ಪುರುಷಾಹಂಕಾರಕ್ಕೆ ಸೆಡ್ಡು ಹೊಡೆದ ದಿಟ್ಟ ಬಿಕ್ಖುಣಿ ಚಿಹ್ ಹ್ಸಿಯೆನ್ : ಚೀನಾದ ಬಿಕ್ಖುಣಿಯರು #3

ಆಡಳಿತಾಧಿಕಾರಿದುರುದ್ದೇಶವನ್ನು ಅರಿತ ಚಿಹ್ ಹ್ಸಿಯೆನ್ ಅವನ ಮಾತನ್ನು ತಿರಸ್ಕರಿಸಿದಳು. ಯಾವ ಕಾರಣಕ್ಕೂ ತನ್ನ ಸನ್ಯಾಸದ ನಿಯಮ ಮುರಿಯುವುದಿಲ್ಲವೆಂದು ಪ್ರಮಾಣ ಮಾಡಿದಳು. ತನ್ನ ಪ್ರಾಣದ ಹಂಗು ತೊರೆದು ಬಲವಾಗಿ ಪ್ರತಿಭಟಿಸಿದಳು. ಅವಳ ನಿರಾಕರಣೆಯಿಂದ ಕೆರಳಿದ ಆಡಳಿತಾಧಿಕಾರಿ ತನ್ನ ಚಾಕುವಿನಿಂದ ಇಪ್ಪತ್ತಕ್ಕೂ ಹೆಚ್ಚು ಬಾರಿ ಅವಳಿಗೆ ಇರಿದುಬಿಟ್ಟ. ಅವಳು ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಳು, ಆ ಕ್ರೂರಿ ಅಲ್ಲಿಂದ ಹೋದ ಮೇಲೆಯೇ ಅವಳಿಗೆ ಎಚ್ಚರ ಬಂದದ್ದು… । ಚೇತನಾ ತೀರ್ಥಹಳ್ಳಿ

ಚಿಹ್-ಸಿಯೆನ್ ಸಂಸಾರದಲ್ಲಿದ್ದಾಗ ಅವಳ ಮನೆತನದ ಹೆಸರು ‘ಚಾವೊ’ ಎಂದಿತ್ತು. ಉತ್ತರ ಚೀನಾದ ಹಳದಿ ನದಿಯ ತಟದಲ್ಲಿದ್ದ ಚಾಂಗ್ ಶಾನ್ ಪ್ರಾಂತ್ಯ ಅವಳ ತವರು. ಅವಳ ತಂದೆ ಚಾವೊ ಚೆನ್ ಅದೇ ಪ್ರಾಂತ್ಯದ ಫು-ಲಿಯು ಜಿಲ್ಲೆಯ ದಂಡನಾಯಕರಾಗಿದ್ದ. ಉನ್ನತ ಮನೆತನದಲ್ಲಿ ಹುಟ್ಟಿ ಬೆಳೆದರೂ ಚಿಹ್ ಸಿಯೆನ್ ಮನಸ್ಸು ಲೌಕಿಕ ಸುಖಗಳತ್ತ ಎಂದಿಗೂ ಹರಿಯಲಿಲ್ಲ.

ಚಿಕ್ಕಂದಿನಿಂದಲೇ ಅವಳು ಅತೀವ ಧೀಮಂತೆ ಮತ್ತು ಸದ್ಗುಣಶೀಲೆ. ಬೆಳೆದು ದೊಡ್ಡವಳಾದಂತೆ ಸಂಸಾರದ ಬಂಧನಕ್ಕಿಂತ ಮುಕ್ತಿಯ ಹಾದಿಯೇ ಲೇಸೆಂದು ಭಾವಿಸಿದ ಅವಳು, ಕಪ್ಪು ನಿಲುವಂಗಿ ಧರಿಸಿ ಬೌದ್ಧ ಧರ್ಮದ ಸನ್ಯಾಸ ದೀಕ್ಷೆ ಪಡೆದಳು.

ಮಠ ಸೇರಿದ ಮೇಲೆ ಅವಳ ಬದುಕು ಸಂಪೂರ್ಣ ಬದಲಾಯಿತು. ಸಂನ್ಯಾಸದ ಕಠಿಣ ನಿಯಮಗಳನ್ನು ಪಾಲಿಸುವಲ್ಲಿ ಅವಳು ಕಿಂಚಿತ್ತೂ ಲೋಪ ಎಸಗುತ್ತಿರಲಿಲ್ಲ. ಅವಳ ಏಕಾಗ್ರತೆ ಮತ್ತು ಆಧ್ಯಾತ್ಮಿಕ ಶಕ್ತಿ ಎಷ್ಟಿತ್ತೆಂದರೆ, ಜಗತ್ತಿನ ಯಾವುದೇ ಜಂಜಾಟಗಳು ಅವಳ ಮನಸ್ಸನ್ನು ವಿಚಲಿತಗೊಳಿಸುತ್ತಿರಲಿಲ್ಲ. ಎಲ್ಲವನ್ನೂ ಅರಿತೂ ಯಾವುದಕ್ಕೂ ಅಂಟಿಕೊಳ್ಳದೆ ಪದ್ಮಪತ್ರದಂತೆ ಬಾಳಿದಳು.

