ವಚನ ವೈವಿಧ್ಯ#45 : ಶಂಕೆಯ ರೂಪ, ಬೆದರಿಕೆ – ಚಂದಿಮರಸ

ಈ ವಚನದ ಕೊನೆಯ ಸಾಲನ್ನು ʻಸಿಮ್ಮಲಿಗೆಯ ಚೆನ್ನರಾಮನೆಂಬ ಘರ್ಷಣೆʼ ಎಂದು ಓದಿಕೊಂಡರೆ ಆ ಸಾಲಿಗೆ ಅರ್ಥ ಹೇಳುವುದು ಕಷ್ಟವಾಗುತ್ತದೆ. ಹೇಡಿಗಳನ್ನು ಏಡಿಸಿ ಕಾಡಿತ್ತು ಭಾವದ ಗಸಣಿ ಎಂದು ವಾಕ್ಯವನ್ನು ಪೂರ್ಣಮಾಡಿಕೊಂಡು, ಅಂಕಿತವನ್ನು ಕೊನೆಗೆ ಸೇರಿಸಿಕೊಂಡರೆ ಅರ್ಥ ಸ್ಪಷ್ಟವಾಗುವಂತೆ ತೋರುತ್ತದೆ। ಓ.ಎಲ್.ನಾಗಭೂಷಣ ಸ್ವಾಮಿ

ಹುಲ್ಲ ಮನುಷ್ಯನ ಕಂಡು
ಹುಲ್ಲೆ ತಾ ಬೆದರುವಂತೆ

ಇಲ್ಲದ ಶಂಕೆಯನುಂಟೆಂಬನ್ನಕ್ಕ
ಅದಲ್ಲಿಯೇ ರೂಪಾಯಿತ್ತು

ಹೇಡಿಗಳನೇಡಿಸಿ ಕಾಡಿತ್ತು
ಸಿಮ್ಮಲಿಗೆಯ ಚೆನ್ನರಾಮನೆಂಬ ಭಾವದ ಗಸಣಿ [೭.೭೦೦]

[ಹುಲ್ಲೆ-ಜಿಂಕೆ; ಶಂಕೆಯುಂಟೆಬನ್ನಕ್ಕ-ಶಂಕೆ ಇದೆ ಅನ್ನುವವರೆಗೆ; ಹೇಡಿಗಳನೇಡಿಸಿ-ಹೇಡಿಗಳನ್ನು ಅಣಕಿಸಿ, ಅವಮಾನಿಸಿ; ಗಸಣೆ-ಘರ್ಷಣೆಯ ತದ್ಭವ]

ಹುಲ್ಲಿನಲ್ಲಿ ಮಾಡಿರುವ ಮನುಷ್ಯನ ಬೊಂಬೆಯನ್ನು ಕಂಡು ಜಿಂಕೆ ಹೆದರುತ್ತದೆ. ಇದು ಮನುಷ್ಯನೋ ಎಂಬ ಶಂಕೆಯೇ ಮನುಷ್ಯನ ರೂಪ ತಾಳುತ್ತದೆ. ಹೆದರುವ ಹೇಡಿಗಳನ್ನು ಅಣಿಕಿಸಿ, ಅವಮಾನಿಸಿ ಕಾಡುತ್ತದೆ. ಇದು ಭಾವದ ಘರ್ಷಣೆ, ಸಿಮ್ಮಲಿಗೆಯ ಚೆನ್ನರಾಮ.

ಭಯಕ್ಕೆ ಕಾರಣ ಶಂಕೆ. ಶಂಕೆ ಇರುವಾಗ ಹುಲ್ಲಿನ ಬೊಂಬೆಯೂ ಮನುಷ್ಯನಂತೆ ಕಂಡು ಜಿಂಕೆ ಹೆದರುತ್ತದೆ. ಭಯಕ್ಕೆ ನಿರ್ದಿಷ್ಟ ರೂಪ ಬರುವುದೇ ಶಂಕೆಯಿಂದ. ಶಂಕೆ ಇರುವ ಮನುಷ್ಯ ಬೆದರಿದ ಹುಲ್ಲೆಯಂತೆ. ಇದೆಯೋ ಇಲ್ಲವೋ, ಇದ್ದರೇನು ಗತಿ ಅನ್ನುವಂಥ ಶಂಕೆಯೇ ಭಾವಗಳ ಘರ್ಷಣೆಗೆ ಆ ಮೂಲಕ ಭಯಕ್ಕೆ ಕಾರಣವಾಗುತ್ತದೆ. ಈ ವಚನದ ಕೊನೆಯ ಸಾಲನ್ನು ʻಸಿಮ್ಮಲಿಗೆಯ ಚೆನ್ನರಾಮನೆಂಬ ಘರ್ಷಣೆʼ ಎಂದು ಓದಿಕೊಂಡರೆ ಆ ಸಾಲಿಗೆ ಅರ್ಥ ಹೇಳುವುದು ಕಷ್ಟವಾಗುತ್ತದೆ. ಹೇಡಿಗಳನ್ನು ಏಡಿಸಿ ಕಾಡಿತ್ತು ಭಾವದ ಗಸಣಿ ಎಂದು ವಾಕ್ಯವನ್ನು ಪೂರ್ಣಮಾಡಿಕೊಂಡು, ಅಂಕಿತವನ್ನು ಕೊನೆಗೆ ಸೇರಿಸಿಕೊಂಡರೆ ಅರ್ಥ ಸ್ಪಷ್ಟವಾಗುವಂತೆ ತೋರುತ್ತದೆ. ಅಥವಾ ಭಕ್ತಿ ಎಂಬುದು ಬರಿಯ ಭಾವವಾದರೆ ಅದಕ್ಕೂ ಭಯವೆಂಬ ಭಾವಕ್ಕೂ ವ್ಯತ್ಯಾಸವೇ ಇಲ್ಲ. ಸಿಮ್ಮಲಿಗೆಯ ಚೆನ್ನರಾಮ ಎಂಬ ಭಾವವೇ ಘಸಣೆಗೆ ಕಾರಣ ಎಂದು ವಿವರಿಸಿಕೊಳ್ಳಬೇಕೊ, ತಿಳಿಯದು, ದೈವವು ಕೇವಲ ಭಾವವಾಗಿ ಉಳಿದರೆ ಘರ್ಷಣೆ ತಪ್ಪದು, ಅದು ವಿ-ಶ್ವಾಸವಾದಾಗ ಭಯವಿರದು ಎಂದು ಈ ವಚನ ಹೇಳುತ್ತಿರಬಹುದು.


 ಚಂದಿಮರಸ

 ಬಸವಣ್ಣನವರ ಹಿರಿಯ ಸಮಕಾಲೀನ. ಕೃಷ್ಣಾನದೀತೀರದ ಚಿಮ್ಮಲಿಗೆಯೆಂಬ ಊರಿನವನು ಸಿಮ್ಮಲಿಗೆಯ ಚೆನ್ನರಾಮ ಎಂಬ ಅಂಕಿತದಲ್ಲಿ ಈ ವಚನಕಾರ ರಚಿಸಿರುವ ೧೫೭ ವಚನಗಳು ದೊರೆತಿವೆ. ಈ ವಚನಕಾರರ ರಚನೆಗಳಲ್ಲಿ ಆತ್ಮಜ್ಞಾನವನ್ನು ಕುರಿತ ವಚನಗಳು ಹೆಚ್ಚಾಗಿವೆ

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.