ಸರಿಯಾಗಿ ಅರ್ಥವಾಗದ ಮಹಾನ್ ಜ್ಞಾನಿ!

2015ರಲ್ಲಿ ಸಂಶೋಧಕ Gordon Pennycook ಅವರಿಗೆ ಈ ಕುರಿತಾದ ಅಧ್ಯಯನಕ್ಕೆ ಇಗ್ನೋಬಲ್ ಪ್ರಶಸ್ತಿ ಸಿಕ್ಕಿತು. ಅವರು ಬಹುತೇಕ ಜನರಿಗೆ ನಿಜವಾದ ತತ್ತ್ವಚಿಂತನೆ ಮತ್ತು ಕೇವಲ ಆಳ ಅನಿಸುವ, ಕೇಳಿಸುವ ಅರ್ಥವಿಲ್ಲದ ಮಾತುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಸಿದ್ಧ ಮಾಡಿ ತೋರಿಸಿದರು । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

Pseudo-profound BS (BS : Bulshit )ಎಂದರೆ, ಆಳ ಅನಿಸುವಂಥ ಪದಗಳನ್ನು ಸರಸರನೆ ಜೋಡಿಸಿ ಹೇಳುವುದು, ಮತ್ತು ಆ ಮಾತುಗಳನ್ನು ಕೇಳುವವರು ಅದನ್ನು ನಿಜವಾಗಿಯೂ ಗಂಭೀರವಾದ ಜ್ಞಾನ ಎಂದು ಅರ್ಥೈಸಿಕೊಳ್ಳುವುದು. ಉದಾಹರಣೆಗೆ, ಯಾರಾದರೂ “’the force of now will make you whole” ಎಂದು ಹೇಳಿದರೆ, ಎಲ್ಲರೂ ತಲೆದೂಗುತ್ತಾರೆ — “ಅದ್ಭುತ!” ಎಂದು. ಅದನ್ನು ಪೋಸ್ಟರ್ ಆಗಿ ಮುದ್ರಿಸಿ, ಡಬಲ್ ಟ್ಯಾಪ್ ಮಾಡಿ ಲೈಕ್ ಮಾಡಿ, ಮತ್ತೆ ಹಂಚಿಕೊಳ್ಳುತ್ತಾರೆ.

2015ರಲ್ಲಿ ಸಂಶೋಧಕ Gordon Pennycook ಅವರಿಗೆ ಈ ಕುರಿತಾದ ಅಧ್ಯಯನಕ್ಕೆ ಇಗ್ನೋಬಲ್ ಪ್ರಶಸ್ತಿ ಸಿಕ್ಕಿತು. ಅವರು ಬಹುತೇಕ ಜನರಿಗೆ ನಿಜವಾದ ತತ್ತ್ವಚಿಂತನೆ ಮತ್ತು ಕೇವಲ ಆಳ ಅನಿಸುವ, ಕೇಳಿಸುವ ಅರ್ಥವಿಲ್ಲದ ಮಾತುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಸಿದ್ಧ ಮಾಡಿ ತೋರಿಸಿದರು.

