ನೋಡುಗರಿಲ್ಲ, ಇರುವುದು ನೋಟವಷ್ಟೇ : ನಾಗಾರ್ಜುನನ ಸಿದ್ಧಾಂತ

ನೋಡುವವನು ಮತ್ತು ನೋಡುವ ವಸ್ತು ಒಂದೇ ಆಗಿದ್ದರೆ ಅಲ್ಲಿ ಕ್ರಿಯೆಯೇ ಇರುವುದಿಲ್ಲ. ಅವು ಬೇರೆ ಬೇರೆಯಾಗಿದ್ದರೆ ಸಂಬಂಧವೇ ಇರುವುದಿಲ್ಲ. ಹಾಗಾಗಿ, ‘ನೋಡುವವನು’ ಎಂಬುದು ಒಂದು ಭ್ರಮೆ” ಅನ್ನುತ್ತಾನೆ ನಾಗಾರ್ಜುನಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ

ನೋಡುವುದಕ್ಕೆ ಒಬ್ಬ ‘ನೋಡುವವನು’ ಇರಲೇಬೇಕು ಎಂಬ ನಂಬಿಕೆ ಕೇವಲ ಒಂದು ಮೂಢನಂಬಿಕೆ. ಇದು ಭಾಷೆ ಮತ್ತು ಅಭ್ಯಾಸದಿಂದ ಬಂದ ಒಂದು ತಪ್ಪು ಕಲ್ಪನೆ. “ನಾನು ನೋಡುತ್ತೇನೆ”, “ನಾನು ಕೇಳುತ್ತೇನೆ” ಎಂದು ನಾವು ಭಾಷೆಯಲ್ಲಿ ಬಳಸುತ್ತೇವೆ, ಹಾಗಾಗಿ ಅಲ್ಲಿ ಒಬ್ಬ ‘ನಾನು’ ಇದ್ದಾನೆ ಎಂದು ಭಾವಿಸುತ್ತೇವೆ. ಆದರೆ ಸೂಕ್ಷ್ಮವಾಗಿ ಗಮನಿಸಿ: ಭಾಷೆಯ ವ್ಯಾಕರಣವನ್ನು ಪಕ್ಕಕ್ಕಿಟ್ಟರೆ, ಅಲ್ಲಿ ಬರಿ ನೋಟವಿದೆ, ಕೇಳುವ ಕ್ರಿಯೆಯಿದೆ. ಅಲ್ಲಿ ಈ ಕೆಲಸವನ್ನು ಮಾಡುವ ‘ನಾನು’ ಎಲ್ಲಿಯೂ ಸಿಗುವುದಿಲ್ಲ.

“ನೋಡುವವನು ಮತ್ತು ನೋಡುವ ವಸ್ತು ಒಂದೇ ಆಗಿದ್ದರೆ ಅಲ್ಲಿ ಕ್ರಿಯೆಯೇ ಇರುವುದಿಲ್ಲ. ಅವು ಬೇರೆ ಬೇರೆಯಾಗಿದ್ದರೆ ಸಂಬಂಧವೇ ಇರುವುದಿಲ್ಲ. ಹಾಗಾಗಿ, ‘ನೋಡುವವನು’ ಎಂಬುದು ಒಂದು ಭ್ರಮೆ” ಅನ್ನುತ್ತಾನೆ ನಾಗಾರ್ಜುನ. ಅವನು ಶೂನ್ಯತೆಯನ್ನು ಸಾಬೀತುಪಡಿಸಲು ಈ ರೀತಿಯ ತರ್ಕವನ್ನು ಬಳಸುತ್ತಾನೆ. ಅವನು ಯಾವುದೇ ಒಂದು ಸ್ವತಂತ್ರ ‘ಅಸ್ತಿತ್ವ’ವನ್ನು ಒಪ್ಪುವುದಿಲ್ಲ. ‘ನೋಡುಗ’ ಮತ್ತು ‘ನೋಡಲ್ಪಡುವ ವಸ್ತು’ಗಳ ನಡುವಿನ ಸಂಬಂಧವನ್ನು ಅವನು ಎರಡು ತರ್ಕಬದ್ಧ ನೆಲೆಗಟ್ಟಿನಲ್ಲಿ ವಿಮರ್ಶಿಸುತ್ತಾನೆ:

