ಸುಲ್ತಾನನಿಗೇನು ಕೆಲಸ ಎಂಬ ಪ್ರಶ್ನೆ ಅವನದ್ದು. ಹಾಗೇ, ಚೀನಾದ ಜೆನ್ ಬಿಕ್ಖು ಜುವಾಂಗ್ ಜಿ, ಚಕ್ರವರ್ತಿಯ ಕರೆಯನ್ನು ನಿರಾಕರಿಸಿ ಮೀನು ಹಿಡಿಯುತ್ತ ಉಳಿದಿದ್ದನಂತೆ. ಜಗತ್ತಿನುದ್ದಗಲ ಎಲ್ಲ ಕತೆಗಳಲ್ಲೂ ಜ್ಞಾನಿಗಳು ಸಂಪತ್ತಿನಿಂದ, ಅಧಿಕಾರ ಕೇಂದ್ರದಿಂದ ದೂರ ಇದ್ದವರೇ.
ಇಂಥ ಕಡುನಿರ್ಲಿಪ್ತ ಜ್ಞಾನಿಗಳನ್ನು ಅರಸಿ ಹೋಗುವವರು, ಅವರ ಸಾಧನೆಯನ್ನು ಗುರುತಿಸುವವರು ಕೂಡ ಸಾಮಾನ್ಯರೇನಲ್ಲ. ಸಾಧಾರಣವಾಗಿ ತೋರುವ ಇಂಥವರ ಬಳಿ ಸಾಮಾನ್ಯರು ಹೋಗುವುದಿಲ್ಲ. ಅಂಥವರಿಗೆ ಬೇಗಡೆಯ ಝಗಮಗ ಬೇಕು. ಭಾರೀ ಪ್ರಚಾರ, ದೊಡ್ಡ ಕಟ್ಟಡ, ಪ್ರತಿಮೆ, ಭಿನ್ನ ಪೋಷಾಕುಗಳ ಮಾತುಗಾರರು ಬೇಕು. ಅವರು ಅಬ್ಬರವನ್ನೇ ಅರಿವು ಅಂದುಕೊಂಡಿರುವ ಅಮಾಯಕರು. ಆದರೆ, ಮಸುಕಾಗಿಯಾದರೂ ಜ್ಞಾನದ ಬೆಳಕು ಕಂಡವರಿಗೆ ಅದರ ಪರಿಚಯ ಇರುತ್ತದೆ. ಆದ್ದರಿಂದಲೇ ಜಾನುಶ್ರುತಿ ರೈಕ್ವನನ್ನು, ಅಲೆಗ್ಸಾಂಡರ್ ಡಯೋಜಿನೀಸನನ್ನು, ಅಕ್ಬರ್ ಹರಿದಾಸನನ್ನು, ದೊರೆ ವೂ ಬೋಧಿಧರ್ಮನನ್ನು, ದೊರೆ ಹನಾಜೊನೊ ಬಿಕ್ಖು ದೈತೊ ಕೊಕುಶಿಯನ್ನು ಹುಡುಕಿಕೊಂಡು ಹೋಗಿದ್ದು.
ನಮ್ಮ ಕಾಲದಲ್ಲಿ ಅಂಥ ಅಧ್ಯಾತ್ಮ ಸಾಧಕರು ಯಾಕೆ ಕಾಣೋದಿಲ್ಲ?
ಕಾರಣವಿಷ್ಟೇ – ಅಂಥವರನ್ನು ನಾವು ನೋಡುತ್ತಿಲ್ಲ.
ಕ್ವಿಕ್ ಬೈಟ್: ನಿಜಗುರುಗಳೇ ಇಲ್ಲವೆಂದು ಗೊಣಗುವ ಮೊದಲು ನಾವು ನಿಜದಲ್ಲಿ ಶಿಷ್ಯರಾಗಬೇಕು. ಶಿಷ್ಯರು ಸಿದ್ಧರಾದಾಗ ನಿಜಗುರು ಕಾಣಿಸಿಕೊಳ್ತಾರೆ.

