ಮುಗ್ಧ ಮಿಲರೇಪನ ಪ್ರಜ್ಞಾವಂತಿಕೆ : ಅಧ್ಯಾತ್ಮ Story #4

ಪ್ರಜ್ಞೆ ಇಲ್ಲದ ಮುಗ್ಧತೆ ವಿನಾಶಕಾರಿ. ಅಂಥವರು ಯಾವತ್ತೂ ಎಚ್ಚೆತ್ತುಕೊಳ್ಳುವುದಿಲ್ಲ. ಅವರು ಸಾಧಕರಲ್ಲ, ಮೂಢರಾಗಿ ಅಥವಾ ದುಷ್ಟರಾಗಿ ಕೊನೆಯಾಗುತ್ತಾರೆ. ಮಿಲರೇಪನಲ್ಲಿ ಪ್ರಜ್ಞೆ ಇತ್ತು. ಅದು ಎಚ್ಚೆತ್ತ ಘಳಿಗೆ ಅವನಿಗೆ ತಾನು ಕಲಿತ ವಿದ್ಯೆ, ಅದರಿಂದ ನಡೆಸಿದ ರಕ್ತಪಾತ – ಇವೆಲ್ಲ ಎಷ್ಟು ಅನಾಹುತಕಾರಿ ಎಂದು ಅರಿವಾಯಿತು… । ಚೇತನಾ ತೀರ್ಥಹಳ್ಳಿ

ಬೌದ್ಧ ವಜ್ರಯಾನದ ಮಹಾಯೋಗಿ ಮಿಲರೇಪನ ಬದುಕು ಬಹಳ ಆಸಕ್ತಿಕರವಾದುದು. ಮೂಲತಃ ಮಿಲ ತೋಷಾ ಹೆಸರಿನ ಈತ, ಶ್ರೀಮಂತ ಮನೆತನದಲ್ಲಿ ಹುಟ್ಟಿದವನು. ಇವನ ತಂದೆ ತೀರಿಕೊಂಡ ಮೇಲೆ ಇವನ ಚಿಕ್ಕಪ್ಪ ಅಷ್ಟೂ ಆಸ್ತಿ ಲಪಟಾಯಿಸಿ ಇವನನ್ನೂ ಇವನ ಅಮ್ಮನನ್ನೂ ಬೀದಿಗೆ ತಳ್ಳಿದನಂತೆ. ಅವನ ಮೇಲೆ ಸೇಡು ತೀರಿಸಿಕೊಳ್ಳಲು ಮಿಲ ತೋಷನ ಅಮ್ಮ, ಅವನಿಗೆ ವಾಮಾಚಾರ – ತಂತ್ರ ವಿದ್ಯೆ ಕಲಿಯಲು ಕಳಿಸಿದಳಂತೆ. ಚುರುಕು ಬುದ್ಧಿಯ ಶ್ರದ್ಧಾವಂತ ವಿದ್ಯಾರ್ಥಿ ಮಿಲರೇಪ ಬಹಳ ಬೇಗ ತಂತ್ರಮಂತ್ರಗಳನ್ನು ಹೃದ್ಗತ ಮಾಡಿಕೊಂಡು, ಅವನ ಚಿಕ್ಕಪ್ಪನ ಕುಟುಂಬದ ಮೇಲೆ ವಿನಾಶದ ಮಳೆಗರೆದನಂತೆ. ರಕ್ತದ ಹೊಳೆ ಹರಿದು ಅವನ ಅಮ್ಮನ ಸೇಡು ತೀರಿತು, ಆದರೆ ಮಿಲ ತೋಷ ಮಾತ್ರ ತನ್ನದೇ ಬಾಂಧವರ ಸರ್ವನಾಶ ಕಂಡು ಕನಲಿಹೋದ. ಒಂದು ಕ್ಷಣವೂ ನೆಮ್ಮದಿಯಿಂದ ಇರಲು ಸಾಧ್ಯವಾಗದೆ ಚಡಪಡಿಸಿದ. ಹೃದಯ ಕಲಕುತ್ತಿರುವ ಈ ಚಂಡಮಾರುತವನ್ನು ಶಾಂತಗೊಳಿಸೋದು ಹೇಗೆ? ಪ್ರಶ್ನೆ ಹೊತ್ತು ಊರು ತುಂಬ ಅಲೆದ.

