ನಡೆದಿಲ್ಲದ ಅಪರಾಧಗಳಿಗೆ ಬಂಧಿಸುವ ಮಾದರಿ

ಶಿಕ್ಷೆ ಎನ್ನುವುದು ವ್ಯಕ್ತಿಯ ಆಯ್ಕೆಯೊಂದಿಗೆ ಸಂಬಂಧಿಸಿರಬೇಕು. ಅರಿಸ್ಟಾಟಲ್, ನೈತಿಕ ಹೊಣೆಗಾರಿಕೆಗೆ ಎರಡು ಅಂಶಗಳು ಅಗತ್ಯವೆಂದು ವಾದಿಸುತ್ತಾನೆ : ನೀವು ಏನು ಮಾಡುತ್ತಿದ್ದೀರಿ ಎನ್ನುವುದು ಮೊದಲು ನಿಮಗೆ ತಿಳಿದಿರಬೇಕು ಮತ್ತು ಅದನ್ನು ಮಾಡುವುದನ್ನು ನೀವು ಸ್ವತಃ ಆಯ್ಕೆ ಮಾಡಿರಬೇಕು. ಆದರೆ ‘ಪ್ರೀ-ಕ್ರೈಮ್’ (pre-crime) ಎಂದು ಕರೆಯಲ್ಪಡುವ ಕಲ್ಪನೆ ಈ ಎರಡನ್ನೂ ತೆಗೆದುಹಾಕುತ್ತದೆ. ವ್ಯಕ್ತಿಗೆ ತಾನು ಮುಂದೆ ಮಾಡಲಿರುವ ಅಪರಾಧದ ಬಗ್ಗೆ ತಿಳಿದಿರುವುದಿಲ್ಲ, ಏಕೆಂದರೆ ಅದನ್ನು ಮಾಡುವ ನಿರ್ಧಾರವನ್ನು ಅವರು ಇನ್ನೂ ತೆಗೆದುಕೊಂಡಿಲ್ಲ… । ಸಂಗ್ರಹಾನುವಾದ : ಚಿದಂಬರ ನರೇಂದ್ರ

ಸ್ಟೀವನ್ ಸ್ಪೀಲ್ಬರ್ಗ್ ಅವರ Minority Report ಎಂಬ ಚಲನಚಿತ್ರದಲ್ಲಿ, ವಿಶೇಷ ಪೊಲೀಸ್ ಘಟಕಗಳು ಇನ್ನೂ ನಡೆದಿಲ್ಲದ ಅಪರಾಧಗಳಿಗೆ ಜನರನ್ನು ಬಂಧಿಸುತ್ತವೆ. ಈ ಚಿತ್ರವು 2054ನೇ ವರ್ಷವನ್ನು ಹಿನ್ನೆಲೆಯಾಗಿ ಹೊಂದಿದ್ದರೂ, ನಾವು ಅಲ್ಲಿಯವರೆಗೆ ಕಾಯಬೇಕಾಗಿಲ್ಲ, ಏಕೆಂದರೆ ಭವಿಷ್ಯಾಧಾರಿತ ಪೊಲೀಸ್ ವ್ಯವಸ್ಥೆ (Predictive Policing) ಈಗಾಗಲೇ ಅಸ್ತಿತ್ವದಲ್ಲಿದೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದರೆ…….

ಮೊದಲು, ಪೊಲೀಸ್ ಇಲಾಖೆ ವಿವಿಧ ಅಪರಾಧ ಸಂಬಂಧಿತ ಮಾಹಿತಿಯನ್ನು ಒಂದು ಅಲ್ಗೋರಿದಮ್ ಗೆ ಫೀಡ್ ಮಾಡುತ್ತದೆ —ಘಟನೆಯ ವರದಿಗಳು, ಪಾಸಿಬಲ್ ಅಪರಾಧಿಗಳ ಊರು, ಜಾತಿ, ಲಿಂಗ, ಹಿನ್ನೆಲೆ ಇತ್ಯಾದಿ ವಿವರಗಳು, ಮತ್ತು ಇಂಥ ಅನೇಕ ಕ್ರೈಮ್ ಸಂಬಂಧಿ ಮಾಹಿತಿಗಳು. ಆ ಅಲ್ಗೋರಿದಮ್ ಮಾದರಿಗಳನ್ನು (patterns) ಹುಡುಕಿ ಭವಿಷ್ಯವಾಣಿಗಳನ್ನು ಸೃಷ್ಟಿಸುತ್ತದೆ. ಇದು ಪೋಲಿಸರಿಗೆ ಅಪರಾಧವು ಎಲ್ಲಲ್ಲಿ ಸಂಭವಿಸುವ ಸಾಧ್ಯತೆ ಇದೆ ಎಂಬುದನ್ನು ಮಾತ್ರವಲ್ಲ, ಅದನ್ನು ಯಾರು ಮಾಡುವ ಸಾಧ್ಯತೆ ಇದೆ ಎಂಬುದನ್ನೂ ತಿಳಿಸುತ್ತದೆ.

