ದೇವರನ್ನು ನಂಬುವುದು ಅನೈತಿಕವೇ?

ದೇವರನ್ನು ನಂಬುವುದು ಅನೈತಿಕವೇ? ದೆವ್ವ ಭೂತಗಳು, ಸ್ವರ್ಗ ಅಥವಾ ನಿಯತಿಯನ್ನು ನಂಬುವುದು ತಪ್ಪೇ?… ಈ ಬಗೆಹರಿಯದ ಜಿಜ್ಞಾಸೆಯ ಒಂದು ತರ್ಕ ಇಲ್ಲಿದೆ… । ಸಂಗ್ರಹಾನುವಾದ : ಚಿದಂಬರ ನರೇಂದ್ರ

ರಿಚರ್ಡ್ ಡಾಕಿನ್ಸ್ ಅವರ ಪ್ರಕಾರ, ಸಾಕ್ಷ್ಯಾಧಾರಗಳಿಲ್ಲದೇ ಇತತರು ಏನನ್ನಾದರೂ ನಂಬುವುದನ್ನು ನಾವು ಸಹಿಸಿದರೆ, ಹಾಸ್ಯಾಸ್ಪದ ನಂಬಿಕೆಗಳ ಒಂದು ಸಂಪೂರ್ಣ ಜಗತ್ತಿಗೆ ಬಾಗಿಲನ್ನು ತೆರೆದಂತಾಗುತ್ತದೆ . ಅದು ಬೆಕ್ಕು ದಾರಿಗೆ ಅಡ್ಡ ಬರುವುದರಿಂದ ಹಿಡಿದು ವಿಜ್ಞಾನಿಗಳು ಉಪಗ್ರಹ ಉಡಾವಣೆಗೆ ಮುಂಚೆ ದೇವರಿಗೆ ಪೂಜೆ ಮಾಡುವ ತನಕ ಯಾವುದಾದರೂ ಆಗಬಹುದು.

ಈ ಕಲ್ಪನೆಯನ್ನು ‘epistemic responsibility’ (ಜ್ಞಾನ ಸಂಬಂಧಿತ ಹೊಣೆಗಾರಿಕೆ) ಎಂದು ಕರೆಯಲಾಗುತ್ತದೆ. ಇದರ ಅರ್ಥ, ನಾವು ಸಾಕಷ್ಟು ಸಾಕ್ಷ್ಯಗಳಿರುವ ವಿಷಯಗಳನ್ನು ಮಾತ್ರ ನಂಬುವ ಹೊಣೆಗಾರಿಕೆಯನ್ನು ಹೊಂದಿದ್ದೇವೆ. 1877ರಲ್ಲಿ ತಮ್ಮ “The Ethics of Belief’ ಎನ್ನುವ ಪ್ರಬಂಧದಲ್ಲಿ, ತತ್ವಜ್ಞಾನಿ W K ಕ್ಲಿಫರ್ಡ್ ಹೇಳುತ್ತಾರೆ: ‘ಯಾವುದೇ ವ್ಯಕ್ತಿಯು ಸಾಕಷ್ಟು ಸಾಕ್ಷ್ಯವಿಲ್ಲದೆ ಏನನ್ನಾದರೂ ನಂಬುವುದು ಸದಾ ಸರ್ವಥಾ ತಪ್ಪು. ಈ ತತ್ವವನ್ನು ‘evidentialism’ (ಸಾಕ್ಷ್ಯಾಧಾರಿತ ನಂಬಿಕೆ) ಎಂದು ಗುರುತಿಸಲಾಗುತ್ತದೆ. ಇದರ ಅರ್ಥ, ನಾವು ಸಾಕ್ಷ್ಯವಿರುವ ವಿಷಯಗಳನ್ನು ಮಾತ್ರ ನಂಬಬೇಕು.

