ವಚನ ವೈವಿಧ್ಯ#44: ಇದರ ತುದಿಯಲ್ಲಿ ಅದೇನು-ಮೋಳಿಗೆ ಮಾರಯ್ಯ

ಈ ವಚನದ ಮೊದಲ ಭಾಗ ಸ್ಪಷ್ಟವೆನಿಸಿದರೂ ಕೊನೆಯ ತೀರ್ಮಾನ ರೂಪದ ವಾಕ್ಯವು ರಚನೆಯ ಕಾರಣದಿಂದಲೇ ತೊಡಕು ಅನಿಸುತ್ತದೆ… । ಓ.ಎಲ್.ನಾಗಭೂಷಣ ಸ್ವಾಮಿ

ದೀಪದ ಕೊನೆಯ ಮೊನೆಯ ಮೇಲಿದ್ದುದು
ತಮವೋ ಬೆಳಗೊ

ಮನದ ಕೊನೆಯ ಮೇಲಿದ್ದುದು
ಅರಿವೊ ಮರವೆಯೋ

ಬೀಜದ ಕೊನೆಯ ಮೊನೆಯ ಮೇಲಿದ್ದುದು
ಮುಂದಕ್ಕದು ಬೀಜವೋ ಸಂದೇಹವೋ

ಅರಿವುದಕ್ಕೆ ತೆರಹಿಲ್ಲ
ಮರೆವುದಕ್ಕೆ ಒಡಲಿಲ್ಲ
ಅದರ ಹೂ ಮುಡಿಯಲ್ಲಿದ್ದು ಬಿಡುಗಡೆಯಾದೆ ನಿಃಕಳಂಕ ಮಲ್ಲಿಕಾರ್ಜುನಾ [೮.೧೮೩೧]

[ತಮವೊ-ಕತ್ತಲೆಯೋ; ತೆರಹು-ಅವಕಾಶ;]

ದೀಪದ ಕುಡಿಯ ತುದಿಯ ಮೇಲೆ ಇರುವುದು ಕತ್ತಲೆಯೋ ಬೆಳಕೋ? ಮನಸಿನ ತುದಿಯಲ್ಲಿ ಇರುವುದು ಅರಿವೋ ಮರೆವೋ? ಅರಿಯಬೇಕು ಅನಿಸಿದರೆ ಅವಕಾಶವಿಲ್ಲ, ಮರೆಯೋಣವೆಂದರೆ ಒಡಲಿಲ್ಲ. ತಲೆಗೂದಲ ಗಂಟಿನಲ್ಲಿದ್ದು ಬಿಡುಗಡೆಯಾದೆ ನಿಃಕಳಂಕ ಮಲ್ಲಿಕಾರ್ಜುನಾ.

ಈ ವಚನದ ಮೊದಲ ಭಾಗ ಸ್ಪಷ್ಟವೆನಿಸಿದರೂ ಕೊನೆಯ ತೀರ್ಮಾನ ರೂಪದ ವಾಕ್ಯವು ರಚನೆಯ ಕಾರಣದಿಂದಲೇ ತೊಡಕು ಅನಿಸುತ್ತದೆ, ಉರಿಯುತ್ತಿರುವ ಜ್ಯೋತಿಯ ಬೆಳಕಿನ ತುದಿಯ ಮೇಲೆ ಇರುವುದು ಕತ್ತಲೆಯೋ ಬೆಳಗೋ? ಈ ಪ್ರಶ್ನೆಗೆ ಉತ್ತರ ಇಲ್ಲವೇ ಇಲ್ಲ. ಕತ್ತಲೆ ಅಂದಾಗ ಬೆಳಕು ಕಾಣಿಸುತ್ತದೆ, ಬೆಳಕನ್ನು ನೋಡುವಾಗ ಬೆಳಕಿನ ಜ್ಯೋತಿಯ ತುದಿಯ ಮೇಲೆಲ್ಲ ಬರಿಯ ಕತ್ತಲೆಯೇ ಕಾಣುತ್ತದೆ. ಇದೇ ರೀತಿಯಲ್ಲಿ ಮನಸಿನ ತುದಿಯ ಆಚೆಗೆ ಇರುವುದು ಅರಿವೋ, ಮರವೆಯೋ? ಈ ಪ್ರಶ್ನೆಗೂ ಉತ್ತರವಿಲ್ಲ. ಮನಸಿನ ತುದಿಯಾದುದರಿಂದ ಅದರಾಚೆಗೆ ಅರಿಯುವುದಕ್ಕೆ ಸ್ಥಳವಿಲ್ಲ, ಅವಕಾಶವಿಲ್ಲ. ಮರೆತುಬಿಡೋಣವೆಂದರೆ ಅದು ಮನಸಿನ ವ್ಯಾಪಾರ. ಮನಸ್ಸನು ದಾಟಿದರೆ ಮರವೆ ಇರಲು ಹೇಗೆ ಸಾಧ್ಯ? ಹೇಳಿಕೆಯ ರೂಪದ ಕೊನೆಯ ವಾಕ್ಯವನ್ನು ʻಹೂವಿನ ಮುಡಿಯಲ್ಲಿದ್ದು ʻನಾನುʼ ಬಿಡುಗಡೆಯಾದೆ ಎಂದು ಅರ್ಥಮಾಡಿಕೊಳ್ಳಬೇಕೋ ʻನೀನು ಬಿಡುಗಡೆ ಹೊಂದಿದೆʼ ಎಂದು ಇಷ್ಟ ದೈವಕ್ಕೆ ಹೇಳುತ್ತಿರುವುದೋ? ಎರಡೂ ಅರ್ಥಗಳನ್ನು ಸಮರ್ಥಿಸುವುದು ಸಾಧ್ಯ. ನಿನ್ನ ಪ್ರಸಾಧ ರೂಪವಾದ ಹೂವನ್ನು ಮುಡಿದು  ನಾನು ಬಿಡುಗಡೆಯಾದೆ ಎಂದೂ ʻಇಂಥ ದ್ವಂದ್ವನ್ನು ಸಹಿಸಿರುವ ನೀನು ನಿಜವಾಗಿ ಸ್ವತಂತ್ರʼ ಎಂದೂ ವಿವರಿಸಬಹುದು ಅನಿಸುತ್ತದೆ.


ಮೋಳಿಗೆ ಮಾರಯ್ಯ

ಮೋಳಿಗೆ ಎಂದರೆ ಕಟ್ಟಿಗೆಯ ಹೊರೆ ಎಂಬ ವಿವರಣೆ ದೊರೆಯುತ್ತದೆ. ೮೨೦ ವಚನಗಳು ದೊರೆತಿವೆ. ವಚನಾಂಕಿತ- ನಿಃಕಳಂಕ ಮಲ್ಲಿಕಾರ್ಜುನ. ಮಾರಯ್ಯನವರು ಕಲ್ಯಾಣಕ್ಕೆ ವಲಸೆ ಬಂದ ಕಾಶ್ಮೀರ ಪ್ರಾಂತದ ಅರಸರೆಂಬ ಐತಿಹ್ಯವಿದೆ. ಅವರ ಹೆಸರು, ಮತ್ತು ಅರಸುತನ ಕುರಿತ ಶಾಸನಾಧಾರಗಳು ಇದ್ದಂತಿಲ್ಲ. ಕನ್ನಡದ ವಾಕ್ಯ ರಚನೆಯ ವಿಶಿಷ್ಟ ಬಳಕೆಯನ್ನು ಇವರ ವಚನಗಳಲ್ಲಿ ಕಾಣಬಹುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.