ಒಮ್ಮೆ ಗುಲಾಮಗಿರಿ ಪದ್ಧತಿಯ ಬಗ್ಗೆ ಯೋಚಿಸಿ. ಇಲ್ಲಿ ಒಬ್ಬ ಮಾಲಿಕ ಮತ್ತು ನೂರಾರು ಗುಲಾಮರು ಮತ್ತು ಎಲ್ಲ ಗುಲಾಮರು ಸರಿ ಸಮಾನರು. ಮತ್ತು ಎಲ್ಲ ಗುಲಾಮರು ಒಂದೇ ರೀತಿಯ ಶೋಷಣೆಯನ್ನು ಅನುಭವಿಸುತ್ತಾರೆ. ಆದ್ದರಿಂದ ಕೊನೆಗೊಮ್ಮೆ ಆ ಎಲ್ಲ ಗುಲಾಮರು ಒಂದಾಗಿ ತಮ್ಮ ಮಾಲಿಕನ ವಿರುದ್ಧ ಬಂಡೇಳುತ್ತಾರೆ… । ಸಂಗ್ರಹಾನುವಾದ : ಚಿದಂಬರ ನರೇಂದ್ರ
ಯಾವತ್ತಾದರೂ ಯೋಚಿಸಿದ್ದೀರಾ? ಭಾರತದಲ್ಲಿ ಸಾವಿರಾರು ವರ್ಷಗಳಿಂದ ಜಾತಿಯ ಹೆಸರಿನಲ್ಲಿ ಭೇದ-ಭಾವ , ಅತ್ಯಾಚಾರ ಆಗುತ್ತಿರುವಾಗಲೂ , ಯಾಕೆ ದೊಡ್ಡ ಮಟ್ಟ ಕ್ರಾಂತಿ ಆಗಿಲ್ಲ?
ತಾರ್ಕಿಕವಾಗಿ ಯೋಚಿಸಬಹುದಾದರೆ ಈ ಶೋಷಿತವರ್ಗ ತಮ್ಮ ಮೇಲೆ ಅತ್ಯಾಚಾರ ಮಾಡುತ್ತಿರುವ ಜಾತಿಗಳ ಮೇಲೆ ಸಿಡಿದು ನಿಲ್ಲಬೇಕಾಗಿತ್ತು, ಆದರೆ ಅವರು ಹಾಗೆ ಮಾಡುವುದಿಲ್ಲ. ಬದಲಾಗಿ ಅವರು ತಮ್ಮೊಳಗೇ ಬಡಿದಾಡುತ್ತಾರೆ. ಯಾಕೆ ಹೀಗೆ? ಡಾ. ಭೀಮರಾವ್ ಅಂಬೇಡ್ಕರ ಈ ಪ್ರಶ್ನೆಗೆ ಉತ್ತರ ಹೇಳುತ್ತಾರೆ . ಈ ಉತ್ತರ, ಸಮಾಜಶಾಸ್ತ್ರದ ಒಂದು ಭಯಾನಕ ಐಡಿಯಾ. ಇದು Graded Inequality ಯ ಸಮಸ್ಯೆ ಎಂದು ಅಂಬೇಡ್ಕರ ವಾದ ಮಾಡುತ್ತಾರೆ. ಈ ಜಾತಿ ಪದ್ಧತಿ ಕೇವಲ ಒಡೆಯ ಮತ್ತು ಗುಲಾಮರಿಗೆ (master vs slave) ಸಂಬಂಧಿಸಿದ್ದಲ್ಲ. ಇದು ಅಸಮಾನತೆಯ ಏಣಿ. ಈ ಏಣಿಯ ಸಿಸ್ಟಂನಲ್ಲಿ ಪ್ರತಿಯೊಬ್ಬರೂ ತಮ್ಮ ಕೆಳಗೆ ಇರುವವರನ್ನು ತುಳಿಯಬಹುದು.
