ಒಳ-ಇರುವು : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #2.1

ಒಳ ಇರುವು, ಒಳ ಇರುವಿಕೆ ಇಂಥ ಪದಗಳು ನಿಘಂಟುವಿನಲ್ಲಿ ದೊರೆಯವು. ಒಳ ಎಂಬ ಗುಣವಾಚಕವನ್ನೂ ಇರುವು ಎಂಬ ನಾಮಪದವನ್ನೂ ಸೇರಿಸಿ ಒಳ ಇರುವು ಅನ್ನುವ ಹೊಸಪದವನ್ನು ನಾವು ಸೃಷ್ಟಿ ಮಾಡಬಹುದು… ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 2: ಅರಿವಿನ ಬೆಳಕು । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 2.1: ಅರಿವಿನ ಬೆಳಕು । ಒಳ – ಇರುವು

ನೀವು ಕವಿಯಾಗಿದ್ದರೆ ಈ ಪುಸ್ತಕದ ಹಾಳೆಯ ಮೇಲೆ ತೇಲುತಿರುವ ಮೋಡ ನಿಮಗೆ ಕಾಣುತ್ತದೆ. ಮೋಡವಿರದೆ ಮಳೆಯಿಲ್ಲ. ಮಳೆಯಿರದೆ ಕಾಡಿಲ್ಲ. ಕಾಡಿಲ್ಲದೆ ಮರಗಳಿಲ್ಲ. ಮರಗಳಿಲ್ಲದೆ ನಾವು ಕಾಗದ ತಯಾರಿಸಲು ಆಗುವುದಿಲ್ಲ.

ಹಾಳೆ ಇರಬೇಕಾದರೆ ಮೋಡ ಇರಲೇಬೇಕು. ಮೋಡವಿರದಿದ್ದರೆ ಹಾಳೆಯೂ ಇರದು. ಹಾಗಾಗಿ ಮೋಡ ಮತ್ತು ಹಾಳೆಗಳು ಒಂದರೊಳಗೊಂದು ಇವೆ, ಅವುಗಳದು ಒಳ-ಇರುವು, ಒಳ ಇರುವಿಕೆ ಅನ್ನಬಹುದು. 

ಒಳ ಇರುವು, ಒಳ ಇರುವಿಕೆ ಇಂಥ ಪದಗಳು ನಿಘಂಟುವಿನಲ್ಲಿ ದೊರೆಯವು. ಒಳ ಎಂಬ ಗುಣವಾಚಕವನ್ನೂ ಇರುವು ಎಂಬ ನಾಮಪದವನ್ನೂ ಸೇರಿಸಿ ಒಳ ಇರುವು ಅನ್ನುವ ಹೊಸಪದವನ್ನು ನಾವು ಸೃಷ್ಟಿ ಮಾಡಬಹುದು.

ಪುಸ್ತಕದ ಈ ಹಾಳೆಯನ್ನು ಇನ್ನೂ ಗಹನವಾಗಿ ನೋಡಿದರೆ ಅದರಲ್ಲಿ ಬಿಸಿಲನ್ನೂ ಕಾಣಬಹುದು. ಬಿಸಿಲು ಇರದಿದ್ದರೆ ಕಾಡು ಬೆಳೆಯದು. ಕಾಡು ಮಾತ್ರವಲ್ಲ, ಏನೂ ಬೆಳೆಯದು. ನಾವು ಕೂಡ ಬೆಳೆಯಲಾರೆವು, ಬದುಕಲಾರೆವು. ಅಂದರೆ ಈ ಹಾಳೆಯಲ್ಲಿ ಬಿಸಿಲೂ ಇದೆ. ಹಾಳೆ-ಮತ್ತು ಬಿಸಿಲುಗಳದು ಒಳ ಇರುವಿಕೆ.

ಇನ್ನೂ ಆಳವಾಗಿ ನೋಡಿದರೆ ಮರವನ್ನು ಕಡಿದು ಸಾ ಮಿಲ್‌ಗೆ ತಂದು ಹಾಳೆ ತಯಾರಾಗಲು ಕಾರಣನಾದ ಮನುಷ್ಯನೂ ಕಾಣುತ್ತಾನೆ. ಗೋಧಿಯೂ ಕಾಣುತ್ತದೆ. ಯಾಕೆಂದರೆ ಮರ ಕಡಿಯುವವನು ದಿನದ ಆಹಾರವಿಲ್ಲದೆ ಬದುಕಲಾರ, ಅವನ ರೊಟ್ಟಿಗೆ ಗೋಧಿ ಬೇಕು. ಹಾಗಾಗಿ ಈ ಹಾಳೆಯನ್ನು ತಯಾರು ಮಾಡಲು ಕಾರಣವಾದ ಮರವನ್ನು ಕಡಿದವನ ಆಹಾರವಾಗಿದ್ದ ಗೋಧಿಯ ತೆನೆಯೂ ಈ ಹಾಳೆಯೊಳಗಿದೆ.

ಅಷ್ಟೇ ಅಲ್ಲ, ಮರ ಕಡಿಯುವವನ ಅಪ್ಪ ಅಮ್ಮ ಕೂಡ ಇದರೊಳಗಿದ್ದಾರೆ. ಯಾಕೆಂದರೆ ಅವರಿಲ್ಲದೆ ಅವನಿರಲು ಸಾಧ್ಯವಿಲ್ಲ, ಅವನಿಲ್ಲದೆ ಮರ ಕಡಿಯುವವನು ಇರುತ್ತಿರಲಿಲ್ಲ, ಮರವು ಈ ಹಾಳೆಯಾಗುತ್ತಿರಲಿಲ್ಲ.

