ದುಃಖವು ಅನಿವಾರ್ಯವೆನ್ನುವುದನ್ನು ನಾವು ಒಪ್ಪಿಕೊಂಡಾಗ ಮಾತ್ರ , ನಿಜವಾಗಿಯೂ ಸತ್ಯ ಎಂದರೇನು, ಮತ್ತು ಜೀವನದಲ್ಲಿ ನಿಜವಾಗಿ ಮಹತ್ವದ್ದು ಏನು ಎನ್ನುವುದರ ಕಡೆ ನಾವು ನಮ್ಮ ಗಮನ ಹರಿಸಬಹುದು । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಸಾಕಷ್ಟು ಸಮಯ ನೀಡುವಿರಾದರೆ, ದುಃಖವನ್ನು ಪರಿಪೂರ್ಣವಾಗಿ ತಿಳಿದುಕೊಳ್ಳಬಹುದು, ಅನುಭವಿಸುಬಹುದು. ನೋವಿನ ನಮ್ಮ ಪಾಲನ್ನು ಅನುಭವಿಸದೆ ನಾವು ಮರ್ತ್ಯರಾಗಿಯೂ, ಮಾನವರಾಗಿಯೂ ಉಳಿಯುವುದು ಸಾಧ್ಯವಿಲ್ಲ. ಬೌದ್ಧ ತತ್ತ್ವಶಾಸ್ತ್ರದಲ್ಲಿ ಇದನ್ನು ‘ಅಸ್ತಿತ್ವದ ಗುರುತುಗಳಲ್ಲಿ’ ಒಂದು ಎಂದು ಕರೆಯಲಾಗುತ್ತದೆ. ಈ ತತ್ತ್ವದ ಪ್ರಕಾರ, ನಾವು ದುಃಖವನ್ನು ಅರ್ಥಮಾಡಿಕೊಂಡರೆ ಮಾತ್ರ, ಅದನ್ನು ಕಡಿಮೆ ಮಾಡಿಕೊಳ್ಳಬಹುದು ಅಥವಾ ಅದನ್ನು ನೀಗಿಕೊಳ್ಳಬಹುದು. ಬೌದ್ಧ ತತ್ತ್ವಶಾಸ್ತ್ರದ ಪ್ರಕಾರ, ಮೂರು ಪ್ರಕಾರದ ದುಃಖಗಳಿವೆ.
ಮೊದಲನೆಯದು, ಜನರು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುವ ರೀತಿಯ ದುಃಖ. ಅದು ದೇಹಸಂಬಂಧಿ ಮತ್ತು ಶಾರೀರಿಕ ನೋವು. ಇದು ಸಾಮಾನ್ಯವಾಗಿ ರೋಗ, ವೃದ್ಧಾಪ್ಯ ಮತ್ತು ಖಂಡಿತವಾಗಿಯೂ ಮರಣದೊಂದಿಗೆ ಸಂಬಂಧಿಸಿದ್ದು. ನೀವು ನೋವನ್ನು ಅನುಭವಿಸುತ್ತೀರಿ, ನೀವು ಅಸ್ವಸ್ಥರಾಗುತ್ತೀರಿ, ಮತ್ತು ಕೊನೆಗೆ ನೀವು ಮರಣವನ್ನು ಹೊಂದುತ್ತೀರಿ.
ಎರಡನೆಯದು “ದುಕ್ಕ”ಎಂದು ಗುರುತಿಸಲಾಗುವ ದುಃಖ. ಇದು ಜನರು, ವಸ್ತುಗಳ ಮತ್ತು ಸಂಗತಿಗಳ ಸೀಮಿತತೆ ಮತ್ತು ನಶ್ವರತೆಯನ್ನು ಒಪ್ಪಿಕೊಳ್ಳಲಾರದೇ ಇರುವ ಸ್ಥಿತಿ. ನಾವು ಆರೋಗ್ಯ ಮತ್ತು ಐಶ್ವರ್ಯವನ್ನು ಅವು ನಮ್ಮ ಬಳಿ ಸದಾಕಾಲ ಇರುವಂತೆ ಹಿಡಿದುಕೊಳ್ಳ ಬಯಸುತ್ತೇವೆ. ನಾವು ನಮ್ಮ ಪ್ರೀತಿಪಾತ್ರರಿಗಾಗಿ ಶೋಕಿಸುತ್ತೇವೆ, ಏಕೆಂದರೆ ಅವರು ಶಾಶ್ವತವಾಗಿ ನಮ್ಮವರೇ ಎಂದು ತಪ್ಪಾಗಿ ಭಾವಿಸಿದ್ದೇವೆ.
