ತಾರಾಬಾಯಿ ಶಿಂಧೆ ಪ್ರಶ್ನಿಸುತ್ತಾರೆ, ಹೆಣ್ಣನ್ನ ಯಾರಿಂದ ರಕ್ಷಿಸಬೇಕು? ಗಂಡಸಿನಿಂದ ತಾನೆ? ಹೆಣ್ಣಿಗೆ ಜೈಲಿನಂಥ ವ್ಯವಸ್ಥೆಯನ್ನು ಏಕೆ ರೂಪಿಸಲಾಗಿದೆಯೆಂದರೆ ಗಂಡಸಿನ ದೌರ್ಬಲ್ಯದ ಕಾರಣವಾಗಿ, ಅವನಲ್ಲಿ ತನ್ನನ್ನು ತಾನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗದ ದುರ್ಬಲತೆ ಇದೆ… । ಚಿದಂಬರ ನರೇಂದ್ರ
ನೀವು ಇದನ್ನ ಗಮನಿಸಿರುವಿರಾ? ಒಬ್ಬ ಗಂಡಸಿಗೆ ಹಲವಾರು ಲೈಂಗಿಕ ಪಾರ್ಟ್ನರ್‌ಗಳಿದ್ದರೆ ಸಮಾಜ ಅವನನ್ನು ರಸಿಕ ಎಂದು ಒಳಗೊಳಗೇ ಹೆಮ್ಮೆಯಿಂದ ಗೌರವಿಸುತ್ತಿರುತ್ತದೆ. ಜನ ಇದನ್ನ ತಮಾಷೆಯ, ರಸಿಕತೆಯ, ರೋಮ್ಯಾಂಟಿಕ್ ದೃಷ್ಟಿಯಲ್ಲಿ ನೋಡುತ್ತಾರೆ. ಆದರೆ ಇದೇ ವಿಷಯ ಹೆಣ್ಣಿನದಾಗಿದ್ದರೆ ಆಕೆಯನ್ನ ಪಾಪಿಯೆಂದೂ, ವ್ಯಭಿಚಾರಿಯೆಂದು ಗುರುತಿಸಲಾಗುತ್ತದೆ. ಆಕೆಯನ್ನು ಸಾಮಾಜದ ಗೌರವದಿಂದ ದೂರ ಇಡಲಾಗುತ್ತದೆ. ಈ ಸಮಸ್ಯೆ ಕೇವಲ ಆಧುನಿಕ ಜಗತ್ತಿನದು ಮಾತ್ರವಲ್ಲ. 1882 ರಲ್ಲಿ ಭಾರತೀಯ ಸ್ತ್ರೀವಾದಿ ತಾರಾಬಾಯಿ ಶಿಂಧೆ, ಪುರುಷ ಸಮಾಜವನ್ನು ಅಲ್ಲಾಡಿಸಿಬಿಟ್ಟಂಥ ಪುಸ್ತಕವೊಂದನ್ನು ರಚಿಸುತ್ತಾರೆ. ಆ ಪುಸ್ತಕದ ಹೆಸರು “ಸ್ತ್ರೀ ಪುರುಷ ತುಲನಾ” ಗಂಡು ಮತ್ತು ಹೆಣ್ಣಿನ ನಡುವಿನ ಹೋಲಿಕೆ.
ಈ ಸಮಸ್ಯೆಯನ್ನು ವಿವರಿಸಲು ಅವರು ಒಂದು ಒಳ್ಳೆಯ ತರ್ಕವನ್ನು ಬಳಸಿದರು, ಈ double standard ಒಂದು ತಪ್ಪಿನ ಕಾರಣ ಉದ್ಭವಿಸಿರುವ ಸಮಸ್ಯೆ ಅಲ್ಲ. ಇದು ಒಂದು scam. ಇದು ಗಂಡಸರು ತಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಹೂಡಿರುವ ಸಂಚು. ತಾರಾಬಾಯಿಯವರು, ಹೆಣ್ಣು ಪವಿತ್ರ ಆಗಿರಬೇಕು ಎಂದು ಸೂಚಿಸುವ ಎಲ್ಲ ಧಾರ್ಮಿಕ ಮತ್ತು ಪರಂಪರಾಗತ ಮತ್ತು ಸಾಮಾಜಿಕ ನಿಯಮಗಳನ್ನು ಮುರಿಯುವ ಬಗ್ಗೆ ಮಾತನಾಡುತ್ತಾರೆ. ಸೀತೆ, ದ್ರೌಪದಿಯಂತೆ ಹೆಣ್ಣು ಅಕಳಂಕಿತಳಾಗಿರಬೇಕು, ಪವಿತ್ರವಾಗಿರಬೇಕು ಎನ್ನುವ ಗಂಡಿನ ಎಲ್ಲ ನಿರಿಕ್ಷೆಗಳ ವಿರುದ್ಧ ಶಿಂಧೆ ಅವರು ದನಿ ಎತ್ತುತ್ತಾರೆ. ಹೆಣ್ಣು ಒಂದು ಸಣ್ಣ ತಪ್ಪು ಮಾಡಿದರೂ ಆಕೆಯ ಬದುಕು ನರಕವಾಗಿಬಿಡುತ್ತದೆ. ಆದರೆ ಇನ್ನೊಂದೆಡೆ ಗಂಡಿಗೆ ಸಾರಾಯಿ ಕುಡಿಯಲು, ಜೂಜಾಡಲು, ದ್ರೋಹ ಮಾಡಲು, ಕುಟುಂಬ ತ್ಯಜಿಸಲು ಸಂಪೂರ್ಣ ಸ್ವಾತಂತ್ರ್ಯವನ್ನು ಕೊಡಲಾಗಿದೆ. ಆವರಿಗೆ ಯಾವ ಶಿಕ್ಷೆ ಯಾವ ನಿರ್ಬಂಧ ಇಲ್ಲ.
