ನೀವು ಆಯ್ಕೆ ಮಾಡಿಕೊಂಡ ದಿನ ನಿದ್ದೆಯಿಂದೆದ್ದು ಕಣ್ಣು ಬಿಟ್ಟಕೂಡಲೇ ಕಾಣುವಂತೆ “ಇಂದು ಎಚ್ಚರದ ಗಮನದ ದಿನ” ಎಂದು ನೆನಪಿಸುವ ಬರಹವನ್ನೋ ಬೇರೆ ವ್ಯವಸ್ಥೆಯನ್ನೋ ಮಾಡಿಕೊಳ್ಳಿ. ಇಂದು ನನ್ನ ದಿನ ಎಂದು ನೆನಪಾದ ತಕ್ಷಣ ನಿಮ್ಮ ಮುಖದಲ್ಲೊಂದು ನಗೆ ಮೂಡಿ ನಿಮ್ಮ ಎಚ್ಚರದ ಗಮನಕ್ಕೆ ಮುನ್ನುಡಿಯಾಗಬಹುದು. ನಗುಮುಖವು ಎಚ್ಚರದ ಗಮನವನ್ನು ಪೋಷಿಸುತ್ತದೆ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 1: ಗಮನದ ಎಚ್ಚರ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 1.14: ಗಮನದ ಎಚ್ಚರ । ಎಚ್ಚರದ ಗಮನದೊಂದು ದಿನ
ಪ್ರತಿ ದಿನ, ಪ್ರತಿ ಗಂಟೆ ಎಚ್ಚರದ ಗಮನವನ್ನು ಅಭ್ಯಾಸಮಾಡುತಿರಬೇಕು. ಹೀಗೆ ಹೇಳುವುದು ಸುಲಭ, ಮಾಡುವುದು ಕಷ್ಟ. ತಾತ್ವಿಕವಾಗಿ ಪ್ರತಿ ದಿನವೂ ನಮ್ಮ ದಿನ, ದಿನದ ಪ್ರತಿ ಗಂಟೆಯೂ ನಮ್ಮ ಗಂಟೆ. ನಿಜವೇನೆಂದರೆ ನಮ್ಮಲ್ಲಿ ತೀರ ಕಡಿಮೆ ಜನ ಮಾತ್ರ ಹಾಗೆ ಬದುಕುವುದನ್ನು ಸಾಧಿಸಿದ್ದಾರೆ. ನಮ್ಮ ಕುಟುಂಬ, ನಮ್ಮ ದುಡಿಮೆ, ಸಮಾಜ ಇವು ನಮ್ಮ ಸಮಯವನ್ನೆಲ್ಲ ದೋಚುತ್ತವೆ ಎಂಬ ಭಾವ ನಮ್ಮಲ್ಲಿದೆ. ಹಾಗಾಗಿ ಪ್ರತಿಯೊಬ್ಬರೂ ವಾರದಲ್ಲಿ ಒಂದು ದಿನ ಎಚ್ಚರದ ಗಮನದ ಬದುಕಿಗೆ ಮೀಸಲಿಡಬೇಕು ಅನ್ನುತ್ತೇನೆ.
ಸೇವಾವಲಯದಲ್ಲಿ ತುರ್ತು ಕೆಲಸ ಮಾಡುವ ಕೆಲಸಗಾರರಿಗೂ ಇಂಥ ದಿನವನ್ನು ಪಡೆಯುವ ಹಕ್ಕು ಇರಬೇಕು. ಇಂಥ ದಿನ ವಾರಕ್ಕೆ ಒಂದಾದರೂ ಇರದಿದ್ದರೆ ನಾವು ಕೆಲಸ-ಆತಂಕಗಳ ಬದುಕಿನಲ್ಲೇ ಮುಳುಗುತ್ತೇವೆ, ನಮ್ಮ ಸ್ಪಂದನೆಗಳು ನಿರುಪಯುಕ್ತ, ನಿರರ್ಥಕ ಆಗುತ್ತವೆ. ವಾರದಲ್ಲಿ ನಿಮಗೆ ಅನುಕೂಲವಾಗುವ ಒಂದು ದಿನ ಎಚ್ಚರದ ಗಮನದ ಬದುಕಿನ ದಿನವಾಗಿರಲಿ.
