ವಚನ ವೈವಿಧ್ಯ#32 : ಮೀರಿ ಹಾರಿದ ಹಕ್ಕಿ: ಮನುಮುನಿ ಗುಮ್ಮಟದೇವ

ಆಧುನಿಕ ಕವಿತೆಯಂತೆ ಇರುವ ಈ ವಚನವು ಅನುಭಾವದ ವಿಚಿತ್ರ ಗುಣವನ್ನು ವಿವರಿಸುವಂತೆ ತೋರುತ್ತದೆ । ಓ.ಎಲ್.ನಾಗಭೂಷಣ ಸ್ವಾಮಿ

ಹಾರುವ ಹಕ್ಕಿಯ ಹಿಡಿದೆ
ಬೀಸುವ ಗಾಳಿಯ ಹಿಡಿದೆ
ವೈಶಾಖದ ಬಿಸಿಲ ಹಿಡಿದು ಜಗವ ಹಾಸಿ ಕಟ್ಟಿದೆ

ಒಂದು ತಾರು ಗಂಟು
ಒಂದು ಜಿಗುಳು ಗಂಟು,
ಒಂದು ಕುರುಹು ಗಂಟು

ಮೂರರ ಮುದ್ರೆಯ ಮೀರಿ ಹಾರಿತ್ತು ಹಕ್ಕಿ
ಬೀಸಿತ್ತು ಗಾಳಿ
ಹುಯ್ಯಿತ್ತು ಬಿಸಿಲು
ಬಿಸಿಲ ಢಗೆ ತಾಗಿ
ವಸುಧೆಯವರೆಲ್ಲರೂ
ಬಾಯಿ ಕಿಸವುತ್ತಿದ್ದರು.
ಕಿಸುಕುಳರ ನೋಡಿ
ಶರೀರದ ಗೂಡಿನ ಒಡೆಯ
ಗುಮ್ಮಟನ ಪ್ರಾಣ
ಅಗಮ್ಯೇಶ್ವರಲಿಂಗ ಒಡಗೂಡುತ್ತಿದ್ದ ̇[̤̆೮.೧೦೪೧]

[ತಾಱುಗಂಟು-ಸಡಿಲ ಗಂಟು, ಗೊಂಚಲು ಗಂಟು, ಗೊಂದಲದ ಗಂಟು; ಜಿಗುಳಿ ಗಂಟು-ಜೀರ್ಕುಣಿಕೆ, ಜಾರುಗಂಟು, ಸರಿಗಂಟು; ಕುರುಹು ಗಂಟು-ಗುರುತಿನ ಗಂಟು; ಕಿಸುವುತಿದ್ದರು-ದೊಡ್ಡದಾಗಿ ತೆರೆಯುತ್ತಿದ್ದರು; ಕಿಸುಗುಳ-ಕೊಳಕ, ಕ್ಷುಲ್ಲಕ/ಕೆಂಪುತಿರುಗಿದ; ಒಡಗೂಡು-[ಒಡೆಗೂಡು?] ಒಡೆದು, ಪುಡಿಗುಟ್ಟು]

ಹಾರುವ ಹಕ್ಕಿ, ಬೀಸುವ ಗಾಳಿ, ಬೇಸಗೆಯ ಬಿಸಿಲು ಎಲ್ಲವನ್ನೂ ಹಿಡಿದು ಜಗತ್ತನ್ನು ಹಾಸಿ, ಸುತ್ತಿ ಕಟ್ಟಿದೆ. ಸರುಗುಣಿಕೆ, ಗೊಂಚಲು ಗಂಟು ಕೊನೆಗೆ ಗುರುತಿನ ಮುದ್ರೆಯಂಥ ಗಂಟು ಹಾಕಿದೆ. ಈ ಎಲ್ಲ ಗಂಟು, ಮುದ್ರೆಗಳನ್ನು ಮೀರಿ ಹಕ್ಕಿ ಹಾರಿತು, ಗಾಳಿ ಬೀಸಿತು, ಬಿಸಿಲು ಸುರಿದಿತ್ತು. ಬಿಸಲ ಧಗೆ ತಾಕಿತೆಂದು ಈ ಭೂಮಿಯವರೆಲ್ಲರೂ ಬಾಯಿ ಬಾಯಿ ಬಿಟ್ಟರು. ಬೇಗೆಯಲ್ಲಿ ಬೆಂದು ಬಾಯಿ ತೆಗೆದು ಕೊಳಕಾಗಿ ಕಾಣುತಿದ್ದವರನ್ನು ಶರೀರವೆಂಬ ಗೂಡಿನ ಒಡೆಯ, ಅಗಮ್ಯೇಶ್ವರ ಲಿಂಗ ಒಡಗೂಡುತಿದ್ದ/ಪುಡಿಗುಟ್ಟುತ್ತಿದ್ದ.

