ನೀಷೆಯ ಪ್ರಕಾರ, ಕರುಣೆ (pity) ಕ್ರೂರತೆಗಿಂತಲೂ ಹೆಚ್ಚು ಹಾನಿಕಾರಕ. ಖಂಡಿತವಾಗಿಯೂ, ಕರುಣೆ ಒಬ್ಬರನ್ನು ದೈಹಿಕವಾಗಿ ನೋಯಿಸುವುದಿಲ್ಲ. ಆದರೆ ಅದು ಸ್ವೀಕರಿಸುವ ವ್ಯಕ್ತಿಗೆ ಇನ್ನೂ ವಿಚಿತ್ರವಾದದ್ದನ್ನು ಮಾಡುತ್ತದೆ. ಅದು ಅವರಿಗೆ ಒಂದು ವೇಷವನ್ನು ಕೊಡುತ್ತದೆ. ಒಂದು ಲೇಬಲ್ ಕೊಡುತ್ತದೆ — “ನಾನು ದುಃಖಿತನು”, “ನಾನು ದುರದೃಷ್ಟವಂತ”, “ಎಲ್ಲಾ ಕೆಟ್ಟ ಸಂಗತಿಗಳೂ ನನಗೇ ಆಗುತ್ತವೆ” ಎಂಬ ಗುರುತನ್ನು! ~ ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ನೀವು ಒಂದು ಪಾರ್ಟಿಯಲ್ಲಿ ಜನರ ನಡುವೆ ನಿಂತಿದ್ದೀರಿ ಎನ್ನುವುದನ್ನ ಕಲ್ಪಿಸಿಕೊಳ್ಳಿ. ಅಲ್ಲಿ ಒಬ್ಬರು ತಮ್ಮ ಕಳೆದ ವರ್ಷ ಎಷ್ಟು ಕಠಿಣವಾಗಿತ್ತು ಎನ್ನುವುದನ್ನ ಹೇಳುತ್ತಿದ್ದಾರೆ. ಆಗ ನೀವು ಗಮನಿಸುತ್ತೀರಿ — ಗುಂಪುಗಳು ತಾವು ಸದಾ ಮಾಡುವುದನ್ನೇ ಮಾಡುತ್ತವೆ. ಮೃದುವಾದ ತಲೆಬಾಗುವಿಕೆಗಳು, ಓಹ್ ಎನ್ನುವ ಉದ್ಗಾರಗಳು, ಕೈಯನ್ನು ಮುಟ್ಟಿ ಸಾಂತ್ವನ ಹೇಳುವುದು, ಮತ್ತು “ಅಯ್ಯೋ, ಪಾಪ!” ಎನ್ನುವ ಮಾತುಗಳು.
ಆದರೆ ಫ್ರೆಡ್ರಿಕ್ ನೀಷೆಯ ಪ್ರಕಾರ, ಇದು ಮನುಷ್ಯರು ಪರಸ್ಪರರಿಗೆ ನಿಶ್ಶಬ್ದವಾಗಿಯೇ ಮಾಡುವ ಅತ್ಯಂತ ವಿನಾಶಕಾರಿ ಸಂಗತಿಗಳಲ್ಲಿ ಒಂದಾಗಿದೆ.
ನೀಷೆಯ ಪ್ರಕಾರ, ಕರುಣೆ (pity) ಕ್ರೂರತೆಗಿಂತಲೂ ಹೆಚ್ಚು ಹಾನಿಕಾರಕ. ಖಂಡಿತವಾಗಿಯೂ, ಕರುಣೆ ಒಬ್ಬರನ್ನು ದೈಹಿಕವಾಗಿ ನೋಯಿಸುವುದಿಲ್ಲ. ಆದರೆ ಅದು ಸ್ವೀಕರಿಸುವ ವ್ಯಕ್ತಿಗೆ ಇನ್ನೂ ವಿಚಿತ್ರವಾದದ್ದನ್ನು ಮಾಡುತ್ತದೆ. ಅದು ಅವರಿಗೆ ಒಂದು ವೇಷವನ್ನು ಕೊಡುತ್ತದೆ. ಒಂದು ಲೇಬಲ್ ಕೊಡುತ್ತದೆ — “ನಾನು ದುಃಖಿತನು”, “ನಾನು ದುರದೃಷ್ಟವಂತ”, “ಎಲ್ಲಾ ಕೆಟ್ಟ ಸಂಗತಿಗಳೂ ನನಗೇ ಆಗುತ್ತವೆ” ಎಂಬ ಗುರುತನ್ನು.