ಮೂರನೆಯ ರೀತಿಯ ದುಃಖವನ್ನು ನಾವು “ಅಸ್ತಿತ್ವದ ಆತಂಕ” (existential angst) ಎಂದು ಕರೆಯಬಹುದು. ಇದು ಫಿಲಾಸೊಫಿಕಲ್ ಅತೃಪ್ತಿ, ಅಥವಾ ತಣ್ಣನೆಯ ಮತ್ತು ಅರ್ಥವಿಲ್ಲದ ಜಗತ್ತಿನ ವಿರುದ್ಧದ ನಮ್ಮ ಕೋಪ ಆಗಿದೆ. ಆಲ್ಬರ್ಟ್ ಕಾಮು, ಅನಾಸಕ್ತ ಜಗತ್ತಿನ ವಾಸ್ತವಿಕತೆಯ ಕಾರಣವಾಗಿ ನಾವು ಹೇಗೆ ತೊಳಲಾಡುತ್ತೇವೆ ಎನ್ನುವುದರ ಕುರಿತಾಗಿ ಬಹಳಷ್ಟು ಚಿಂತನೆ ಮಾಡಿದ್ದಾನೆ. ಮತ್ತು ಗೌತಮ ಬುದ್ಧ, ಜಗತ್ತಿನಲ್ಲಿ ಅರ್ಥವನ್ನು ಕಂಡುಕೊಳ್ಳಲಾಗದ ನಮ್ಮ ಸ್ಥಿತಿಯ ಕಾರಣದಿಂದಲೇ ನಾವು ದುಃಖಪಡುತ್ತೇವೆ ಎಂದು ವಾದ ಮಾಡುತ್ತಾನೆ..
ದುಃಖವನ್ನು ಗುರುತಿಸುವುದೇ ಬೌದ್ಧ ಪಯಣದ ಮೊದಲ ಹೆಜ್ಜೆ. ಎಲ್ಲಾ ವಸ್ತುಗಳೂ ಒಂದಿಲ್ಲ ದಿನ ನಾಶವಾಗಬೇಕು, ಮತ್ತು ದುಃಖವು ಅನಿವಾರ್ಯವೆನ್ನುವುದನ್ನು ನಾವು ಒಪ್ಪಿಕೊಂಡಾಗ ಮಾತ್ರ , ನಿಜವಾಗಿಯೂ ಸತ್ಯ ಎಂದರೇನು, ಮತ್ತು ಜೀವನದಲ್ಲಿ ನಿಜವಾಗಿ ಮಹತ್ವದ್ದು ಏನು ಎನ್ನುವುದರ ಕಡೆ ನಾವು ನಮ್ಮ ಗಮನ ಹರಿಸಬಹುದು.
ಜೀವನವೆಂದರೆ ಅದು ಕೇವಲ ಒಂದು ಸಾಲ, ಮತ್ತು ಪ್ರತಿಯೊಂದು ವಸ್ತುವೂ, ಪ್ರತಿಯೊಂದು ದಿನವೂ, ಹಾಗು ಪ್ರತಿಯೊಬ್ಬರೂ ಒಂದು ಉಡುಗೊರೆಯಷ್ಟೆ ಎನ್ನುವುದನ್ನು ನಾವು ಅರಿತಾಗ, ಆ ಉಡುಗೊರೆಗಳ ಮೌಲ್ಯವನ್ನು ಇನ್ನಷ್ಟು ಆಳವಾಗಿ ಮೆಚ್ಚಿಕೊಳ್ಳುವುದು ನಮಗೆ ಸಾಧ್ಯವಾಗುತ್ತದೆ.