ಆಧುನಿಕ ಕವಿತೆಯಂತೆ ಇರುವ ಈ ವಚನವು ಅನುಭಾವದ ವಿಚಿತ್ರ ಗುಣವನ್ನು ವಿವರಿಸುವಂತೆ ತೋರುತ್ತದೆ. ಶರೀರವೇ ಜಗತ್ತು, ಆ ಶರೀರವೆಂಬ ಜಗತ್ತನ್ನೇ ಹಾಸಿ, ಅದರೊಳಗೆ ಹಾರುವ ಹಕ್ಕಿ, ಬೀಸುವ ಗಾಳಿ, ಬೇಸುಗೆಯ ಬಿಸಿಲು ಎಲ್ಲವನ್ನೂ ಕೂಡಿ ಬಿಗಿದು ಕಟ್ಟಿ ಮೂರು ಬಗೆಯ ಗಂಟು ಹಾಕಿದೆ. ಆದರೂ ಹಕ್ಕಿ ಹಾರಿತ್ತು, ಗಾಳಿ ಬೀಸಿತ್ತು, ಬಿಸಿಲು ಸುರಿದು ಚೆಲ್ಲಾಡಿ ಧಗೆ ಹೆಚ್ಚಾಗಿ ಲೋಕದ ಜನರೆಲ್ಲ ಬಾಯಿಬಾಯಿ ಬಿಡುತಿದ್ದರು. ಇಷ್ಟು ಸಲೀಸಾಗಿ ಅರ್ಥವಾಯಿತು ಅನಿಸಿದರೂ ಕೊನೆಯ ಎರಡು ಸಾಲು ಅಸ್ಪಷ್ಟವೆನಿಸುತ್ತವೆ.

ಒಡಗೂಡು ಎಂದೇ ಇಟ್ಟುಕೊಂಡರೆ ಶರೀರವೆಂಬ ಗೂಡಿನ ಪ್ರಾಣ ಅಗಮ್ಯೇಶ್ವರ ಲಿಂಗ ಕೂಡಿಕೊಂಡ ಎಂದಾಗುತ್ತದೆ. ಕೆಲವು ಅಕ್ಷರ ವ್ಯತ್ಯಾಸವಾಗಿದೆ ಅಂದುಕೊಂಡರೆ ಒಡೆಗೂಡು-ಕುಟ್ಟಿಪುಟಿಮಾಡು ಎಂಬ ಅರ್ಥ ಹೊಳೆಯುತ್ತದೆ. ಹಕ್ಕಿ ಗಾಳಿ, ಬಿಸಿಲನ್ನು ಹಿಡಿದು ಕಟ್ಟಲು ಬಯಸಿದ ಕ್ಷುಲ್ಲಕರನ್ನು, ಕೊಳಕರನ್ನು ಅಗಮ್ಯೇಶ್ವರ ಲಿಂಗ ನಾಶಮಾಡಿದ ಎನ್ನಲು ಸಾಧ್ಯವೇ? ಅಥವಾ ಜೀವಿಗಳ ಸಂಕಟ ಕಾಣಲಾರದೆ, ತಾಳಲಾರದೆ ಅಗಮ್ಯೇಶ್ವರ ಲಿಂಗ ಬಂದು ಕೂಡಿದ ಎನ್ನಬೇಕೋ? ಮುಖ್ಯವಾದ ಮಾತೆಂದರೆ ಹಿಡಿಯಲಾಗದ್ದನ್ನು ಹಿಡಿದು ವಿವರಿಸುವ ಪ್ರಯತ್ನಗಳೆಲ್ಲ ಎಷ್ಟು ವ್ಯರ್ಥವೆಂದು ಈ ವಚನ ಹೇಳುತ್ತಿದೆ. ಹಕ್ಕಿ, ಗಾಳಿ, ಬಿಸಿಲು ಇವನ್ನು ಹಿಡಿದು ಗಂಟುಕಟ್ಟಿ ಇಡಲು ಸಾಧ್ಯವೇ! ನಮ್ಮ ಭಾಷೆ, ಶಾಸ್ತ್ರ ಇವು ಎಲ್ಲವೂ ವಿವರಿಸಲಾಗದ್ದನ್ನು ಗಂಟುಕಟ್ಟಿ, ಮುದ್ರೆಯೊತ್ತಿ ವಿವರಿಸಿ ಹಿಡಿದಿಡುವ ಕೆಲಸವನ್ನೇ ಮಾಡುತ್ತವೆ. ಈ ಹೆಣಗಾಟವೇ ಧಗೆಗೆ ಕಾರಣ. ಹೀಗೆ ಹಿಂಸೆ ಪಡುವ ಮನುಷ್ಯರನ್ನು/ಶರೀರಗತ ಜೀವರನ್ನು ಅಗಮ್ಯಲಿಂಗ ಮರುಕದಿಂದ ಕೂಡಿದ ಎನ್ನಬಹುದು, ಅಥವಾ ಶಿಕ್ಷೆ ಕೊಟ್ಟ ಅಂತಲೂ ಹೇಳಬಹುದೇನೋ. ಜೈನ ಮತನವನಾದ ಶ್ರೀಮನ್ಮುನಿ ಗುಮ್ಮಟದೇವನು ಮತಾಂತರ ಹೊಂದಿದ ಮೇಲೆ ಈ ವಚನವನ್ನು ರಚಿಸಿರಬಹುದೆಂಬುದು ವಿದ್ವಾಂಸರ ಊಹೆ.


ಮನುಮುನಿ ಗುಮ್ಮಟ ದೇವ

ಈತನ ಹೆಸರು ಶ್ರೀಮನ್ಮುನಿ ಗೊಮ್ಮಟದೇವ ಎಂದಿರಬಹುದು ಎಂಬ ಊಹೆ ಇದೆ.ಈ ವಚನಕಾರರ ೯೭ ರಚನೆಗಳು ದೊರೆತಿವೆ. ವಿವರವಾದ ನಿದರ್ಶನಗಳನ್ನು ಒಳಗೊಂಡಿರುವ ಬೆಡಗಿನ ವಚನಗಳ ರೀತಿಯ ರಚನೆಗಳು ಹೆಚ್ಚಾಗಿ ದೊರೆತಿವೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.