ನೀವು ಆಯ್ಕೆ ಮಾಡಿಕೊಂಡ ದಿನ ನಿದ್ದೆಯಿಂದೆದ್ದು ಕಣ್ಣು ಬಿಟ್ಟಕೂಡಲೇ ಕಾಣುವಂತೆ “ಇಂದು ಎಚ್ಚರದ ಗಮನದ ದಿನ” ಎಂದು ನೆನಪಿಸುವ ಬರಹವನ್ನೋ ಬೇರೆ ವ್ಯವಸ್ಥೆಯನ್ನೋ ಮಾಡಿಕೊಳ್ಳಿ. ಇಂದು ನನ್ನ ದಿನ ಎಂದು ನೆನಪಾದ ತಕ್ಷಣ ನಿಮ್ಮ ಮುಖದಲ್ಲೊಂದು ನಗೆ ಮೂಡಿ ನಿಮ್ಮ ಎಚ್ಚರದ ಗಮನಕ್ಕೆ ಮುನ್ನುಡಿಯಾಗಬಹುದು. ನಗುಮುಖವು ಎಚ್ಚರದ ಗಮನವನ್ನು ಪೋಷಿಸುತ್ತದೆ.
ಹಾಸಿಗೆಯ ಮೇಲೆ ಇರುವಾಗಲೇ ಸ್ವಲ್ಪ ಹೊತ್ತು ಎಚ್ಚರದ ಗಮನದೊಂದಿಗೆ ನಿಧಾನವಾಗಿ, ದೀರ್ಘವಾಗಿ ಉಸಿರಾಡಿ. ಎಂದಿನಂತೆ ದಡಬಡಿಸಿ ಏಳದೆ ನಿಧಾನವಾಗಿ ಏಳಿ. ನಿಮ್ಮ ಪ್ರತಿಯೊಂದು ಚಲನೆಯನ್ನೂ ಎಚ್ಚರದಿಂದ ಗಮನಿಸಿಕೊಳ್ಳಿ. ಎದ್ದಮೇಲೆ, ಹಲ್ಲುಜ್ಜುವ, ಮುಖತೊಳೆಯುವ, ಬೆಳಗಿನ ಎಲ್ಲ ಕಾರ್ಯಗಳನ್ನು ಶಾಂತವಾಗಿ, ಆತುರವಿಲ್ಲದೆ, ಪ್ರತಿಯೊಂದು ಕೆಲಸವನ್ನೂ ಎಚ್ಚರದಿಂದ ಗಮನಿಸುತ್ತಾ ಮಾಡಿ. ಉಸಿರು ತೆಗೆದುಕೊಳ್ಳುವ, ಹೊರಬಿಡುವ ಕ್ರಿಯೆಯ ಮೇಲೆ ನಿಮ್ಮ ಗಮನವಿರಲಿ, ಗಮನ ಎಲ್ಲೆಲ್ಲೋ ಚೆದುರದಿರಲಿ.
ಪ್ರತಿ ಚಲನೆಯಲ್ಲೂ ಶಾಂತಿ ಇರಲಿ. ಉಸಿರಿನೊಂದಿಗೆ ನಿಮ್ಮ ಹೆಜ್ಜೆಗಳನ್ನು ಹೊಂದಿಸಿಕೊಳ್ಳಿ. ಸ್ನಾನಕ್ಕೆ ಕೊನೆಯ ಪಕ್ಷ ಅರ್ಧ ಗಂಟೆ ಮೀಸಲಾಗಿಡಿ. ನಿಧಾನವಾಗಿ, ಮನಸಿಟ್ಟು, ಸ್ನಾನ ಮಾಡಿ—ಸ್ನಾನ ಮುಗಿದ ತಕ್ಷಣ ಮೈ ಹಗುರಾಗಿ ಫ್ರೆಶ್ ಅನಿಸಬೇಕು, ಹಾಗೆ. ಆಮೇಲೆ, ಮನೆಕೆಲಸ. ಪಾತ್ರೆ ತೊಳೆಯುವುದೋ ಧೂಳು ಹೊಡೆಯುವುದೋ ಮೇಜು ಒರೆಸುವುದೋ ಪುಸ್ತಕ ಜೋಡಿಸುವುದೋ ಅಡುಗೆ ಮನೆಯ ನೆಲ ತೊಳೆಯುವುದೋ…ಕೆಲಸ ಯಾವುದಾದರೂ ಸರಿ. ಅದನ್ನು