ತಮ್ಮ ಪ್ರಬಂಧದಲ್ಲಿ, W K ಕ್ಲಿಫರ್ಡ್, ಒಂದು ಉದಾಹರಣೆ ಕೊಡುತ್ತಾರೆ : ಒಂದು ಹಡಗಿನ ಮಾಲೀಕ, ಜೀವನದಲ್ಲಿ ಒಮ್ಮೆ ಮಾತ್ರ ಸಾಧ್ಯವಾಗುವಂಥ ಅಪರೂಪದ ಪ್ರಯಾಣವೊಂದಕ್ಕೆ ಟಿಕೆಟ್‌ಗಳನ್ನು ಮಾರುತ್ತಿದ್ದಾನೆ. ಆ ಹಡಗು ಪ್ರಯಾಣಕ್ಕೆ ಯೋಗ್ಯವಾಗಿಲ್ಲದಿರಬಹುದು ಎಂಬ ಒಂದು ಸಣ್ಣ ಅನುಮಾನ ಅವನಿಗೂ ಇದೆ. ಆದರೂ ಅವನು ಟಿಕೆಟ್‌ಗಳನ್ನು ಮಾರುತ್ತಾನೆ. ಅವನು ಯಾರನ್ನೂ ಹೆಚ್ಚು ಪ್ರಶ್ನೆಗಳನ್ನು ಕೇಳುವುದಿಲ್ಲ. ಅವನು ಯಾವುದನ್ನೂ ಗಮನಿಸದಿರುವವನಂತೆ ವರ್ತಿಸುತ್ತಾನೆ ಮತ್ತು ಈ ಬಗ್ಗೆ ಯಾವುದೇ ಪರಿಣಿತರ ಸಹಾಯವನ್ನು ಪಡೆಯುವುದಿಲ್ಲ.

ಭವಿಷ್ಯದಲ್ಲಿ ಅಕಸ್ಮಾತ್ ಯಾವುದೇ ಅಪಘಾತ ಸಂಭವಿಸಿದರೆ, ಆ ಹಡಗಿನ ಮಾಲೀಕನು ಆ ಅಪಘಾತಕ್ಕೆ ಹೊಣೆಗಾರನೇ? ಈ ಬಗ್ಗೆ ಹೆಚ್ಚು ಕೂಲಂಕಷವಾಗಿ ವಿಚಾರ ಮಾಡದಿರುವುದಕ್ಕೆ ಅವನು ತಪ್ಪಿತಸ್ಥನೇ?

ರಿಚರ್ಡ್ ಡಾಕಿನ್ಸ್ , ಕ್ಲಿಫರ್ಡ್ ಅವರ ವಾದವನ್ನು ಧಾರ್ಮಿಕ ನಂಬಿಕೆಗಳಿಗೂ ಅನ್ವಯಿಸಿ ಮಾತನಾಡುತ್ತಾರೆ. ಡಾಕಿನ್ಸ್ ಪ್ರಕಾರ, ನಂಬಿಕೆ (faith) ಒಂದು ದೊಡ್ಡ ಪಲಾಯನದ ಮಾರ್ಗವಾಗಿದೆ. ಅದು ಆಲೋಚನೆ ಮಾಡುವ ಮತ್ತು ವಿಚಾರಮೌಲ್ಯಮಾಪನ ಮಾಡುವ ಅಗತ್ಯವನ್ನು ತಪ್ಪಿಸಲು ಬಳಸುವ ನೆಪವಾಗಿದೆ.

ಡಾಕಿನ್ಸ್ ಮತ್ತು ಕ್ಲಿಫರ್ಡ್ ಅವರ ದೃಷ್ಟಿಯಲ್ಲಿ, ನಾವು ವಿಮರ್ಶಾತ್ಮಕ ಚಿಂತನೆ ಇಲ್ಲದೆ, ಪ್ರಶ್ನೆಗಳಿಲ್ಲದೆ, ಅಥವಾ ಸಾಕ್ಷ್ಯವಿಲ್ಲದೆ ಏನನ್ನಾದರೂ ಒಪ್ಪಿಕೊಂಡರೆ, ನಾವು ಕೇವಲ ಮೂರ್ಖರಷ್ಟೇ ಅಲ್ಲ, ಅನೈತಿಕ ಜನ ಕೂಡ ಹೌದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.