‘ಬುದ್ಧನ ದಾರಿಯಲ್ಲಿ ನಡಿ’ ಯಾರೋ ಅಂದರು.

ಮಿಲರೇಪ, ಆಗಲೇ ಹೇಳಿದಂತೆ ಮಹಾ ಶ್ರದ್ಧಾವಂತ. ಮಹಾ ಮುಗ್ಧ. ಅವರ ಸಲಹೆಯಂತೆ ಬೌದ್ಧ ಗುರುವನ್ನು ಹುಡುಕುತ್ತ ಅಲೆಯತೊಡಗಿದ. ಗುರು ಮಾರ್ಪ ಲೋತ್ಸವನ ಭೆಟ್ಟಿಯಾಗುವವರೆಗೆ ಹಲವು ಅರೆಬರೆ ಸಾಧಕರ ಸಹವಾಸದಲ್ಲಿ ಅಭ್ಯಾಸ ನಡೆಸಬೇಕಾಯ್ತು.  ಗುರು ಮಾರ್ಪನೇನೂ ಇವನನ್ನು ಕಂಡ ಕೂಡಲೇ ಆದರಿಸಿ ಒಪ್ಪಿಕೊಳ್ಳಲಿಲ್ಲ. ಹಲವು ಪರೀಕ್ಷೆಗಳನ್ನು ಒಡ್ಡಿದ, ಮಿಲರೇಪ ಎಲ್ಲದರಲ್ಲೂ ತನ್ನ ಸಾಮರ್ಥ್ಯ ಸಾಬೀತುಪಡಿಸಿದ ಮೇಲಷ್ಟೆ ಅವನಿಗೆ ಶಿಷ್ಯತ್ವ ದೊರಕಿದ್ದು.

ಆಮೇಲೆ ಮಿಲರೇಪ ಕೇವಲ ಒಂದು ಹತ್ತಿಯ ಬಟ್ಟೆಯುಟ್ಟು, ಹಿಮಾಲಯದ ಕೊರೆವ ಚಳಿಯಲ್ಲಿ ವರ್ಷಗಟ್ಟಲೆ ಧ್ಯಾನಕ್ಕೆ ಕುಳಿತುಬಿಟ್ಟ. ರೇಪ ಅಂದರೆ ಹತ್ತಿಯ ಬಟ್ಟೆ. ಮಿಲ ತೋಷ, ಈಗ ಹತ್ತಿಯ ಬಟ್ಟೆಯುಟ್ಟ ಮಿಲರೇಪನಾದ. ಬಹಳ ಬೇಗ ಜ್ಞಾನ ಸಿದ್ಧಿ ದೊರಕಿಸಿಕೊಂಡು, ಒಂದೇ ಜೀವಿತದಲ್ಲಿ ಬುದ್ಧತ್ವ ಪಡೆದ.

ಕೆಲವೇ ವರ್ಷಗಳ ಹಿಂದೆ ಮಾಟ ಮಂತ್ರ ಕಲಿತು ವಿನಾಶದ ಹಾದಿ ಹಿಡಿದಿದ್ದ ಮಿಲರೇಪ, ಅದಕ್ಕೆ ಪೂರ್ತಿ ವಿರುದ್ಧವಾಗಿ ಮೌನ – ಶಾಂತಿಯ ಸಕಾರಾತ್ಮಕ ಸಿದ್ಧಿಯಿಂದ ಬುದ್ಧನಾಗಿದ್ದು ಹೇಗೆ? ವಾಮಾಚಾರದ ನಕಾರಾತ್ಮಕತೆ ಕಳಚಿದ್ದು ಹೇಗೆ?

ಉತ್ತರ: ಎಚ್ಚೆತ್ತ ಪ್ರಜ್ಞೆಯಿಂದ.