ಅವಳು ನೆಲೆಸಿದ್ದ ಪ್ರಾಂತ್ಯದ ಆಡಳಿತಾಧಿಕಾರಿ ತು ಪಾ, ಚೀನಾದ ಪೌರಾಣಿಕ ದಂತಕತೆ ಹ್ವಾಂಗ್ ವಾಂಗ್ ಮತ್ತು ಲಾವೋ-ತ್ಸುವಿನ ಸಿದ್ಧಾಂತಗಳಲ್ಲಿ ಅಚಲ ನಂಬಿಕೆ ಹೊಂದಿದ್ದವನು. ಅವನಿಗೆ ಬೌದ್ಧ ಬಿಕ್ಖುಗಳು ಮತ್ತು ಸನ್ಯಾಸಿನಿಯರೆಂದರೆ ಎಲ್ಲಿಲ್ಲದ ದ್ವೇಷ. ಇದೇ ಕಾರಣಕ್ಕೆ ಅವನು ಸನ್ಯಾಸಿಗಳ ಗುಂಪುಗಳನ್ನು ತನಿಖೆಗೆ ಒಳಪಡಿಸಿ, ಅದರಲ್ಲಿ ಸಾಧನೆಗೆ ಅನರ್ಹರಾದವರನ್ನು ಸಾರಾಸಗಟಾಗಿ ಹೊರಹಾಕುವಂತೆ ಆದೇಶ ಹೊರಡಿಸಿದ. ಈ ತನಿಖೆಯ ಮಾನದಂಡಗಳು ಬಹಳ ಕಠಿಣವಾಗಿದ್ದವು ಮತ್ತು ಸಾಮಾನ್ಯ ವ್ಯಕ್ತಿಗಳು ಅದನ್ನು ಪೂರೈಸುವುದು ಅಸಾಧ್ಯವಾಗಿತ್ತು. ಕಿರಿಯ ವಯಸ್ಸಿನ ಬಿಕ್ಷುಗಳು ಮತ್ತು ಸನ್ಯಾಸಿನಿಯರು ಆಡಳಿತಾಧಿಕಾರಿಯ ಕ್ರೌರ್ಯಕ್ಕೆ ಹೆದರಿ ಊರು ಬಿಟ್ಟು ಓಡಿಹೋದರು.

ಚಿಹ್ ಹ್ಸಿಯೆನ್ ಮತ್ತು ಕೆಲವು ವಯಸ್ಸಾದ ಸನ್ಯಾಸಿನಿಯರು ಅಂಜದೆ ತನಿಖೆ ನಡೆಯುತ್ತಿದ್ದ ಜಾಗಕ್ಕೆ ಹೋಗಲು ಧೈರ್ಯ ಮಾಡಿದರು. ಅದಕ್ಕಾಗಿ ನಗರದ ಗೋಡೆಯ ಹೊರಗಿದ್ದ ಬಿಲ್ಲುಗಾರರ ಅಭ್ಯಾಸ ಮಂದಿರದತ್ತ ತೆರಳಿದರು. ಆಡಳಿತಾಧಿಕಾರಿಯು ಮೊದಲು ಚಿಹ್ ಹ್ಸಿಯೆನ್‌ಳನ್ನೇ ವಿಚಾರಣೆಗೆ ಒಳಪಡಿಸಿದನು. ಅವಳ ಸಾಧನೆಯು ಅತ್ಯುನ್ನತ ಮಟ್ಟದ್ದಾಗಿದ್ದು, ಅವನಿಗೆ ಯಾವ ಕೊರತೆಯೂ ಸಿಗಲಿಲ್ಲ. ಅವಳ ಪರಿಶುದ್ಧ ಸೌಂದರ್ಯ ಮತ್ತು ವಾಕ್ಚಾತುರ್ಯಗಳು ಅವನನ್ನು ಮರುಳುಗೊಳಿಸಿದವು. ಅವನ ಮನಸ್ಸಿನಲ್ಲಿ ದುಷ್ಟ ಆಲೋಚನೆಗಳು ಮೂಡಿ, ಅವಳನ್ನು ತನ್ನೊಡನೆ ಏಕಾಂತದಲ್ಲಿರುವಂತೆ ಬಲವಂತಪಡಿಸಿದ. ಅವನ ದುರುದ್ದೇಶವನ್ನು ಅರಿತ ಚಿಹ್ ಹ್ಸಿಯೆನ್ ಅದನ್ನು ತಿರಸ್ಕರಿಸಿದಳು. ಯಾವ ಕಾರಣಕ್ಕೂ ತನ್ನ ಸನ್ಯಾಸದ ನಿಯಮ ಮುರಿಯುವುದಿಲ್ಲವೆಂದು ಪ್ರಮಾಣ ಮಾಡಿದಳು. ತನ್ನ ಪ್ರಾಣದ ಹಂಗು ತೊರೆದು ಬಲವಾಗಿ ಪ್ರತಿಭಟಿಸಿದಳು. ಅವಳ ನಿರಾಕರಣೆಯಿಂದ ಕೆರಳಿದ ಆಡಳಿತಾಧಿಕಾರಿ ತನ್ನ ಚಾಕುವಿನಿಂದ ಇಪ್ಪತ್ತಕ್ಕೂ ಹೆಚ್ಚು ಬಾರಿ ಅವಳಿಗೆ ಇರಿದುಬಿಟ್ಟ. ಅವಳು ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಳು, ಆ ಕ್ರೂರಿ ಅಲ್ಲಿಂದ ಹೋದ ಮೇಲೆಯೇ ಅವಳಿಗೆ ಎಚ್ಚರ ಬಂದದ್ದು.