ಫ್ರೆಡ್ರಿಕ್ ನೀಷೆಯ ಪ್ರಕಾರ, ಕರುಣೆ (pity) ಸ್ವೀಕರಿಸುವವನನ್ನೂ, ಕೊಡುವವನನ್ನೂ ನಿಧಾನವಾಗಿ ಕುಂದಿಸುತ್ತದೆ. ಸ್ವೀಕರಿಸುವವನಿಗೆ, “ಅಯ್ಯೋ, ನೀನು ಎಷ್ಟು ದುರ್ದೈವಿ!” ಎಂಬ ಮಾತು ಕೇಳಿದಾಗ, ಅದರೊಳಗೆ ಒಂದು ಸಣ್ಣ ಮತ್ತು ಸೂಕ್ಷ್ಮವಾದ ಸೂಚನೆ ಅಡಗಿರುತ್ತದೆ — “ನೀನು ಇದೇ ರೀತಿಯ ದುಃಖಿತ ವ್ಯಕ್ತಿಯಾಗಿಯೇ ಉಳಿದುಕೋ” ಎಂಬಂತೆ. ಆ ಕಥೆ ನಿಧಾನವಾಗಿ ಗಟ್ಟಿಯಾಗುತ್ತಾ, ಅವರ ವ್ಯಕ್ತಿತ್ವದ ಭಾಗವಾಗಿಬಿಡುತ್ತದೆ.
ಮತ್ತು ಕರುಣೆ ತೋರಿಸುವವನಿಗೆ, ಅದು ಹೊರಗೆ ನೋಡಲು ಉದಾರತೆ ಅಥವಾ ದಯೆಯಂತೆ ಕಂಡರೂ, ಅದು ವಾಸ್ತವದಲ್ಲಿ ಮತ್ತೊಬ್ಬರಿಗಿಂತ ತಾನು ಮೇಲಿದ್ದೇನೆ ಎನ್ನುವ ಸೂಕ್ಷ್ಮ ಭಾವನೆಯನ್ನು ಕೊಡುತ್ತದೆ. ಈ ಅರ್ಥದ ಕರುಣಾತ್ಮಕ ಶಬ್ದಗಳು, ಮೃದುವಾದ ಮುಖಭಾವಗಳು — ಇವೆಲ್ಲವೂ ಒಳಗೊಳಗೆ ಹೇಳುವಂತಿರುತ್ತದೆ : “ದೇವರಿಗೆ ಧನ್ಯವಾದಗಳು… ನಾನು ನಿನ್ನಂತಿಲ್ಲ!”
ಕರುಣೆಯಿಂದ ತುಂಬಿಹೋಗಿರುವ ಸಂಸ್ಕೃತಿ ನಿಜವಾದ ದಯಾಳು ಸಂಸ್ಕೃತಿ ಅಲ್ಲ. ಅದು ಜನರಿಗೆ ತಾವು ಸಣ್ಣವರು ಎನ್ನುವ ಭಾವ ಅನುಭವಿಸುವಂತೆ ಕಲಿಸುವ ಸಂಸ್ಕೃತಿ — ಮತ್ತು ಇದರಲ್ಲಿಯೇ ಒಳ್ಳೆಯತನವಿದೆ ಎಂದು ಭಾವಿಸುವಂತೆ ಹೇಳಿಕೊಡುವ ಸಂಸ್ಕೃತಿ.
ಯಾವಾಗಲೂ ಗಾಯಗೊಂಡವನಾಗಿಯೇ ಇರುವ ಸ್ನೇಹಿತ. ಯಾವಾಗಲೂ ತಾನೇ ಬಲಿಯಾದವನು ಎಂದು ಹೇಳಿಕೊಳ್ಳುವ ಸಹೋದ್ಯೋಗಿ. ನೀಷೆಯ ಪ್ರಕಾರ, ಕರುಣೆ ಅವರನ್ನು ಗುಣಪಡಿಸುವುದಿಲ್ಲ. ಅದು ಅವರನ್ನು ಇದ್ದ ಜಾಗದಲ್ಲೇ ಹಿಡಿದಿಡುತ್ತದೆ.
ನೀಷೆ ಹೇಳುವಂತೆ, ಕರುಣೆ, ದುಃಖ ಅನುಭವಿಸಿರುವವನನ್ನು ಸದಾ “ದುಃಖಿತ” ವ್ಯಕ್ತಿಯಾಗಿಯೇ ಉಳಿಯಲು ಒತ್ತಾಯ ಮಾಡುತ್ತದೆ.
ಆದರೆ ನೀಷೆ ನಂಬಿದ್ದು — ನಮ್ಮ ಜೊತೆ ನಡೆದ ಕೆಟ್ಟ ಘಟನೆಗಳ ಮೂಲಕ ನಮ್ಮನ್ನು ನಾವು ಗುರುತಿಸಿಕೊಳ್ಳಬಾರದು. ನಾವು ಯಾವಾಗಲೂ ಮುಂದೆ ಸಾಗಬೇಕು. ನಮ್ಮನ್ನು ನಾವು ಹೊಸದಾಗಿ ನಿರ್ವಚಿಸಿಕೊಳ್ಳುತ್ತ, ಭೂತಕಾಲವನ್ನು ದಾಟಿ ಮುಂದೆ ಹೋಗಬೇಕು.