ನಿಧಾನವಾಗಿ, ಮನಸಿಟ್ಟು ಮಾಡಿ. “ಈ ಕೆಲಸ ಮುಗಿಸಬೇಕು” ಅಂದುಕೊಳ್ಳುತ್ತ ಯಾವ ಕೆಲಸವನ್ನೂ ಮಾಡಬೇಡಿ. ಪ್ರತಿ ಕೆಲಸವನ್ನೂ ಸಮತೋಷವಾಗಿ, ಪೂರ್ತಿಯಾದ ಎಚ್ಚರದ ಗಮನವಿಟ್ಟು ಮಾಡಿ. ಹೀಗಲ್ಲದೆ ಬೇರೆ ಯಾವ ರೀತಿಯಲ್ಲೂ ಗಮನದ ಅಭ್ಯಾಸಕ್ಕೆ ಬೆಲೆಯಿಲ್ಲ. ಕಿರಿಕಿರಿ ಹುಟ್ಟಿಸುತಿದ್ದ ಕೆಲಸವನ್ನು ಕೂಡ ಎಚ್ಚರದ ಗಮನದೊಂದಿಗೆ ಮಾಡುವಾಗ ಸಂತೋಷ ಕಾಣುತ್ತದೆ. ಝೆನ್ ಗುರುಗಳು ಯಾವುದೇ ಕೆಲಸ ಮಾಡಲಿ, ಸುಮ್ಮನೆ ಚಲಿಸಲಿ, ಅದನ್ನು ನಿಧಾನವಾಗಿ, ಯಾವುದೇ ಹಿಂಜರಿಕೆ ಇಲ್ಲದೆ ಮಾಡುತ್ತಾರೆ. ನೀವೂ ಹಾಗೆ ಕೆಲಸ ಮಾಡಿ.
ಹೊಸತಾಗಿ ಅಭ್ಯಾಸ ಮಾಡುವವರು ಇಡೀ ದಿನ ಮೌನದ ಮನೋಧರ್ಮ ಉಳಿಸಿಕೊಳ್ಳಿ. ಮಾತಾಡಲೇಬಾರದು ಎಂದಲ್ಲ, ಮಾತಾಡಬಹುದು, ಹಾಡು ಕೂಡ ಹೇಳಬಹುದು. ತೀರ ಮಿತವಾಗಿರಲಿ, ಹಾಡು, ಮಾತು ಕೂಡ ಎಚ್ಚರದ ಗಮನದೊಂದಿಗೆ ಮೂಡಲಿ. ಹಾಡುತ್ತಿರುವಾಗ ಯಾವ ಹಾಡು ಹಾಡುತ್ತಿದ್ದೇವೆ ಎಂದು ಗೊತ್ತಿರುತ್ತದಲ್ಲಾ ಅದೇ ರೀತಿ ಮಾತಾಡುವಾಗ, ಹಾಡುವಾಗ ಕೂಡ ಎಚ್ಚರದ ಗಮನ ಇರಬೇಕು. ನಿಮ್ಮ ಗಮನದ ಚೈತನ್ಯ ಇನ್ನೂ ದುರ್ಬಲವಾಗಿದ್ದರೆ ಮೌನವು ಸದಾ ನಿಮ್ಮ ಸಹಾಯಕ್ಕೆ ಇರುತ್ತದೆ, ಮೌನ ಪಾಲನೆ ಒಳ್ಳೆಯದು ಎಂಬುದು ನೆನಪಿರಲಿ.
ನಿಮ್ಮ ಊಟ ನೀವೇ ತಯಾರಿಸಿ, ನಿಮ್ಮ ಅಡುಗೆಯ, ಊಟದ ಪಾತ್ರೆಗಳನ್ನು ನೀವೇ ಎಚ್ಚರದ ಗಮನದೊಂದಿಗೆ ತೊಳೆಯಿರಿ. ಬೆಳಗಿನ ಈ ಕೆಲಸಗಳೆಲ್ಲ ಮುಗಿದಮೇಲೆ, ಮಧ್ಯಾಹ್ನದಲ್ಲಿ ತೋಟದಕೆಲಸವೋ ಮೋಡವನ್ನು ನೋಡುವುದೋ ಹೂವೆತ್ತುವುದೋ ಮುಗಿದ ಮೇಲೆ ಚಹಾ ತಯಾರಿಸಿ ಕುಡಿಯಿರಿ.