ಒಮ್ಮೆ ಗುಲಾಮಗಿರಿ ಪದ್ಧತಿಯ ಬಗ್ಗೆ ಯೋಚಿಸಿ. ಇಲ್ಲಿ ಒಬ್ಬ ಮಾಲಿಕ ಮತ್ತು ನೂರಾರು ಗುಲಾಮರು ಮತ್ತು ಎಲ್ಲ ಗುಲಾಮರು ಸರಿ ಸಮಾನರು. ಮತ್ತು ಎಲ್ಲ ಗುಲಾಮರು ಒಂದೇ ರೀತಿಯ ಶೋಷಣೆಯನ್ನು ಅನುಭವಿಸುತ್ತಾರೆ. ಆದ್ದರಿಂದ ಕೊನೆಗೊಮ್ಮೆ ಆ ಎಲ್ಲ ಗುಲಾಮರು ಒಂದಾಗಿ ತಮ್ಮ ಮಾಲಿಕನ ವಿರುದ್ಧ ಬಂಡೇಳುತ್ತಾರೆ. ಆದರೆ ಅಂಬೇಡ್ಕರ ಅವರು ಹೇಳುವಂತೆ ಈ ಜಾತಿ ಪದ್ಧತಿ ವಿಭಿನ್ನವಾದದ್ದು, ಇದು Graded Hierarchy (ಶ್ರೇಣೀಕೃತ ಮೇಲುಕೀಳಿನ ವ್ಯವಸ್ಥೆ). ಇಲ್ಲಿ ಕೇವಲ ಒಂದು ವರ್ಗದ ಮೇಲೆ ಶೋಷಣೆ ಆಗುವುದಿಲ್ಲ. ಇಲ್ಲಿ ಶೋಷಣೆಯ ಪದರುಗಳಿವೆ. ಏಣಿಯ ಮೇಲೆ ನಾಲ್ಕನೇಯ ಸ್ಥಾನದಲ್ಲಿರುವ ವ್ಯಕ್ತಿಯನ್ನು ಅವನ ಮೇಲೆ ಮೂರನೇಯ ಸ್ಥಾನದಲ್ಲಿರುವ ವ್ಯಕ್ತಿ ತುಳಿಯುತ್ತಾನೆ. ಹಾಗೆಯೇ ಐದನೇಯ ಸ್ಥಾನದಲ್ಲಿರುವ ವ್ಯಕ್ತಿಯನ್ನು ನಾಲ್ಕನೇಯ ಸ್ಥಾನದಲ್ಲಿರುವ ವ್ಯಕ್ತಿ ಶೋಷಣೆ ಮಾಡುತ್ತಾನೆ. ಇದು ಮಾನಸಿಕ ತಂತ್ರ.
ಈ ಪದ್ಧತಿ ಶೋಷಿತನಿಗೆ ಹೇಳುತ್ತದೆ ನೀನು ಹಸಿದಿದ್ದೀಯ, ನೀನು ಬಡವ ಆದರೆ ನೀನು ಆ ಇನ್ನೊಬ್ಬ ವ್ಯಕ್ತಿಗಿಂತ ಮೇಲೆ ಇದ್ದೀಯ. ಇಂಥ ವಿಷಮಯ ಸವಲತ್ತಿನ ( toxic privilege) ವ್ಯವಸ್ಥೆ ನಶೆಯ ಥರ ಕೆಲಸ ಮಾಡುತ್ತದೆ. ಕೆಳವರ್ಗದ ವ್ಯಕ್ತಿ ಈ ವ್ಯವಸ್ಥೆಯನ್ನು ಡಿಫೆಂಡ್ ಮಾಡಿಕೊಳ್ಳುವುದು ಯಾಕೆಂದರೆ, ಅವನಿಗೆ ತನ್ನನ್ನು ಶೋಷಿಸುತ್ತಿರುವ ಮೇಲ್ಜಾತಿಯ ಜನರ ಬಗ್ಗೆ ಪ್ರೀತಿ ಇದೆ ಎಂದಲ್ಲ, ಬದಲಾಗಿ ತನಗಿಂತಲೂ ಕೆಳಗಿರುವ ದಲಿತನ ಮೇಲೆ ತನಗೆ ಇರುವ ಪುಟ್ಟ ಪ್ರಿವಿಲೇಜ್ ನ ಕಳೆದುಕೊಳ್ಳಲು ಅವನು ಸಿದ್ಧನಿಲ್ಲ. ಈ ಕಾರಣವಾಗಿ ಜಾತಿ ಶೋಷಿತರ ಒಂದಾಗುವಿಕೆ, ಭಾರತದಲ್ಲಿ ಕಷ್ಟ.