ಯಾರು ಮುಗ್ಧರೋ ಅವರಲ್ಲಿ ಶ್ರದ್ಧೆ ಬಹಳ. ಈ ಮುಗ್ಧರ ಶ್ರದ್ಧೆ ಎಷ್ಟು ಬಲವಾದ್ದು ಅಂದರೆ, ಅದು ತನ್ನೆದುರು ಇರಿಸಿದ್ದನ್ನು ತಾನೇ ಅದಾಗಿಬಿಡುವಷ್ಟು ಆವಾಹಿಸಿಕೊಳ್ಳುತ್ತದೆ, ತಾನೇ ಅದಾಗಿಬಿಡುತ್ತದೆ. ಬಾಲ್ಯದಲ್ಲೇ ಮಾಟ ಮಂತ್ರದ ಕಲಿಕೆ ಶುರು ಮಾಡಿದ್ದ ಮಿಲರೇಪ ಶ್ರದ್ಧೆಯಿಂದ ಬಹಳ ಬೇಗ ಅದನ್ನು ಕರಗತ ಮಾಡಿಕೊಂಡಿದ್ದ. ಎದುರಾಳಿಯೇ ಇಲ್ಲವೆನ್ನುವಷ್ಟು ದೊಡ್ಡ ಸಾಧಕನಾಗಿದ್ದ. ಆದರೆ, ಯಾವಾಗ ಅವನಿಗೆ ಈ ಸಾಧನೆಯಲ್ಲಿ ಸಾರ್ಥಕತೆ ಇಲ್ಲ ಅನ್ನುವುದು ಅರಿವಾಯಿತೋ, ಆಗ ಹೃದಯದಲ್ಲಿ ವೇದನೆ ಶುರುವಾಯಿತು.  

ಪ್ರಜ್ಞೆ ಇಲ್ಲದ ಮುಗ್ಧತೆ ವಿನಾಶಕಾರಿ. ಅಂಥವರು ಯಾವತ್ತೂ ಎಚ್ಚೆತ್ತುಕೊಳ್ಳುವುದಿಲ್ಲ. ಅವರು ಸಾಧಕರಲ್ಲ, ಮೂಢರಾಗಿ ಅಥವಾ ದುಷ್ಟರಾಗಿ ಕೊನೆಯಾಗುತ್ತಾರೆ. ಮಿಲರೇಪನಲ್ಲಿ ಪ್ರಜ್ಞೆ ಇತ್ತು. ಅದು ಎಚ್ಚೆತ್ತ ಘಳಿಗೆ ಅವನಿಗೆ ತಾನು ಕಲಿತ ವಿದ್ಯೆ, ಅದರಿಂದ ನಡೆಸಿದ ರಕ್ತಪಾತ – ಇವೆಲ್ಲ ಎಷ್ಟು ಅನಾಹುತಕಾರಿ ಎಂದು ಅರಿವಾಯಿತು. ಈ ಪಾಪ ತೊಳೆದುಕೊಳ್ಳದೆ ತನಗೆ ಮುಕ್ತಿ ಇಲ್ಲವೆಂದು ಖಾತ್ರಿಯಾಯಿತು. ಗುರು ಮಾರ್ಪನ ಬೋಧನೆಗಳನ್ನು ಅದೇ ಹಿಂದಿನ ಶ್ರದ್ಧೆಯಿಂದ ಹೃದ್ಗತ ಮಾಡಿಕೊಂಡ ಮಿಲರೇಪ, ಎಚ್ಚೆತ್ತ ಪ್ರಜ್ಞೆಯೊಂದಿಗೆ ಅದನ್ನು ಬೆರೆಸಿಕೊಂಡ. ನಿಜಾರ್ಥದಲ್ಲಿ ಸಾಧಕನಾದ. ಪಾಪದ ಹೊರೆಯಿಂದ ಬಿಡುಗಡೆ ಪಡೆದು ಮುಕ್ತನಾದ.