ಥಿಯರಿಯ ಮಟ್ಟದಲ್ಲಿ, ಇದು ಅಪರಾಧ ಸಂಭವಿಸುವ ಮೊದಲು ಅದನ್ನು ತಡೆಯಲು ಪೊಲೀಸರಿಗೆ ಅವಕಾಶ ಮಾಡಿಕೊಡುತ್ತದೆ —ನಿರ್ದಿಷ್ಟ ಪ್ರದೇಶಕ್ಕೆ ಪೋಲೀಸರನ್ನು ಕಳುಹಿಸುವುದು, ಕೆಲವು ವ್ಯಕ್ತಿಗಳ ಮೇಲೆ ನಿಗಾವಹಿಸುವಿಕೆಯನ್ನು ಹೆಚ್ಚಿಸುವುದು, ಮತ್ತು ಇದರ ಮೂಲಕ ಅಪರಾಧವನ್ನು ಕಡಿಮೆ ಮಾಡಿ ಬಲಿಪಶುಗಳನ್ನು ರಕ್ಷಿಸುವುದು ಸಾಧ್ಯವಾಗುತ್ತದೆ. ಆದರೆ ಇದರಲ್ಲಿ ಎರಡು ಸಮಸ್ಯೆಗಳಿವೆ: ಒಂದು philosophical ಸಮಸ್ಯೆ ಮತ್ತು ಇನ್ನೊಂದು technological ಸಮಸ್ಯೆ.

ತಾಂತ್ರಿಕ ಸಮಸ್ಯೆ ಏನೆಂದರೆ, ಇದು ಈಗಾಗಲೇ ನಮ್ಮೊಳಗಿರುವ ಪೂರ್ವಾಗ್ರಹಗಳನ್ನು (biases) ಮತ್ತಷ್ಟು ಹೆಚ್ಚಿಸುತ್ತದೆ. ಒಂದು ಪೊಲೀಸ್ ಇಲಾಖೆ ತನ್ನ ಅಲ್ಗೋರಿದಮ್ ‌ಗೆ ಫೀಡ್ ಮಾಡುವ ಮಾಹಿತಿಯಲ್ಲೇ ಅನೇಕ ಪೂರ್ವಾಗ್ರಹಗಳು ಮೊದಲೇ ಸೇರಿಕೊಂಡಿರುತ್ತವೆ. ಮುಂದೆ, ಅತಿಯಾದ ಪೊಲೀಸ್ ನಿಗಾವಹಿಸುವಿಕೆ (overpolicing) ಮತ್ತು ಅತಿವರದಿಗಾರಿಕೆ (overreporting) ಆ ಪೂರ್ವಾಗ್ರಹಗಳನ್ನು ಇನ್ನಷ್ಟು ದಟ್ಟವಾಗಿಸುತ್ತವೆ.

ಫಿಲಾಸೊಫಿಕಲ್ ಸಮಸ್ಯೆ ಏನೆಂದರೆ, ಶಿಕ್ಷೆ ಎನ್ನುವುದು ವ್ಯಕ್ತಿಯ ಆಯ್ಕೆಯೊಂದಿಗೆ ಸಂಬಂಧಿಸಿರಬೇಕು. ಅರಿಸ್ಟಾಟಲ್, ನೈತಿಕ ಹೊಣೆಗಾರಿಕೆಗೆ ಎರಡು ಅಂಶಗಳು ಅಗತ್ಯವೆಂದು ವಾದಿಸುತ್ತಾನೆ : ನೀವು ಏನು ಮಾಡುತ್ತಿದ್ದೀರಿ ಎನ್ನುವುದು ಮೊದಲು ನಿಮಗೆ ತಿಳಿದಿರಬೇಕು ಮತ್ತು ಅದನ್ನು ಮಾಡುವುದನ್ನು ನೀವು ಸ್ವತಃ ಆಯ್ಕೆ ಮಾಡಿರಬೇಕು. ಆದರೆ ‘ಪ್ರೀ-ಕ್ರೈಮ್’ (pre-crime) ಎಂದು ಕರೆಯಲ್ಪಡುವ ಕಲ್ಪನೆ ಈ ಎರಡನ್ನೂ ತೆಗೆದುಹಾಕುತ್ತದೆ. ವ್ಯಕ್ತಿಗೆ ತಾನು ಮುಂದೆ ಮಾಡಲಿರುವ ಅಪರಾಧದ ಬಗ್ಗೆ ತಿಳಿದಿರುವುದಿಲ್ಲ, ಏಕೆಂದರೆ ಅದನ್ನು ಮಾಡುವ ನಿರ್ಧಾರವನ್ನು ಅವರು ಇನ್ನೂ ತೆಗೆದುಕೊಂಡಿಲ್ಲ.

ಆದರೆ ಶಿಕ್ಷೆ ಎನ್ನುವುದು ಸದಾ ತಪ್ಪು ಮಾಡಿದ ವ್ಯಕ್ತಿಯ ಬಗ್ಗೆ ಮಾತ್ರವಲ್ಲ; ಅದು ಸಮಾಜದ ವ್ಯಾಪಕ ಹಿತದ ಬಗ್ಗೆ ಕೂಡ ಆಗಿದೆ. ಮತ್ತು ಅದು ಹೆಚ್ಚು ಸುರಕ್ಷಿತ ಹಾಗೂ ಸಂತೋಷಕರವಾದ ಜಗತ್ತೊಂದನ್ನು ನಿರ್ಮಿಸಿದರೆ, ಭವಿಷ್ಯವಾಣಿ ಆಧಾರಿತ ಪೊಲೀಸ್ ವ್ಯವಸ್ಥೆ (Predictive Policing) ಯಾಕೆ ತಪ್ಪು? ಅದು ಹೆಚ್ಚಿನ ಸಮಯದಲ್ಲಿ ಬಹುತೇಕ ಜನರಿಗೆ ಉತ್ತಮವಾದರೂ , ಜನ ತಪ್ಪು ಮಾಡುವ ಮೊದಲೇ ಅವರನ್ನು ಶಿಕ್ಷಿಸುವುದು ಯಾವ ನ್ಯಾಯ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.