ಬೇರೆ ದೇಶಗಳಲ್ಲಿ ಬಡವರು, ಶ್ರೀಮಂತರ ವಿರುದ್ಧ ಒಂದಾಗಿ ಬಂಡೇಳುತ್ತಾರೆ. ಆದರೆ ಭಾರತದ ಏಣಿ ಅಸಮಾನತೆಯ ಪದ್ಧತಿಯಲ್ಲಿ ವ್ಯಕ್ತಿ ತನ್ನ ಸ್ಥಾನ ಕಾಯ್ದುಕೊಳ್ಳಲು ಎಷ್ಟು ಕಷ್ಟಪಡುತ್ತಿರುತ್ತಾನೆಂದರೆ ಅವನಿಗೆ ತನ್ನ ಕಾಲಿನ ಸರಪಳಿಗಳು ಕಾಣಿಸುವುದೇ ಇಲ್ಲ. ಒಬ್ಬ ಸಾಮಾನ್ಯ ಜಾತಿಯ ವ್ಯಕ್ತಿ, ತನ್ನ ಜಾತಿ ಇನ್ನೊಬ್ಬನ ಜಾತಿಗಿಂತ ಸ್ವಲ್ಪ ಹೆಚ್ಚು ಎಂದು ಪ್ರೂವ್ ಮಾಡಲು ತನ್ನ ಪ್ರಾಣವನ್ನು ಬೇಕಾದರೂ ಕೊಡಬಲ್ಲ. ಅಂಬೇಡ್ಕರ ಅವರಿಗೆ ಇಂಥ ಪದ್ಧತಿ ಶೋಷಿತನನ್ನೇ ಅಪರಾಧಿಯಾಗಿಸುತ್ತದೆ ಎನ್ನುವುದು ಚೆನ್ನಾಗಿ ಗೊತ್ತಿತ್ತು. ಇಲ್ಲಿ ಶೋಷಿತ ಗುಲಾಮನಷ್ಟೇ ಅವನು ಇನ್ನೊಬ್ಬನ ಭ್ರಮಾತ್ಮಕ ಮಾಲಿಕನೂ ಹೌದು.
ಪುಟ್ಟ ಮಾಲಿಕನಾಗುವ ಭ್ರಮೆ ಶೋಷಿತನಲ್ಲಿ ಎಂಥ ನಶೆ ಹುಟ್ಟುಸುತ್ತದೆಯೆಂದರೆ ಅವನು ಈ ವ್ಯವಸ್ಥೆಯ ವಿರುದ್ಧ ಬಂಡೇಳುವುದಿಲ್ಲ, ಬದಲಾಗಿ ಈ ವ್ಯವಸ್ಥೆಯ ಪುಟ್ಟ ಪೋಷಕನಾಗಿ ಹೊರಹೊಮ್ಮುತ್ತಾನೆ. ಇದೊಂದು ಪರಿಪೂರ್ಣವಾದಂಥ ಖೆಡ್ಡಾ. ಇದು ಕಾರುಣ್ಯವನ್ನು ನಾಶಮಾಡಿ ಕ್ರಾಂತಿಗೆ ಜಾಗವೇ ಇರದಂತೆ ಮಾಡುತ್ತದೆ. ನೀವು ಯಾವ ಜಾತಿ ಎನ್ನುವುದು ಇಲ್ಲಿ ಯಾವ ವ್ಯತ್ಯಾಸ ಮಾಡುವುದಿಲ್ಲ. ಜಾತಿ ವ್ಯವಸ್ಥೆಯನ್ನು ನಾಶ ಮಾಡಿ ಸ್ವತಂತ್ರಾಗಬೇಕಾದರೆ ನಾವು ಈ ಏಣಿ ಪದ್ಧತಿಯಿಂದ ಲಭ್ಯವಾಗುವ ಸಣ್ಣಪುಟ್ಚ ನಶೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು. ಬಾಬಾಸಾಹೇಬರು ಹೇಳಿದಂತೆ ಈ ಬ್ರಾಹ್ಮಣಶಾಹಿ ಸೃಷ್ಟಿ ಮಾಡಿರುವ graded hierarchy ಯನ್ನು ಪೂರ್ಣವಾಗಿ ಕಿತ್ತು ಎಸೆಯಬೇಕು.