ಮನುಷ್ಯರು ಇತರ ಜೀವಿಗಳಿಗಿಂತ ಭಿನ್ನರಾಗಿರೋದು ನಮ್ಮಲ್ಲಿ ಪ್ರಜ್ಞೆ ಇದೆ ಅನ್ನುವ ಕಾರಣಕ್ಕೆ. ಬುದ್ಧಿಯಲ್ಲ, ಭಾವನೆಯೂ ಅಲ್ಲ, ಅವು ಇತರ ಜೀವಿಗಳಲ್ಲೂ ಅವುಗಳ ಮಟ್ಟಕ್ಕೆ ಸೀಮಿತವಾಗಿ ಇರುವಂಥವೇ. ಆದರೆ ಪ್ರಜ್ಞಾವಂತಿಕೆ ಮನುಷ್ಯರಲ್ಲಿ ಮಾತ್ರ. ಯಾವ ಮನುಷ್ಯರಲ್ಲಿ ಅದು ಎಚ್ಚರವಾಗಿರುತ್ತದೆಯೋ ಆ ಮನುಷ್ಯರು ನಿಜಾರ್ಥದಲ್ಲಿ ಮನುಷ್ಯರಾಗುತ್ತಾರೆ. ಉಳಿದವರು ಕೇವಲ ಮನುಷ್ಯರೂಪದ ಪ್ರಾಣಿಗಳಾಗೇ ಉಳಿದಿರುತ್ತಾರೆ. ಮನುಷ್ಯ ಜಾತಿಗೆ ಇರಬೇಕಾದ ಮಟ್ಟದಲ್ಲಿ ಅವರ ಬುದ್ಧಿ, ಭಾವನೆಗಳು ಇರುತ್ತವೆ. ಆದರೆ ಅವರು ಪರಿಪೂರ್ಣ ಮನುಷ್ಯರಾಗಲು ಬೇಕಾದ ‘ಪ್ರಜ್ಞೆ’ ಎಚ್ಚರದ ಸ್ಥಿತಿಯಲ್ಲಿ ಇಲ್ಲದ್ದರಿಂದ, ಅವರು ಪರಿಪೂರ್ಣ ಮನುಷ್ಯರಾಗಿರುವುದಿಲ್ಲ. ಈ ಪ್ರಜ್ಞೆ ಎಚ್ಚರಗೊಳ್ಳುವ ಹಂತಕ್ಕೆ, ಪ್ರಯತ್ನಕ್ಕೆ ಅಥವಾ ಸ್ಥಿತಿಗೆ ತಕ್ಕಂತೆ ಆಯಾ ಮನುಷ್ಯರ ಪರಿಪೂರ್ಣತೆಯ ಹಂತಗಳು ನಿರ್ಧಾರವಾಗುತ್ತವೆ, ಯಾರು ಅದರ ಅಂತಿಮ ಹಂತ ತಲುಪುತ್ತಾರೋ ಅವರು ಬುದ್ಧತ್ವ ಅಥವಾ ಜ್ಞಾನೋದಯ ಅಥವಾ ಮುಕ್ತಿ ಹೊಂದುತ್ತಾರೆ.

ಕ್ವಿಕ್ ಬೈಟ್ : ನಾವು ಹುಲು ಮಾನವರು, ನಮಗೆ ಮುಕ್ತಿಯೇನೂ ಬೇಕಿಲ್ಲ; ಆದರೆ, ತೀರಾ ಮನುಷ್ಯರೂಪದ ಪ್ರಾಣಿಗಳಾಗಿರುವುದೂ ಬೇಕಿಲ್ಲ – ಅನಿಸಿದರೆ, ನಮ್ಮ ಪ್ರಜ್ಞೆಯನ್ನು ಕೊನೆಪಕ್ಷ ಎಚ್ಚರದ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಅದು ವಿಕಸನಗೊಳ್ಳುವುದು, ಮೇಲಕ್ಕೇರುವುದೆಲ್ಲ ಬೇಕಿಲ್ಲ ಅನ್ನುವುದಾದರೆ; ಕೊನೆಪಕ್ಷ ನಿದ್ರೆಗೆ ಜಾರದಂತೆ ಜಾಗೃತವಾಗಿರಿಸಿಕೊಳ್ಳಬೇಕು. ಈ ಸ್ಥಿತಿಯಲ್ಲಿದ್ದರೆ ಮಾತ್ರ ನಾವು ಕೇಡಿಗರಾಗದೆ, ದುಷ್ಟರಾಗದೆ, ನೀಚರಾಗದೆ, ಸ್ವಾರ್ಥಿಗಳಾಗದೆ ಇರಲು ಸಾಧ್ಯ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.