ಈ ಘಟನೆಯ ನಂತರ, ಚಿಹ್ ಹ್ಸಿಯೆನ್ ಉಪವಾಸ ಮತ್ತು ಕಠಿಣ ತಪಸ್ಸಿನ ಮೂಲಕ ತನ್ನ ಸಾಧನೆಯನ್ನು ಇಮ್ಮಡಿಗೊಳಿಸಿಕೊಂಡಳು. ಅವಳ ಜ್ಞಾನ ಮತ್ತು ಅಸಾಧಾರಣ ಪ್ರಭೆಗೆ ಮಾರುಹೋದ ನೂರಕ್ಕೂ ಹೆಚ್ಚು ಹೆಣ್ಣುಗಳು ಅವಳ ಶಿಷ್ಯತ್ವ ಸ್ವೀಕರಿಸಿದರು, ಅವಳನ್ನು ಹಿಂಬಾಲಿಸಿದರು.

ಸದಾ ಪ್ರಜ್ಞಾವಂತಿಕೆಯಿಂದಲೇ ಪ್ರತಿಯೊಂದು ಕೆಲಸವನ್ನು ಮಾಡುತ್ತಿದ್ದ ಚಿಹ್ ಹ್ಸಿಯೆನ್ ಪಾಲಿಗೆ ಬದುಕೇ ಒಂದು ಧ್ಯಾನದಂತಿತ್ತು. ಅದರಲ್ಲೂ ಅವಳ ನಡಿಗೆಯೊಂದು ವಿಶೇಷದ ಮತ್ತು ಮಹತ್ವದ ಧ್ಯಾನವಾಗಿತ್ತು. ತನ್ನ ಬಿಕ್ಖುಣಿ ವಿಹಾರದ ಸುತ್ತ ಹುಲ್ಲು ಹಾಸಿನ ಮೇಲೆ ಅವಳು ನಡೆಯುತ್ತಿದ್ದರೆ, ಸುತ್ತಮುತ್ತಲಿನ ಹಕ್ಕಿಗಳೆಲ್ಲ ಅಲ್ಲಿ ಬಂದು ಸೇರುತ್ತಿದ್ದವು ಮತ್ತು ಅವಳನ್ನು ಹಿಂಬಾಲಿಸುತ್ತಿದ್ದವು ಅನ್ನಲಾಗುತ್ತದೆ.

ಅಧಿಕಾರ ಮತ್ತು ಪುರುಷಾಹಂಕಾರದ ದರ್ಪವನ್ನು ಧೈರ್ಯವಾಗಿ ಎದುರಿಸಿ ಧಮ್ಮವನ್ನು ಎತ್ತಿಹಿಡಿದ ಚಿಹ್ ಹ್ಸಿಯೆನ್, ದಿಟ್ಟ ಬಿಕ್ಖುಣಿಯಾಗಿ ನೆನೆಯಲ್ಪಡುತ್ತಾಳೆ.


(ಆಕರಗಳು: Daughters of Emptiness; Lives of the nuns; Buddhist Nuns, Biqiuni zhuan and online sources)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.