ಮೊದಲನೆಯದಾಗಿ; ಒಂದು ವೇಳೆ ನೋಡುವವನು ಮತ್ತು ನೋಡುವ ವಸ್ತು ಎರಡೂ ಒಂದೇ ಆಗಿದ್ದರೆ, ಅಲ್ಲಿ ‘ನೋಡುವುದು’ ಎಂಬ ಕ್ರಿಯೆ ನಡೆಯಲು ಸಾಧ್ಯವಿಲ್ಲ. ಉದಾಹರಣೆಗೆ, ಬೆಂಕಿಯು ತನ್ನನ್ನು ತಾನೇ ಸುಟ್ಟುಕೊಳ್ಳಲು ಸಾಧ್ಯವಿಲ್ಲ ಅಥವಾ ಕತ್ತಿಯು ತನ್ನನ್ನು ತಾನೇ ಕತ್ತರಿಸಲು ಸಾಧ್ಯವಿಲ್ಲ. ಹಾಗೆಯೇ, ನೋಡುಗನೇ ವಸ್ತುವಾಗಿದ್ದರೆ, ಅಲ್ಲಿ ಎರಡು ಬೇರೆ ಬೇರೆ ಘಟಕಗಳಿಲ್ಲದ ಕಾರಣ ‘ನೋಡುವ ಪ್ರಕ್ರಿಯೆ’ ಎಂಬ ಕ್ರಿಯೆಯೇ ನಾಶವಾಗುತ್ತದೆ.
ಎರಡನೆಯದಾಗಿ; ಒಂದು ವೇಳೆ ನೋಡುಗ ಮತ್ತು ವಸ್ತು ಪರಸ್ಪರ ಯಾವುದೇ ಸಂಬಂಧವಿಲ್ಲದ ಸ್ವತಂತ್ರ ಅಸ್ತಿತ್ವಗಳಾಗಿದ್ದರೆ, ಆಗಲೂ ದರ್ಶನ ಅಥವಾ ನೋಟ ಸಾಧ್ಯವಿಲ್ಲ. ಅವು ಸಂಪೂರ್ಣವಾಗಿ ಬೇರೆ ಬೇರೆಯಾಗಿದ್ದರೆ, ಅವುಗಳ ನಡುವೆ ಸಂಪರ್ಕ ಕಲ್ಪಿಸುವ ಯಾವುದೇ ಕೊಂಡಿ ಇರುವುದಿಲ್ಲ. ಒಂದು ಇನ್ನೊಂದರ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ಬೆಳಕಿಲ್ಲದ ಜಾಗದಲ್ಲಿ ಕಣ್ಣು ಮತ್ತು ವಸ್ತು ಇದ್ದರೂ ಅವುಗಳ ನಡುವೆ ಸಂಬಂಧ ಏರ್ಪಡದಿದ್ದರೆ ನೋಟ ಅಸಾಧ್ಯವೋ, ಹಾಗೆಯೇ ನೋಡುಗ ಮತ್ತು ವಸ್ತು ಅಪ್ಪಟ ‘ಬೇರೆ’ ಆಗಿದ್ದರೆ ಅಲ್ಲಿ ಜ್ಞಾನೋದಯವಾಗಲು ಸಾಧ್ಯವಿಲ್ಲ.
– ಎಂದು ಅವನು ವಿವರಿಸುತ್ತಾನೆ.

ಈ ಎರಡು ವಿರೋಧಾಭಾಸಗಳ ಮೂಲಕ ಅವನು, ನೋಡುಗ ಎಂಬವನು ವಸ್ತುವಿನ ಹೊರತಾಗಿ ಅಸ್ತಿತ್ವದಲ್ಲಿಲ್ಲ; ಹಾಗೂ ನೋಡಲ್ಪಡುವ ವಸ್ತು ಎಂಬುದು ನೋಡುಗನ ಹೊರತಾಗಿ ಅಸ್ತಿತ್ವದಲ್ಲಿಲ್ಲ ಎಂದು ನಿರೂಪಿಸುತ್ತಾನೆ. ಇವುಗಳು ಒಂದಕ್ಕೊಂದು ಪೂರಕವಾಗಿ ಅಥವಾ ‘ಪರಸ್ಪರ ಅವಲಂಬಿತವಾಗಿ’ ಉಂಟಾಗುವ ವಿದ್ಯಮಾನಗಳೇ ಹೊರತು, ಅಲ್ಲಿ ಯಾರೋ ಒಬ್ಬ ‘ನೋಡುವವನು’ ಎಂಬ ಕಾಯಂ ವ್ಯಕ್ತಿ ಕುಳಿತಿಲ್ಲ. ನಾವು “ನಾನು ನೋಡುತ್ತಿದ್ದೇನೆ” ಎನ್ನುವಾಗ, ಆ ‘ನಾನು’ ಎಂಬುದು ಆ ಕ್ಷಣದ ನೋಟದ ಪ್ರಕ್ರಿಯೆಯಲ್ಲಿ ಉಂಟಾದ ಒಂದು ಭ್ರಮೆ ಮಾತ್ರ ಅನ್ನುವುದು ಅವನ ತರ್ಕ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.