ಜೀಸಸ್ ಹದಿನಾರನೇ ಶತಮಾನದ ಸ್ಪೇನ್ ಗೆ ವಾಪಸ್ ಬರುತ್ತಾನೆ. ಅಲ್ಲಿ ಅವನ ಮಾತುಕತೆ ಅಲ್ಲಿಯ ಪುರೋಹಿತನೊಬ್ಬನ ಜೊತೆ ನಡೆಯುತ್ತದೆ. ಅದು ಹೀಗಿದೆ… । ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಮಗೆ ಗೊತ್ತಿದೆಯಾ? ಜಗತ್ತಿನ ಇಲ್ಲಿಯವರೆಗಿನ ಸಾಹಿತ್ಯದ ಅತ್ಯಂತ ಶ್ರೇಷ್ಠ ಅಧ್ಯಾಯ ಯಾವುದು ? ಆ ಅಧ್ಯಾಯ ಯಾವ ಕಾದಂಬರಿಯಲ್ಲಿದೆಯೆಂದು?
ಹೌದು, ಆ ಅಧ್ಯಾಯ ಫಿದೋರ್ ದಾಸ್ತೋವಸ್ಕಿಯ ಅದ್ಭುತ ಕಾದಂಬರಿ Brothers Karmazov ನಲ್ಲಿದೆ, ಆ ಅಧ್ಯಾಯದ ಹೆಸರು, The Grand Inquisitor. ಈ ಅಧ್ಯಾಯವನ್ನು ಸಾಹಿತ್ಯ ಲೋಕ ಜಗತ್ ಸಾಹಿತ್ಯದ ಶ್ರೇಷ್ಠ ಅಧ್ಯಾಯ ಎಂದು ಗುರುತಿಸುತ್ತದೆ. ಏನಿದೆ ಈ ಅಧ್ಯಾಯದಲ್ಲಿ?
ಜೀಸಸ್ ಹದಿನಾರನೇ ಶತಮಾನದ ಸ್ಪೇನ್ ಗೆ ವಾಪಸ್ ಬರುತ್ತಾನೆ. ಅಲ್ಲಿ ಅವನ ಮಾತುಕತೆ ಅಲ್ಲಿಯ ಪುರೋಹಿತನೊಬ್ಬನ ಜೊತೆ ನಡೆಯುತ್ತದೆ. ಪುರೋಹಿತ, ಜೀಸಸ್ ನ ಕೇಳುತ್ತಾನೆ :
ನೀನು ಇಲ್ಲಿಯ ಜನರಿಗೆ ಸ್ವಾತಂತ್ರ್ಯ ದೊರಕಿಸಿಕೊಡಲು ಬಂದಿದ್ದೀಯಾ? ಆದರೆ ಇವರಿಗೆ ಸ್ವಾತಂತ್ರ್ಯ ಬೇಕಾಗಿಯೇ ಇಲ್ಲ. ಇವರಿಗೆ ಬೇಕಾಗಿರುವುದು ಒಂದು ಅಥಾರಿಟಿ, ಒಬ್ಬ ನಾಯಕ, ಒಂದಿಷ್ಟು ನಿಯಮ ಕಾನೂನುಗಳು. ಇವರಿಗೆ ತಮ್ಮನ್ನು ನಿಯಂತ್ರಣದಲ್ಲಿಡಲು ಒಬ್ಬ ಅಧಿಕಾರಿ ಬೇಕು. ಇದು ಸರಿ ಇದು ತಪ್ಪು ಎಂದು ಹೇಳುವ ವ್ಯಕ್ತಿ ಇವರಿಗೆ ಬೇಕು. ಇದನ್ನು ಧರಿಸಬೇಕು ಇದನ್ನು ಧರಿಸಬಾರದು, ಇದನ್ನು ತಿನ್ನಬೇಕು ಇದನ್ನು ತಿನ್ನ ಬಾರದು, ಇಂಥ ಬದುಕನ್ನು ಬದುಕ ಬೇಕು ಇಂಥದನ್ನು ಬದುಕಬಾರದು ಎಂದು ಮುಗುದಾಣ ಹಾಕುವ ಮನುಷ್ಯ ಇವರಿಗೆ ಬೇಕು. ಇವರಿಗೆ ತಮ್ಮ ಕ್ರಿಯೆಗಳ ಜವಾಬ್ದಾರಿ ಹೊರಲು ಯಾರಾದರೊಬ್ಬರು ಬೇಕು. ಇಂಥವನೊಬ್ಬ ಇರದೇ ಹೋದರೆ ತಮ್ಮಿಂದೇನಾದರೂ ತಪ್ಪಾದಾಗ ತಾವು ಯಾರನ್ನು ದೂಷಿಸಬೇಕು ಎನ್ನುವ ಚಿಂತೆ ಇವರದು.
ಇಂಥವರಿಗೆ ನೀನು ಸತ್ಯ ಹೇಳಿ ಕೊಡಲು ಬಂದಿದ್ದೀಯಾ? ಸತ್ಯವನ್ನು ಇವರು ಸಹಿಸುವುದೇ ಅಸಾಧ್ಯ. ಇವರಿಗೆ ಸಂತೈಸುವ ಸುಳ್ಳುಗಳು ಬೇಕು, ಇವರಿಗೆ ಸುಂದರ ಸುಳ್ಳುಗಳು ಬೇಕು. ಇವರು ಮಾತನಾಡಬಲ್ಲರು, ಪುಸ್ತಕ ಬರೆಯ ಬಲ್ಲರು, ಭಾಷಣ ಮಾಡಬಲ್ಲರು, ವಾದ ಮಾಡಬಲ್ಲರು, ಹೊಡೆದಾಡಬಲ್ಲರು, ಸಾಯಬಲ್ಲರು, ಆದರೆ ಸತ್ಯವನ್ನು ಸಹಿಸಿಕೊಳ್ಳುವುದು ಇವರಿಗೆ ಅಸಾಧ್ಯ. ಸತ್ಯವನ್ನೇನಾದರೂ ಕೇಳಿದರೆ ಇವರು ಹುಚ್ಚರಾಗಿ ಬಿಡಬಹುದು, ಸತ್ತು ಹೋಗಿ ಬಿಡಬಹುದು. ಮನುಷ್ಯರ ಸ್ವಭಾವ ನಿನಗೆ ಸರಿಯಾಗಿ ಇನ್ನೂ ಗೊತ್ತಿಲ್ಲ, ಇವರ ಮಾತು ಕೇಳುತ್ತ ಕುಳಿತು ಬಿಡಬೇಡ, ಇವರ ಬೇಡಿಕೆಗಳ ಬಗ್ಗೆ ತಲೆಕೆಡಿಸಿಕೊಳ್ಳ ಬೇಡ. ನನ್ನ ಮಾತು ಕೇಳು ಬಂದ ಹಾಗೆಯೇ ಹೋಗಿಬಿಡು.