Gordon Pennycook ಅವರ ಪ್ರಕಾರ, ಇದಕ್ಕೆ ಎರಡು ಕಾರಣಗಳಿವೆ. ಮೊದಲ ಕಾರಣ ರಚನೆಗೆ ಸಂಬಂಧಪಟ್ಟದ್ದು. ನೀವು ಚೆನ್ನಾಗಿ ಕಟ್ಟಿಕೊಡಲಾದ, ಅಥವಾ ಸುಂದರವಾಗಿ ಕೇಳಿಸುವ ಒಂದು ವಾಕ್ಯವನ್ನು ಓದಿದಾಗ, ಅದರ ಲೇಖಕರು ಅದರ ಅರ್ಥಕ್ಕೂ ಅದರ ಕಾವ್ಯಾತ್ಮಕ ಸೊಗಸಿನಷ್ಟೇ ಆಳವಾದ ಚಿಂತನೆ ನೀಡಿರಬೇಕು ಎಂದು ನೀವು ಊಹಿಸಲು ಇಷ್ಟಪಡುತ್ತೀರಿ. ಎರಡನೇ ಕಾರಣ, ಬಳಸಲಾಗಿರುವ ಪದಗಳ ಸ್ವಭಾವಕ್ಕೆ ಸಂಬಂಧಪಟ್ಟದ್ದು. ನೀವು ಗಂಭೀರ ಮತ್ತು ತತ್ತ್ವಚಿಂತನೆಯಂತೆ ಕೇಳಿಸುವ ಪದಗಳನ್ನು ಓದಿದಾಗ, ಆ ವಾಕ್ಯದಲ್ಲಿ ಯಾವುದೋ ಮಹತ್ವದ ಅರ್ಥ ಅಡಗಿರಬೇಕು ಎಂದು ತಿಳಿದುಕೊಳ್ಳುತ್ತೀರಿ. ಹಾಗಾಗಿ, ಅದು ನಿಮಗೆ ಅರ್ಥವಾಗದಿದ್ದರೆ, ತಪ್ಪು ನಿಮ್ಮದೇ ಎಂದುಕೊಳ್ಳುತ್ತೀರಿಯೇ ಹೊರತು ನಿಮ್ಮ ಮುಂದೆ ಇರುವ ಆ ಅರ್ಥವಿಲ್ಲದ ಪದಗಳ ಗಜಿಬಿಜಿಯದಲ್ಲ. ಹೀಗೆ ಈ ಗೊಂದಲವನ್ನೇ “ಆಳ” ಎಂದು ವ್ಯಾಖ್ಯಾನಿಸಲಾಗುತ್ತದೆ, ಮತ್ತು ಲೇಖಕನನ್ನು “ಸರಿಯಾಗಿ ಅರ್ಥವಾಗದ ಮಹಾನ್ ಜ್ಞಾನಿ” ಎಂದು ಮರುಬ್ರ್ಯಾಂಡ್ ಮಾಡಲಾಗುತ್ತದೆ.

ಆದರೆ ಫ್ರೆಡ್ರಿಕ್ ನೀಷೆ ಒಮ್ಮೆ ಹೇಳಿದಂತೆ, “ನೀರನ್ನು ಆಳವಾಗಿದೆ ಎಂದು ತೋರಿಸಲು ಅದನ್ನು ರಾಡಿ ಮಾಡುವವರ ಬಗ್ಗೆ ಎಚ್ಚರಿಕೆಯಿಂದಿರಬೇಕು.”ಮಾರ್ಕೆಟಿಂಗ್, ಮ್ಯಾನೇಜ್ಮೆಂಟ್, ರಾಜಕೀಯ, ವೆಲ್‌ನೆಸ್ ಉದ್ಯಮ, ಹಾಗೆಯೇ ತತ್ತ್ವಶಾಸ್ತ್ರದಲ್ಲಿಯೂ ಗಂಭೀರವಾಗಿ ಕೇಳಿಸುವ ಪದಗಳನ್ನು ಸರಸರನೆ ಜೋಡಿಸಿದರೆ ತಾವು ಮಹಾ ಮೇಧಾವಿಗಳು ಆಗಿಬಿಡುತ್ತೇವೆ ಎಂದು ಭಾವಿಸುವ ದೊಡ್ಡ ಸಂಖ್ಯೆಯ ಜನರಿದ್ದಾರೆ. ಆದರೆ ಬಹುತೇಕ ಪದಗಳು ನಾವು ಎಷ್ಟು ಅರ್ಥಮಾಡಿಕೊಳ್ಳಬಹುದೋ ಅವು ಅಷ್ಟೇ ಆಳವಾಗಿರುತ್ತವೆ. ಯಾರಿಗಾದರೂ ತಮ್ಮ ಆಲೋಚನೆಗಳನ್ನು ಉದ್ದವಾದ, ಆಡಂಬರಪೂರ್ಣ, ಅತಿಯಾಗಿ ಅಲಂಕರಿಸಿದ ಭಾಷೆಯ ಹಿಂದೆ ಮರೆಮಾಡಬೇಕಾದ ಪರಿಸ್ಥಿತಿ ಬಂದರೆ, ಬಹುಶಃ ಅವರ ಆಲೋಚನೆಗಳೇ ಆರಂಭದಲ್ಲಿ ಅವರು ಭಾವಿಸಿದಷ್ಟು ಸ್ಪಷ್ಟವಾಗಿರಲಿಕ್ಕಿಲ್ಲ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.