ಕೆಲಸದ ನಡುವೆ ಆತುರಾತುರವಾಗಿ ಟೀ ಕುಡಿಯುವ ಹಾಗಲ್ಲ—ಟೀ ಮಾಡಿ ಕುಡಿಯುವುದೇ ಜಗತ್ತಿನಲ್ಲಿ ಅತಿ ಮುಖ್ಯವಾದ ಕೆಲಸ ಅನ್ನುವ ಹಾಗೆ ತೊಡಗಿಕೊಳ್ಳಿ. ನಿಧಾನವಾಗಿ ಟೀ ಮುಗಿಸಬೇಕೆಂಬ ಆತುರವಿಲ್ಲದೆ ಭವಿಷ್ಯದ ಅತಂಕವಿರದೆ ಟೀ ಕುಡಿಯಿರಿ. ಪ್ರತಿ ಕ್ಷಣವನ್ನೂ ಜೀವಿಸಿ—ಅದೊಂದೇ ಜೀವಂತ ಕ್ಷಣ ಅನ್ನುವ ಹಾಗೆ. ಭವಿಷ್ಯದ ಮೋಹ ಬೇಡ. ಮಾಡಬೇಕಾದ ಕೆಲಸಗಳ ಚಿಂತೆ ಬೇಡ. ಈ ಕ್ಷಣ ಎದ್ದು ಏನೋ ಮಾಡಬೇಕು ಅನಿಸುವುದು ಕೂಡ ಬೇಡ. ಸಂಜೆಯ ಹೊತ್ತಿನಲ್ಲಿ ಇಡೀ ವಾರ ನೀವು ಮಾಡಲಾಗದಿದ್ದ, ನಿಮಗೆ ಖುಷಿ ಕೊಡುವ ಕೆಲಸಗಲನ್ನು ಮಾಡಿ. ಸ್ನೇಹಿತರಿಗೆ ಪತ್ರ ಬರೆಯುವುದು, ಓದುವುದು, ಬರೆಯುವುದು ಹೀಗೆ. ಏನನ್ನೇ ಮಾಡಿದರು ಪೂರ್ತಿಯಾಗಿ ಮನಸಿಟ್ಟು ಮಾಡಿ.
ಸಂಜೆಯ ಊಟ ಮಿತವಾಗಿರಲಿ. ಹಗುರ ಹೊಟ್ಟೆಯಲ್ಲಿ ರಾತ್ರಿಯ ಹತ್ತು ಗಂಟೆಯ ಹೊತ್ತಿಗೆ ಮಾಡುವ ಧ್ಯಾನ ಆರಾಮವೆನಿಸುತ್ತದೆ. ಧ್ಯಾನ ಮಾಡಿ ರಾತ್ರಿಯ ತಂಗಾಳಿಯಲ್ಲಿ ನಿಧಾನವಾಗಿ ವಾಕ್ ಮಾಡಿ. ಎಚ್ಚರದ ಗಮನದೊಂದಿಗೆ ಉಸಿರಾಡುತ್ತಾ ಉಸಿರಿನ ಲಯವನ್ನು ಹೆಜ್ಜೆಗಳಲ್ಲಿ ಅಳೆಯುತ್ತಾ ನಡೆದು ನಿಮ್ಮ ಕೋಣೆಗೆ ಮರಳಿ ನಿದ್ರೆ ಮಾಡಿ.
ಹೀಗೆ ಬದುಕಿದ ಒಂದು ದಿನದ ವಾರದ ಮಿಕ್ಕ ದಿನಗಳ ಬದುಕಿನ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ. ನಿಮ್ಮ ಬದುಕಿನಲ್ಲಿ ಅರ್ಥಪೂರ್ಣ ವ್ಯತ್ಯಾಸ ಕಾಣುತ್ತದೆ. ಕ್ರಮೇಣ ವಾರದ ಏಳೂ ದಿನ ಎಚ್ಚರದ ಗಮನದಲ್ಲಿ ಮಾಡಲು ಸಾಧ್ಯವಾಗುತ್ತದೆ.