ಇನ್ನೂ ಗಮನಿಸಿ ನೋಡಿದರೆ ನಾವು ಕೂಡ ಈ ಹಾಳೆಯಲ್ಲಿದ್ದೇವೆ. ಯಾಕೆಂದರೆ ನಾನು  ಈ ಪುಟವನ್ನು ನೋಡುತ್ತಿರುವಾಗ ಈ ಹಾಳೆ ನನ್ನ ಗ್ರಹಿಕೆಯ ಭಾಗವಾಗಿ ಇರುತ್ತದೆ. ಓದುತಿರುವ ನಿಮ್ಮ ಮನಸೂ ಇಲ್ಲಿದೆ. ನೀವು-ನಾನು ಮಾತ್ರವಲ್ಲ ಕಾಲ, ದೇಶ, ಭೂಮಿ, ಮಣ್ಣು, ಬಿಸಿಲು, ಹೊಳೆ, ಶಾಖ ಎಲ್ಲವೂ ಇದರೊಳಗಿದೆ. ಈ ಹಾಳೆಯ ಒಳಗೆ ಇವೆ, ಹಾಗಾಗಿ ಈ ಇರುವಿಕೆಯನ್ನು ನಾನು ಒಳ ಇರುವು, ಒಳ ಇರುವಿಕೆ ಎಂದು ಕರೆದೆ.

ನೀವು ಮಾತ್ರವೇ ನಾನು ಮಾತ್ರವೇ ʻಇರುವುದಕ್ಕೆʼ ಸಾಧ್ಯವೇ ಇಲ್ಲ. ಈ ಸೃಷ್ಟಿಯ ಸಕಲ ವಸ್ತುಗಳೊಡನೆ ನಾವು ಇರುತ್ತೇವೆ. ಸೃಷಿಯಲ್ಲಿ ಮಿಕ್ಕ ಎಲ್ಲವೂ ಇರುವುದರಿಂದಲೇ ಈ ಹಾಳೆ ಇದೆ, ನೀವು ಇದ್ದೀರಿ, ನಾನು ಇದ್ದೇನೆ.

ಬಿಸಿಲನ್ನು ಸೂರ್ಯನಿಗೆ ಮರಳಿಸಿದರೆ ಈ ಹಾಳೆ ಇರುವುದಿಲ್ಲ. ಸೂರ್ಯನಿಲ್ಲದೆ ಈ ಲೋಕದಲ್ಲಿ ಏನೂ ಇರದು. ಮರ ಕಡಿಯುವವನನ್ನು ಅವನ ತಂದೆ ತಾಯಿಗಳ ಇರುವಿಕೆಗೆ ಮರಳಿಸಿದರೆ ಆಗಲೂ ಈ ಹಾಳೆ ಇರುವುದಿಲ್ಲ. ವಾಸ್ತವವೇನೆಂದರೆ ಈ ಹಾಳೆ ಎಂಬುದು ಹಾಳೆಯಲ್ಲದ ಸಂಗತಿಗಳಿಂದ, ವಸ್ತುಗಳಿಂದ, ಜೀವಗಳಿಂದ ರೂಪ ಪಡೆದು ನಮ್ಮೆದುರು ʻಇದೆ.ʼ

ಇಷ್ಟು ತೆಳ್ಳಗಿರುವ ಹಾಳೆಯಲ್ಲಿ ಇಡೀ ವಿಶ್ವದ ಎಲ್ಲ ಸಂಗತಿಗಳೂ ಇವೆ. ಇದು ಒಳ ಇರುವು.

*

[ಒಳ-ಇರುವು ಅಥವಾ ಸೃಷ್ಟಿಯಲ್ಲಿರುವ ಒಳಸಂಬಂಧಗಳನ್ನು ಕುರಿತು ಎಲ್ಲ ದೇಶ, ಕಾಲಗಳ ದೊಡ್ಡ ಮನಸುಗಳೂ ಹೇಳಿವೆ. ಉಪನಿಷತ್ತಿನಲ್ಲಿ ಬರುವ ಮಧುವಿದ್ಯಾ “ಪರಸ್ಪರೋಪಗ್ರಹೋ ಜೀವನಂ” ಎಂಬ ಜೈನ ತತ್ವ, ನೀರಿನೊಳಗಿನ ಬೆಂಕಿ, ಬೆಂಕಿಯೊಳಗಿನ ಬೆಳಕು, ಬೆಳಕಿನೊಳಗಿನ ಕತ್ತಲೆಯನ್ನು ಕುರಿತು ಹೇಳಿದ ಅಲ್ಲಮ, ಮರಳ ಕಣದಲ್ಲಿ ಅನಂತವನು ಕಾಣುವುದು…ಇತ್ಯಾದಿಯಾಗಿ ಕವಿತೆ ಬರೆದ  ಬ್ಲೇಕ್, ವಿಶ್ವವೆಂದು ಕರೆಯಲಾಗುವ “ಇಡಿ”ಯಾದುದರ ಒಂದು ಅಂಶ ಮನುಷ್ಯ ಜೀವಿ, ಕಾಲಕ್ಕೆ, ದೇಶಕ್ಕೆ ಬದ್ಧ, ತಾನು ವಿಶಿಷ್ಟ, ತನ್ನ ಭಾವನೆ ಚಿಂತನೆ ಎಲ್ಲವೂ ವಿಶೇಷ, ಮಿಕ್ಕೆಲ್ಲರಿಗಿಂತ ಭಿನ್ನ ಎಂದು ತಿಳಿಯುವುದು ಪ್ರಜ್ಞೆಯ ಕಣ್ಣು ಕಟ್ಟು” ಎಂದ ಎನ್‌ಸ್ಟೈನ್‌  ಮಾತು ಇವೆಲ್ಲ ನೆನಪಾಗುತ್ತವೆ.]

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.