ಪುರುಷಾಧಿಪತ್ಯದ ಸಮಾಜದಲ್ಲಿ ನೈತಿಕತೆ ಎನ್ನುವುದು ಕೇವಲ ಒಳ್ಳೆಯವರಾಗಿ ಇರುವುದಲ್ಲ, ಬದಲಾಗಿ ಇದೊಂದು ಆಯುಧ. ಗಂಡಸರು ಹೆಂಗಸಿರಾಗಿ ಅಸಾಧ್ಯ ಪಾವಿತ್ರ್ಯದ ನಿಯಮವನ್ನು ರೂಪಿಸಿ ಗಂಡಸರ ಕೇಡನ್ನು ಎಲ್ಲರ ದೃಷ್ಟಿಯಿಂದ ಬಚ್ಚಿಡಲು ಮಾಡಿದ ತಂತ್ರ. ಇದು ಪುರುಷಾಧಿಪತ್ಯದ ಬಹುದೊಡ್ಡ ಹಿಪಾಕ್ರಸಿಯನ್ನು ಬಯಲಿಗೆಳೆಯುತ್ತದೆ. ಹೆಣ್ಣು ತನ್ನನ್ನು ತಾನು ಮುಚ್ಚಿಟ್ಟುಕೊಳ್ಳಬೇಕು, ಅವರು ತಮ್ಮ ವರ್ತನೆಗಳನ್ನು ಕಂಟ್ರೋಲ್ ಮಾಡಿಕೊಳ್ಳಬೇಕು, ಆಗ ಅವರ ಮಾನ ಮತ್ತು ಪಾವಿತ್ರ್ಯವನ್ನ ಗಂಡಸು ರಕ್ಷಿಸಬಹುದು ಎಂದು ಗಂಡು ಸಮಾಜ ಮಾಡಿದ ಸಂಚು. ಆದರೆ ತಾರಾಬಾಯಿ ಶಿಂಧೆ ಪ್ರಶ್ನಿಸುತ್ತಾರೆ, ಹೆಣ್ಣನ್ನ ಯಾರಿಂದ ರಕ್ಷಿಸಬೇಕು? ಗಂಡಸಿನಿಂದ ತಾನೆ? ಹೆಣ್ಣಿಗೆ ಜೈಲಿನಂಥ ವ್ಯವಸ್ಥೆಯನ್ನು ಏಕೆ ರೂಪಿಸಲಾಗಿದೆಯೆಂದರೆ ಗಂಡಸಿನ ದೌರ್ಬಲ್ಯದ ಕಾರಣವಾಗಿ, ಅವನಲ್ಲಿ ತನ್ನನ್ನು ತಾನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗದ ದುರ್ಬಲತೆ ಇದೆ.
ರಸ್ತೆಯಲ್ಲಿ ಯಾವೊಬ್ಬ ಗಂಡಸು ಒಂದು ಹೆಣ್ಣನ್ನ ಛೇಡಿಸುತ್ತಾನೆಂದರೆ, ಆಗ ಸಮಾಜ ಆಕೆ ಎಂಥ ಬಟ್ಟೆ ಧರಿಸಿದ್ದಳು? ಅಂಥ ಹೊತ್ತಲ್ಲಿ ಆಕೆ ಯಾಕೆ ರಸ್ತೆಯ ಮೇಲಿದ್ದಳು? ಎಂದು ಹೆಣ್ಣನ್ನೇ ಪ್ರಶ್ನೆ ಮಾಡುತ್ತದೆ. ಸಮಾಜ ಎಲ್ಲ ಹೊಣೆಗಾರಿಯನ್ನು ಶೋಷಿತಳ ಮೇಲೆ ಹೊರಿಸಿ, ಶೋಷಕರನ್ನು ಅವರು ಗಂಡು ಹಾಗೆ ಮಾಡುವುದು ಸಹಜ ಎಂದು ಅವರಿಗೆ ಮುಕ್ತ ಸ್ವಾತಂತ್ರ್ಯ ನೀಡುತ್ತದೆ. ಇದು ನ್ಯಾಯ ಅಲ್ಲ ಹೇಡಿತನ. ಗಂಡು ತನ್ನ ಬಯಕೆಗಳಿಂದ ತಾನೇ ಎಷ್ಟು ಭಯಭೀತನಾಗಿದ್ದಾನೆಂದರೆ, ಹೆಣ್ಣನ್ನು ಕೇವಲ ಅವಳ ಇರುವಿಕೆಗಾಗಿ ಶಿಕ್ಷಿಸಲಾಗುತ್ತದೆ. ಜಗತ್ತಿನ ಅರ್ಧದಷ್ಟು ಜನರ ಮೇಲೆ ಹೇರಲಾಗಿರುವ ಈ ಮೌಲ್ಯದ ಹೆಸರಿನ ಕಟ್ಟುಪಾಡುಗಳು, ಮೌಲ್ಯಗಳಲ್ಲ ಬದಲಾಗಿ ಸರಪಳಿಗಳು. ಸಮಾಜದಲ್ಲಿ ಪಾವಿತ್ರ್ಯ ಮತ್ತು ಸ್ವ ನಿಯಂತ್ರಣ ಬಹಳ ಮುಖ್ಯ ಎಂದಾದರೆ ಇದರ ಜವಾಬ್ದಾರಿಯನ್ನು ಗಂಡಸರೂ ಹೊರಬೇಕು ಎಂದು ತಾರಾಬಾಯಿ ಶಿಂಧೆ ವಾದಿಸುತ್ತಾರೆ.

